ADVERTISEMENT

ನುಡಿ ಬೆಳಗು | ಏನೇ ಬರಲಿ ಎಂತೇ ಇರಲಿ

ವಾಸುದೇವ ನಾಡಿಗ್
Published 17 ಫೆಬ್ರುವರಿ 2026, 23:30 IST
Last Updated 17 ಫೆಬ್ರುವರಿ 2026, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಉಸ್ಸಂತ ಕೂತುಬಿಟ್ಟಿದ್ದ ಆ ಹುಡುಗನಿಗೆ ಎಲ್ಲೂ ಸಮಾಧಾನವಿಲ್ಲ; ಸಣ್ಣ ಪುಟ್ಟ ವಿಚಾರವನ್ನೂ ಗಹನವಾಗಿ ತೆಗೆದುಕೊಂಡು ತಲೆ ಮೇಲೆ ಕೈಹೊತ್ತು ಕೂತು ಬಿಡುವ ಮನೋಭಾವ. ಗೆಳೆಯರು, ಶಿಕ್ಷಕರು ಎಲ್ಲ ಎಲ್ಲ ಭಾರವೇ ಅವನಿಗೆ. ಯಾರು ಏನೇ ಅಂದರೂ ಮನಸ್ಸಿಗೆ ತೆಗೆದುಕೊಂಡು ಒದ್ದಾಟ. ಅನೇಕರಿಗೆ ಅನೇಕ ಸಲ ಹೀಗೆ ಆಗುತ್ತದೆ. ಈ ಹುಡುಗ ಒಬ್ಬ ಸದ್ಯದ ಸಂಕೇತ ಮಾತ್ರ. ತಾಯಿ ತಂದೆಗೆ ಇವನ ಈ ವರಾತ ಕಂಡು ದಿಗಿಲು ಮತ್ತು ಬೇಸರ. ಇವನ ಈ ದುರ್ಬಲ ಮನಃಸ್ಥಿತಿಗೆ ಮಾನಸಿಕ ಬೆಂಬಲ ಮತ್ತು ಸಲಹೆ ಕೊಡುವ ಸಮರ್ಥ ವ್ಯಕ್ತಿಯೇ ಬೇಕು. ವಾಸ್ತವದ ಜೀವಂತ ಉದಾಹರಣೆಗಳನ್ನು ಮುಟ್ಟಿಸಿ ಮಾತಾಡುವ ಗುರುವೇ ಬೇಕು. ಸಿಕ್ಕಿದ್ದು ಇಂತಹ ಗುರುವೇ.

ತಂದೆ ತಾಯಿ ಮಗನನ್ನು ಗುರುಗಳ ಬಳಿ ಬಿಟ್ಟುಬಂದರು. ತಂದೆ ತಾಯಿಯನ್ನು ಆ ಗುರುಗಳು ಮನೆಯಲ್ಲಿ ಕೂಡಿಸಿ ಹುಡುಗನನ್ನು ದಟ್ಟ ಹಸಿರು ಕಾಡು ನದಿಯ ಬಳಿಗೆ ಕರೆದೊಯ್ದರು. ಜೊತೆಗೆ ಮೂರು ಹಿಡಿ ಉಪ್ಪನ್ನೂ ಜೊತೆಗೆ ತೆಗೆದುಕೊಂಡು ಹೋದರು. ದಾರಿಯಲ್ಲಿ ಹೋಗುವಾಗ ಒಂದು ಲೋಟದ ತುಂಬಾ ನೀರನ್ನು ತುಂಬಿಕೊಂಡು ಒಂದು ಹಿಡಿ ಉಪ್ಪನ್ನು ಹಾಕಿ ಆ ಹುಡುಗನಿಗೆ ಕುಡಿಯಲು ಹೇಳಿದರು. ಸ್ವಲ್ಪ ರುಚಿನೋಡಿ ವಾಕರಿಸಿಕೊಂಡ ಹುಡುಗನನ್ನು ನೋಡಿ ಜೋರಾಗಿ ನಕ್ಕರು. ಸ್ವಲ್ಪ ದೂರ ಹೋಗಿ ಒಂದು ಕೊಳದಲ್ಲಿ ಹಿಡಿ ಉಪ್ಪನ್ನು ಹಾಕಿ ರುಚಿ ನೋಡಲು ಹೇಳಿದರು. ಹುಡುಗ ಉಪ್ಪು ತೀರಾ ಹೆಚ್ಚಿಲ್ಲ ಅಂದ. ಗುರುಗಳು ದೂರದ ಹರಿಯುವ ನದಿಗೆ ಉಪ್ಪನ್ನು ಹಾಕಿ ಕುಡಿಯಲು ಹೇಳಿದರು. ಹುಡುಗ ನಗುನಗುತ್ತ ಕುಡಿದ. ಹಿಡಿ ಉಪ್ಪೇ ಆದರೂ ಪರಿಣಾಮ ಬೇರೆ.

ADVERTISEMENT

ಮನೆಗೆ ಹಿಂದುರುಗಿದ ಮೇಲೆ ತಾಯಿ ತಂದೆ ಸಮ್ಮುಖದಲ್ಲೇ ಮಾತಾಡಲು ಶುರು ಮಾಡಿದರು. ಉಪ್ಪಿನ ಪ್ರಮಾಣ ಒಂದೇ ಆಗಿದ್ದರೂ ಅದನ್ನು ತಮ್ಮೊಳಗೆ ತೆಗೆದುಕೊಂಡ ವಸ್ತಗಳೇ ಬೇರೆ. ಲೋಟ, ಕೊಳ ಮತ್ತು ನದಿಗಳು ಉಪ್ಪನ್ನು ಸ್ವೀಕರಿಸಿದ ರೀತಿಯೇ ಬೇರೆ. ಉಪ್ಪು ಎಂಬುದೇ ಸಮಸ್ಯೆ. ಅದನ್ನು ಕರಗಿಸಿಕೊಂಡು ಅದನ್ನು ಒಳಗೊಂಡು ದಾಟೋ ಬಗೆಯನ್ನು ಬಹಳ ವಾಸ್ತವದ ಅಡಿಯಲ್ಲಿ ಹೇಳಲಾಗಿತ್ತು. ಮನಸ್ಸು ಮತ್ತು ಹೃದಯದ ವ್ಯಾಪ್ತಿಗೆ ಅನುಗುಣವಾಗಿ ಕಷ್ಟಗಳ ಸ್ವರೂಪ ನಿಂತಿರುತ್ತದೆ. ವ್ಯಕ್ತಿತ್ವ ಹರಿಯುವ ವಿಶಾಲವಾದ ನದಿಯಾದಾಗ ಸಮಸ್ಯೆಗಳನ್ನು ತಾಕುವ ಬಗೆಯೇ ಬೇರೆ. ಸಣ್ಣ ಲೋಟವಾದಾಗ ನೀರೇ ಸಮಸ್ಯೆಯಾಗಿ ಕಾಣುತ್ತದೆ. ನದಿಯ ನೀರು ನೀರೇ ಆದರೂ ಅದು ಉಪ್ಪೆಂಬ ಕಷ್ಟವನ್ನು ತನ್ನೊಂದಿಗೆ ಕರಗಿಸಿಕೊಂಡು ದಾಟುವ ಘನತೆಯೇ ಭಿನ್ನ. ಇದನ್ನೇ ಡಿ ವಿ ಜಿ ಅವರು ಕಷ್ಟಗಳ ವಿಧಿ ಮಳೆ ಸುರಿಯೇ ಎಂದಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಂತೂ ಎಲ್ಲ ಕಷ್ಟ ನಷ್ಟಗಳನ್ನು ಶ್ರೀಹರಿಯ ಸುಪರ್ದಿಗೆ ಬಿಟ್ಟುಕೊಟ್ಟು ‘ಏನೇ ಬರಲಿ ಎಂತೇ ಇರಲಿ, ಅನುದಿನ ಯಾವ ಅಸುಖ ಸುಖ ತರಲಿ, ಬಾಳ ಗೊಂದಲದ ಕರ್ಕಶದೆದೆಯಲ್ಲಿ ಕೇಳುತಿರಲಿ ಹರಿ ನಿನ್ನ ಮುರಳೀ’ ಎಂದು ಹಾಡುತ್ತಾರೆ. ನಿಜ ಅಲ್ಲವೆ, ಎದುರಾಗುವ ಕಷ್ಟಗಳನ್ನು ಸ್ವೀಕರಿಸಲು ನದಿಯ ಹಾಗೆ ಮನಸ್ಸೂ ವಿಶಾಲವಾಗಿ ಚಲಿಸಬೇಕಲ್ಲವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.