ರಮೇಶ್ ಬೂದಿಹಾಳ್
ಬದುಕು ಕಟ್ಟಿಕೊಳ್ಳಲು ಸೂಕ್ತ ನೆಲೆ ಹುಡುಕುತ್ತ ಬಯಲುಸೀಮೆಯಿಂದ ಕಡಲ ತಡಿಗಳಲ್ಲಿ ಅಲೆದ ಕುಟುಂಬದ ಪುಟ್ಟ ಬಾಲಕ ಬೃಹತ್ ತೆರೆಗಳನ್ನು ಬೆರಗುಗಣ್ಣಿನಿಂದಲೇ ನೋಡಿದ. ಅದರ ಅಬ್ಬರಕ್ಕೆ ಬೆಚ್ಚಿಬೀಳದೆ ಕುತೂಹಲದಿಂದಲೇ ಕಿವಿಗೊಟ್ಟ. ಮುಂದೊಂದು ದಿನ ಸರ್ಫ್ ಬೋರ್ಡ್ ಮೇಲೆ ನಿಂತು ಅಲೆಗಳಿಗೇ ಸವಾಲೆಸೆದ. ಕೆಲವೇ ವರ್ಷಗಳಲ್ಲಿ ವೃತ್ತಿಪರ ಸರ್ಫರ್ ಆದ. ಆ.3ರಿಂದ 12ರವರೆಗೆ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗಳಿಸಿದ. ವೈಯಕ್ತಿಕ ವಿಭಾಗದಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟ ಈ ಸಾಧಕ ಕನ್ನಡಿಗ. ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಮುರುಡಿ ತಾಂಡಾದ ಹಣಮಂತಪ್ಪ ಬೂದಿಹಾಳ್ ಮತ್ತು ರೇಣುಕಾ ಬೂದಿಹಾಳ್ ದಂಪತಿಯ ಪುತ್ರ ರಮೇಶ್ ಬೂದಿಹಾಳ್. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆಯ ಆಯ್ದ ಭಾಗವಿದು..
–––––––
ಪ್ರಶ್ನೆ: ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ಗೆ ನಡೆಸಿದ ಸಿದ್ಧತೆ ಮತ್ತು ಪದಕ ಗೆದ್ದ ಸಂದರ್ಭದ ಅನುಭೂತಿಯನ್ನು ವಿವರಿಸುವಿರಾ?
ಉತ್ತರ: ಭಾರತ ಇದೇ ಮೊದಲ ಬಾರಿ ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ಗೆ ಆತಿಥ್ಯ ವಹಿಸಿತ್ತು. ಮುಂದಿನ ವರ್ಷ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಗಳಿಸಲು ಇದು ಕೊನೆಯ ಅವಕಾಶವಾಗಿತ್ತು. ಚಾಂಪಿಯನ್‌ಷಿಪ್‌ಗೆ ಎರಡು ವಾರ ಇದ್ದಾಗ ಅಭ್ಯಾಸ ಶುರುವಾಗಿತ್ತು. ಕಠಿಣ ಸ್ಪರ್ಧೆ ಇದ್ದ ಕಾರಣ ಫೈನಲ್ ಸುತ್ತು ತಲುಪುವುದೇ ದೊಡ್ಡ ಸವಾಲಾಗಿತ್ತು. ಅಭ್ಯಾಸದಲ್ಲಿ ದೈಹಿಕ ಮತ್ತು ಮಾನಸಿಕ ದೃಢತೆ ಕಾಪಾಡಿಕೊಳ್ಳಲು ವಿಶೇಷ ಒತ್ತು, ಒತ್ತಡ ನಿರ್ವಹಣೆಗೆ ಡ್ರಿಲ್ ಇತ್ತು. ಸತತ ಅಭ್ಯಾಸ ಫಲ ನೀಡಿತು. ದೇಶಕ್ಕೆ ಪದಕ ಗೆದ್ದುಕೊಟ್ಟ ಖುಷಿಯೇ ಬೇರೆ.
* ಏಷ್ಯನ್ ಗೇಮ್ಸ್‌ಗೆ ಆಯ್ಕೆ ಖಚಿತವಾಗಿದೆ. ಮುಂದಿನ ತರಬೇತಿ, ಸಿದ್ಧತೆ ಹೇಗೆ?
ಏಷ್ಯನ್ ಗೇಮ್ಸ್‌ಗೆ ಕಳುಹಿಸುವುದರ ಬಗ್ಗೆ ಭಾರತ ಸರ್ಫಿಂಗ್ ಫೆಡರೇಷನ್ ನಿರ್ಧಾರ ಕೈಗೊಳ್ಳುತ್ತದೆ. ಏಷ್ಯನ್ ಗೇಮ್ಸ್‌ಗೆ ಅರ್ಹತೆ ಗಳಿಸುವುದೇ ಏಷ್ಯನ್ ಚಾಂಪಿಯನ್‌ಷಿಪ್‌ನ ಪ್ರಮುಖ ಗುರಿಯಾಗಿತ್ತು. ಸ್ಪರ್ಧೆಯಿಂದ ಭವಿಷ್ಯದ ಹೊಸ ಹಾದಿ ತೆರೆದಿದೆ. ಫೈನಲ್‌ನಲ್ಲಿ ಸಣ್ಣಪುಟ್ಟ ಲೋಪ ಮಾಡಿದ್ದೇನೆ. ಅದು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು.
* ನಿಮ್ಮ ಜನನ ಗೋವಾದಲ್ಲಿ, ಬೆಳೆದದ್ದು ಕೇರಳದಲ್ಲಿ. ಕುಟುಂಬದ ಬೇರುಗಳು ಇರುವುದು ಕನ್ನಡ ನಾಡಿನಲ್ಲಿ. ಆ ಬಗ್ಗೆ ವಿವರಿಸುವಿರಾ?
ನಾನು ಜನಿಸುವ ಮೊದಲೇ ತಂದೆ ಮತ್ತು ತಾಯಿ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗನೊಂದಿಗೆ ಕರಕುಶಲ ವಸ್ತುಗಳನ್ನು ಮಾರಾಟ ಮಾಡಲು ಗದಗ ಜಿಲ್ಲೆ ಮುರುಡಿ ತಾಂಡಾದಿಂದ ಗೋವಾಕ್ಕೆ ತೆರಳಿದ್ದರು. ನಾನು ಹುಟ್ಟಿದ್ದು ಗೋವಾದಲ್ಲಿ. ಅಲ್ಲಿ ಕರಕುಶಲ ವಸ್ತು ಮಾರಾಟ ಮಾಡುವ ಕನ್ನಡಿಗರ ಸಂಖ್ಯೆ ಹೆಚ್ಚಾದಾಗ ವ್ಯಾಪಾರಕ್ಕೆ ಪೆಟ್ಟು ಬಿತ್ತು. ಹಾಗೆ 2000ನೇ ಇಸವಿಯಲ್ಲಿ ಕೇರಳದ ಕಡೆಗೆ ತೆರಳಿ ತಿರುವನಂತಪುರದಲ್ಲಿ ನೆಲೆಯಾದರು. ಅಲ್ಲಿನ ಕೋವಳಂ ಬೀಚ್‌ನಲ್ಲಿ ಕರಕುಶಲ ವಸ್ತುಗಳ ಜೊತೆಯಲ್ಲಿ ಬಟ್ಟೆಗಳನ್ನೂ ಮಾರಾಟ ಮಾಡುತ್ತಿದ್ದಾರೆ. ಅಣ್ಣ ಮತ್ತು ಅಕ್ಕಂದಿರು ಅವರಿಗೆ ನೆರವಾಗುತ್ತಿದ್ದಾರೆ.
* ಗೋವಾ ಕೂಡ ಸರ್ಫಿಂಗ್‌ಗೆ ಹೆಸರುವಾಸಿ. ನಿಮಗೆ ಸರ್ಫಿಂಗ್ ಮೇಲೆ ಆಸಕ್ತಿ ಮೂಡಿದ್ದು ಅಲ್ಲೇನಾ?
ಇಲ್ಲ. ನಮ್ಮ ಕುಟುಂಬ ಇದ್ದದ್ದು ಮಡಗಾಂವ್‌ನಲ್ಲಿ. ಹಾಗಾಗಿ ಸರ್ಫಿಂಗ್ ಚಟುವಟಿಕೆ ನೋಡಿರಲಿಲ್ಲ. ಕುಟುಂಬ ಕೇರಳಕ್ಕೆ ತೆರಳಿದಾಗ ನಾನು ಮೂರೂವರೆ ವರ್ಷದ ಮಗು. ಕೋವಳಂನಲ್ಲಿ ಬೆಲ್ಜಿಯಂನ ಜೇಲಾ ರಿಗೋಲ್ ಅವರ ತಂಡದವರು ಸೆಬಾಸ್ಟಿಯನ್ ಇಂಡಿಯನ್ ಸೋಷಿಯಲ್ ಪ್ರಾಜೆಕ್ಟ್ (ಎಸ್‌ಐಎಸ್‌ಪಿ) ಎಂಬ ಶಾಲೆ ನಡೆಸುತ್ತಿದ್ದಾರೆ. ಆರ್ಥಿಕ ಸಮಸ್ಯೆ ಇರುವವರಿಗೆ ಅಲ್ಲಿ ಪ್ರವೇಶ ನೀಡಲಾಗುತ್ತದೆ. ಸರ್ಫಿಂಗ್ ಮತ್ತು ಸ್ಕೇಟಿಂಗ್ ಆ ಶಾಲೆಯ ಒಂದು ಭಾಗ. ಅಲ್ಲಿ ನನಗೆ ಈ ಕ್ರೀಡೆಯ ಮೇಲೆ ಕುತೂಹಲ ಮೂಡಿತು.
* ಕೋವಳಂ ಸರ್ಫ್ ಕ್ಲಬ್‌ನಲ್ಲಿ ತರಬೇತಿ, ಪಶ್ಚಿಮ ಮತ್ತು ಪೂರ್ವ ಕರಾವಳಿ ನಡುವಿನ ನಿರಂತರ ಓಡಾಟದ ಅನುಭವದ ಬಗ್ಗೆ ಹೇಳಿ
ನನ್ನ ಅರಂಭಿಕ ತರಬೇತಿ ಕೋವಳಂ ಸರ್ಫ್ ಕ್ಲಬ್‌ನಲ್ಲಿ. ಮೊದಲ ಬಾರಿ ಸರ್ಫ್ ಬೋರ್ಡ್ ತುಳಿಯುವಾಗ ನಾನಿನ್ನೂ ಸಣ್ಣ ಬಾಲಕ. ಸರ್ಫಿಂಗ್ ಮಾಡುತ್ತ ಮಾಡುತ್ತ ಈ ಕ್ರೀಡೆಯ ಆಸಕ್ತಿ ಆಳಕ್ಕೆ ಇಳಿಯಿತು. ಸರ್ಫಿಂಗ್‌ನಲ್ಲಿ ಸಾಧನೆ ಮಾಡುವ ಉದ್ದೇಶದಿಂದ ಏಳನೇ ತರಗತಿಯ ನಂತರ ಶಾಲೆ ತೊರೆದೆ. ನವೆಂಬರ್‌ನಿಂದ ಮೇ ತಿಂಗಳ ವರೆಗಿನ ಸರ್ಫಿಂಗ್ ಋತುವಿನಲ್ಲಿ ಕಠಿಣ ಅಭ್ಯಾಸ ಮಾಡಿದೆ. ವೃತ್ತಿಪರ ಸರ್ಫರ್ ಆದ ನಂತರ ವರ್ಷವಿಡೀ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಓಡಾಡುತ್ತಿದ್ದೇನೆ. ಅದೊಂದು ವಿಶಿಷ್ಟ ಅನುಭವ. ಸಮಯ ಸಿಕ್ಕಿದಾಗ ಕುಟುಂಬದ ಜೊತೆ ಇರುತ್ತೇನೆ. ಕೆಲವೊಮ್ಮೆ ಮುರುಡಿ ತಾಂಡಾಕ್ಕೆ ಹೋಗುತ್ತೇನೆ.
ಮಂಗಳೂರಿನ ಪಣಂಬೂರು ಸಮುದ್ರ ತೀರದಲ್ಲಿ ಭಾನುವಾರ ಮುಕ್ತಾಯಗೊಂಡ ಇಂಡಿಯನ್ ಓಪನ್ ಸರ್ಫಿಂಗ್ ನ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆದ ರಮೇಶ್ ಬೂದುಹಾಳ್ ಅವರು ಅಲೆಗಳನ್ನು ಎದುರಿಸಿದರು –ಪ್ರಜಾವಾಣಿ ಚಿತ್ರ/ಇರ್ಷಾದ್ ಮಹಮ್ಮದ್-ಪ್ರಜಾವಾಣಿ ಚಿತ್ರ
* ನಿಮ್ಮ ಮೊದಲ ಪ್ರಮಖ ಸ್ಪರ್ಧೆ ಯಾವುದು? ವೃತ್ತಿ ಬದುಕಿಗೆ ತಿರುವು ಲಭಿಸಿದ್ದು ಎಲ್ಲಿ?
13ನೇ ವಯಸ್ಸಿನಲ್ಲಿ ಕೋವಳಂನಲ್ಲಿ ನಡೆದ ಸ್ಪೈಸ್ ಕೋಸ್ಟ್ ಚಾಂಪಿಯನ್‌ಷಿಪ್ ನನ್ನ ಮೊದಲ ಪ್ರಮುಖ ಸ್ಪರ್ಧೆ. ಬಾಲಕರ ವಿಭಾಗದಲ್ಲಿ ಕಂಚಿನ ಪದಕ ಗೆದ್ದೆ. ಸರ್ಫಿಂಗ್ ನನ್ನ ಭವಿಷ್ಯ ಎಂಬ ಅಂತರಾಳದ ಧ್ವನಿ ಕೇಳಿದ್ದು ಅಲ್ಲೇ. ಅದರ ನಂತರ ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಂಡೆ. ವಿದೇಶಗಳಿಗೂ ಹೋದೆ. ಜೀವನ ಪಥವೇ ಬದಲಾಯಿತು.
* ಭಾರತದಲ್ಲಿ ಸರ್ಫಿಂಗ್ ಚಟುವಟಿಕೆ ಹೆಚ್ಚುತ್ತಿದೆ. ಮುಂದಿನ ಬೆಳವಣಿಗೆ ಹೇಗೆ? ಕೃತಕ ಅಲೆ ಸೃಷ್ಟಿಯಂಥ ಸಾಧ್ಯತೆಗಳಿಗೆ ಅವಕಾಶ ಇದೆಯೇ?
ದೇಶದ ಪೂರ್ವ–ಪಶ್ಚಿಮ ಕರಾವಳಿ ಸರ್ಫಿಂಗ್ ಬೆಳವಣಿಗೆಗೆ ಅವಕಾಶಗಳ ಬಾಗಿಲು ತೆರೆದು ಕುಳಿತಿದೆ. ಕರಾವಳಿಯ ರಾಜ್ಯಗಳ ಸರ್ಕಾರಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಅಲೆಗಳ ತೀವ್ರತೆ ಕಡಿಮೆ ಇರುವ ಭಾಗಗಳಲ್ಲಿ ಬಂಡೆಗಳನ್ನು (ರೀಫ್) ಒಳಗೊಂಡ ಕೃತಕ ಅಲೆ ಸೃಷ್ಟಿಸುವ ತಂತ್ರಗಳಿಗೆ ಮೊರೆಹೋಗಬೇಕು. ಅಮೆರಿಕ, ಬ್ರೆಜಿಲ್ ಮುಂತಾದ ಅನೇಕ ರಾಷ್ಟ್ರಗಳಲ್ಲಿ ಕೃತಕ ಅಲೆಗಳ ಸೃಷ್ಟಿಗೆ ಯೋಜನೆಗಳು ಇವೆ. ದುಬೈಯಲ್ಲಿ ದೊಡ್ಡ ಪ್ರಮಾಣದಲ್ಲಿ ಈ ಪ್ರಯೋಗ ಆಗುತ್ತಿದೆ. ಕರ್ನಾಟಕದ ಮುಖ್ಯಮಂತ್ರಿಯವರನ್ನು ಈಚೆಗೆ ಭೇಟಿ ಮಾಡಿದ್ದೆ. ಸರ್ಫಿಂಗ್ ಅಭಿವೃದ್ಧಿಪಡಿಸಲು ಯೋಜನೆ ಹಮ್ಮಿಕೊಳ್ಳುವ ವಿಶ್ವಾಸವಿದೆ.
* ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಸರ್ಫಿಂಗ್ ಚಟುವಟಿಕೆ ನಡೆಯುತ್ತಿದೆ. ಇಲ್ಲಿಗೆ ಭವಿಷ್ಯ ಇದೆಯೇ?
ಸಾಮಾನ್ಯ ಗಾತ್ರದ ಅಲೆಗಳು ಇರುವ ಕರ್ನಾಟಕದ ಕರಾವಳಿ ಕಲಿಕೆಗೆ ಉತ್ತಮ. ಆದ್ದರಿಂದ ಇದನ್ನು ಸುರಕ್ಷಿತ ತಾಣ ಎನ್ನಬಹುದು. ಸ್ಪರ್ಧಾತ್ಮಕ ಸರ್ಫಿಂಗ್ ಅಲ್ಲಿ ಸಾಧ್ಯವಿಲ್ಲ ಎಂದಲ್ಲ. ಹವಾಮಾನ ಬದಲಾದಾಗ ಅಲೆಗಳ ಸ್ವರೂಪವೂ ಬದಲಾಗುತ್ತದೆ. ತೆರೆಗಳು ಎಲ್ಲ ಸಂದರ್ಭದಲ್ಲೂ ಒಂದೇ ತೆರನಾಗಿ ಇರುವುದಿಲ್ಲ. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸರ್ಫಿಂಗ್ ಬೆಳೆಸಲು ಯೋಜನೆ ಸಿದ್ಧಪಡಿಸಬೇಕು.
* ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಂದ ಕೂಲಿ ಅರಸಿ ಬರುವ ಮಂದಿಯ ಮಕ್ಕಳು ಮಂಗಳೂರಿನಲ್ಲಿ ಸರ್ಫಿಂಗ್ ಮಾಡುತ್ತಿದ್ದಾರೆ. ಪೂಜಾರ ಸಹೋದರರು ಈಗಾಗಲೇ ದೇಶದ ಗಮನ ಸೆಳೆದಿದ್ದಾರೆ. ಇಂಥ ಯುವ ಪೀಳಿಗೆಗೆ ನಿಮ್ಮ ಸಲಹೆ ಏನು?
ಶ್ರಮವಿಲ್ಲದೆ ಸಾಧನೆ ಇಲ್ಲ. ಆದ್ದರಿಂದ ನಿತ್ಯವೂ ಅಭ್ಯಾಸ ಮಾಡಬೇಕು. ಜೊತೆಯಲ್ಲಿ ಕನಸು ಕಾಣಲು ಕಲಿಯಬೇಕು. ಕಡಲಿನ ಸಂಪರ್ಕವಿಲ್ಲದ ಉತ್ತರ ಕರ್ನಾಟಕದ ಭಾಗದಿಂದ ಬಂದವರೂ ಸರ್ಫಿಂಗ್‌ನಲ್ಲಿ ಸಾಧನೆ ಮಾಡಬಹುದು. ಕರ್ನಾಟಕದ ಕರಾವಳಿಯಲ್ಲಿ ಅವಕಾಶಗಳು ಸಾಕಷ್ಟು ಇವೆ. ಅದನ್ನು ಬಳಸಿಕೊಂಡು ಸ್ಪರ್ಧಾ ಮನೋಭಾವದೊಂದಿಗೆ ಮುನ್ನಡೆಯಬೇಕು. ವೃತ್ತಿಯಾಗಿಯೂ ಸರ್ಫಿಂಗ್‌ನಲ್ಲಿ ಉಜ್ವಲ ಭವಿಷ್ಯವಿದೆ.
* ಅಕಾಡೆಮಿ ಸ್ಥಾಪಿಸುವ ಅಥವಾ ಕೋಚಿಂಗ್ ಮಾಡುವ ಉದ್ದೇಶವೇನಾದರೂ ಇದೆಯಾ?
ಸದ್ಯ ನನ್ನ ಗುರಿ ಏಷ್ಯನ್ ಗೇಮ್ಸ್ ಮಾತ್ರ. ಹೀಗಾಗಿ ಯಾವುದರ ಬಗ್ಗೆಯೂ ಯೋಚಿಸಲು ಪುರುಸೊತ್ತಿಲ್ಲ. ಬೃಹತ್ ಅಲೆಗಳಿಗೆ ಹೆಸರಾಗಿರುವ ಪೋರ್ಚುಗಲ್‌ನ ನಜರೆಯಲ್ಲಿ ಸರ್ಫ್ ಮಾಡಬೇಕು ಎಂಬ ಬಹುಕಾಲದ ಆಸೆಯನ್ನೂ ಪೂರೈಸಬೇಕಾಗಿದೆ. ಮುಂದಿನ ಯೋಚನೆ, ಯೋಜನೆಯೆಲ್ಲ ಅದರ ನಂತರ.
ಗೆದ್ದ ಪ್ರಮುಖ ಪ್ರಶಸ್ತಿಗಳು
2017ರಲ್ಲಿ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಜೂನಿಯರ್ ವಿಭಾಗದಲ್ಲಿ ಮೊದಲ ಸ್ಥಾನ, ಕೋವ್ಲಾಂಗ್ ಕ್ಲಾಸಿಕ್ ಸರ್ಫ್ ಫೆಸ್ಟಿವಲ್ ಜೂನಿಯರ್ ವಿಭಾಗದಲ್ಲಿ 2017ರಿಂದ ಸತತ 3 ವರ್ಷ ಮೊದಲ ಸ್ಥಾನ, 2020ರ ‘ಎಡವ’ ಷೋದಲ್ಲಿ 2ನೇ ಸ್ಥಾನ, 2022, 23ರ ಇಂಡಿಯನ್ ಓಪನ್ ಆಫ್ ಸರ್ಫಿಂಗ್‌ನಲ್ಲಿ ಮೊದಲ ಸ್ಥಾನ, 2025ರಲ್ಲಿ 2ನೇ ಸ್ಥಾನ, 2022ರಿಂದ ಪಾಯಿಂಟ್ ಬ್ರೇಕ್ ಚಾಲೆಂಜ್‌ನಲ್ಲಿ ಸತತ 3 ವರ್ಷ ಮೊದಲ ಸ್ಥಾನ, 2023ರ ಪುದುಚೇರಿ ಸರ್ಫ್ ಓಪನ್‌ನಲ್ಲಿ ಮೊದಲ ಸ್ಥಾನ, 2024, 2025ರ ಅಂತರರಾಷ್ಟ್ರೀಯ ಸರ್ಫಿಂಗ್ ಫೆಸ್ಟಿವಲ್‌ನಲ್ಲಿ ಮೊದಲ ಸ್ಥಾನ, 2024ರ ಕೋವ್ಲಾಂಗ್ ಕ್ಲಾಸಿಕ್ ಸರ್ಫ್ ಫೆಸ್ಟಿವಲ್‌ನಲ್ಲಿ ಮೊದಲ ಸ್ಥಾನ, 2023ರ ಬೆನಿಸ್ ಹಿಕಾದುವ ಸರ್ಫಿಂಗ್‌ನಲ್ಲಿ 3ನೇ ಸ್ಥಾನ, ರೆಡ್ ಬುಲ್ ರೈಡ್ ಮೈ ವೇವ್‌ನಲ್ಲಿ 4ನೇ ಸ್ಥಾನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.