ಶತಮಾನದ ಇತಿಹಾಸವಿರುವ ಎಫ್‌ಕೆಸಿಸಿಐ ಮೊದಲ ಮಹಿಳಾ ಅಧ್ಯಕ್ಷರನ್ನು ಈಗ ಕಂಡಿದೆ. ನೀವು ಬಯಸಿದಂತೆ ಈ ಹುದ್ದೆ ಏರಿದ್ದು ಹೇಗೆ? ಮಹಿಳೆ ಈ ಸ್ಥಾನಕ್ಕೆ ಬರಲು ಇಷ್ಟು ತಡವಾಗಿದ್ದಕ್ಕೆ ಕಾರಣವೇನು?
ನಾನು 1980ರ ದಶಕದಲ್ಲಿ ಉದ್ದಿಮೆ ಆರಂಭಿಸಿದಾಗ ಉದ್ಯಮ ಕ್ಷೇತ್ರದಲ್ಲಿ ಇದ್ದ ಮಹಿಳೆಯರ ಪ್ರಮಾಣ ಅಂದಾಜು ಶೇಕಡ 10ರಷ್ಟು. ಆದರೆ, ನೋಂದಣಿ ಇಲ್ಲದ ಅಸಂಘಟಿತ ವಲಯದಲ್ಲಿ ಮಹಿಳೆಯರು ಹೆಚ್ಚಿದ್ದರು. 1992–94 ವೇಳೆಯಲ್ಲಿ ಎಫ್‌ಕೆಸಿಸಿಐನಿಂದ ನನಗೆ ಮಹಿಳಾ ಉದ್ಯಮಿಗಳ ಸಮಿತಿಗೆ ಸದಸ್ಯೆಯಾಗುವಂತೆ ಆಹ್ವಾನ ಬಂತು. ಆಗ ಇಲ್ಲಿ ಇದ್ದ ಹೆಚ್ಚಿನವರು ಪುರುಷರು. ನನ್ನ ಉದ್ಯಮವೂ ಆಗ ಹೊಸದು. ಮುಖ್ಯವಾಹಿನಿಯ ಉದ್ಯಮ ಸಂಘಟನೆಯಲ್ಲಿ ನನಗೆ ಎಲ್ಲವೂ ಆರಾಮ ಅನ್ನಿಸುವಂತೆ ಇರುತ್ತಿರ ಲಿಲ್ಲ. ಮುಖ್ಯವಾಹಿನಿಯ ಸಂಘಟನೆಯಲ್ಲಿ ನಾನು ಹೇಗಿರಬೇಕು ಎಂಬ ತರಬೇತಿಯೂ ಇರಲಿಲ್ಲ. ಅವೇಕ್‌ನವರು (ಮಹಿಳಾ ಉದ್ಯಮಿಗಳ ಸಂಘಟನೆ) ನನಗೆ 1990ರಲ್ಲಿ ಒಂದು ಪ್ರಶಸ್ತಿ ಪ್ರದಾನ ಮಾಡಿದರು. ಆಗ ಅಲ್ಲಿನ ಅಧ್ಯಕ್ಷರು, ‘ನಿಮಗೆ ಉದ್ದಿಮೆ ನಡೆಸುವುದು ಗೊತ್ತು. ಅದನ್ನು ಇನ್ನೊಬ್ಬ ಮಹಿಳೆ ಜೊತೆ ಹಂಚಿಕೊಂಡರೆ, ಅವರಿಗೆ ಉದ್ದಿಮೆ ಆರಂಭಿಸಲು ನೆರವಾಗುತ್ತದೆ’ ಎಂದರು.
ಇದು ಬಹಳ ಖುಷಿಯ ಕೆಲಸವಾಯಿತು. ಮೂರು ತಿಂಗಳಲ್ಲಿ ಅಲ್ಲಿ ನಾನು ಕಾರ್ಯದರ್ಶಿ ಆಗಿ ಚುನಾವಣೆಯಲ್ಲಿ ಆಯ್ಕೆಯಾದೆ. ಅಲ್ಲಿ ಇದ್ದವರೆಲ್ಲರೂ ಮಹಿಳೆಯರು. ಅಲ್ಲಿ ನನಗೆ ಕೆಲಸ ಮಾಡುವುದು ಆರಾಮ ಆಗುತ್ತಿತ್ತು. ಆಗ ನಾನು ಕ್ಲಿಕ್ (ಎಲೆಕ್ಟ್ರಾನಿಕ್ಸ್ ಉದ್ಯಮಗಳ ಒಕ್ಕೂಟ) ಪದಾಧಿಕಾರಿಯೂ ಆಗಿದ್ದೆ. ಅಲ್ಲಿ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಅದು ನಮ್ಮ ವಿಷಯಕ್ಕೆ ಸಂಬಂಧಿಸಿದ್ದಾಗಿತ್ತು. ಹಾಗಾಗಿ ಅಲ್ಲಿಯೂ ಕೆಲಸ ಮಾಡುವುದು ಸುಲಭವಾಗಿತ್ತು.
2005ರಲ್ಲಿ ನಾನು ಮತ್ತೆ ಎಫ್‌ಕೆಸಿಸಿಐಗೆ ಬಂದೆ. ಆಗ ಹೆಚ್ಚು ಆತ್ಮವಿಶ್ವಾಸ ಇತ್ತು. ಆವತ್ತಿನಿಂದ ಇದುವರೆಗೆ ಇಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಒಂದು ಬಾರಿ ಒಬ್ಬರು ಮಾಜಿ ಅಧ್ಯಕ್ಷರು, ‘ಇಲ್ಲಿ ಮಹಿಳೆಯು ಅಧ್ಯಕ್ಷ ಸ್ಥಾನಕ್ಕೆ ಬರಬೇಕು’ ಎಂದಿದ್ದರು. ಆಗ ನನಗೂ ಹೌದಲ್ಲವೇ ಎಂದು ಅನ್ನಿಸಿತು, ಈ ಮಾತು ಮಹತ್ವಾಕಾಂಕ್ಷೆಯನ್ನು ಉದ್ದೀಪಿಸಿತು. ಆ ನಿಟ್ಟಿನಲ್ಲಿ ಕೆಲಸ ಮಾಡಲು ನಿರ್ಧರಿಸುವಂತೆ ಮಾಡಿತು.
ಇಂತಹ ಹುದ್ದೆಗಳನ್ನು ಮಹಿಳೆಯರು ಪಡೆಯುವುದು ಸುಲಭವೇನೂ ಅಲ್ಲ. ನಿಮ್ಮ ಅನುಭವ ಹೇಗಿತ್ತು?
ಮಹಿಳೆಯರಿಗೆ ಇಂತಹ ಹುದ್ದೆಗಳಿಗೆ ನೇರ ಪ್ರವೇಶ ಕಲ್ಪಿಸುವ ವ್ಯವಸ್ಥೆ ಸಮಾಜದಲ್ಲಿಲ್ಲ. ಮಹಿಳೆಯರು ತಮ್ಮ ಸಾಮರ್ಥ್ಯವನ್ನು ನಿರಂತರವಾಗಿ ಸಾಬೀತು ಮಾಡುತ್ತಾ ಇರಬೇಕಾಗುತ್ತದೆ. ಇದು ಉದ್ಯಮವಷ್ಟೇ ಅಲ್ಲ; ಎಲ್ಲ ವಲಯಗಳಿಗೂ ಅನ್ವಯವಾಗುವ ಮಾತು. ನನ್ನದೇ ಉದ್ಯಮಕ್ಕೆ ಕರೆ ಮಾಡುವ ಕೆಲವರು, ತಾಂತ್ರಿಕ ಪರಿಣತರಿಗೆ ಕರೆ ವರ್ಗ ಮಾಡುವಂತೆ ಹೇಳುತ್ತಾರೆ! ನಾನೇ ಪರಿಣತೆ ಎಂದು ಅವರಿಗೆ ಹೇಳುತ್ತೇನೆ. ನಮ್ಮ ಸಮಾಜದ ಸ್ವಭಾವ ಇದು. ಇವೆಲ್ಲ ಸರಿಯಾಗಲು ಸಮಯ ಬೇಕಾಗುತ್ತದೆ.
ಈಗ ಎಫ್‌ಕೆಸಿಸಿಐನಲ್ಲಿನ ಸಮಿತಿಯ 72 ಮಂದಿ ಸದಸ್ಯರು ನನ್ನ ಪರವಾಗಿ ನಿಂತು, ಈ ಸ್ಥಾನಕ್ಕೆ ತಂದಿದ್ದಾರೆ. ಅವರೆಲ್ಲ ನನಗೆ ಒಕ್ಕೊರಲಿನಿಂದ ಈ ಸ್ಥಾನಕ್ಕೆ ಬರಲು ನೆರವಾಗಿದ್ದಾರೆ.
ಭಾರತದಲ್ಲಿ ಎಲ್ಲ ರಾಜ್ಯಗಳಲ್ಲೂ ಇಂತಹ ಒಕ್ಕೂಟ ಇದೆ. ನಾನು ಇಂತಹ ಸಂಘಟನೆಯೊಂದರ ಅಧ್ಯಕ್ಷ ಸ್ಥಾನಕ್ಕೆ ಬಂದಿರುವ ಮಹಿಳೆಯರ ಪೈಕಿ ಮೂರನೆಯವಳು. ಮುಂಬೈ, ಗೋವಾ ನಂತರ ಕರ್ನಾಟಕದಲ್ಲಿ ಮಾತ್ರ ಮಹಿಳೆಯು ಅಧ್ಯಕ್ಷ ಸ್ಥಾನಕ್ಕೆ ಬಂದಿದ್ದಾಳೆ. ಆದರೆ ಫಿಕ್ಕಿಯಲ್ಲಿ (ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ) ಮಹಿಳೆಯರು ಮೂರು ಬಾರಿ ಅಧ್ಯಕ್ಷರಾಗಿದ್ದಾರೆ. ಈಗ ಮಹಿಳೆಯರು ಈ ಬಗೆಯ ಜವಾಬ್ದಾರಿಯ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಎಫ್‌ಕೆಸಿಸಿಐನಂತಹ ಉದ್ಯಮ ಸಂಘಟನೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೊಡ್ಡ ಹುದ್ದೆಗಳಿಗೆ ಬರಬಹುದೇ?
ಹೌದು, ಖಂಡಿತ. ಇಷ್ಟು ದಿನ ನಮ್ಮಲ್ಲಿ ಐದು ಮಂದಿ ಮಹಿಳೆಯರು 72 ಜನರ ಆಡಳಿತ ಸಮಿತಿಯಲ್ಲಿ ಇರುತ್ತಿದ್ದರು. ಈ ವರ್ಷ ನಾನು ಆಹ್ವಾನಿತ ಸದಸ್ಯರ ವ್ಯವಸ್ಥೆಯಲ್ಲಿ ಒಂದಿಷ್ಟು ಬದಲಾವಣೆ ತರುತ್ತಿದ್ದೇನೆ. ವಿಶೇಷ ಆಹ್ವಾನಿತರಲ್ಲಿ ಐದು ಮಂದಿ ಮಹಿಳೆಯರು ಇರಬೇಕು ಎಂಬ ನಿಯಮ ಮಾಡುತ್ತಿದ್ದೇವೆ. ಆಗ ಒಟ್ಟು ಹತ್ತು ಮಂದಿ ಮಹಿಳೆಯರು ಸಮಿತಿಗೆ ಬರಲಿದ್ದಾರೆ. ಆಗ ಮಹಿಳೆಯರಿಗೆ ಎಫ್‌ಕೆಸಿಸಿಐ ಚಟುವಟಿಕೆಗಳನ್ನು ಹತ್ತಿರದಿಂದ ನೋಡಿದ ಅನುಭವ ಸಿಗುತ್ತದೆ. ಅದು ಅವರಿಗೆ ನಾಯಕತ್ವದ ಹೊಣೆ ಹೊರಲು ಅನುವು ಮಾಡಿಕೊಡುತ್ತದೆ.
ನಾನು ಹಿಂದೆ ಕೆಲವು ಬಾರಿ ಚುನಾವಣೆಯಲ್ಲಿ ಸೋತಿದ್ದೆ, ಇಲ್ಲಿ ಗೆಲ್ಲುವುದು ಸುಲಭವಲ್ಲ. ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕು. ಎಫ್‌ಕೆಸಿಸಿಐ ಸಂಘಟನೆಯನ್ನು ಅವರು ನಡೆಸಬಲ್ಲರು ಎಂಬ ವಿಶ್ವಾಸ ಇತರರಿಗೂ ಬರಬೇಕು. ಈ ಸಂಘಟನೆಗೆ ಹೆಚ್ಚು ಸಮಯ ಕೊಡಲು ಮಹಿಳೆಗೆ ಸಾಧ್ಯವೇ ಎಂಬುದನ್ನೂ ಇತರರು ಗಮನಿಸುತ್ತಾರೆ. ನಾನು ಮಹಿಳಾ ಉದ್ಯಮಿ ಎಂಬ ಕಾರಣಕ್ಕೆ ಗ್ರಾಹಕರು ನಮ್ಮ ಉತ್ಪನ್ನ ಖರೀದಿಸುವುದಿಲ್ಲ. ಉತ್ಪನ್ನ ಗುಣಮಟ್ಟ ಹೊಂದಿರಬೇಕು. ಇಲ್ಲಿಯೂ ಹಾಗೇ. ಸಾಮರ್ಥ್ಯ ಸಾಬೀತುಪಡಿಸಬೇಕು. ನಾನು ಸೋತ ನಂತರ ಸುಮ್ಮನೆ ಇದ್ದಿದ್ದರೆ ಈ ಸ್ಥಾನಕ್ಕೆ ಬರುತ್ತಿರಲಿಲ್ಲ. ಮರಳಿ ಯತ್ನ ಎಂಬುದಿರಬೇಕು.
ಮಹಿಳಾ ಉದ್ಯಮಿಗಳಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ನೀವೇನಾದರೂ ಕಾರ್ಯಕ್ರಮ ಆಯೋಜಿಸುವಿರಾ
ಈಗ ಮಹಿಳಾ ಉದ್ಯಮಿಗಳ ಪ್ರಮಾಣ ಶೇ 15ರಷ್ಟು ಇರಬಹುದು. ಅಸಂಘಟಿತ ವಲಯದಲ್ಲಿ ಅವರು ಹೆಚ್ಚಿದ್ದಾರೆ. ಆದರೆ ಅದು ಲೆಕ್ಕಕ್ಕೆ ಸಿಗುವುದಿಲ್ಲ. ಮಹಿಳೆಯರು ಹಲವು ಕಾರಣಗಳಿಗಾಗಿ ವೃತ್ತಿಯಿಂದ ಹಿಂದೆ ಸರಿಯುತ್ತಾರೆ. ಆದರೆ ಉದ್ಯಮದಲ್ಲಿ ಹೀಗೆ ಹಿಂದೆ ಸರಿಯಲು ಅವಕಾಶವೇ ಇಲ್ಲ. ಹೀಗಾಗಿ ಮಹಿಳೆಯರು ಕಾರ್ಪೊರೇಟ್ ಉದ್ಯೋಗದ ಕಡೆ ಮುಖ ಮಾಡುತ್ತಿದ್ದಾರೆ. ಅವರಿಗೆ ಅಲ್ಲಿ ಕೌಟುಂಬಿಕ ಜವಾಬ್ದಾರಿ ನಿರ್ವಹಿಸುವ ಉದ್ದೇಶಕ್ಕೆ ವೃತ್ತಿಯಲ್ಲಿ ಚಿಕ್ಕ ವಿರಾಮ ತೆಗೆದುಕೊಳ್ಳಲು ಅವಕಾಶ ಇರುತ್ತದೆ. ಕೆಲವರು ಮಾತ್ರ ಒಂದು ವಿರಾಮ ಪಡೆದ ನಂತರ ಉದ್ಯಮಕ್ಕೆ ಬರುತ್ತಿದ್ದಾರೆ.
ದೇಶದಲ್ಲಿ ಆದರ್ಶ ಮಹಿಳಾ ಉದ್ಯಮಿಗಳ ಸಂಖ್ಯೆ ಕಡಿಮೆ. ಈಗ ಇಲ್ಲಿ ನಾನು ಅಧ್ಯಕ್ಷೆ ಎಂಬ ಕಾರಣಕ್ಕೆ ಎಲ್ಲ ಕಾರ್ಯಕ್ರಮಗಳನ್ನು ಮಹಿಳೆಯರಿಗಾಗಿಯೇ ರೂಪಿಸುವುದು ಸರಿಯಾಗದು. ಏಕೆಂದರೆ ಎಫ್‌ಕೆಸಿಸಿಐನ ಮೊದಲ ಕೆಲಸ ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರುವುದು. ಅದು ಇಡೀ ಉದ್ಯಮ ಸಮೂಹಕ್ಕೆ ಸಂಬಂಧಿಸಿರಬೇಕು. ನಮ್ಮ ಶೇ 90ರಷ್ಟು ಸದಸ್ಯರು ಎಂಎಸ್‌ಎಂಇಗಳು. ನನ್ನ ಆದ್ಯತೆ ಅವುಗಳ ಕಡೆ ಇರುತ್ತದೆ. ಆ ವಲಯದಲ್ಲಿನ ಮಹಿಳಾ ಉದ್ಯಮಿಗಳಿಗೆ ಏನೆಲ್ಲ ಅನುಕೂಲ ಮಾಡಿಸಿಕೊಡಲು ಸಾಧ್ಯವೋ ಅವೆಲ್ಲವನ್ನೂ ನಾನು ಮಾಡುವೆ. ಮಹಿಳಾ ಉದ್ಯಮಿಗಳಿಗೆ ಆದ್ಯತೆ ನೀಡುವ ಸಂಘಟನೆಗಳು ಬೇರೆ ಇವೆ. ಆದರೆ ಮಹಿಳಾ ಉದ್ಯಮಿಗಳ ಸಾಧನೆಯನ್ನು ಗುರುತಿಸುವ, ಪ್ರಶಸ್ತಿ ನೀಡಿ ಸನ್ಮಾನಿಸುವ ಕೆಲಸವನ್ನು ನಾವೂ ಮಾಡುತ್ತಿದ್ದೇವೆ. ಅಂತಹ ಪ್ರಶಸ್ತಿಗಳು ಇತರ ಮಹಿಳೆಯರಿಗೆ ಸ್ಫೂರ್ತಿಯಾಗುತ್ತವೆ.
ಎಫ್‌ಕೆಸಿಸಿಐನಲ್ಲಿ ಪುರುಷ ಸದಸ್ಯರಿಂದ ಸಂಪೂರ್ಣ ಸಹಕಾರ ಸಿಗುತ್ತದೆಯೇ?
ನಮ್ಮ ಯೋಜನೆಯಲ್ಲಿ ನಮಗೆ ನಂಬಿಕೆ ಇದ್ದರೆ, ಅದನ್ನು ಎಲ್ಲರಿಗೂ ವಿವರಿಸಲು, ಮನವೊಲಿಸಲು ಸಾಧ್ಯವಾದರೆ ಎಲ್ಲವೂ ಆಗುತ್ತದೆ. ಇಂತಹ ಕೆಲಸವನ್ನು ನಾನು ಹಿಂದೆಲ್ಲ ಮಾಡಿದ್ದೇನೆ. ನನಗೆ ನನ್ನ ಇಡೀ ಸಮಿತಿಯಿಂದ ಬೆಂಬಲ ಸಿಗುತ್ತದೆ ಎಂಬ ವಿಶ್ವಾಸ ಇದೆ.
ಅಮೆರಿಕವು ಭಾರತದ ಸರಕುಗಳ ಮೇಲೆ ಹೇರಿರುವ ಭಾರಿ ಪ್ರಮಾಣದ ಸುಂಕದ ಪರಿಣಾಮ ಹೆಚ್ಚಿರುವ ಸಂದರ್ಭದಲ್ಲಿ ನೀವು ಅಧ್ಯಕ್ಷೆ ಆಗಿದ್ದೀರಿ. ಎಂಎಸ್‌ಎಂಇ ವಲಯಕ್ಕೆ ನೆರವಾಗಲು ಯಾವ ಬಗೆಯಲ್ಲಿ ನೀವು ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡುತ್ತೀರಿ?
ಸುಂಕದಿಂದಾಗಿ ಜವಳಿ, ಸಮುದ್ರ ಉತ್ಪನ್ನಗಳ ಮೇಲೆ ಹೆಚ್ಚು ಪರಿಣಾಮ ಉಂಟಾಗಿದೆ. ಆದರೆ ಜವಳಿ ಉದ್ಯಮವು ಹೆಚ್ಚಿನ ಮಟ್ಟದಲ್ಲಿ ನಮ್ಮಲ್ಲಿಲ್ಲ. ಅದು ಬೇರೆ ರಾಜ್ಯಗಳಲ್ಲಿ ಹೆಚ್ಚಿದೆ. ಸಮುದ್ರ ಉತ್ಪನ್ನಗಳಲ್ಲಿ ಕೂಡ ನಾವು ಹೆಚ್ಚು ಪಾಲು ಹೊಂದಿಲ್ಲ. ಆದರೆ ನಮ್ಮ ಮನವಿಗಳನ್ನು ಸರ್ಕಾರಗಳಿಗೆ ಸಲ್ಲಿಸಿದ್ದೇವೆ.
ಚೀನಾದಲ್ಲಿ ಕಾಣುವಂತಹ ರಫ್ತು ಪ್ರಮಾಣ ನಮ್ಮಲ್ಲಿ ಇಲ್ಲ. ಇಲ್ಲಿನ ಎಂಎಸ್‌ಎಂಇ ಉತ್ಪನ್ನಗಳ ಶೇ 40ರಷ್ಟು ರಫ್ತಾಗುತ್ತವೆ, ಇನ್ನುಳಿದ ಶೇ 60ರಷ್ಟು ನಮ್ಮ ದೇಶದ ಮಾರುಕಟ್ಟೆ ಯಲ್ಲಿ ಬಿಕರಿ ಆಗುತ್ತವೆ. ನಮ್ಮ ಮಾರುಕಟ್ಟೆ ಕೂಡ ದೊಡ್ಡದಾಗಿದೆ. ಹಾಗೆಯೇ ಬೇರೆ ಮಾರುಟ್ಟೆಗಳನ್ನು ನಾವು ಇನ್ನೂ ಬಳಸಿಕೊಂಡಿಲ್ಲ. ಸುಂಕವು ನಮಗೆ ಪೆಟ್ಟು ಕೊಟ್ಟಿದೆ ಎಂಬುದು ನಿಜವಾದೂ ಇದು ಸಾವು ಬದುಕಿನ ಪ್ರಶ್ನೆಯಾಗಿಲ್ಲ. ಕೋವಿಡ್ ಅವಧಿಯಲ್ಲಿ ಎದುರಾದ ಸಂಕಷ್ಟ ಈಗ ಇಲ್ಲ. ನಮಗೆ ಬೇರೆ ಮಾರುಕಟ್ಟೆಗಳೂ ಇವೆ. ಐರೋಪ್ಯ ಒಕ್ಕೂಟ, ಇತರ ದೇಶಗಳ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ನಾವು ಮುಂದಾಗಿದ್ದೇವೆ. ಈಗಿನ ಪರಿಸ್ಥಿತಿಯು ನಮಗೆ ಇತರ ಮಾರುಕಟ್ಟೆಗಳನ್ನು ಅರಸಲು ನೆರವಾಗಿದೆ. ಸಂಕಟ ಹೇಳುವ ಪತ್ರಗಳೇನೂ ನಮಗೆ ಉದ್ಯಮಗಳ ಕಡೆಯಿಂದ ಬರುತ್ತಿಲ್ಲ. ಇದು ಸಮಾಧಾನಕರ.
ಮಹಿಳಾ ಉದ್ಯಮಿಗಳಿಗೆ ನಿಮ್ಮ ಕಿವಿಮಾತು ಏನು?
ನಿರಂತರ ಯತ್ನ ಬೇಕು. ಗುರಿಯನ್ನು ತಲುಪಲು ಸುಲಭದ ಮಾರ್ಗ ಇಲ್ಲ. ನಿಮ್ಮನ್ನು ನೀವು ಮತ್ತೆ ಮತ್ತೆ ಸಾಬೀತು ಮಾಡಿಕೊಳ್ಳಬೇಕು. ಏಕೆ ಹೀಗೆ ಎಂಬ ಭಾವನೆ ಇಟ್ಟುಕೊಳ್ಳಬಾರದು. ಕಷ್ಟಪಟ್ಟು ಕೆಲಸ ಮಾಡಬೇಕು. ನಮ್ಮ ಕೆಲಸದ ಮೇಲೆ ಗಮನ ಇಟ್ಟು ಮುಂದಡಿ ಇರಿಸಬೇಕು. ಹಾಗೆ ಮಾಡಿದಾಗ ಗುರಿ ತಲುಪಲು ಸಾಧ್ಯ. ಇದು ಸುಲಭದ ಕೆಲಸ ಅಲ್ಲ ಎಂಬುದು ನಿಜ. ಇದಕ್ಕೆ ಹಲವರ ಸಹಕಾರ ಬೇಕಾಗುತ್ತದೆ. ಮಹಿಳೆಯರಾಗಿ ನಾವು ಕಂದಕಗಳನ್ನು ಮುಚ್ಚಬೇಕು, ಸೇತುವೆಗಳನ್ನು ನಿರ್ಮಿಸಬೇಕು. ಮಹಿಳೆಯರಿಗೆ ಜನರ ಜೊತೆ ಸಂಪರ್ಕ ಸಾಧಿಸುವ ಸಾಮರ್ಥ್ಯ ಹುಟ್ಟಿನಿಂದಲೇ ಬಂದಿರುತ್ತದೆ. ಅದನ್ನು ನಾವು ನಮ್ಮ ಬೆಳವಣಿಗೆಗೆ ಬಳಸಿಕೊಳ್ಳಬೇಕು.
ಮಹಿಳಾ ಉದ್ಯಮಿಗಳಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ನೀವೇನಾದರೂ ಕಾರ್ಯಕ್ರಮ ಆಯೋಜಿಸುವಿರಾ?
ಈಗ ಮಹಿಳಾ ಉದ್ಯಮಿಗಳ ಪ್ರಮಾಣ ಶೇ 15ರಷ್ಟು ಇರಬಹುದು. ಅಸಂಘಟಿತ ವಲಯದಲ್ಲಿ ಅವರು ಹೆಚ್ಚಿದ್ದಾರೆ. ಆದರೆ ಅದು ಲೆಕ್ಕಕ್ಕೆ ಸಿಗುವುದಿಲ್ಲ. ಮಹಿಳೆಯರು ಹಲವು ಕಾರಣಗಳಿಗಾಗಿ ವೃತ್ತಿಯಿಂದ ಹಿಂದೆ ಸರಿಯುತ್ತಾರೆ. ಆದರೆ ಉದ್ಯಮದಲ್ಲಿ ಹೀಗೆ ಹಿಂದೆ ಸರಿಯಲು ಅವಕಾಶವೇ ಇಲ್ಲ. ಹೀಗಾಗಿ ಮಹಿಳೆಯರು ಕಾರ್ಪೊರೇಟ್ ಉದ್ಯೋಗದ ಕಡೆ ಮುಖ ಮಾಡುತ್ತಿದ್ದಾರೆ. ಅವರಿಗೆ ಅಲ್ಲಿ ಕೌಟುಂಬಿಕ ಜವಾಬ್ದಾರಿ ನಿರ್ವಹಿಸುವ ಉದ್ದೇಶಕ್ಕೆ ವೃತ್ತಿಯಲ್ಲಿ ಚಿಕ್ಕ ವಿರಾಮ ತೆಗೆದುಕೊಳ್ಳಲು ಅವಕಾಶ ಇರುತ್ತದೆ. ಕೆಲವರು ಮಾತ್ರ ಒಂದು ವಿರಾಮ ಪಡೆದ ನಂತರ ಉದ್ಯಮಕ್ಕೆ ಬರುತ್ತಿದ್ದಾರೆ. ದೇಶದಲ್ಲಿ ಆದರ್ಶ ಮಹಿಳಾ ಉದ್ಯಮಿಗಳ ಸಂಖ್ಯೆ ಕಡಿಮೆ. ಈಗ ಇಲ್ಲಿ ನಾನು ಅಧ್ಯಕ್ಷೆ ಎಂಬ ಕಾರಣಕ್ಕೆ ಎಲ್ಲ ಕಾರ್ಯಕ್ರಮಗಳನ್ನು ಮಹಿಳೆಯರಿಗಾಗಿಯೇ ರೂಪಿಸುವುದು ಸರಿಯಾಗದು. ಏಕೆಂದರೆ ಎಫ್‌ಕೆಸಿಸಿಐನ ಮೊದಲ ಕೆಲಸ ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರುವುದು. ಅದು ಇಡೀ ಉದ್ಯಮ ಸಮೂಹಕ್ಕೆ ಸಂಬಂಧಿಸಿರಬೇಕು. ನಮ್ಮ ಶೇ 90ರಷ್ಟು ಸದಸ್ಯರು ಎಂಎಸ್‌ಎಂಇಗಳು. ನನ್ನ ಆದ್ಯತೆ ಅವುಗಳ ಕಡೆ ಇರುತ್ತದೆ. ಆ ವಲಯದಲ್ಲಿನ ಮಹಿಳಾ ಉದ್ಯಮಿಗಳಿಗೆ ಏನೆಲ್ಲ ಅನುಕೂಲ ಮಾಡಿಸಿಕೊಡಲು ಸಾಧ್ಯವೋ ಅವೆಲ್ಲವನ್ನೂ ನಾನು ಮಾಡುವೆ. ಮಹಿಳಾ ಉದ್ಯಮಿಗಳಿಗೆ ಆದ್ಯತೆ ನೀಡುವ ಸಂಘಟನೆಗಳು ಬೇರೆ ಇವೆ. ಆದರೆ ಮಹಿಳಾ ಉದ್ಯಮಿಗಳ ಸಾಧನೆಯನ್ನು ಗುರುತಿಸುವ ಪ್ರಶಸ್ತಿ ನೀಡಿ ಸನ್ಮಾನಿಸುವ ಕೆಲಸವನ್ನು ನಾವೂ ಮಾಡುತ್ತಿದ್ದೇವೆ. ಅಂತಹ ಪ್ರಶಸ್ತಿಗಳು ಇತರ ಮಹಿಳೆಯರಿಗೆ ಸ್ಫೂರ್ತಿಯಾಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.