
‘ವಿಶ್ವವಿದ್ಯಾಲಯ ಅನುದಾನಗಳ ಆಯೋಗ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜನ) ನಿಯಮಗಳು – 2026’ ಅನ್ನು ಅಮಾನತಿನಲ್ಲಿ ಇರಿಸುವ ಮೂಲಕ ಸುಪ್ರೀಂ ಕೋರ್ಟ್ ಕಾನೂನಿನ ದೃಷ್ಟಿಯಿಂದ ಬಹಳ ಸೂಕ್ತವಾಗಿರುವ ಪ್ರತಿಕ್ರಿಯೆಯೊಂದನ್ನು ನೀಡಿರಬಹುದು. ಈ ನಿಯಮಗಳನ್ನು ರೂಪಿಸಿದ ಬಗೆಯ ಕುರಿತಾಗಿ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಈ ನಿಯಮಗಳು ಎಲ್ಲರನ್ನೂ ಒಳಗೊಳ್ಳುವ ಸ್ವರೂಪವನ್ನು ಹೊಂದಿಲ್ಲ ಎಂದು ಹೇಳಿದೆ. ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ) ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ವಿದ್ಯಾರ್ಥಿಗಳು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿಯ ಕಾರಣಕ್ಕಾಗಿ ತಾರತಮ್ಯವನ್ನು ಅನುಭವಿಸುವ ಪ್ರಕರಣಗಳು ದೇಶದಲ್ಲಿ ವರದಿಯಾಗುತ್ತಲೇ ಇವೆ. 2016ರಲ್ಲಿ ರೋಹಿತ್ ವೇಮುಲ ಅವರ ಆತ್ಮಹತ್ಯೆ ಪ್ರಕರಣದ ನಂತರದಲ್ಲಿ ಈ ವಿಚಾರವಾಗಿ ಕಳವಳಗಳು ತೀವ್ರಗೊಂಡಿವೆ. ಉನ್ನತ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ನಿರ್ಮೂಲಗೊಳಿಸುವ ಉದ್ದೇಶ ಹೊಂದಿರುವ ಸಹಜ ಪ್ರತಿಕ್ರಿಯೆ ಎಂಬಂತೆ ಯುಜಿಸಿ ನಿಯಮಗಳನ್ನು ಕಾಣಬಹುದಾದರೂ, ಆ ನಿಯಮಗಳು ಕೂಡ ಸಮಾಜವನ್ನು ‘ವಿಭಜಿಸುತ್ತವೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ನಿಯಮಗಳು ಅವುಗಳ ದುರ್ಬಳಕೆಯನ್ನು ತಡೆಯುವ ಕ್ರಮಗಳನ್ನು ಒಳಗೊಂಡಿಲ್ಲ ಎಂದು ಅದು ಹೇಳಿದೆ.
ಹೊಸ ನಿಯಮಗಳನ್ನು ಯುಜಿಸಿ ಈ ತಿಂಗಳ ಆರಂಭದಲ್ಲಿ ಹೊರಡಿಸಿದೆ. 2012ರಲ್ಲಿ ಜಾರಿಗೆ ಬಂದ ಕೆಲವು ನಿಯಮಗಳ ಪರಿಷ್ಕರಣೆಯಂತೆ ಇವು ಇವೆ. ಹೊಸ ನಿಯಮಗಳ ಮೂಲಕ ಆಯೋಗವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗದ ವಿದ್ಯಾರ್ಥಿಗಳಿಗೆ ತಾರತಮ್ಯದಿಂದ ರಕ್ಷಣೆ ಒದಗಿಸುವ ಉದ್ದೇಶ ಹೊಂದಿತ್ತು. ಈ ವರ್ಗದ ವಿದ್ಯಾರ್ಥಿಗಳು ಸಲ್ಲಿಸಿದ ದೂರುಗಳ ಬಗ್ಗೆ ಮೇಲ್ವಿಚಾರಣೆಗೆ ವ್ಯವಸ್ಥೆ ಹಾಗೂ ದೂರುಗಳ ಇತ್ಯರ್ಥಕ್ಕೆ ವ್ಯವಸ್ಥೆಯನ್ನು ನಿಯಮಗಳು ಒಳಗೊಂಡಿವೆ. ಆದರೆ ತಾರತಮ್ಯದ ವಿಚಾರವಾಗಿ ನೀಡಿರುವ ವ್ಯಾಖ್ಯಾನವು, ಕೆಲವು ವರ್ಗಗಳ ವಿದ್ಯಾರ್ಥಿಗಳು ಮಾತ್ರ ತಾರತಮ್ಯಕ್ಕೆ ಗುರಿಯಾಗಬಹುದು ಎಂಬ ಅರ್ಥ ಕೊಡುತ್ತವೆ, ಇತರ ವಿದ್ಯಾರ್ಥಿಗಳನ್ನು ಈ ನಿಯಮಗಳು ಅಪರಾಧಿಗಳು ಎಂಬಂತೆ ಕಾಣುತ್ತವೆ ಎಂದು ಪ್ರಬಲ ಜಾತಿಗಳಿಗೆ ಸೇರಿದ ಕೆಲವು ಗುಂಪುಗಳು ವಾದಿಸಿವೆ. ಈ ನಿಯಮಗಳ ಅಡಿಯಲ್ಲಿ ಸುಳ್ಳು ದೂರುಗಳು ದಾಖಲಾದಾಗ ಅಂತಹ ದೂರು ನೀಡಿದವರ ವಿರುದ್ಧ ಕ್ರಮ ಜರುಗಿಸಲು ಅವಕಾಶ ಇಲ್ಲ. ಹೀಗಾಗಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಅವು ಪ್ರತಿಪಾದಿಸಿವೆ. ನಿಯಮಗಳನ್ನು ವಿರೋಧಿಸಿ ಉತ್ತರ ಭಾರತದ ಕೆಲವು ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ನಲ್ಲಿ ನಡೆದ ಪ್ರತಿಭಟನೆಗಳ ವೇಳೆ ಕೇಳಿಸಿದ ಮಾತುಗಳು, 1990ರಲ್ಲಿ ಮಂಡಲ್ ಆಯೋಗದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ನಿರ್ಧರಿಸುವುದಕ್ಕೂ ಮೊದಲು ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಸಂದರ್ಭದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಹೋಲುವಂತೆ ಇದ್ದವು. ಜಾತಿಯ ಆಧಾರದಲ್ಲಿ ವಿಭಜನೆ, ಧ್ರುವೀಕರಣವು ಸಮಾಜದಲ್ಲಿ ಈಗಲೂ ಅದೆಷ್ಟು ತೀವ್ರವಾಗಿದೆ ಎಂಬುದನ್ನು ಇವೆಲ್ಲ ಹೇಳುತ್ತವೆ.
ಯುಜಿಸಿ ರೂಪಿಸಿದ ಹೊಸ ನಿಯಮಗಳು ಎಲ್ಲ ವರ್ಗಗಳ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂಬ ವಾದದಲ್ಲಿ ಕಾನೂನಿನ ದೃಷ್ಟಿಯಿಂದ ಹುರುಳಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ತಾರತಮ್ಯಕ್ಕೆ ಗುರಿಯಾಗುವವರು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಎಂಬುದನ್ನು ನಿರಾಕರಿಸಲು ಆಗುವುದಿಲ್ಲ. ಸಾಮಾಜಿಕ ಶ್ರೇಣೀಕರಣ ಇರುವಲ್ಲಿ ಅವಕಾಶಗಳು ಎಲ್ಲರಿಗೂ ಸಮಾನ ನೆಲೆಯಲ್ಲಿ ಸಿಗುವುದಿಲ್ಲ. ತಾರತಮ್ಯದ ವ್ಯಾಖ್ಯಾನವನ್ನು ಇನ್ನಷ್ಟು ವಿಶಾಲವಾಗಿಸುವ ಅಗತ್ಯ ಇದೆ. ಸುಳ್ಳು ದೂರುಗಳನ್ನು ಗುರುತಿಸಿ, ಅಂತಹ ದೂರುಗಳು ದಾಖಲಾಗುವುದನ್ನು ತಡೆಯಲು ಬಲಿಷ್ಠ ವ್ಯವಸ್ಥೆಯೊಂದು ಅಗತ್ಯವಿದೆ. ಏಕೆಂದರೆ ಅಂತಹ ವ್ಯವಸ್ಥೆಯನ್ನು ರೂಪಿಸಿದಾಗ, ನಿಜವಾಗಿಯೂ ಅನ್ಯಾಯಕ್ಕೆ ಒಳಗಾದ ವ್ಯಕ್ತಿಯು ತನ್ನ ದೂರು ಹೇಳಿಕೊಳ್ಳಲು ಹಿಂಜರಿಯುವ ಸಾಧ್ಯತೆ ಕಡಿಮೆ ಇರುತ್ತದೆ. ಕೋರ್ಟ್ ಈಗ ಈ ನಿಯಮಗಳನ್ನು ಪರಿಶೀಲಿಸುವ ಮಾತು ಆಡಿದೆ. ಹೀಗಾಗಿ ಈಗ ಎಲ್ಲರಿಗೂ ಸ್ವೀಕಾರಾರ್ಹ ಆಗುವ ವ್ಯವಸ್ಥೆಯೊಂದನ್ನು ರೂಪಿಸುವ ಕಡೆ ಗಮನ ಹರಿಸಬೇಕು. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಕೆಲಸ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಪರಿಗಣಿಸಿ ಆ ಹಿನ್ನೆಲೆಗೆ ಸೂಕ್ತವಾದ ಬಗೆಯಲ್ಲಿ ಅವಕಾಶ ಕಲ್ಪಿಸುವುದರ ನಡುವೆ ಸಂಕೀರ್ಣವಾದ ಸಂಬಂಧ ಇದೆ. ಇದನ್ನು ಬಹಳ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.