
ಅರಾವಳಿ ಪರ್ತಗಳ ಸಾಲು ಹಾಗೂ ರಾಜೇಂದ್ರ ಸಿಂಗ್ (ಒಳಚಿತ್ರ)
ಒಂದೇ ಒಂದು ದಶಕ, ಐದು ನದಿಗಳ ಪುನಶ್ಚೇತನ, 650 ಹಳ್ಳಿಗಳ ಉದ್ಧಾರ, 1200 ಜೋಹಾಡ್ (ಕೆರೆ) ನಿರ್ಮಾಣ... ಇವು ಕೇವಲ ಅಂಕಿ ಸಂಖ್ಯೆಗಳಲ್ಲ. ರಾಜಸ್ಥಾನದ ಜೀವವಾಹಿನಿಯೊಂದರ ಪುನರುತ್ಥಾನಕ್ಕೆ ಸಾಕ್ಷಿಯಾಗಿ ದಾಖಲಾಗಿರುವ ಈ ಸಂಖ್ಯೆಗಳನ್ನು ಅಷ್ಟಕ್ಕೇ ಸೀಮಿತಗೊಳಿಸಲಾಗದು. ಇದರೊಂದಿಗೆ ಹಳ್ಳಿಗಳು ಚಿಗಿತುಕೊಂಡಿವೆ. ಬರಡಾಗಿದ್ದ ಬದುಕು ಬೆಳಗಿದೆ. ಮುಗ್ಧ ಹಳ್ಳಿಗರ ಜ್ಞಾನ ಭಂಡಾರ ವಿಸ್ತರಣೆಯಾಗಿದೆ. ಮಾನವೀಯತೆ ಜಾಗೃತಗೊಂಡಿದೆ. ಸಂಘಟನೆ ಬಲಗೊಂಡಿದೆ. ಕಮರಿಹೋಗಿದ್ದ ಕಾಡುಗಳು ಚಿಗುರಿವೆ. ಹೊಲಗದ್ದೆಗಳು ಹಸಿರಾಗಿವೆ. ಹಸಿದ ಹೊಟ್ಟೆಗಳು ತಣ್ಣಗಾಗಿವೆ. ಪರಂಪರೆಯ ಮೌಲ್ಯ ವೃದ್ಧಿಸಿದೆ. ಸಂಸ್ಕೃತಿಯ ಗೌರವ ಇಮ್ಮಡಿಸಿದೆ... ರಾಜಸ್ಥಾನದಲ್ಲಿ ಏನಾಗಿಲ್ಲ ಎಂಬುದನ್ನು ಕೇಳಬೇಕಷ್ಟೆ.
‘ಜೋಹಾಡ್ ಬಾಬಾ’ ಎಂದೇ ಖ್ಯಾತರಾದ ಭಾರತದ ಆಧುನಿಕ ಭಗೀರಥ, ಮ್ಯಾಗ್ಸೆಸೆ ಪುರಸ್ಕೃತ ರಾಜಸ್ಥಾನದ ರಾಜೇಂದ್ರ ಸಿಂಗ್ ಅವರ ಯಶೋಗಾಥೆಗೆ ಹಲವು ಮಜಲುಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಅರಾವಳಿ ಬೆಟ್ಟ ಸಾಲುಗಳನ್ನು ಮತ್ತೆ ಆವರಿಸಿಕೊಂಡಿರುವ ಗಣಿಗಾರಿಕೆಯ ಕರಾಳ ಛಾಯೆಯೆ ಹಿನ್ನೆಲೆಯಲ್ಲಿ ಅವರು ತಮ್ಮ ‘ತರುಣ ಭಾರತ ಸಂಘ’ದ ಅಡಿಯಲ್ಲಿ ಕೈಗೊಂಡ ಮಹತ್ವಪೂರ್ಣ ಜಲ ಕೈಂಕರ್ಯ ಸಮಾಕಾಲೀನ ಸನ್ನಿವೇಶಕ್ಕೆ ಹೆಚ್ಚು ಪ್ರಸ್ತುತವೆನಿಸಿದೆ.
1980ರಲ್ಲಿ ಕಪ್ಪು ಪ್ರದೇಶವೆಂದು ಘೋಷಣೆಯಾಗಿದ್ದ ತಾನಾಗಾಜಿ ಬ್ಲಾಕ್ ಪ್ರದೇಶವನ್ನು ಸಂಪೂರ್ಣ ಹಸಿರಾಗಿಸಿದ ಹೆಗ್ಗಳಿಕೆ ಸಿಂಗ್ ಮತ್ತವರ ತಂಡದ್ದು. ದೇಶದ ಅತ್ಯಂತ ದೊಡ್ಡ ಮರಳುಗಾಡು, ಕೇವಲ 500 ರಿಂದ 570 ಮಿಲಿ ಮೀಟರ್ ಮಳೆ ಪಡೆಯುವ ರಾಜಸ್ಥಾನದ ರೂಪಾರೆಲ್, ಅರಾವರಿ, ಜಹಜವಾಲಿ, ಸರಸಾ ಮತ್ತು ಭಗನಿಯರು ಮತ್ತೆ ಪ್ರತ್ಯಕ್ಷರಾಗಿ ನಲಿದಾಡತೊಡಗಿದ್ದು ಕೇವಲ ಮಳೆ ನೀರ ಸಂರಕ್ಷಣೆಯಿಂದ ಅಂದರೆ ಜಗತ್ತೇ ಮೂಗಿನ ಮೇಲೆ ಬೆರಳಿಡುತ್ತದೆ. ಆದರಿದು ಸತ್ಯ.
ನಿಸರ್ಗವನ್ನು ಅದರಷ್ಟಕ್ಕೆ ಅದು ಇರುವಂತೆ ನೀಡಿದ ಸ್ವಾತಂತ್ರ್ಯ, ಅರಣ್ಯ ಪರಿಸರದಲ್ಲಿ ನಿರ್ಬಂಧಿಸಿದ ಮಾನವನ ಹಸ್ತಕ್ಷೇಪ ಹಾಗೂ ಮಳೆ ನೀರಿನ ಓಟಕ್ಕೆ ಹಾಕಿದ ತಡೆ. ಇವಿಷ್ಟೇ ತಮ್ಮ ಯಶಸ್ಸಿನ ಗುಟ್ಟು ಎನ್ನುವ ರಾಜೇಂದ್ರ ಸಿಂಗ್, ‘ನಾವು ಕೆಲಸ ಆರಂಭಿಸಿದ ಕೇವಲ ಐದು ವರ್ಷಗಳಲ್ಲಿ 36 ಗ್ರಾಮಗಳ ವ್ಯಾಪ್ತಿಯಲ್ಲಿ ಅಂತರ್ಜಲದ ಮಟ್ಟ 6 ಮೀಟರ್‌ಗಳಷ್ಟು ಏರಿತ್ತು. ₹100 ಖರ್ಚುಮಾಡಿ ಕಟ್ಟಿದ ಜೋಹಾಡ್‌ಗಳು ನಾಲ್ಕು ಪಟ್ಟು ಲಾಭವನ್ನು ಮರಳಿ ಕೊಡಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಊರಿನ ಹೆಣ್ಣು ಮಕ್ಕಳಿಗೆ ಶಾಲೆಗೆ ಹೋಗಲು ಸಮಯ ಮಿಗಲಾರಂಭಿಸಿತು...' ಎಂದು ಹೆಮ್ಮೆಯಿಂದ ನೆನೆಯುತ್ತಾರೆ.
ಇದೀಗ ಅರಣ್ಯ ಸಂರಕ್ಷಣಾ ನಿಯಮಗಳ (2022) ತಿದ್ದುಪಡಿ ಪ್ರಕಾರ ‘ಅರಾವಳಿ ಶ್ರೇಣಿ ವ್ಯಾಪ್ತಿಯಲ್ಲಿ 100 ಮೀಟರ್‌ಗಿಂತ ಕಡಿಮೆ ಎತ್ತರದಲ್ಲಿರುವ ಬೆಟ್ಟಗಳಲ್ಲಿ ಗಣಿಗಾರಿಕೆಗೆ ಯಾವುದೇ ಆಕ್ಷೇಪವಿರುವುದಿಲ್ಲ’ ಎಂಬ ಕೇಂದ್ರ ಸರ್ಕಾರದ ವ್ಯಾಖ್ಯಾನಕ್ಕೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ. ಈ ನಿರ್ಧಾರವನ್ನು ಖಂಡಿಸಿ ರಾಜಸ್ಥಾನ ಮತ್ತು ಹರಿಯಾಣದಲ್ಲಿ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ’ಪ್ರಜಾವಾಣಿ‘ಯೊಂದಿಗೆ ರಾಜೇಂದ್ರ ಸಿಂಗ್ ಅವರು ಮಾತನಾಡಿದ್ದಾರೆ. ಈಶಾನ್ಯ ರಾಜಸ್ಥಾನವನ್ನು ಥಾರ್ ಮರುಭೂಮಿಯ ಬಿಸಿಯಿಂದ ಕಾಪಾಡುತ್ತಿದ್ದ ಅರಾವಳಿ ಪರ್ವತ ಶ್ರೇಣಿಯೇ ಮಾಯವಾದದ್ದು ಹೇಗೆ? ವಾರ್ಷಿಕ 600 ಮಿ.ಮೀ. ಮಳೆಯಾಗುತ್ತಿದ್ದರೂ ಅಂತರ್ಜಲ ಕುಸಿದಿದ್ದಾದರೂ ಏಕೆ? ಅರಾವಳಿ ತಪ್ಪಲಿನ ಗಣಿಗಾರಿಕೆ ಲಾಭಿಯ ಇತಿಹಾಸವೇನು, ಇದೀಗ ಕೇಂದ್ರ ಸರಕಾರದ ಕ್ರಮದಿಂದ ಆಗಬಹುದಾದ ಅನಾಹುತವೇನು ಎಂಬಿತ್ಯಾದಿಗಳನ್ನುಈ ಸಂದರ್ಶನದಲ್ಲಿ ಅವರು ಸವಿವರ ಚರ್ಚಿಸಿದ್ದಾರೆ.
ಮತ್ತೊಮ್ಮೆ ಅರಾವಳಿಯಲ್ಲಿ ಗಣಿಗಾರಿಕೆಯ ಸದ್ದು ಕೇಳಿಬರುತ್ತಿದೆ. ನೀವೂ ಒಂದು ಕಾಲದಲ್ಲಿ ಈ ಕಬಂಧ ಬಾಹುವಿನ ವಿರುದ್ಧ ಹೋರಾಡಿದವರು. ಈ ಸನ್ನಿವೇಶದಲ್ಲಿ ನಿಮ್ಮ ನಿಲುವೇನು?
ಗಣಿಗಾರಿಕೆಯಿಂದ ನಾಶವಾದ ಪರ್ವತಗಳನ್ನು ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಕೇಂದ್ರ ಸರಕಾರ ಕಳೆದ ನವೆಂಬರ್ 20ರಂದು ಕೈಗೊಂಡ ನಿರ್ಧಾರದಂತೆ ಗಣಿಗಾರಿಕೆಗೆ ಅವಕಾಶ ನೀಡುವುದರಿಂದ ಅರಾವಳಿ ಪರ್ವತ ಶ್ರೇಣಿಯೇ ನಾಶವಾಗುತ್ತವೆ. ಆ ಮೂಲಕ ಒಂದಿಡೀ ಸಮುದಾಯ ಮತ್ತೆ ವಿನಾಶದ ಆತಂಕಕ್ಕೆ ತಳ್ಳಲ್ಪಡುತ್ತದೆ. ಎಂಥದ್ದೇ ಹರಸಾಹಸದಿಂದಲೂ ಪರ್ವತಗಳೂ ಸೇರಿದಂತೆ ಸುತ್ತಲಿನ ಪರಿಸರವನ್ನು ಮೂಲ ಸ್ಥಿತಿಗೆ ತರುವುದು ದುಃಸಾಧ್ಯ. ಒಂದನ್ನು ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕು. ಒಂದೊಮ್ಮೆ ನೀರಿಲ್ಲ ಎಂದಾದರೆ ನದಿಗಳು ಮತ್ತು ಕೊಳಗಳನ್ನು ಪುನರುಜ್ಜೀವನಗೊಳಿಸಬಹುದು. ರೂಪಾರೆಲ್ (ಅರಾವಳಿಯ ಜೀವನದಿ)ನ ವಿಷಯದಲ್ಲಿ ಇದನ್ನು ಸಾಬೀತುಪಡಿಸಿದ್ದೇವೆ. ಆದರೆ ಪರ್ವತಗಳನ್ನು ಅವುಗಳ ಮೂಲ ಸ್ಥಿತಿಗೆ ಮರುಸ್ಥಾಪಿಸುವುದು ಅಸಾಧ್ಯ.
ಒಂದು ಕಾಲದಲ್ಲಿ ಅರಾವಳಿ ಗಣಿಗಾರಿಕೆಗೆ ಮುಕ್ತವಾಗಿತ್ತು. ಅದಕ್ಕೊಂದು ಸುದೀರ್ಘ ಇತಿಹಸವೇ ಇದೆ. ದೇಶ ಆಗಷ್ಟೇ ಬ್ರಿಟಿಷರ ದಾಸ್ಯದಿಂದ ವಿಮೋಚನೆಗೊಂಡಿತ್ತು. ಪ್ರಜಾಪ್ರಭುತ್ವ ನೆಲೆಗೊಂಡು ರಾಜ ಪ್ರಭುತ್ವ ಕೊನೆಯ ದಿನಗಳನ್ನು ಎಣಿಸುತ್ತಿತ್ತು. ಅಲ್ಲಿನ ಮಹಾರಾಜರು ದುರಾಸೆಗೆ ಬಿದ್ದವರಂತೆ ವರ್ತಿಸಿ ಅರಾವಳಿಯ ಇಂಚಿಂಚನ್ನೂ ಉದ್ಯಮಿಗಳಿಗೆ ಗಣಿಗಾರಿಕೆಗಾಗಿ ಹರಾಜು ಮೂಲಕ ಕೊಟ್ಟುಬಿಟ್ಟಿದ್ದರು. ಮರಗಳು ಕೊಡಲಿ ಏಟಿಗೆ ಬಲಿಯಗುತ್ತಿದ್ದಂತೆ ಮಳೆ ನೀರು ಗುಡ್ಡ, ಕಣಿವೆಗಳ ಮೂಲಕ ನೇರವಾಗಿ ತಪ್ಪಲಿನಲ್ಲಿದ್ದ ಹೊಲಗಳಿಗೆ ಪ್ರವೇಶಿಸತೊಡಗಿತು. ಅದರಿಂದ ಭೂ ಸವಕಳಿ ಉಂಟಾಗಿ ಫಲವತ್ತಾದ ಮಣ್ಣು ಕೊಚ್ಚಿಹೋಗತೊಡಗಿತು. ಕೆಲವೇ ವರ್ಷಗಳಲ್ಲಿ ಬರಡುತನ ಆವರಿಸಿಕೊಡಿತು. ಇವತ್ತಿನ ಮರುಭೂಮಿಯ ಅಂಚಿನ ಜೀವನದಿಗಳೆಲ್ಲ ಬತ್ತಿ ಹೋಗಿದ್ದೇ ಅದರ ಫಲದಿಂದ. ಏನೇ ಇರಲಿ. ಮಾನವ ಯಂತ್ರೋಪಕರಣಗಳಿಂದ ಪ್ರಕೃತಿಯನ್ನು ನಾಶಮಾಡುವುದು ಮಾನವೀಯತೆಯ ನಾಶ. ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಇಂತಹ ದುರಂತವನ್ನು ನಾವು ಒಪ್ಪಿಕೊಳ್ಳಬಾರದು.
ಅರಾವಳಿ ಪರ್ವತಶ್ರೇಣಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರ ಕುರಿತು ನಿಮ್ಮ ಪ್ರತಿಕ್ರಿಯೆ ದಾಖಲಿಸಲು ಕೆಳಗೆ ಸ್ಕ್ರಾಲ್ ಮಾಡಿ...
ಅವತ್ತಿನ ಗಣಿ ದಂಧೆಯೇ ಇವತ್ತಿಗೂ ತನ್ನ ಕರಿನೆರಳನ್ನು ಬೀರುತ್ತಿದೆ ಎಂಬುದೇ ನಿಮ್ಮ ಅಭಿಪ್ರಾಯ? ಕೇಂದ್ರದ ನಿರ್ಧಾರಕ್ಕೆ ಅವರ ಒತ್ತಡವೇ ಕಾರಣವೇ? ಅದರ ವಿರುದ್ಧ ನಿಮ್ಮ ಆ ದಿನಗಳ ಹೋರಾಟ ಹೇಗಿತ್ತು?
ನೋಡಿ, ಕರ್ನಾಟಕ ಗಣಿಗಾರಿಕೆಯಲ್ಲಿ ಅಕ್ರಮದ ಭೂತ ಹುಟ್ಟಿಕೊಂಡಿದ್ದು ಇತ್ತೀಚಿನ ದಶಕದ ಈಚೆ. ಆದರೆ ರಾಜಸ್ಥಾನದಲ್ಲಿ ಈ ಪೀಡೆ ಬಹಳ ಹಳೆಯದು. ನಾವು ತರುಣಭಾರತ ಸಂಘ ಕಟ್ಟಿಕೊಂಡು ಜೋಹಾಡ್ (ಕೆರೆಯ ಮಾದರಿಯ ರಚನೆ)ಗಳ ನಿರ್ಮಾಣ, ಆ ಮೂಲಕ ಅರಣ್ಯ ಪುನಶ್ಚೇತನಕ್ಕೆ ಇಳಿದಾಗ ಅತ್ಯಂತ ಆತಂಕಕ್ಕೊಳಗಾದವರು ಗಣಿ ಉದ್ಯಮಿಗಳು. ಹೀಗಾಗಿ ನಮ್ಮ ವಿರುದ್ಧ ಇನ್ನಿಲ್ಲದ ಪಿತೂರಿಗಳನ್ನು ಆರಂಭಿಸಿದ್ದರು. ಒಂದಲ್ಲ, ಎರಡಲ್ಲ. ಬರೋಬ್ಬರಿ 377 ಕೋರ್ಟ್ ಕೇಸುಗಳನ್ನು ಸರಣಿಯಾಗಿ ಎದುರಿಸಬೇಕಾದ ಸನ್ನಿವೇಶ ಎದುರಾಗಿತ್ತು. ಹತ್ತಕ್ಕೂ ಹೆಚ್ಚು ಬಾರಿ ಹಲ್ಲೆ, ಹಲ್ಲೆಗೆ ಯತ್ನ ಮಾತ್ರವಲ್ಲ, ನನ್ನ ಮೇಲೆ ಅತ್ಯಾಚಾರದ ಆಪಾದನೆಯನ್ನೂ ಮಾಡಲಾಗಿತ್ತು. ಪಕ್ಷಿಧಾಮ ಉಳಿಸಿಕೊಳ್ಳಲು, ಅಭಯಾರಣ್ಯ ರಕ್ಷಿಸಲು, ಕೆರೆ ಸಂಕ್ಷಣೆಗೆ ಮುಂದಾಗುತ್ತಿದ್ದಂತೆ ಸ್ಥಳೀಯರನ್ನು, ಸುತ್ತಮುತ್ತಲಿನ ಡಕಾಯಿತ ತಂಡವನ್ನು ನಮ್ಮ ವಿರುದ್ಧ ಎತ್ತಿ ಕಟ್ಟಲಾಯಿತು. ಆದರೆ, ನನ್ನ ನಂಬಿಕೆ ಬೇರೆಯೇ ಆಗಿತ್ತು. ‘ಒಮ್ಮೆ ಮಾತ್ರ ನಿರ್ಧಾರ ಮಾಡಬೇಕಿತ್ತು. ಆದರೆ, ಅದಕ್ಕೆ ಮುನ್ನ ಹತ್ತು ಬಾರಿ ಯೋಚಿಸಿದರೂ ತಪ್ಪಿಲ್ಲ. ನಿರ್ಧಾರವಾದ ನಂತರ ಮತ್ತೆ ಪರ್ಯಾಯಗಳತ್ತ ತಿರುಗಲೇಬಾರದು’ ಎಂಬ ನಿಲುವು ನನ್ನದಾಗಿತ್ತು. ಹೀಗಾಗಿ, ಎಷ್ಟೇ ಆತಂಕ ಎದುರಾದರೂ ಹೆಜ್ಜೆ ಹಿಂದೆಗೆಯುವ ಪ್ರಶ್ನೆಯೇ ಬರಲಿಲ್ಲ.
ಇಲ್ಲಿ ಒಂದು ಸೂಕ್ಷ್ಮ ಸಂಗತಿ ಇದೆ. ಅಭಿವೃದ್ಧಿಯ ವಿಚಾರ ಬಂದಾಗಲೆಲ್ಲ, ಪರಿಸರವಾದಿಗಳು ವಿರೋಧಿಸುತ್ತಾರೆ, ಅವರು ಅಭಿವೃದ್ಧಿಯ ವಿರೋಧಿಗಳು ಎಂಬ ಅಭಿಪ್ರಾಯ ಮೊಳೆತಿದೆ. ಹಾಗಾದರೆ ಅಭಿವೃದ್ಧಿ ಬೇಡವೇ. ಅಭಿವೃದ್ಧಿ ಎಂಬುದು ಬಂದಾಗ ಗಣಿಗಾರಿಕೆ, ಒಂದಷ್ಟು ಕಾಡು ನಾಶ ಇತ್ಯಾದಿ ಅನಿವಾರ್ಯವಲ್ಲವೇ?
ಯಾವುದೇ ಕಾರಣಕ್ಕೂ ಅಭಿವೃದ್ಧಿ ಬೇಡ ಎನ್ನುವುದು ನಮ್ಮ ನಿಲುವಲ್ಲ. ಆದರೆ ಅಭಿವೃದ್ಧಿಯ ವ್ಯಾಖ್ಯಾನ ಬದಲಾಗಬೇಕಿದೆ. ಯಾವ ಬೆಲೆತೆತ್ತು ನಾವು ಅಭಿವೃದ್ಧಿ ಮಾಡುತ್ತೇವೆ ಎಂಬುದು ಗಮನಾರ್ಹ. ಜನರಲ್ಲಿ ಅಭಿವೃದ್ಧಿಯ ಕೆಲಸದ ಬಗ್ಗೆ ಆತುರ ಇರಬೇಕು. ಆದರೆ, ಆತಂಕ ಎಂದಿಗೂ ಸಲ್ಲ. ಅದರ ಬಗ್ಗೆ ಕಾಳಜಿ ಇರಬೇಕು. ಬೇಡಿಕೆಯಿಲ್ಲದೇ ಹೇರುವ ಯೋಜನೆಗಳು, ನಿರ್ಧಾರಗಳು ಅರ್ಥಹೀನ. ಹೀಗಾಗಿ, ಬೇಡಿಕೆಯೊಂದಿಗೆ ಆರಂಭಿಸುವ ಕಾರ್ಯದಲ್ಲಿ ಪಾಲ್ಗೊಳ್ಳುವಿಕೆಯೇ ಅತ್ಯಂತ ಪ್ರಮುಖಾಂಶ. ಆಗ ಮಾತ್ರ ಅಂದುಕೊಂಡ ಯೋಜನೆ ಅನುಷ್ಠಾನ ಯೋಜಿತ ರೀತಿಯಲ್ಲಿ ಆಗಲು ಸಾಧ್ಯ. ಗಣಿಗಾರಿಕೆಗೆ ಅವಕಾಶದಂಥ ನಿರ್ಧಾರಗಳು ಯಾವುದೋ ಸ್ವಾರ್ಥ ಹಿತಾಸಾಕ್ತಿಗಳ ಪರವಾದ ನಿರ್ಣಯಗಳಷ್ಟೇ. ಇಲ್ಲಿ ಇನ್ನೊಂದು ಪ್ರಮುಖ ಅಂಶ ಎಂದರೆ ನೀವು ಯಾವ ಜಾಗದಲ್ಲಿ ಗಣಿಗಾರಿಕೆಗೆ ಅನುಮತಿ ನೀಡುತ್ತಿದ್ದೀರಿ, ಎಲ್ಲಿ ಯೋಜನೆಗಳನ್ನು ಆರಂಭಿಸಲು ಹೊರಟಿದ್ದೀರಿ ಎಂಬ ಬಗ್ಗೆ ಅವಲೋಕನ ಆಗಲೇಬೇಕು. ಅದಿಲ್ಲದ ನಿರ್ಧಾರಗಳಿಗೆ ಜನಬೆಂಬಲ ಎಂದಿಗೂ ಸಿಗುವುದೇ ಇಲ್ಲ.
ಅರಾವಳಿಯ ಗಣಿಯ ಇತಿಹಾಸವನ್ನೇ ಪುನರಾವಲೋಕನ ಮಾಡುವುದಿದ್ದರೆ, ಎಂದು ಸರಿಸ್ಕ ಬೆಟ್ಟದ ಸಾಲುಗಳೂ ಸೇರಿದಂತೆ ತಮ್ಮ ಆಡಳಿತಕ್ಕೆ ಒಳಪಟ್ಟಿದ್ದ ಪ್ರದೇಶಗಳನ್ನು ಅಂದಿನ ಮಹಾರಾಜರು ಗಣಿ ಮಾಲೀಕರಿಗೆ ಹರಾಜು ಹಾಕಿದರೋ, ಆ ದಿನವೇ ಹೆಮ್ಮಾರಿಯನ್ನು ಒಳಗೆ ಸೇರಿಸಿಕೊಂಡಿದ್ದಾಗಿತ್ತು. ಹೊಳೆಯಲ್ಲಿ ಹೂಳು ತುಂಬಿದರೆ, ಬಾವಿಗಳು ಬತ್ತಿದರೆ, ಅಂತರ್ಜಲ ಕುಸಿದರೆ ಗಣಿ ಧಣಿಗಳಿಗೆ ಏನಾಗಬೇಕು? ಅವರಿಗೆ ಬೇಕಾಗಿದ್ದು ಹಣ ಮಾತ್ರ. ವಸುಂಧರೆಯ ಒಡಲು ಬಗೆಯಬೇಕು, ಕೋಟಿಕೋಟಿ ಎಣಿಸಬೇಕು. ಅದಷ್ಟೇ ಅವರಿಗೆ ಬೇಕಾಗಿದ್ದದ್ದು. ಮುಗ್ಧ ಜನರಿಗೆ ಅದನ್ನು ಪ್ರಶ್ನಿಸಬೇಕೆಂಬ, ಪ್ರತಿಭಟನೆ ನಡೆಸಬೇಕೆಂಬ ಅರಿವು ಮತ್ತು ಗಣಿಗಾರಿಕೆ ನಡೆಸುವವರ ವಿರುದ್ಧ ನಿಲ್ಲುವ ಧೈರ್ಯವಾದರೂ ಎಲ್ಲಿಂದ ಬರಬೇಕು ಹೇಳಿ? ಹೀಗಾಗಿಯೇ ನಮ್ಮ ತಂಡದ ಆಗಮನ ಆಗುವವರೆಗೂ ಗಣಿಗಾರಿಕೆ ಎಗ್ಗಿಲ್ಲದೆ ಸಾಗಿತ್ತು. ಗಣಿ ಧಣಿಗಳ ಅಟಾಟೋಪಕ್ಕೆ ಕಡಿವಾಣ ಬಿದ್ದದೂ ನೀರಿನ ಹೋರಾಟದಿಂದಲೇ ಎಂದರೆ ನಿಮಗೆ ಆಶ್ವರ್ಯ ಆಗಬಹುದು. ಆದರೆ ಇದೀಗ ಎಲ್ಲವೂ ಮತ್ತೆ ತಲೆ ಎತ್ತಿನಿಲ್ಲುವ ಅಪಾಯಗಳು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಗಣಿಗಾರಿಕೆ ವಿರುದ್ಧ ನೀವು ಕಾನೂನು ಹೋರಾಟ ಕೈಗೊಂಡು ಯಶಸ್ವಿಯಾಗಿದ್ದಿರಲ್ಲವೇ? ಇದರ ವಿರುದ್ಧ ಸುಪ್ರೀಂ ಕೋರ್ಟ್ ಆದೇಶ ಇದೆಯಲ್ಲವೇ? ಮತ್ತೀಗ ಗಣಿಗಾರಿಕೆಗೆ ಆದೇಶ ಹೇಗೆ ಸಾಧ್ಯ?
ಅದು 1991, ಗಣಿಧಣಿಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಕಂಪನಿಗಳ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಸಹ ಆದೇಶಿಸಿತ್ತು. ಆದರೆ ಅದು ಸರಿಸ್ಕ ಅಭಯಾರಣ್ಯದ ಸುತ್ತಮುತ್ತಲ ಪ್ರದೇಶಕ್ಕೆ ಸಂಬಂಧಿಸಿದ್ದಾಗಿತ್ತು. ಇದೇ ಆಧಾರದಲ್ಲಿ ಮರುವರ್ಷ ಅಂದರೆ 1992ರಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಅರಾವಳಿ ಪರ್ವತ ಶ್ರೇಣಿಯಲ್ಲೂ ಗಣಿಗಾರಿಕೆ ರದ್ದುಪಡಿಸಿ ಆದೇಶ ಹೊರಡಿಸಿತ್ತು.
ಆದರೆ, ಅರಾವಳಿ ಪರ್ವತಗಳ ಸಂರಕ್ಷಣೆಗಾಗಿ ಇನ್ನೂ ಯಾವುದೇ ನಿರ್ಣಾಯಕ ಕಾನೂನನ್ನು ಜಾರಿಗೆ ತರಲಾಗಿಲ್ಲ. ಅರಾವಳಿ ಪರ್ವತಗಳ ಮೇಲೆ ಬೆಳೆಯುವ ಕಾಡುಗಳನ್ನು ರಕ್ಷಿಸಲು ಕಾನೂನನ್ನು ಅಂಗೀಕರಿಸಲಾಗಿದೆ. ಆದರೆ ಮೂಲ ಪರ್ವತಗಳನ್ನು ಸಂರಕ್ಷಿಸುವ ಕಾನೂನು ಇಂದು ತುರ್ತಾಗಿ ಅಗತ್ಯವಿದೆ. 1992ರ ಮೇ 7ರಂದು, ಅರಾವಳಿ ಪರ್ವತಗಳ ಸಂರಕ್ಷಣೆಗಾಗಿ ಕಾನೂನನ್ನು ಅಂಗೀಕರಿಸಲಾಯಿತು. ಆದರೆ ಅದು ಅಲ್ವಾರ್-ಗುರ್ಗಾಂವ್ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ನಂತರ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ಇಡೀ ಅರಾವಳಿ ಪರ್ವತಗಳ ಸಂರಕ್ಷಣೆಗೆ ಪೂರಕ ತೀರ್ಪುಗಳನ್ನು ನೀಡಿದವು. ಈ ಎಲ್ಲಾ ಕ್ರಮಗಳ ವಿರುದ್ಧ ಇದೀಗ ಗಣಿಗಾರಿಕೆ ಮಾಫಿಯಾ ಒಗ್ಗಟ್ಟಾಗಿ, ಕಾನೂನಿನ ಕಣ್ಣಿಗೆ ಮಣ್ಣೆರಚಿ ತಮ್ಮ ಗುರಿ ಸಾಧನೆಯಲ್ಲಿ ಯಶಸ್ವಿಯಾಗಿವೆ. ದೇಶದ ಜನತೆ ಇದಕ್ಕಿಂತ ಹೆಚ್ಚಾಗಿ ಸಂಘಟಿತರಾಗಿ ಒಂದೇ ಧ್ವನಿಯಲ್ಲಿ ಇದನ್ನು ವಿರೋಧಿಸುವ ಮೂಲಕ ಅಕ್ರಮವನ್ನು ತಡೆಯಬೇಕಿದೆ.
ಕೇಂದ್ರ ಸರಕಾರದ ಈ ಹೆಜ್ಜೆಯಿಂದ ಏನೆಲ್ಲ ಅಪಾಯಗಳಿವೆ? ಕೇವಲ ನೂರು ಮೀಟರ್ ಎತ್ತರದ ಚಿಕ್ಕ ಚಿಕ್ಕ ಗುಡ್ಡಗಳಲ್ಲಷ್ಟೇ ಗಣಿಗೆ ಅನುಮತಿ ನೀಡುವುದರಿಂದ ಹೇಳಿಕೊಳ್ಳವಂಥ ಸಮಸ್ಯೆ ಆಗಲಿಕ್ಕಿಲ್ಲ ಎಂಬ ವಾದವಿದೆಯಲ್ಲ?
ಎಲ್ಲ ಯೋಜನೆಗಳೂ, ಇಂಥ ಎಲ್ಲ ಉಪಕ್ರಮಗಳೂ ಆರಂಭವಾಗುವುದು ಹೀಗೆ; ಸಣ್ಣ ಸ್ವರೂಪದಲ್ಲೇ. ಒಂದೊಮ್ಮೆ ಈಗಿನ ಕ್ರಮ ಜಾರಿಗೊಂಡರೆ ಮುಂದಿನ ದಿನಗಳಲ್ಲಿ ಅದು ಜೀವ ಸಂಕುಲದ ಸುರಕ್ಷೆಯನ್ನೇ ನುಂಗುವ ಕಾನೂನಾಗುತ್ತದೆ. ಕಾಡುಗಳನ್ನು ಉಳಿಸಬೇಕಾದರೆ, ಮೊದಲ ಅವಶ್ಯಕತೆ ಪರ್ವತಗಳನ್ನು ಉಳಿಸುವುದು. ಸುಪ್ರೀಂ ಕೋರ್ಟ್ ಈಗ ಪರ್ವತಗಳನ್ನು ರಕ್ಷಿಸಲು ಷರತ್ತನ್ನು ವಿಧಿಸಿದೆ. ನ್ಯಾಯಾಂಗವು ಇಲ್ಲಿಯವರೆಗೆ ವನ್ಯಜೀವಿ ಸಂರಕ್ಷಣಾ ಕಾನೂನುಗಳನ್ನು ಬಳಸಿಕೊಂಡು ಗಣಿಗಾರಿಕೆಯನ್ನು ನಿಲ್ಲಿಸಿದೆ. ಆದರೆ ಈಗ, ಪರ್ವತಗಳಿಗೆ ಪ್ರತ್ಯೇಕ ಕಾನೂನುಗಳು ರಚನೆಯಾದಾಗ ಮಾತ್ರ ಗಣಿಗಾರಿಕೆ ನಿಲ್ಲಿಸಲು ಸಾಧ್ಯ.
ಹಾಗಾದರೆ ನ್ಯಾಯಾಂಗದ ಆದೇಶಕ್ಕೆ ಕಾರಣ ಏನು ಎಂಬುದು ನಿಮ್ಮ ಅಭಿಪ್ರಾಯ ?
ನ್ಯಾಯಾಂಗವು ಸಹ ಸಹಜವಾಗಿ ಅಭಿವೃದ್ಧಿಯ, ಅದರಲ್ಲೂ ಕೈಗಾರಿಕಾ ಪ್ರಗತಿಯ ಒತ್ತಡಕ್ಕೆ ಸಿಲುಕಿದೆ. ಗಣಿಗಾರಿಕೆಗಾಗಿ ಸೂಕ್ಷ್ಮ ಪ್ರದೇಶಗಳನ್ನು ನಾಶಪಡಿಸುತ್ತಿರುವ ಸಂಗತಿಯನ್ನು ನ್ಯಾಯಾಂಗದೆದುರು ಯಾರೂ ಮನವರಿಕೆ ಮಾಡಿಕೊಡುತ್ತಿಲ್ಲ. ಬೇಕೆಂದೇ ಇದನ್ನು ಮುಚ್ಚಿಡಲಾಗುತ್ತಿದೆ. ಅರಾವಳಿ ಪರ್ವತಗಳ ವಿಚಾರದಲ್ಲಿ ಆಗಿದ್ದು ಸಹ ಇದೇ. ಲಭ್ಯವಿರುವ ಇಲಾಖೆಯ ಅಧಿಕಾರಿಗಳು ನೀಡಿದ ಮಾಹಿತಿ, ಅಂಕಿ ಅಂಶಗಳ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಗೌರವಾನ್ವಿತ ನ್ಯಾಯಾಂಗವು ಅರಾವಳಿ ಪರ್ವತಗಳಿಗೆ ಮಾರಕವಾಗುವಂಥ ವ್ಯಾಖ್ಯಾನವನ್ನು ನೀಡಿದೆ. ನ್ಯಾಯಾಂಗದ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಕೈಗಾರಿಕೋದ್ಯಮಿಗಳು; ಈ ತ್ರಿಮೂರ್ತಿಗಳು ಸೇರಿಯೇ ಮಾಡಿದ್ದಾರೆ.
ಹಾಗಾದರೆ ನಿಮ್ಮ ಮುಂದಿನ ಹೆಜ್ಜೆ ಏನು? ಮತ್ತೆ ಕಾನೂನು ಹೋರಾಟವೇ?
ನಾವೆಲ್ಲರೂ ಈಗಾಗಲೇ ಎಲ್ಲೆಡೆ ಅರಾವಳಿ ಪರ್ವತ ಶ್ರೇಣಿಯ ಸಂರಕ್ಷಣೆಗಾಗಿ ಧ್ವನಿ ಎತ್ತುತ್ತಿದ್ದೇವೆ. ಆದರೆ ಕೇಳುವವರು ಮೌನವಾಗಿದ್ದಾರೆ. ನ್ಯಾಯಾಂಗದಿಂದ ಹೊಣೆಗಾರಿಕೆಯನ್ನು ವಹಿಸಿಕೊಂಡಿರುವವರು ಪರಿಸರ, ಹವಾಮಾನ ಮತ್ತು ಕಾಡುಗಳನ್ನು ರಕ್ಷಿಸಬೇಕು ಎಂದಷ್ಟೇ ಹೇಳುತ್ತಿದ್ದಾರೆ. ಅವರ ವ್ಯಾಖ್ಯಾನದಲ್ಲಿ ’ಪರ್ವತಗಳ‘ ಪ್ರಸ್ತಾಪವೇ ಇಲ್ಲ. ಅದಕ್ಕಾಗಿಯೇ ಈ ಆದೇಶದಿಂದ ಅವರೆಲ್ಲರೂ ತುಂಬಾ ಸಂತೋಷವಾಗಿದ್ದಾರೆ. ‘ಪ್ರವಾಹಗಳು ಯಾಕಾಗಿ ಸೃಷ್ಟಿಯಾಗುತ್ತಿವೆ. ಅವು ಹೊತ್ತು ತರುವ ಮಣ್ಣಿನ ರಾಶಿ ಹೇಗೆ ಕೃಷಿ ಭೂಮಿಯನ್ನು ನುಂಗುತ್ತಿವೆ’ ಎಂಬುದು ಅರ್ಥವೇ ಆಗುತ್ತಿಲ್ಲ. ಅದನ್ನು ಜನರಿಗೆ ಅರ್ಥ ಮಾಡಿಸಲೂ ಹೋಗುತ್ತಿಲ್ಲ. ಪರ್ವತಗಳಲ್ಲಿ ಗಣಿಗಾರಿಕೆಗೂ ಮೊದಲು ಅವರು ಕಾಡುಗಳನ್ನು ಕಡಿಯುತ್ತಾರೆ. ಕಾಡನ್ನು ನಾಶಗೊಳಿಸಿಯೂ ಕೇಂದ್ರದ ನಂವೆಂಬರ್ 20ರ ವ್ಯಾಖ್ಯಾನದ ಅಡಿಯಲ್ಲೇ ಆಶ್ರಯ ಪಡೆಯುವ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳು ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಉಳಿಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯು ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ವನ್ಯಜೀವಿಗಳು ಮತ್ತು ಪರ್ವತಗಳನ್ನು ಕಡಿದವರು ಸುಖವಾಗಿ ’ಸಮೃದ್ಧ ಅಭಿವೃದ್ಧಿ‘ ಕಾಣುತ್ತಲೇ ಇರುತ್ತಾರೆ. ಅರಾವಳಿಯನ್ನು ನಾಶಮಾಡಿಯೂ ‘ಹವಾಮಾನ ಬದಲಾವಣೆ, ಪರಿಸರ ಸಂರಕ್ಷಣೆ‘ ಭಾಷಣ ಬಿಗಿಯುತ್ತ, ಅರಣ್ಯ ಇಲಾಖೆಗೆ ಇನ್ನಷ್ಟು ಪುನರ್ ಸೃಷ್ಟಿಯ ಗುರಿ ನೀಡುತ್ತ, ಅದಕ್ಕೆ ಇನ್ನಷ್ಟು ಸಂಪನ್ಮೂಲವನ್ನು ಬಜೆಟ್‌ನಲ್ಲಿ ನಿಗಿದಿ ಮಾಡುತ್ತ... ಈ ಸೈಕಲ್ ಪುನರಾವರ್ತನೆಗೊಳ್ಳುತ್ತ ಹೋಗುತ್ತದೆ. ಏಕೆಂದರೆ ಈಗ ಎಲ್ಲವೂ ಅವರ ಕೈಯಲ್ಲಿದೆ. ರಾಜಕಾರಣಿಗಳಿಗೆ ತಮ್ಮನ್ನು ಪೊರೆಯುವ ವ್ಯಕ್ತಿಯನ್ನು ಪೋಷಿಸುವ ಮತ್ತು ಹಿತರಕ್ಷಿಸುವ ಬಾಧ್ಯತೆ(?)ಯೂ ಇದೆಯಲ್ಲಾ?!.
ನಿಮ್ಮ ಪ್ರಕಾರ ಇಂಥದಕ್ಕೆ ಕೊನೆಯೇ ಇಲ್ಲವೇ? ಇಂದಿನ ಸನ್ನಿವೇಶಕ್ಕೆ ಪರಿಹಾರ ಮಾರ್ಗವಾದರೂ ಏನು?
ಗೌರವಾನ್ವಿತ ಸುಪ್ರೀಂ ಕೋರ್ಟ್ ಸಾಧ್ಯವಾದಷ್ಟು ಬೇಗ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಮತ್ತು ಅದರ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮ ನ್ಯಾಯಾಂಗದ ಮೇಲೆ ನಮಗೆಲ್ಲರಿಗೂ ನಂಬಿಕೆ ಇದೆ. ಅದನ್ನು ಕಾಪಾಡಿಕೊಳ್ಳಲು ಈಗ ಉಪಕ್ರಮ ತೆಗೆದುಕೊಳ್ಳಲು ಒಳ್ಳೆಯ ಸಮಯ; ಸುಪ್ರೀಂ ಕೋರ್ಟ್ ಖಂಡಿತವಾಗಿಯೂ ಹಾಗೆ ಮಾಡುತ್ತದೆ ಎಂದು ನಮಗೆ ವಿಶ್ವಾಸವಿದೆ.
ಇದು ಆಗದಿದ್ದರೆ, ನಮ್ಮ ನ್ಯಾಯಾಂಗದ ಬಗೆಗೇ ವಿಶ್ವಾದ್ಯಂತ ಇರುವ ಅಭಿಪ್ರಾಯಕ್ಕೆ ಕುಂದು ಬರುತ್ತದೆ. ನಮ್ಮ ನ್ಯಾಯಾಂಗವು ಎಂದಿನಿಂದಲೂ ಜಗದ ಮುಖದಲ್ಲಿ ತನ್ನ ಘನತೆಯನ್ನು ಪ್ರದರ್ಶಿಸುತ್ತಲೇ ಬಂದಿದೆ. ಅರಾವಳಿ ಪರ್ವತಗಳ ಪ್ರಾಚೀನ ಪರಂಪರೆಯನ್ನು ರಕ್ಷಣೆಯ ವಿಚಾರದಲ್ಲೂ ನಮ್ಮ ನ್ಯಾಯಾಂಗವು ಅದೇ ರೀತಿ ವರ್ತಿಸುತ್ತದೆ ಎಂಬ ನಂಬಿಕೆ ಇದೆ. ನ್ಯಾಯಾಲಯಗಳು ಮತ್ತು ಸರ್ಕಾರಗಳ ಯಾವುದೇ ನಿರ್ಧಾರ ನಮ್ಮ ಮೂಲ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಸಂಪನ್ಮೂಲವನ್ನು ಖಂಡಿತವಾಗಿಯೂ ರಕ್ಷಿಸಬೇಕು. ಈ ಎರಡೂ ಸಂಗತಿಗಳು ಅರಾವಳಿ ಪರ್ವತಗಳಲ್ಲಿ ಹುದುಗಿವೆ. ನಮ್ಮ ಸರ್ಕಾರವು ಈಗಾಗಲೇ ಹವಾಮಾನ ಬದಲಾವಣೆಯ ವಿಚಾರದಲ್ಲಿ ತನ್ನ ಬದ್ಧತೆಯನ್ನು ಘೋಷಿಸಿದೆ. ವಿಶ್ವ ಸಂಸ್ಥೆಯ ಮಟ್ಟದಲ್ಲಿ ಇಂಥ ಬದ್ಧತೆ ತೋರಿಸಿದ ಸರಕಾರಕ್ಕೆ ಅರಾವಳಿ ಪರ್ವತಗಳನ್ನು ಉಳಿಸುವುದೂ ಜವಾಬ್ದಾರಿ ಮತ್ತು ಕರ್ತವ್ಯ ಎರಡೂ ಆಗಿರುತ್ತದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಪ್ರಯತ್ನಗಳು ಸಾರ್ವಜನಿಕ ಸಮುದಾಯದ ಬೆಂಬಲದಿಂದ ಮಾತ್ರ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತದೆ ಎಂಬುದನ್ನು ಆಳುವವರು ಮನಗಾಣಬೇಕು.
ಜನಸಾಮಾನ್ಯರು ಈ ನಿಟ್ಟಿನಲ್ಲಿ ಏನು ಮಾಡಬಹುದು?
ಇದು ದೂರದ ಎಲ್ಲೋ ಅರಾವಳಿ ಪರ್ವತಗಳಿಗೆ ಸಂಬಂಧಿಸಿದ್ದು ಎಂದು ಸುಮ್ಮನೆ ಕೂರಬಾರದು. ನಾಳೆ ಇದು ಪಶ್ಚಿಮ ಘಟ್ಟಗಳ ವಿಚಾರದಲ್ಲೂ ಸಂಭವಿಸಬಹುದು. ಹೀಗಾಗಿ ಇದೀಗ ಅರಾವಳಿಯನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ನಾವೆಲ್ಲರೂ ಪರಿಗಣಿಸಬೇಕು.
ಪರ್ವತಗಳನ್ನು ರಕ್ಷಿಸಲು ಕಾನೂನುಗಳನ್ನು ಜಾರಿಗೆ ತನ್ನಿ ಎಂಬ ಒತ್ತಡ ಹೇರಲು ಇದು ಸುಸಮಯ.
ಮೊದಲು, ನ್ಯಾಯಾಂಗದ ಮೂಲಕ ಅರಾವಳಿ ಪರ್ವತಗಳಿಗೆ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಪುನರ್ವಿಮರ್ಶೆಗಾಗಿ ನಾವು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಬೇಕು. ಈ ನಿಟ್ಟಿನಲ್ಲಿ ದೇಶಾದ್ಯಂತದ ವ್ಯಕ್ತಿಗತ ನೆಲೆಯಲ್ಗಿಯೂ ಅರ್ಳಿಗಳ ಸಲ್ಲಿಕೆಯಾಗಬೇಕು.
ಪತ್ರ ಚಳವಳಿ ನಡೆಯಬೇಕು. ಅರಾವಳಿ ಸಾಕ್ಷರತಾ ಅಭಿಯಾನವನ್ನು ಪ್ರಾರಂಭಿಸಬೇಕು ಮತ್ತು ಅರಾವಳಿ ಪರ್ವತಗಳನ್ನು ಉಳಿಸುವ ಕೆಲಸದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ರೈತರನ್ನು ತೊಡಗಿಸಿಕೊಳ್ಳಲು ಚೇತನ ಪರಿಕ್ರಮವನ್ನು ಪ್ರಾರಂಭಿಸಬೇಕು.
ಪರ್ವತ, ಭೂವಿಜ್ಞಾನಿಗಳು ಮತ್ತು ತಜ್ಞರು ಮುಂದೆ ಬಂದು ಅರಾವಳಿ ಪರ್ವತಗಳ ನಿಜವಾದ ವ್ಯಾಖ್ಯಾನವನ್ನು ನ್ಯಾಯಾಲಯ ಮತ್ತು ಸರ್ಕಾರಕ್ಕೆ ವಿವರಿಸಬೇಕು. ಪರ್ವತಗಳನ್ನು ಕಡಿಯುವ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ನಿಲ್ಲಿಸಲು, ನಾವು ರಾಮಾಯಣ ಪಠಣಗಳು, ಪರಿಸರ ಯಜ್ಞಗಳು, ಸತ್ಯಾಗ್ರಹಗಳು, ಮೆರವಣಿಗೆಗಳು, ಪ್ರತಿಭಟನೆಗಳು, ಉಪವಾಸಗಳು ಇತ್ಯಾದಿಗಳನ್ನು ಸಾಧ್ಯವಾದಷ್ಟು ಆಯೋಜಿಸಬಹುದು.
ಮಾನಸಿಕ ಸಿದ್ಧತೆಯೊಂದಿಗೆ 'ಅರಾವಳಿ ಪರಂಪರೆಯ ಜನರ ಅಭಿಯಾನ'ವನ್ನು ವೇಗಗೊಳಿಸಬಹುದು. ಈ ಅಭಿಯಾನವು ಪಕ್ಷ ರಾಜಕೀಯವನ್ನು ಮೀರಿದ್ದು; ಅರಾವಳಿ ಎಲ್ಲರ ಪರ್ವತ ಶ್ರೇಣಿ. ಯಾವುದೇ ರಾಜಕೀಯ ಪಕ್ಷವು ಈ ಆಂದೋಲನದ ಮೇಲೆ ಹಕ್ಕುದಾರಿಕೆ ಹೊಂದಬಾರದು. ಬದಲಿಗೆ ರಾಜಕೀಯವನ್ನು ಮೀರಿ ಈ ಅಭಿಯಾನಕ್ಕೆ ಸಹಕರಿಸುವ ಎಲ್ಲಾ ಪಕ್ಷಗಳನ್ನು ಸ್ವಾಗತಿಸಬೇಕು.
ಅಭಿಯಾನವು ಎಲ್ಲರಿಗೂ ಸಮಾನ ಅವಕಾಶಗಳನ್ನು ಸೃಷ್ಟಿಸಲು ಸಾಮೂಹಿಕ ನಾಯಕತ್ವದಲ್ಲಿ ರೂಪುಗೊಳ್ಳಬೇಕು. ಇದನ್ನು ಪರಿಣಾಮಕಾರಿಯಾಗಿಸಲು, ಎಲ್ಲರೂ ಸಮಾನ ಪ್ರಯತ್ನಗಳನ್ನು ಮಾಡಬೇಕು.
ಬರವಣಿಗೆ, ಸಾಮಾಜಿಕ ಮಾಧ್ಯಮ, ಶಿಕ್ಷಣ, ವಿಚಾರ ಸಂಕಿರಣ ಮತ್ತು ಸರಣಿಗಳನ್ನು ಆಯೋಜಿಸುವ ಮೂಲಕ, ನಾವು ಪ್ರಕೃತಿಯ ಪರಂಪರೆಯನ್ನು ಸಂರಕ್ಷಿಸುವ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳ ಮೇಲೆ ಮಾತ್ರ ಗಮನಹರಿಸಬೇಕು. ಲಾಭ ಅಥವಾ ನಷ್ಟದ ಮೇಲೆ ಅಲ್ಲ.
ಅಂತಿಮವಾಗಿ ನಿಮ್ಮ ಸಂದೇಶ ಏನು?
ಅರಾವಳಿಯಲ್ಲಿ ಯಾವುದೇ ಗಣಿಗಾರಿಕೆ ಇಲ್ಲದೆ, ಈ ಪರ್ವತ ಶ್ರೇಣಿಯನ್ನು ಸಂರಕ್ಷಿಸಿದರೆ ಮಾತ್ರ ಅದು ನಮಗೆ ಆಹಾರ, ನೀರು, ಮೇವು, ಇಂಧನ ಮತ್ತು ಹವಾಮಾನ ಸುರಕ್ಷತೆಯನ್ನು ಒದಗಿಸುತ್ತದೆ. ಅರವಾಳಿಯಲ್ಲಿನ ಗಣಿಗಾರಿಕೆಯು ಕೆಲವರ ಪ್ರಯೋಜನಕ್ಕಾಗಿ ಮಾತ್ರವೇ ಬಳಕೆಯಾಗುತ್ತದೆ ಎಂಬುದನ್ನು ನೆನಪಿಡಿ. ಇದು ಯಾವುದೇ ಅಭಿವೃದ್ಧಿಯ ಯೋಜನೆಯಲ್ಲ. ಅಂಥದ್ದೊಂದು ವ್ಯಾಖ್ಯಾನವೇ ತಪ್ಪು. ಇದು ಕೆಲವೇ ಕೆಲವರ ಹಿತಾಸಕ್ತಿಗಳನ್ನು ಪೂರೈಸುವ ಪ್ರಕ್ರಿಯೆ. ಈ ಪ್ರಕ್ರಿಯೆಯನ್ನು ನಿಲ್ಲಿಸುವುದರಿಂದ ಪಂಚಭೂತಗಳನ್ನೊಳಗೊಂಡ ದೈವಿಕ ಸೃಜನಶೀಲ ಸೃಷ್ಟಿಯನ್ನು ಮುಂದಿನ ತಲೆಮಾರಿಗೆ ದಾಟಿಸಲು ಸಾಧ್ಯ. ನಮ್ಮಿಂದ ಸೃಷ್ಟಿ ಸಾಧ್ಯವಿಲ್ಲ ಎಂದಾದ ಮೇಲೆ ಅದರ ನಾಶಕ್ಕೂ ಹಕ್ಕಿಲ್ಲ. ಆದ್ದರಿಂದ, ನಮ್ಮ ಭಾರತೀಯ ನಂಬಿಕೆ ಮತ್ತು ಪರಿಸರವನ್ನು ರಕ್ಷಿಸಲು ನಾವೆಲ್ಲರೂ ಒಂದಾಗೋಣ. ಇದೇ ನಿಜವಾದ ದೇವರ ಕೆಲಸ. ಇದೇ ನೈಜ ಆರಾಧನೆ; ಭಕ್ತಿ ಮಾರ್ಗ. ಇದನ್ನು ನಿರ್ಲಕ್ಷಿಸುವುದು ನಮ್ಮ ಸೃಷ್ಟಿ ಮತ್ತು ನಮ್ಮ ಬದುಕಿಗೆ ನಾವೇ ಒಡ್ಡಿಕೊಳ್ಳುತ್ತಿರುವ ಬೆದರಿಕೆಯಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.