ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ
ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ ನಿಗದಿ ಮಾಡುವುದಷ್ಟೇ ಕೃಷಿ ಬೆಲೆ ಆಯೋಗದ ಪ್ರಧಾನ ಕೆಲಸವಲ್ಲ. ರೈತರಿಗೆ ಮಾರುಕಟ್ಟೆಯಲ್ಲೇ ಉತ್ತಮ ಬೆಲೆ ದೊರೆಯುವಂತೆ ಮಾಡುವ ಹೊಣೆಗಾರಿಕೆಯೂ ಇದೆ ಎಂದು ಆಯೋಗದ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಅಶೋಕ ದಳವಾಯಿ ಹೇಳಿದರು. ಆಯೋಗದ ಅಧ್ಯಕ್ಷರಾದ ಬಳಿಕ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಆಡಿದ ಮಾತುಗಳ ಆಯ್ದ ಭಾಗ ಇಲ್ಲಿದೆ.
ಕೃಷಿ ಉತ್ಪನ್ನಗಳ ಬೆಲೆಕುಸಿತ, ಅತಿವೃಷ್ಟಿಯಿಂದ ಬೆಳೆಹಾನಿ, ಉತ್ಪಾದನಾ ವೆಚ್ಚ ಏರಿಕೆಯಂತಹ ಬಿಕ್ಕಟಿನ ಸ್ಥಿತಿಯಲ್ಲಿ ನಿಮ್ಮ ಮತ್ತು ಆಯೋಗದ ಮುಂದೆ ಇರುವ ಸವಾಲುಗಳು ಯಾವುವು?
ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸುವ ದೊಡ್ಡ ಸವಾಲು ಇದೆ. ಹಣ್ಣು–ತರಕಾರಿಗಳಿಗೆ ಶೈತ್ಯಾಗಾರಗಳನ್ನು ಮತ್ತು ದವಸ–ಧಾನ್ಯ ಮತ್ತು ಮಸಾಲೆ ಪದಾರ್ಥಗಳ ಸಂಗ್ರಹಕ್ಕೆ ಗೋದಾಮುಗಳನ್ನು ರೂಪಿಸಬೇಕು. ಜತೆಗೆ ಹೊಲದಿಂದ ಗೋದಾಮುಗಳಿಗೆ ಕಡಿಮೆ ವೆಚ್ಚದಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಉತ್ಪನ್ನಗಳನ್ನು ಒಯ್ಯಬಹುದಾದಂತಹ ಸಾಗಣೆ ವ್ಯವಸ್ಥೆ ಬೇಕು. ಕೊಯ್ಲೋತ್ತರ ನಿರ್ವಹಣೆಯ ಭಾಗವಾಗಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಸಾಧ್ಯವಾಗಿಸಬೇಕು. ಈ ಎಲ್ಲ ಅಂಶಗಳತ್ತ ಗಮನ ಕೇಂದ್ರೀಕರಿಸಬೇಕಾಗುತ್ತದೆ.
ಇದಕ್ಕಾಗಿ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಕೃಷಿ ಮಾರುಕಟ್ಟೆಗಳು, ಕೃಷಿ ಉತ್ಪನ್ನ ಸಂಬಂಧಿ ಕೈಗಾರಿಕೆಗಳ ಮಧ್ಯೆ ಸಮನ್ವಯ ಸಾಧಿಸಬೇಕಿದೆ. ಈ ಎಲ್ಲ ಇಲಾಖೆಗಳು ಮತ್ತು ಸಂಬಂಧಿತರನ್ನು ಒಟ್ಟಿಗೆ ಕರೆದೊಯ್ಯುವ ಹಾಗೂ ಆ ಮೂಲಕ ಕೃಷಿ ಮಾರುಕಟ್ಟೆಯನ್ನು ಸುಧಾರಿಸುವ ದೊಡ್ಡ ಸವಾಲು ಆಯೋಗದ ಮುಂದೆ ಇದೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯಾಪ್ತಿಗೆ ಒಳಪಡುವ ಬೆಳೆಗಳಿಗೆ ಆಯೋಗವು ನಿಗದಿಪಡಿಸುವ ಬೆಲೆಗಿಂತಲೂ ಕಡಿಮೆ ಎಂಎಸ್‌ಪಿಯನ್ನು ಕೇಂದ್ರ ಸರ್ಕಾರ ಸಾಮಾನ್ಯವಾಗಿ ನಿಗದಿ ಮಾಡುತ್ತದೆ. ಎರಡೂ ಬೆಲೆಗಳಲ್ಲಿನ ಈ ಅಂತರಕ್ಕೆ ಕಾರಣಗಳೇನು ಮತ್ತು ಅದನ್ನು ನಿಭಾಯಿಸುವ ಬಗೆ ಹೇಗೆ?
ಎಂಎಸ್‌ಪಿ ಲಾಭದಾಯಕ ಮೊತ್ತ ಅಲ್ಲ. ಉತ್ಪಾದನಾ ವೆಚ್ಚ ಮತ್ತು ಅದರ ಶೇ 50ರಷ್ಟು ಲಾಭಾಂಶ ಸೇರಿಸಿ ಎಂಎಸ್‌ಪಿ ನಿಗದಿ ಮಾಡಲಾಗುತ್ತದೆ. ಪಂಜಾಬ್‌ನಲ್ಲಿ ಭತ್ತದ ಉತ್ಪಾದನಾ ವೆಚ್ಚ ಕಡಿಮೆ ಇದ್ದರೆ, ಕರ್ನಾಟಕದಲ್ಲಿ ಅದರ ದುಪ್ಪಟ್ಟು ವೆಚ್ಚವಾಗುತ್ತದೆ. ಆದರೆ, ಕೇಂದ್ರ ಸರ್ಕಾರ ಸರಾಸರಿ ವೆಚ್ಚವನ್ನು ಪರಿಗಣಿಸಿ ಎಂಎಸ್‌ಪಿ ನಿರ್ಧರಿಸುತ್ತದೆ. ಇದರಿಂದ ಕರ್ನಾಟಕದಂತಹ ರಾಜ್ಯಕ್ಕೆ ನಷ್ಟವಾಗುತ್ತದೆ.
ಉತ್ಪಾದನಾ ವೆಚ್ಚದಲ್ಲಿನ ಈ ಪ್ರಾದೇಶಿಕ ಭಿನ್ನತೆಯನ್ನು ಪರಿಗಣಿಸಿ ಎಂಎಸ್‌ಪಿ ನಿಗದಿ ಮಾಡಬೇಕು ಎಂಬ ವಾದ ಬಹಳ ಹಿಂದಿನಿಂದಲೂ ಇದೆ. ಉತ್ಪಾದನಾ ವೆಚ್ಚದಲ್ಲಿ ರಾಜ್ಯದೊಳಗೂ ಈ ರೀತಿಯ ಪ್ರಾದೇಶಿಕ ಭಿನ್ನತೆ ಇದೆ. ಉಳುಮೆ, ಗೊಬ್ಬರ, ಕೂಲಿ, ಬಿತ್ತನೆ ಬೀಜ, ನೀರಾವರಿ ಮೊದಲಾದವುಗಳ ವೆಚ್ಚದಲ್ಲೂ ಈ ಭಿನ್ನತೆ ಇದೆ. ಪ್ರಾದೇಶಿಕ ಮಟ್ಟದಲ್ಲೇ ಅವುಗಳನ್ನು ಲೆಕ್ಕಹಾಕಿ, ವೈಜ್ಞಾನಿಕ ಉತ್ಪಾದನಾ ವೆಚ್ಚವನ್ನು ನಿಗದಿ ಮಾಡುವುದರತ್ತ ಆಯೋಗ ಗಮನ ನೀಡಲಿದೆ.
ಈ ಭಿನ್ನತೆ ಮತ್ತು ಅದರಿಂದಾಗುವ ಅನ್ಯಾಯದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವ ಯತ್ನವನ್ನೂ ಮಾಡಲಾಗುತ್ತದೆ. ಉತ್ಪಾದನಾ ವೆಚ್ಚ ಮತ್ತು ಎಂಎಸ್‌ಪಿ ನಡುವಣ ಅಂತರವನ್ನು ತುಂಬಲು ರಾಜ್ಯ ಸರ್ಕಾರ ಪ್ರೋತ್ಸಾಹ ಧನವನ್ನು ನೀಡಬೇಕಾದ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತದೆ.ಎಂಎಸ್‌ಪಿ ಲಾಭದಾಯಕ ಮೊತ್ತ ಅಲ್ಲ. ಉತ್ಪಾದನಾ ವೆಚ್ಚ ಮತ್ತು ಅದರ ಶೇ 50ರಷ್ಟು ಲಾಭಾಂಶ ಸೇರಿಸಿ ಎಂಎಸ್‌ಪಿ ನಿಗದಿ ಮಾಡಲಾಗುತ್ತದೆ. ಪಂಜಾಬ್‌ನಲ್ಲಿ ಭತ್ತದ ಉತ್ಪಾದನಾ ವೆಚ್ಚ ಕಡಿಮೆ ಇದ್ದರೆ, ಕರ್ನಾಟಕದಲ್ಲಿ ಅದರ ದುಪ್ಪಟ್ಟು ವೆಚ್ಚವಾಗುತ್ತದೆ. ಆದರೆ, ಕೇಂದ್ರ ಸರ್ಕಾರ ಸರಾಸರಿ ವೆಚ್ಚವನ್ನು ಪರಿಗಣಿಸಿ ಎಂಎಸ್‌ಪಿ ನಿರ್ಧರಿಸುತ್ತದೆ. ಇದರಿಂದ ಕರ್ನಾಟಕದಂತಹ ರಾಜ್ಯಕ್ಕೆ ನಷ್ಟವಾಗುತ್ತದೆ.
ಉತ್ಪಾದನಾ ವೆಚ್ಚದಲ್ಲಿನ ಈ ಪ್ರಾದೇಶಿಕ ಭಿನ್ನತೆಯನ್ನು ಪರಿಗಣಿಸಿ ಎಂಎಸ್‌ಪಿ ನಿಗದಿ ಮಾಡಬೇಕು ಎಂಬ ವಾದ ಬಹಳ ಹಿಂದಿನಿಂದಲೂ ಇದೆ. ಉತ್ಪಾದನಾ ವೆಚ್ಚದಲ್ಲಿ ರಾಜ್ಯದೊಳಗೂ ಈ ರೀತಿಯ ಪ್ರಾದೇಶಿಕ ಭಿನ್ನತೆ ಇದೆ. ಉಳುಮೆ, ಗೊಬ್ಬರ, ಕೂಲಿ, ಬಿತ್ತನೆ ಬೀಜ, ನೀರಾವರಿ ಮೊದಲಾದವುಗಳ ವೆಚ್ಚದಲ್ಲೂ ಈ ಭಿನ್ನತೆ ಇದೆ. ಪ್ರಾದೇಶಿಕ ಮಟ್ಟದಲ್ಲೇ ಅವುಗಳನ್ನು ಲೆಕ್ಕಹಾಕಿ, ವೈಜ್ಞಾನಿಕ ಉತ್ಪಾದನಾ ವೆಚ್ಚವನ್ನು ನಿಗದಿ ಮಾಡುವುದರತ್ತ ಆಯೋಗ ಗಮನ ನೀಡಲಿದೆ.
ಈ ಭಿನ್ನತೆ ಮತ್ತು ಅದರಿಂದಾಗುವ ಅನ್ಯಾಯದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವ ಯತ್ನವನ್ನೂ ಮಾಡಲಾಗುತ್ತದೆ. ಉತ್ಪಾದನಾ ವೆಚ್ಚ ಮತ್ತು ಎಂಎಸ್‌ಪಿ ನಡುವಣ ಅಂತರವನ್ನು ತುಂಬಲು ರಾಜ್ಯ ಸರ್ಕಾರ ಪ್ರೋತ್ಸಾಹ ಧನವನ್ನು ನೀಡಬೇಕಾದ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತದೆ.
ಆಯೋಗ ಶಿಫಾರಸು ಮಾಡುವ ಪ್ರೋತ್ಸಾಹಧನಕ್ಕಿಂತ ಕಡಿಮೆ ಮೊತ್ತವನ್ನು ರಾಜ್ಯ ಸರ್ಕಾರ ಘೋಷಿಸುತ್ತದೆ. ಶಿಫಾರಸನ್ನು ಸಂಪೂರ್ಣವಾಗಿ ಒಪ್ಪುವಲ್ಲಿ ಇರುವ ತೊಡಕುಗಳೇನು?
ರೈತರಿಗೆ ಉತ್ತಮ ಬೆಲೆ ದೊರೆಯಲಿ ಎಂಬುದನ್ನಷ್ಟೇ ಆಯೋಗ ಗಮನದಲ್ಲಿ ಇರಿಸಿಕೊಳ್ಳುತ್ತದೆ. ಅದರ ಆಧಾರದಲ್ಲೇ ಶಿಫಾರಸು ಮಾಡುತ್ತದೆ. ಆದರೆ, ಸರ್ಕಾರವು ಇತರ ಅಂಶಗಳನ್ನೂ ಪರಿಗಣಿಸುತ್ತದೆ. ರಾಜ್ಯದ ಆರ್ಥಿಕ ಸ್ಥಿತಿಗತಿ, ಪ್ರೋತ್ಸಾಹಧನದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳು, ಶಿಫಾರಸಿನ ಅನುಷ್ಠಾನದ ಸಾಧ್ಯತೆಗಳನ್ನು ಸರ್ಕಾರದ ಹಂತದಲ್ಲಿ ಮತ್ತೊಮ್ಮೆ ಪರಿಶೀಲಿಸಲಾಗುತ್ತದೆ. ಅಧಿಕಾರಿಯಾಗಿ ಸರ್ಕಾರದ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕಾರಣ ಈ ಪ್ರಕ್ರಿಯೆಯ ಪರಿಚಯ ನನಗಿದೆ. ಈ ಎಲ್ಲದರ ಮಧ್ಯೆ ಒಂದು ಸಮತೋಲನವನ್ನು ಕಾಯ್ದುಕೊಂಡು, ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಆಯೋಗ ಮಾಡಲಿದೆ.
ಬೇಡಿಕೆ ಮತ್ತು ಪೂರೈಕೆ ಮಧ್ಯೆ ಸಮತೋಲನ ಇಲ್ಲದ ಕಾರಣಕ್ಕೆ ಕೃಷಿ ಉತ್ಪನ್ನಗಳ ಬೆಲೆ ನೆಲಕಚ್ಚಿದ ಉದಾಹರಣೆಗಳು ಬಹಳ ಇವೆ. ಈ ಸಮಸ್ಯೆಯನ್ನು ನಿವಾರಿಸುವ ದಿಸೆಯಲ್ಲಿ ಆಯೋಗವು ಏನೆಲ್ಲಾ ಕ್ರಮ ತೆಗೆದುಕೊಳ್ಳಲಿದೆ?
ರೈತ ಉತ್ಪನ್ನಗಳ ವಿಚಾರಕ್ಕೆ ಬಂದಾಗ ಕೊಯ್ಲೋತ್ತರ ನಿರ್ವಹಣೆಗೇ ಹೆಚ್ಚು ಒತ್ತು ನೀಡಲಾಗುತ್ತಿದೆ. ಅದು ಮುಖ್ಯವೇ. ಶೀಥಲಗೃಹಗಳು ಮತ್ತು ಸಂಗ್ರಹದ ಆಧಾರದ ಮೇಲೆ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ವ್ಯವಸ್ಥೆಯನ್ನು ಪ್ರಚಾರ ಮಾಡಬೇಕು. ಬಹುತೇಕರಿಗೆ ಈ ಬಗ್ಗೆ ಮಾಹಿತಿ ಕೊರತೆ ಇದೆ. ಗ್ರಾಮೀಣಾಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ನೀರಾವರಿ ಇಲಾಖೆಗಳ ಸಹಯೋಗದಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಶೀಥಲಗೃಹ, ಗೋದಾಮುಗಳನ್ನು ನಿರ್ಮಾಣ ಮಾಡಬೇಕು. ಬೆಲೆ ಕುಸಿದಾಗ ಸಂಗ್ರಹಿಸಿ, ಏರಿಕೆಯಾದಾಗ ಮಾರಾಟ ಮಾಡಲು ಇದರಿಂದ ಸಾಧ್ಯವಾಗುತ್ತದೆ.
ಇದಕ್ಕಿಂತಲೂ ಮುಖ್ಯವಾಗಿ ಬೇಡಿಕೆ ಯಾವ ಪ್ರಮಾಣದಲ್ಲಿ ಇದೆ ಮತ್ತು ಎಷ್ಟು ಪ್ರದೇಶದಲ್ಲಿ ಬಿತ್ತನೆ ಮಾಡಿದರೆ ಉತ್ತಮ ಬೆಲೆ ದೊರೆಯಲಿದೆ ಎಂಬ ಮಾಹಿತಿ ಕೊಡುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ನಮ್ಮಲ್ಲಿ ಈಗಾಗಲೇ ನಿಖರವಾದ ಮಾಹಿತಿ ನೀಡುವ ಬೆಳೆ ಸಮೀಕ್ಷೆ ವ್ಯವಸ್ಥೆ ಇದೆ. ಅದನ್ನು ಬಳಸಿಕೊಳ್ಳಬೇಕು. ಒಂದೇ ಬೆಳೆ ಅಗತ್ಯಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗದಂತೆ ಎಚ್ಚರವಹಿಸಬೇಕು. ಆ ಮೂಲಕ ಬೇಡಿಕೆ ಮತ್ತು ಬೆಲೆ ಉತ್ತಮ ಮಟ್ಟದಲ್ಲೇ ಇರುವಂತೆ ನೋಡಿಕೊಳ್ಳಬಹುದು. ಇಂತಹ ವ್ಯವಸ್ಥೆಯನ್ನು ಸಂಬಂಧಿತ ಎಲ್ಲ ಇಲಾಖೆಗಳ ಸಹಯೋಗದಲ್ಲಿ ಅಭಿವೃದ್ಧಿಪಡಿಸಲು ಆಯೋಗವು ಒತ್ತು ನೀಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.