ADVERTISEMENT

ಸಂದರ್ಶನ | ಹೋರಾಟಗಳಿಗೆ ಕ್ರಿಮಿನಲ್‌ ಹಣೆಪಟ್ಟಿ ಕಟ್ಟುವ ಯತ್ನ: ಯೋಗೇಂದ್ರ ಯಾದವ್

ವಿ.ಎಸ್.ಸುಬ್ರಹ್ಮಣ್ಯ
Published 11 ಮಾರ್ಚ್ 2021, 20:03 IST
Last Updated 11 ಮಾರ್ಚ್ 2021, 20:03 IST
ಯೋಗೇಂದ್ರ ಯಾದವ್‌
ಯೋಗೇಂದ್ರ ಯಾದವ್‌   

ಬೆಂಗಳೂರು: ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಸಂಬಂಧಿ ಹೊಸ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರಾಷ್ಟ್ರೀಯ ಮಟ್ಟದ ರೈತ ಸಂಘಟನೆಗಳ ಒಕ್ಕೂಟಸಂಯುಕ್ತ ಕಿಸಾನ್‌ ಮೋರ್ಚಾದ ಸಂಚಾಲನಾ ಸಮಿತಿಯ ಪ್ರಮುಖ ಸದಸ್ಯರಾಗಿರುವ ಯೋಗೇಂದ್ರ ಯಾದವ್‌ ಅವರು ಬೆಂಬಲ ಬೆಲೆ ಹಕ್ಕೊತ್ತಾಯ (ಎಂಎಸ್‌ಪಿ ದಿಲಾವ್‌) ಆಂದೋಲನಕ್ಕೆ ಚಾಲನೆ ನೀಡುವುದಕ್ಕಾಗಿ ಕರ್ನಾಟಕಕ್ಕೆ ಬಂದಿದ್ದರು. ಎಂಎಸ್‌ಪಿ ದಿಲಾವ್‌ ಅಭಿಯಾನ, ರೈತ ಮಹಾ ಪಂಚಾಯತ್‌ ಸಿದ್ಧತೆಗಳ ನಡುವೆಯೇ ‘ಪ್ರಜಾವಾಣಿ’ ಜತೆ ಅವರು ಹಂಚಿಕೊಂಡ ಮಾತುಗಳು ಇಲ್ಲಿವೆ...

*ದೆಹಲಿಯ ರೈತ ಹೋರಾಟ 100 ದಿನ ಪೂರೈಸಿದೆ. ಮುಂದಿನ ಹೆಜ್ಜೆ?

ರೈತ ಹೋರಾಟ 100 ದಿನಗಳನ್ನು ಪೂರೈಸಿರುವುದರಲ್ಲಿ ಯಾವ ಸಂಭ್ರಮವೂ ಇಲ್ಲ. ಮುಂದಿನ ದಾರಿ ಕಠಿಣವಾದುದು. ಹೋರಾಟವನ್ನು ದೇಶದ ಉದ್ದಗಲಕ್ಕೆ ವಿಸ್ತರಿಸಿ ಆ ಮೂಲಕ ಕೇಂದ್ರ ಸರ್ಕಾರ ಮಾತುಕತೆಗೆ ಬರುವಂತೆ ಮತ್ತು ರೈತರ ನ್ಯಾಯಯುತ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಮಾಡಬೇಕಿದೆ. ಈಗ ನಾವು ಹೋರಾಟದ ಹಾದಿಯಲ್ಲಿ ನಾಲ್ಕನೇ ಹಂತ ಪ್ರವೇಶಿಸಿದ್ದೇವೆ.

*ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ, ನಿರುದ್ಯೋಗ, ಹಣದುಬ್ಬರ ಮುಂತಾದ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ವಿರೋಧ ಪಕ್ಷಗಳ ವೈಫಲ್ಯವೂ ಇದಕ್ಕೆ ಕಾರಣವಲ್ಲವೆ?

ADVERTISEMENT

ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಾಖಲೆಯ ಮಟ್ಟ ತಲುಪಿದೆ. ನಿರುದ್ಯೋಗದ ಮಟ್ಟ ದೇಶದ ಇತಿಹಾಸದಲ್ಲೇ ದಾಖಲೆಯ ಪ್ರಮಾಣ ತಲುಪಿದೆ. ಶಿಕ್ಷಣ ಪಡೆದವರಿಗೆ ಉದ್ಯೋಗಗಳೇ ಸಿಗುತ್ತಿಲ್ಲ. ಸಂಸದೀಯ ವಿರೋಧ ಪಕ್ಷ ದೇಶದ ನಿಜವಾದ ವಿರೋಧ ಪಕ್ಷವಾಗಿ ಉಳಿದಿಲ್ಲ. ಸಂಸತ್ತಿನಲ್ಲಿ ವಿರೋಧ ಪಕ್ಷ ಇಲ್ಲ, ಅದು ರಸ್ತೆಯ ಮೇಲೆ ಇದೆ. ಸದ್ಯಕ್ಕೆ ಹೋರಾಟಗಳೇ ದೇಶದ ನಿಜವಾದ ವಿರೋಧ ಪಕ್ಷಗಳಾಗಿವೆ.

*ಕೇಂದ್ರ ಸರ್ಕಾರ ತನ್ನನ್ನು ಟೀಕಿಸುವವರ ಮೇಲೆ ದೇಶದ್ರೋಹದ ಆಪಾದನೆ ಹೊರಿಸಿ ಬಾಯಿ ಮುಚ್ಚಿಸಲು ಯತ್ನಿಸುತ್ತಿದೆ. ಹೋರಾಟ ನಿರತರಿಗೆ ಇರುವ ದಾರಿಗಳು?

ಇದು ಬ್ರಿಟಿಷರ ಆಳ್ವಿಕೆಗಿಂತಲೂ ಕೆಟ್ಟ ಸರ್ಕಾರ. ಬ್ರಿಟಿಷ್‌ ವಸಾಹತುಷಾಹಿ ಆಡಳಿತಗಾರರು ಕೂಡ ದೇಶದ್ರೋಹದ ಕಾನೂನನ್ನು ಈ ಸರ್ಕಾರದ ರೀತಿಯಲ್ಲಿ ಬಳಸಿರಲಿಲ್ಲ. ಹೋರಾಟಗಳಿಗೆ ಕ್ರಿಮಿನಲ್‌ ಅಪರಾಧದ ಹಣೆಪಟ್ಟಿ ಕಟ್ಟಲು ದೇಶದ್ರೋಹದ ಕಾನೂನನ್ನು ಸರ್ಕಾರ ಬಳಸುತ್ತಿದೆ. ಈಗ ರೈತರ ಹೋರಾಟದ ವಿಚಾರದಲ್ಲೂ ಅದೇ ರೀತಿ ಆಗುತ್ತಿದೆ. ಜನರನ್ನು ಸಂವಿಧಾನ ರಕ್ಷಿಸುತ್ತದೆ. ಸಂವಿಧಾನವನ್ನು ರಕ್ಷಿಸುವ ಹೊಣೆ ಜನರದ್ದು. ಇದಕ್ಕಾಗಿ ಪ್ರಜಾಸತ್ತಾತ್ಮಕವಾಗಿ ಬೀದಿಗಳಿದು ಹೋರಾಡುವುದೊಂದೇ ದಾರಿ.

*ನೀವು ವಿರೋಧಿಸುತ್ತಿರುವ ಮೂರು ಕೃಷಿ ಕಾಯ್ದೆಗಳ ಹಿಂದಿರುವವರು ಯಾರು?

ನನ್ನ ಮಾಹಿತಿ ಪ್ರಕಾರ, ಕೃಷಿ ಸಚಿವಾಲಯದ ಒಬ್ಬ, ಪ್ರಧಾನಿ ಕಾರ್ಯಾಲಯದ ಒಬ್ಬ ಮತ್ತು ನೀತಿ ಆಯೋಗದ ಒಬ್ಬ ಅಧಿಕಾರಿ ಸೇರಿ ಈ ಮಸೂದೆಗಳನ್ನು ಸಿದ್ಧಪಡಿಸಿದ್ದಾರೆ. ಕೃಷಿ ಸಚಿವರು ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ. ರೈತ, ರಾಜಕಾರಣಿ, ಕೃಷಿ ತಜ್ಞ, ಆರ್ಥಿಕ ತಜ್ಞರ ಜತೆಗೂ ಚರ್ಚಿಸಿಲ್ಲ. ಕಾರ್ಪೋರೇಟ್‌ ಕಂಪನಿಗಳ ಹಲವು ವರ್ಷದ ಬೇಡಿಕೆಗೆ ‍ಪೂರಕವಾಗಿ ನಡೆದಿದೆ. ಅದಾನಿ, ಅಂಬಾನಿ ಸಮೂಹಗಳ ಹಿತಾಸಕ್ತಿ ಇರುವುದು ಈಗಾಗಲೇ ಬಯಲಾಗಿದೆ.

*ಕರ್ನಾಟಕದಲ್ಲಿ ರೈತ ಹೋರಾಟ ವಿಸ್ತರಣೆಗೆ ರೂಪಿಸಿರುವ ಯೋಜನೆಗಳೇನು?

ಇದು ಕಾಗೋಡು ಸತ್ಯಾಗ್ರಹ ಮತ್ತು ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ನೆಲ. ಹೀಗಾಗಿ ಕರ್ನಾಟಕದ ಬಗ್ಗೆ ನನಗೆ ಹೆಚ್ಚು ನಿರೀಕ್ಷೆಗಳಿವೆ. ಹಸಿರು ಶಾಲು ಕಂಡರೆ ಹೆಚ್ಚು ಗೌರವ ನೀಡುವ ರಾಜ್ಯವಿದು. ಮೂರು ಕೃಷಿ ಕಾಯ್ದೆಗಳ ವಿರುದ್ಧ ಮೊದಲು ಹೋರಾಟ ಆರಂಭವಾದದ್ದೇ ಇಲ್ಲಿ. ಈಗ ಎಂಎಸ್‌ಪಿ ಸತ್ಯಾಗ್ರಹಕ್ಕೆ ಇಲ್ಲಿಂದಲೇ ಚಾಲನೆ ನೀಡಿದ್ದೇವೆ. ಈ ಅಭಿಯಾನವನ್ನು ರಾಜ್ಯದ ಉದ್ದಗಲಕ್ಕೂ ಕೊಂಡೊಯ್ಯುತ್ತಲೇ ರೈತ ಹೋರಾಟವನ್ನೂ ವಿಸ್ತರಿಸುವುದು ನಮ್ಮ ಗುರಿ.

ಚುನಾವಣೆ ಹೊತ್ತಿಗೆ ಜಾತಿ ಮುನ್ನೆಲೆಗೆ

*ವಿಧಾನಸಭಾ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ರೈತರ ಸಮಸ್ಯೆ ಮತ್ತು ಹೋರಾಟದ ವಿಷಯ ಇನ್ನೂ ಪ್ರಸ್ತಾಪವಾಗಿಲ್ಲ ಅಲ್ಲವೇ?

ಇದು ಇಡೀ ದೇಶದ ಸಮಸ್ಯೆ. ನಾಲ್ಕೂವರೆ ವರ್ಷಗಳ ಕಾಲ ರೈತರು ರೈತರಾಗಿಯೇ ಇರುತ್ತಾರೆ. ಚುನಾವಣೆಯ ಮುಂಚಿನ ಆರು ತಿಂಗಳಿನಿಂದ ಅವರೆಲ್ಲರೂ ಒಕ್ಕಲಿಗ, ಲಿಂಗಾಯತ, ರೆಡ್ಡಿ, ಕಮ್ಮ, ಜಾಟ್‌, ಯಾದವ್‌, ಕುರ್ಮಿ, ಹಿಂದೂ, ಮುಸ್ಲಿಮರಾಗಿ ಬದಲಾಗುತ್ತಾರೆ ಎಂಬುದನ್ನು ರಾಜಕಾರಣಿಗಳು ತಿಳಿದುಕೊಂಡಿದ್ದಾರೆ. ಇದರ ಪರಿಣಾಮವಾಗಿ ರೈತರ ಸಮಸ್ಯೆಗಳು ದೇಶದಲ್ಲಿ ಯಾವತ್ತೂ ಚುನಾವಣಾ ರಾಜಕೀಯದ ಪ್ರಮುಖ ವಿಷಯಗಳಾಗಿ ಚರ್ಚೆಯ ಮುನ್ನೆಲೆಗೆ ಬಂದಿಲ್ಲ. ಆದರೆ, ಈ ಬಾರಿ ನಾವು ಚುನಾವಣೆ ನಡೆಯುತ್ತಿರುವ ಐದೂ ರಾಜ್ಯಗಳಿಗೆ ಹೋಗುತ್ತೇವೆ. ಅಲ್ಲಿ ಯಾವುದೇ ಒಂದು ಪಕ್ಷದ ಪರವಾಗಿ ನಾವು ಮತ ಯಾಚಿಸುವುದಿಲ್ಲ. ಯಾವುದೇ ಪಕ್ಷದ ಗೆಲುವಿನ ಬಗ್ಗೆಯೂ ನಮಗೆ ಆಸಕ್ತಿ ಇಲ್ಲ. ರೈತರಿಗೆ ಅವಮಾನ ಮಾಡಿರುವ, ರೈತರನ್ನು ಹತ್ತಿಕ್ಕುತ್ತಿರುವ ಬಿಜೆಪಿಯನ್ನು ಶಿಕ್ಷಿಸುವಂತೆ ಜನರಲ್ಲಿ ಮನವಿ ಮಾಡುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.