
ಬೆಂಗಳೂರು ಸುತ್ತಮುತ್ತ ಮಾರಾಟವಾಗುವ ಶೇ 25ರಷ್ಟು ತರಕಾರಿಗಳು ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿವೆ. ನಮ್ಮ ಊಟದ ತಟ್ಟೆಯಲ್ಲಿ ನಿಧಾನವಿಷ ಸೇರಿಕೊಂಡಿರುವುದು ಕಳವಳದ ಸಂಗತಿ.
ಬೆಂಗಳೂರು ಮಹಾನಗರದ ಸುತ್ತಮುತ್ತ ಮಾರಾಟವಾಗುವ ನಾಲ್ಕನೇ ಒಂದು ಭಾಗಕ್ಕಿಂತಲೂ ಹೆಚ್ಚಿನ ತರಕಾರಿಗಳು ಸೀಸ ಹಾಗೂ ಕೀಟನಾಶಕಗಳನ್ನು ಅಪಾಯಕರ ಮಟ್ಟದಲ್ಲಿ ಹೊಂದಿವೆ ಎನ್ನುವ ‘ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ’ (ಸಿಪಿಸಿಬಿ) ವರದಿ ಕಳವಳ ಹುಟ್ಟಿಸುವಂತಿದೆ. ಹೊಲಗಳಿಂದ ಮಾರುಕಟ್ಟೆಯವರೆಗೆ ಸುರಕ್ಷತಾ ಕ್ರಮಗಳ ನಿಯಂತ್ರಣ ಇಲ್ಲದಿರುವ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಈ ವರದಿ ಎತ್ತಿ ತೋರಿಸಿದೆ. ‘ರಾಷ್ಟ್ರೀಯ ಹಸಿರು ಮಂಡಳಿ’ ಸೂಚನೆಯ ಮೇರೆಗೆ ನಡೆದಿರುವ ಅಧ್ಯಯನದಲ್ಲಿ, ಪರೀಕ್ಷೆಗೊಳಪಡಿಸಲಾದ 72 ತರಕಾರಿ ಮಾದರಿಗಳಲ್ಲಿ 19ರಲ್ಲಿ ಅನುಮತಿಸಿರುವ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದ ಸೀಸ ಕಂಡುಬಂದಿದೆ. ಸಾವಯವ ಬದನೆಕಾಯಿ ಮಾದರಿಯಲ್ಲಿ ನಿಗದಿಪಡಿಸಿರುವುದಕ್ಕಿಂತಲೂ 20 ಪಟ್ಟು ಹೆಚ್ಚು ಮಾಲಿನ್ಯಕಾರಕ ಕಣಗಳು ಕಂಡುಬಂದಿವೆ. ಇಷ್ಟೊಂದು ದೊಡ್ಡ ಪ್ರಮಾಣದ ವಿಷಯುಕ್ತ ತರಕಾರಿಗಳು ಯಾವುದೇ ಪರಿಶೀಲನೆ ಇಲ್ಲದೆ ಮಾರುಕಟ್ಟೆಗಳನ್ನು ಪ್ರವೇಶಿಸುತ್ತಿರುವುದು ವ್ಯವಸ್ಥೆಯ ವೈಫಲ್ಯವನ್ನು ಸೂಚಿಸುವಂತಿದೆ. ಬೆಂಗಳೂರಿನ ಈ ಸಮಸ್ಯೆಗೂ ನೀರಿನ ಬಿಕ್ಕಟ್ಟಿಗೂ ಸಂಬಂಧವಿದೆ. ‘ಸಿಪಿಸಿಬಿ’ ತಂಡ 26 ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದ್ದು, ಅವುಗಳಲ್ಲಿ 23 ಮಾದರಿಗಳು ಮಾಲಿನ್ಯಕಾರಕ ಅಂಶಗಳನ್ನು ಹೊಂದಿರುವುದು ಕಂಡುಬಂದಿದೆ. ನಗರ ವ್ಯಾಪ್ತಿಯಲ್ಲಿನ ರೈತರು ಪುನರಾವರ್ತಿತ ಬರ ಹಾಗೂ ಅಂತರ್ಜಲದ ಕೊರತೆಯಿಂದ, ನಗರ ಪ್ರದೇಶದಲ್ಲಿನ ಸಂಸ್ಕರಣೆಗೆ ಒಳಪಡದ ತ್ಯಾಜ್ಯನೀರನ್ನು ಕೃಷಿಗೆ ಅವಲಂಬಿಸಿರುವುದನ್ನು ವರದಿಗಳು ದೃಢಪಡಿಸಿವೆ.
ತರಕಾರಿಗಳಲ್ಲಿ ಭಾರ ಲೋಹಗಳು ಇರುವುದು ಸಮಸ್ಯೆಯ ಒಂದು ಮುಖವಷ್ಟೇ. ಪರೀಕ್ಷೆಗೊಳಪಡಿಸಲಾದ ತರಕಾರಿಗಳಲ್ಲಿ 12 ಕೀಟನಾಶಕಗಳು ಸುರಕ್ಷತಾ ಮಿತಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವುದು ಕಂಡುಬಂದಿದೆ. ಇವುಗಳಲ್ಲಿ, 2023ರಲ್ಲಿ ಭಾರತದಲ್ಲಿ ನಿಷೇಧಕ್ಕೊಳಗಾದ ಅತ್ಯಂತ ವಿಷಕಾರಿ
ಆದ ಆರ್ಗ್ಯಾನೊಫಾಸ್ಫೇಟ್ ವರ್ಗಕ್ಕೆ ಸೇರಿದ ಮೊನೊಕ್ರೊಟೊಫಾಸ್ ಕೂಡ ಸೇರಿದೆ. ನಿಷೇಧದ ನಂತರವೂ ವಿಷಕಾರಿ ರಾಸಾಯನಿಕದ ಬಳಕೆ ಮುಂದುವರಿದಿರುವುದನ್ನು ಅಧ್ಯಯನವು ಬೆಳಕಿಗೆ ತಂದಿದೆ. ಆಡಳಿತ ಯಂತ್ರದಲ್ಲಿನ ಲೋಪಗಳಿಂದಾಗಿ, ಹಳೆಯ ಸಂಗ್ರಹಗಳು ಅಥವಾ ಕಾನೂನುಬಾಹಿರ ಪೂರೈಕೆಯ ಮೂಲಕ ಅಪಾಯಕಾರಿ ರಾಸಾಯನಿಕ ಬಳಕೆಯಲ್ಲಿದೆ. ಭಾರ ಲೋಹಗಳು ಮತ್ತು ಕೀಟನಾಶಕಗಳ ಒಗ್ಗೂಡುವಿಕೆಯು ಅತ್ಯಂತ ಅಪಾಯಕಾರಿಯಾಗಿದ್ದು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತದೆ. ಅಧಿಕ ಪ್ರಮಾಣದ ಸೀಸ ಮೆದುಳು ಮತ್ತು ಮೂತ್ರಪಿಂಡಗಳನ್ನು ತೀವ್ರವಾಗಿ ಗಾಸಿಗೊಳಿಸಬಹುದು, ಹೃದ್ರೋಗದ ಸಮಸ್ಯೆಗಳಿಗೂ ಎಡೆ ಮಾಡಿಕೊಡಬಹುದು. ಆಹಾರ ಪದಾರ್ಥಗಳಲ್ಲಿನ ಕೀಟನಾಶಕಗಳು ನರಸಂಬಂಧಿ ಸಮಸ್ಯೆಗಳು, ಕ್ಯಾನ್ಸರ್ ಉಂಟುಮಾಡಬಹುದು ಹಾಗೂ ಹಾರ್ಮೋನ್‌ಗಳ ಕಾರ್ಯಾಚರಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಅಗೋಚರ ಮಾಲಿನ್ಯಕಾರಕಗಳು ಬೆಂಗಳೂರಿನ ನಾಗರಿಕರ ಮೇಲೆ ಸದ್ದಿಲ್ಲದೆ ಹೇರಿರುವ ‘ಆರೋಗ್ಯ ತೆರಿಗೆ’ಯಂತಿವೆ. ಹಣ್ಣು ತರಕಾರಿಗಳನ್ನು ಸ್ವಚ್ಛವಾಗುವಂತೆ ತೊಳೆಯುವುದು, ಸಿಪ್ಪೆ ಮತ್ತು ಬೇರುಗಳನ್ನು ತೆಗೆಯುವುದು, ತರಕಾರಿ ಮೂಲಗಳನ್ನು ವೈವಿಧ್ಯಗೊಳಿಸುವುದು ಹಾಗೂ ಋತುಮಾನ ಆಧಾರಿತ ಕೃಷಿ ಉತ್ಪನ್ನಗಳನ್ನು ಬಳಸುವಂತಹ ಸುರಕ್ಷತಾ ಕ್ರಮಗಳಿಂದ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಆದರೆ, ಸಸ್ಯಗಳ ದೇಹದಲ್ಲೇ ತುಂಬಿಕೊಂಡ ವಿಷವನ್ನು ಬೇರ್ಪಡಿಸುವುದು ಹೇಗೆ?
‘ಸಿಪಿಸಿಬಿ’ ಅಧ್ಯಯನವು ಬೆಂಗಳೂರಿಗೆ ತರಕಾರಿ ಪೂರೈಕೆಯಾಗುವ ಒಂದು ಭಾಗಕ್ಕಷ್ಟೇ ಸೀಮಿತವಾಗಿದ್ದು, ಮಹಾನಗರಕ್ಕೆ ತರಕಾರಿ ಪೂರೈಕೆಯಾಗುವ ಎಲ್ಲ ಮೂಲಗಳನ್ನು ಸಮಗ್ರವಾಗಿ ಒಳಗೊಂಡಿಲ್ಲ ಎನ್ನುವುದನ್ನು ಗಮನಿಸಬೇಕು. ಈ ಸೀಮಿತ ಚೌಕಟ್ಟಿನಲ್ಲೂ ಅಧ್ಯಯನದ ಮಾದರಿಗಳ ಫಲಿತಾಂಶವು ಸಮಸ್ಯೆಯ ವಿರಾಟ್ ಸ್ವರೂಪವನ್ನು ಅಂದಾಜು ಮಾಡಲು ನೆರವಾಗುವಂತಿದೆ. ತರಕಾರಿ ಬೆಳೆಯಲು ತ್ಯಾಜ್ಯ ನೀರು ಬಳಸುವ ಹಾಗೂ ಸುರಕ್ಷತಾ ಕ್ರಮಗಳ ಮೇಲ್ವಿಚಾರಣೆ ಇಲ್ಲದ ಪ್ರದೇಶಗಳಲ್ಲಿ, ಪಟ್ಟಣ ಹಾಗೂ ಇತರ ನಗರ ಪ್ರದೇಶಗಳಲ್ಲೂ ಪರಿಸ್ಥಿತಿ ಇಷ್ಟೇ ಗಂಭೀರವಾಗಿರಬಹುದು ಅಥವಾ ಇನ್ನೂ ಹೆಚ್ಚು ತೀವ್ರವಾಗಿರಬಹುದು. ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡ ತರಕಾರಿಗಳ ಸಮಸ್ಯೆ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾದುದಲ್ಲ. ಅದು, ಏರುಗತಿಯ ನಗರ ವಿಸ್ತರಣೆ, ಕೈಗಾರಿಕಾ ಮಾಲಿನ್ಯ ಹಾಗೂ ಕೃಷಿ ಸಮಸ್ಯೆಗಳು ಒಗ್ಗೂಡುವುದರ ಪರಿಣಾಮವನ್ನು ಸೂಚಿಸುವ ಎಚ್ಚರಿಕೆಯ ಗಂಟೆಯಾಗಿದೆ. ಆಹಾರದ ಸುರಕ್ಷತೆಯು ಮುಂದೆಂದೋ ಸರಿಪಡಿಸಬಹುದಾದ ಸಮಸ್ಯೆಯಾಗಿರದೆ, ಮಣ್ಣು, ನೀರು, ಮಾರುಕಟ್ಟೆಯಿಂದ ಅನ್ನದ ತಟ್ಟೆಯವರೆಗಿನ ವ್ಯವಸ್ಥೆಯಲ್ಲಿ ಆಗಬೇಕಾಗಿರುವ ಆಮೂಲಾಗ್ರ ಬದಲಾವಣೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.