ADVERTISEMENT

ಸಂಪಾದಕೀಯ: ವನ್ಯಜೀವಿ ಯೋಜನೆಗಳು ವನ್ಯಮೃಗಗಳ ಹಿತಕ್ಕೇ ವಿನಾ ನಾಯಕರ ಪ್ರತಿಷ್ಠೆಗಲ್ಲ

ಸಂಪಾದಕೀಯ
Published 24 ಜುಲೈ 2023, 21:45 IST
Last Updated 24 ಜುಲೈ 2023, 21:45 IST
   

ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಒಂದೊಂದು ಚೀತಾ ಸಾವಿನ ಸುದ್ದಿ ಕೇಳಿದಾಗಲೂ ಈ ಪ್ರಾಣಿಗಳನ್ನು ಆಫ್ರಿಕಾದಿಂದ ಭಾರತಕ್ಕೆ ಸ್ಥಳಾಂತರ ಮಾಡಿದ ನಿರ್ಧಾರದ ಬಗ್ಗೆಯೇ ಪ್ರಶ್ನೆಗಳು ಏಳುತ್ತವೆ. ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಭಾರತಕ್ಕೆ ತಂದ 20 ಚೀತಾಗಳ ಪೈಕಿ ಎಂಟು ಚೀತಾಗಳು ಇಲ್ಲಿಗೆ ಬಂದ ಕೆಲವೇ ತಿಂಗಳಲ್ಲಿ ಮೃತಪಟ್ಟಿವೆ. ಕಳೆದ ವಾರದಲ್ಲಿ ಕೂಡ ಒಂದು ಚೀತಾ ಸತ್ತುಹೋಗಿದೆ. ಸೆಪ್ಟೆಸೆಮಿಯಾದಿಂದ (ಬ್ಯಾಕ್ಟೀರಿಯಾದಿಂದಾಗಿ ರಕ್ತದಲ್ಲಿ ನಂಜು) ಸಾವು ಉಂಟಾಗಿದೆ. ಕುತ್ತಿಗೆಯಲ್ಲಿ ಆಗಿದ್ದ ಸೋಂಕು ರಕ್ತ ನಂಜಾಗುವುದಕ್ಕೆ ಕಾರಣ. ಚೀತಾಕ್ಕೆ ಅಳವಡಿಸಲಾಗಿದ್ದ ರೇಡಿಯೊ ಕಾಲರ್‌ನಿಂದಾಗಿ ಕುತ್ತಿಗೆಯಲ್ಲಿ ಸೋಂಕು ಆಗಿರಬಹುದು ಎಂದು ಅಂದಾಜಿಸಲಾಗಿದೆ. ಮಳೆ, ಆರ್ದ್ರತೆ ಮತ್ತು ಕೀಟಗಳಿಂದಾಗಿ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಯಿತು. ಚೀತಾಗಳ ಸಾವು ಅವುಗಳಿಗೆ ಅತ್ಯಂತ ವೇದನಾದಾಯಕವೇ ಆಗಿರಬೇಕು. ಇನ್ನೂ ಎರಡು ಚೀತಾಗಳಿಗೆ ಇದೇ ಅನಾರೋಗ್ಯ ಕಾಡುತ್ತಿದೆ ಎಂಬ ವರದಿಗಳಿವೆ. ಹಾಗಿದ್ದರೂ ಚೀತಾಗಳು ಸೋಂಕಿನಿಂದಾಗಿ ಸತ್ತಿವೆ ಎಂಬುದನ್ನು ಸರ್ಕಾರ ಅಲ್ಲಗಳೆದಿದೆ. ಚೀತಾಗಳನ್ನು ಭಾರತಕ್ಕೆ ಕರೆತಂದ ಬಳಿಕ ನಾಲ್ಕು ಮರಿಗಳು ಜನಿಸಿವೆ. ಅವುಗಳ ಪೈಕಿ ಮೂರು ಮರಿಗಳು ಸತ್ತಿವೆ. ಪ್ರತಿ ಚೀತಾದ ಸಾವಿಗೂ ಭಿನ್ನವಾದ ಕಾರಣವೇ ಇದೆ. ಈ ಪ್ರಾಣಿಗಳು ಇಲ್ಲಿನ ಪರಿಸರದಲ್ಲಿ ಎದುರಿಸುತ್ತಿರುವ ಸಂಕಷ್ಟಗಳನ್ನು ಇದು ತೋರಿಸುತ್ತಿದೆ. 

ಚೀತಾ ಸ್ಥಳಾಂತರ ಯೋಜನೆ ಜಾರಿಯ ಉಸ್ತುವಾರಿ ಹೊತ್ತಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಈ ಎಲ್ಲವೂ ಸಹಜ ಸಾವುಗಳೇ ಎಂದು ಹೇಳಿದೆ. ಆದರೆ, ಕೆಲವೇ ತಿಂಗಳೊಳಗೆ ಅಷ್ಟೊಂದು ಚೀತಾಗಳು ಸತ್ತಿರುವುದೇ ಈ ಸಾವುಗಳನ್ನು ಅಸಹಜ ಮಾಡಿ ಬಿಡುತ್ತದೆ. ಪ್ರಾಣಿಗಳ ಸ್ಥಳಾಂತರ ಯೋಜನೆಯಲ್ಲಿ ಕೆಲವು ಪ್ರಾಣಿಗಳು ಸಾಯುವುದು ನಿರೀಕ್ಷಿತವೇ ಎಂದು ಹೇಳಲಾಗುತ್ತಿದೆ. ಆದರೆ ಚೀತಾಗಳು ಅಳಿವಿನ ಅಂಚಿನಲ್ಲಿ ಇರುವ ಪ್ರಾಣಿಗಳು. ಹಾಗಿರುವಾಗ ಒಂದೇ ಒಂದು ಚೀತಾ ಸಾಯಲು ಬಿಡುವುದು ಕೂಡ ಸರಿಯಲ್ಲ. ಇತ್ತೀಚೆಗೆ ಚೀತಾವೊಂದು ಸತ್ತ ಬಳಿಕ, ರಾಜ್ಯದ ಮುಖ್ಯ ವನ್ಯಜೀವಿ ಅಧಕಾರಿಯನ್ನು ಮಧ್ಯಪ್ರದೇಶ ಸರ್ಕಾರವು ವರ್ಗಾವಣೆ ಮಾಡಿದೆ. ಉಳಿದ ಚೀತಾಗಳ ಮೇಲೆ ಹೆಚ್ಚಿನ ನಿಗಾ ಮತ್ತು ಕಣ್ಗಾವಲು ಇರಿಸಬೇಕು ಹಾಗೂ ಅವುಗಳ ಅಗತ್ಯಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂಬ ಆದೇಶವನ್ನೂ ಮಾಡಿದೆ. 

ಈ ಯೋಜನೆಯ ಸುತ್ತ ವಿವಾದಗಳು ಆರಂಭದಿಂದಲೂ ಸುತ್ತಿಕೊಂಡಿದ್ದವು. ಚೀತಾಗಳಿಗೆ ವಿಶಾಲವಾದ ಆವಾಸಸ್ಥಾನಗಳ ಅಗತ್ಯ ಇದೆ. ಕುನೊ ರಾಷ್ಟ್ರೀಯ ಉದ್ಯಾನವು ಚೀತಾಗಳ ಅಗತ್ಯಕ್ಕೆ ಅನುಗುಣವಾಗಿ ಇಲ್ಲ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿ ಇರುವ ಗ್ರಾಮಗಳಿಗೆ ಚೀತಾಗಳು ಪ್ರವೇಶಿಸುವ ಸಾಧ್ಯತೆ ಇದ್ದು, ಮಾನವ–ಪ್ರಾಣಿ ಸಂಘರ್ಷದ ಅಪಾಯವೂ ಇದೆ. ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಸ್ಥಳಾಂತರಿಸಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದ ಪರಿಣತರ ಅಭಿಮತ ಸರಿಯಾಗಿಯೇ ಇತ್ತು ಎಂಬುದು ಈಗ ಸಾಬೀತಾದಂತೆ ಆಯಿತು. ಇದೊಂದು ತೋರ್ಪಡಿಕೆಯ ಯೋಜನೆ ಎಂಬ ಟೀಕೆ ಈ ಹಿಂದೆ ವ್ಯಕ್ತವಾಗಿತ್ತು. ಗುಜರಾತ್‌ನ ಗಿರ್‌ ರಾಷ್ಟ್ರೀಯ ಉದ್ಯಾನದಲ್ಲಿ ಸಿಂಹಗಳ ಸಂಖ್ಯೆ ಹೆಚ್ಚಾಗಿದೆ. ಕೆಲವು ಸಿಂಹಗಳನ್ನು ಸ್ಥಳಾಂತರಿಸಲು ಕುನೊ ಉದ್ಯಾನವು ಸೂಕ್ತವಾಗಿತ್ತು. ಆದರೆ, ಈ ಪ್ರಸ್ತಾವವನ್ನು ಗುಜರಾತ್‌ ಸರ್ಕಾರವು ವಿರೋಧಿಸಿತ್ತು. ಆ ರಾಜ್ಯವು ಈ ಪ್ರಸ್ತಾವವನ್ನು ವಿರೋಧಿಸಿದಾಗ, ಈಗ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದರು. ವನ್ಯಜೀವಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ವನ್ಯಮೃಗಗಳ ಹಿತವೇ ಮುಖ್ಯವಾಗಬೇಕು. ರಾಜಕೀಯ ನಾಯಕರ ಪ್ರತಿಷ್ಠೆ ಅಥವಾ ಇತರ ಯಾವುದೇ ಭಾವನೆಗಳು ಪ್ರಧಾನವಾಗಬಾರದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.