ADVERTISEMENT

ನುಡಿ ಬೆಳಗು | ದೃಷ್ಟಿಕೋನಗಳು ಹಲವು

ಪ್ರಜಾವಾಣಿ ವಿಶೇಷ
Published 7 ಸೆಪ್ಟೆಂಬರ್ 2023, 19:30 IST
Last Updated 7 ಸೆಪ್ಟೆಂಬರ್ 2023, 19:30 IST
   
ಪ್ರೊ. ಎಂ. ಕೃಷ್ಣೇಗೌಡ ಅವರ ಲೇಖನ

ಈ ಚಂದ್ರನನ್ನು ಚಂದಮಾಮ ಎಂದು ಮೊದಲು ಕರೆದವರು ಯಾರೋ ಕಾಣೆ. ತೊಡೆಯ ಮೇಲೆ ಕೂತು ಚಂಡಿ ಹಿಡಿದ ಕಂದಮ್ಮನಿಗೆ ಅಮ್ಮ ಆಕಾಶದಲ್ಲಿ ತಣ್ಣಗೆ ಹೊಳೆಯುವ ತಟ್ಟೆಯನ್ನು ತೋರಿಸಿ ‘ಅಗೋ ಚಂದಮಾಮ...’ ಅಂತ ತೋರಿಸಿರಬೇಕು. ಅಥವಾ ಆ ಮಗುವೇ ಚಂದ್ರನ ಮೃದುಹೊಳಪಿಗೆ ಮನಸೋತು ‘ಅಲ್ಲೀ ಚಂದಮಾಮ...’ ಅಂತ ತನ್ನ ಹಸುಳೆ ಬೆರಳೆತ್ತಿ ಅಮ್ಮನಿಗೆ ತೋರಿಸಿರಬೇಕು. ಅಂತೂ ಆ ಚಂದ್ರ ಈ ಭುವಿಯ ಸಕಲ ಮಕ್ಕಳಿಗೂ ಪ್ರೀತಿಯ ಮಾಮ. ಚಂದಮಾಮ.

ನಾವೆಲ್ಲಾ ಚಿಕ್ಕವರಾಗಿರುವಾಗ ಆಕಾಶದ ಚಂದ್ರ ನಾವು ಹೋದಲ್ಲಿಗೆಲ್ಲಾ ಬರುವುದೇ ಒಂದು ಸೋಜಿಗ. ನಾವು ಎಷ್ಟೇ ಓಡಿ ಏದುಸಿರು ಬಿಡುತ್ತಿದ್ದರೂ ನಮ್ಮ ಚಂದಮಾಮ ಒಂದಿಷ್ಟೂ ಆಯಾಸವಿಲ್ಲದೆ ನಮ್ಮೊಂದಿಗೇ ಓಡಿ ಆಡಿ ನಗುತ್ತಿರುತ್ತಿದ್ದ. ಎಂಥ ಚಂದ ಅಲ್ವಾ ಚಂದಮಾಮ...

ನಮ್ಮ ಕವಿಗಳೂ ಒಂದು ಕಾಲದಲ್ಲಿ ಮಕ್ಕಳೇ ಆಗಿದ್ದವರಲ್ಲವಾ? ಅದಕ್ಕೇ ಇಂಥ ಪದ್ಯಗಳನ್ನು ಬರೆದಿದ್ದಾರಲ್ಲವಾ?

ADVERTISEMENT

ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೆ?
ಬೆಳ್ಳಿಯ ಮೋಡದ ಅಲೆಗಳ ಕಂಡು ಚಂದಿರ ಬೆದರಿಹನೆ?

ಚಂದಿರನೆನ್ನಯ ಗೆಳೆಯನು ಅಮ್ಮ
ನನ್ನೊಡನಾಡುವನು
ನಾನೂ ಓಡಲು ತಾನೂ ಓಡುವ
ಚನ್ನಿಗ ಚಂದಿರನು

ಇನ್ನು ಚಂದ್ರನ ಕುರಿತು ಬಂದಿರುವ ಪದ್ಯಗಳು, ಕತೆಗಳು ಎಲ್ಲವನ್ನೂ ಮೆಲುಕು ಹಾಕಿದರೆ ಮಾತು ಮುಗಿಯುವುದಿಲ್ಲ. ಚಂದ್ರ ಮಕ್ಕಳಿಗೆ ಹೇಗೋ ಹಾಗೆಯೇ ಕವಿಗಳಿಗೆ, ಪ್ರೇಮಿಗಳಿಗೆ, ಪುರಾಣಿಕರಿಗೆ ಅತ್ಯಾಪ್ತ ಗೆಳೆಯ, ಸಖ, ಬಂಧು, ದೇವರು.

ಇದೆಲ್ಲಾ ಈಗ ಯಾಕೆ ನೆನಪಾಯಿತೆಂದರೆ ಮೊನ್ನೆ ನಮ್ಮ ಇಸ್ರೊ ವಿಜ್ಞಾನಿಗಳು ಚಂದ್ರನ ಮೇಲೆ ಪ್ರಜ್ಞಾನ್‌ ಲ್ಯಾಂಡರ್ ಅನ್ನು ಇಳಿಸಿಬಿಟ್ಟರಲ್ಲಾ, ಆ ಕೃತಕ ಬುದ್ಧಿವಂತ ಅಲ್ಲೆಲ್ಲಾ ನೋಡಿ, ಓಡಾಡಿ ಫೋಟೋ ಶೂಟ್ ಮಾಡಿ ಕಳುಹಿಸುತ್ತಿದೆಯಲ್ಲಾ, ಅದನ್ನೆಲ್ಲ ನೋಡಿದ ಮಕ್ಕಳಿಗೆ ಇನ್ನು ಚಂದ್ರನನ್ನು ‘ಮಾಮ’ ಅನ್ನಲು ಸಾಧ್ಯವಾಗದೆ  ಅದು ಹೇಗೆ ನಮಗೆ ಮಾಮ? ಅಷ್ಟಕ್ಕೂ ಅದು ಭೂಮಿಯಿಂದ ಎರಡು ಲಕ್ಷ ನಲವತ್ತಾರು ಸಾವಿರ ಮೈಲಿ ದೂರದಲ್ಲಿ ಭೂಮಿಯ ಸುತ್ತ ಗಂಟೆಗೆ 2,288 ಮೈಲಿ ವೇಗದಲ್ಲಿ ಸುತ್ತುತ್ತಿರುವ ಒಂದು ಆಕಾಶ ಕಾಯ ಅಷ್ಟೆ. ಮಾಮ ಅನ್ನುವುದಕ್ಕೆ ಅದೇನೂ ಒಂದು ವ್ಯಕ್ತಿಯಲ್ಲ, ಒಂದು ಉಪಗ್ರಹ ಮಾತ್ರ.... ಹೀಗೆಲ್ಲಾ‌ ಮಾತಾಡತೊಡಗಿದರೆ ನಮ್ಮ ಭಾವಕೋಶ ಏನಾಗಬೇಕು?

ಇದೆಲ್ಲಾ‌ ಮಾತು ಯಾಕೆ ಬಂತೆಂದರೆ ನಮ್ಮ ಸುತ್ತಲೂ ಇರುವ‌ ವಿಷಯ, ವಸ್ತು, ವಿದ್ಯಮಾನಗಳಿಗೆಲ್ಲಾ ಬೇರೆ ಬೇರೆಯ ದೃಷ್ಟಿಕೋನಗಳಿವೆ. ಈ ಜಗತ್ತಿನಲ್ಲಿ ಕವಿಗಳೂ ಇದ್ದಾರೆ, ರಸಿಕರೂ ಇದ್ದಾರೆ, ಕಲಾವಿದರೂ ಇದ್ದಾರೆ, ವಿಜ್ಞಾನಿಗಳೂ ಇದ್ದಾರೆ. ಅವರೆಲ್ಲರೂ ಸತ್ಯಾನ್ವೇಷಣೆಗೆ ಬೇರೆ ಬೇರೆ ದಾರಿ ಹಿಡಿದಿದ್ದಾರೆ. ಅವರೆಲ್ಲರೂ ಇಲ್ಲಿರಲಿ. ಒಂದು ನೋಟ ಮತ್ತೊಂದನ್ನು ಅಲ್ಲಗಳೆಯುವುದು, ಹೀಯಾಳಿಸುವುದು ಸಲ್ಲ, ಸರಿಯಲ್ಲ, ಹೌದಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.