ADVERTISEMENT

ನುಡಿ ಬೆಳಗು: ಆದದ್ದೆಲ್ಲಾ..

ವಾಸುದೇವ ನಾಡಿಗ್
Published 3 ಫೆಬ್ರುವರಿ 2026, 20:32 IST
Last Updated 3 ಫೆಬ್ರುವರಿ 2026, 20:32 IST
   

ಗೋಪಾಲಕೃಷ್ಣ ಅಡಿಗರ ಕವನ ‘ಭೂಮಿಗೀತ’ದಲ್ಲಿರುವ ಸಾಲು ‘ಕಾಡ ಮೂಲಕವೇ ಪಥ ಆಗಸಕ್ಕೆ’. ಇಡೀ ವಾಕ್ಯ ಅನನುಕೂಲತೆಗಳನ್ನು ದಾಟಿಕೊಂಡು ಹೋದಾಗ ಸಿಗುವ ಬೆಳಕಿನ ಅನುಕೂಲದ ಬಗ್ಗೆ ಆಡಿದ ಮಾತಾಗಿದೆ. ಒಂದು ಕತೆಯಲ್ಲಿ ಒಬ್ಬ ವ್ಯಕ್ತಿ ಇಡೀ ಊರಿನ ಮೆಚ್ಚುಗೆ ಗಳಿಸಿದ ಅದ್ಭುತವಾದ ಕುದುರೆಯನ್ನು ಕಳೆದುಕೊಳ್ಳುತ್ತಾನೆ. ಅಂದರೆ, ಅದು ಅಕ್ಷರಶಃ ತಪ್ಪಿಸಿಕೊಂಡು ಕಾಡಿನೊಳಗೆ ಓಡಿ ಹೋಗುತ್ತದೆ. ಬೇಸತ್ತು ಕೂತ ಆ ವ್ಯಕ್ತಿ ಮತ್ತು ಅವನ ಯುವ ಮಗ ದಟ್ಟ ವಿಷಾದಕ್ಕೆ ಒಳಗಾಗುತ್ತಾರೆ. ಒಂದು ಮುಂಜಾವು ಅಚಾನಕ್ ಆಗಿ ಅದೇ ಕುದುರೆ ತನ್ನ ಜೊತೆಗೆ ಇನ್ನು ಮೂರು ಬಲಿಷ್ಠ ಕಾಡು ಕುದುರೆಗಳನ್ನು ಕರೆದುಕೊಂಡು ಬಂದು ಅಂಗಳದಲ್ಲಿ ನಿಂತುಬಿಡುತ್ತದೆ.

ಮಗ ಮತ್ತು ಆ ತಂದೆಯ ಖುಷಿಗೆ ಮೇರೆಯೇ ಇಲ್ಲದಂತಾಗುತ್ತದೆ. ಆದರೆ ಈ ಸಂತಸವೂ ಕ್ಷಣಿಕ. ಕುದುರೆಯನ್ನು ಪಳಗಿಸಲು ಹೋಗಿ ಇದ್ದೊಬ್ಬ ಮಗ ಕಾಲನ್ನು ಮುರಿದುಕೊಂಡು ಮೂಲೆ ಸೇರುತ್ತಾನೆ. ಮರುದಿನ ಆ ಪ್ರಾಂತ್ಯದ ದೊರೆ ತನ್ನ ಸೇನೆಗೆ ಭರ್ತಿ ಮಾಡಿಕೊಳ್ಳಲು ಯುವಕರನ್ನು ಅರಸುತ್ತಾ ತನ್ನ ಸೇನೆಯ ಜೊತೆಗೆ ಬಂದಾಗ ಇಡೀ ಊರಿನ ಜನಕ್ಕೆ ತಲ್ಲಣ. ಬೆಳೆದ ಮಕ್ಕಳು ಸೇನೆ, ಯುದ್ಧದ ಪಾಲಾಗುವುದರ ಬಗ್ಗೆ ಆತಂಕ. ಕಾಲು ಮುರಿದುಕೊಂಡು ಮಲಗಿದ್ದ ಈ ಕುದುರೆ ಸವಾರನ ಮಗ ಸೇನೆಗೆ ಭರ್ತಿಯಾಗುವ ಭಯದಿಂದ ತಪ್ಪಿಸಿಕೊಳ್ಳುತ್ತಾನೆ. ಆದದ್ದೆಲ್ಲ ಒಳಿತೇ ಆಯಿತು ಎಂದು ಹಾಡಿದ ಪುರಂದರರು ನೆನಪಾಗುತ್ತಾರೆ.

ಧ್ರುವನಿಗೆ ಅದದ್ದೂ ಇದೇ; ಸಿಂಹಾಸನದ ಮೇಲೆ ತಂದೆ ಉತ್ಥಾನಪಾದನ ಜೊತೆಗೆ ಕೂಡಲು ಪುಟ್ಟ ಬಾಲಕ ಧ್ರುವ ಹಾತೊರೆದು ಹಂಬಲಿಸಿದಾಗ ಮಲತಾಯಿ ಸುರುಚಿಯಿಂದ ಕೆಳಕ್ಕೆ ತಳ್ಳಲ್ಪಡುತ್ತಾನೆ. ಇದು ಯಾಕೆ ಹೀಗೆ, ಏನು ಕಾರಣ ಎಂಬ ಪ್ರಶ್ನೆಗಳ ಮೂಲಕ ಮತ್ತೆ ಮೇಲೆ ಎದ್ದ ಧ್ರುವ ಕಾಡುಪಾಲಾಗುತ್ತಾನೆ. ಅಲ್ಲಿಂದ ಬರಿ ಬೆಳಕೇ. ಅರಮನೆ ತೊರೆದವರ ಕತೆಗಳೇ ಹೀಗೆ. ಪಿ ಲಂಕೇಶರ ‘ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ’ ಮತ್ತು ಮಾಸ್ತಿಯವರ ‘ಟಾಲ್‌ಸ್ಟಾಯ್ ಮತ್ತು ಬೂರ್ಜ್ವಾ ವೃಕ್ಷಗಳು’ ಕಥನಗಳು ಇಂತಹ ಲೋಲುಪತೆಗಳನ್ನು ತ್ಯಜಿಸುವ ಮನಸ್ಸುಗಳ ಕುರಿತೇ ಹೇಳುತ್ತವೆ. ಯಾವುದೂ ಅಕಾರಣವಾಗಿ ಘಟಿಸಲಾರದು. ಬದಲಿಗೆ ಅದು ಮತ್ತೊಂದು ಬದಲಾವಣೆಗೆ ಕಾರಣವಾಗಬಲ್ಲದು. ಧ್ರುವ ಕೇಳಿದ್ದ ಪ್ರಶ್ನೆಗಳು ಅವನನ್ನು ಅಲೌಕಿಕ ಸಾಮ್ರಾಜ್ಯದ ಅಧಿಪತಿಯನ್ನಾಗಿ ಮಾಡಿದ ಹಾಗೆ. ಬ್ರಿಟೀಷರ ವರ್ಣಭೇದ ನೀತಿಯ ಅಪಮಾನದಲ್ಲಿ ನೊಂದೆದ್ದ ಮೋಹನಾದಾಸರು ಬಾಪೂಜಿ ಆದ ಹಾಗೆ.

ADVERTISEMENT

ಘಟಿಸುವ ಕಹಿ ಸಂಗತಿಗಳೆಲ್ಲ ನಮ್ಮನ್ನು ಮತ್ತಷ್ಟು ಮಾಗಿಸಿ ಅದನ್ನು ದಾಟಿದ ನಂತರ ದಕ್ಕುವ ಅನಿರ್ವಚನೀಯ ಸುಖದ ಪರಿಚಯ ಮಾಡಿಕೊಡುತ್ತವೆ. ಏಳಬೇಕಷ್ಟೆ; ಬಿದ್ದಲ್ಲೇ ಅದೇ ಜಾಗದಲ್ಲಿ ಮತ್ತಷ್ಟು ಅಗೆದು ರಾಡಿ ಎಬ್ಬಿಸದ ಹಾಗೆ ಜಾಡಿಸಿಕೊಂಡು ಏಳುವಿಕೆ ಇದು. ಅಸುಖವನ್ನೇ ಕಾಣದ ಸಿದ್ಧಾರ್ಥ ಸುಖಕೆ ಬೇರೆ ಅರ್ಥವನ್ನೇ ಕೊಟ್ಟ. ಚೆನ್ನಜ್ಜನ ಮೂಲಕ ದಾರಿ ಹುಡುಕಿಕೊಂಡೇ ಹೊರಟ. ಗುಹನು ರಾಮನನ್ನು ವನವಾಸದ ಕಡೆ ದಾಟಿಸಿದ್ದೂ ಹೀಗೇ. ಯಾರಾದರೂ ಯಾವುದಾದರೂ ಒಂದು ಅಸೌಖ್ಯವನ್ನು ಪರಿಚಯ ಮಾಡಿಸಿದಾಗಲೇ ಎದ್ದು ಬದಲಾಗೋಕೆ ಸಾಧ್ಯ. ಎಷ್ಟೊಂದು ಜೀವಗಳು ಇಂತಹ ಕಾಠಿಣ್ಯಗಳನ್ನು ದಾಟಿ ಬಾಳನ್ನು ಸರಿಪಡಿಸಿಕೊಂಡಿಲ್ಲ? ಅಸಂಖ್ಯಾತ ಉದಾಹರಣೆಗಳಿವೆ. ಆದದ್ದೆಲ್ಲ ಒಳಿತೇ ಆದ ಹಾಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.