ADVERTISEMENT

ನುಡಿ ಬೆಳಗು–115 | ಮನುಷ್ಯನಿಗೆ ವೈರಾಗ್ಯ ಬೇಕು!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 21 ಜನವರಿ 2025, 23:18 IST
Last Updated 21 ಜನವರಿ 2025, 23:18 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಮನುಷ್ಯ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಹವ್ಯಾಸಗಳು ನಡವಳಿಕೆಯನ್ನು ರೂಪಿಸುತ್ತವೆ. ನಡವಳಿಕೆಗಳು ಮನುಷ್ಯನನ್ನು ರೂಪಿಸುತ್ತವೆ. ಒಳ್ಳೆಯ ಹವ್ಯಾಸ ಇದ್ದರೆ ಮನುಷ್ಯ ಒಳ್ಳೆಯವನಾಗುತ್ತಾನೆ. ಕೆಟ್ಟ ಹವ್ಯಾಸ ಇದ್ದರೆ ಕೆಟ್ಟವನಾಗುತ್ತಾನೆ. ಕೆಟ್ಟವನಾಗಲಿಕ್ಕೆ 60 ವರ್ಷ ಬೇಕಾಗಬಹುದು. ಆದರೆ, ನಾನು ಒಳ್ಳೆಯವನಾಗುತ್ತೇನೆ ಎಂದು ಸಂಕಲ್ಪ ಮಾಡಿ ಅದರಂತೆ ನಡೆದುಕೊಂಡರೆ ನೀವೂ ಸಂತರಾಗಬಹುದು. ಅದಕ್ಕೆ ಮನುಷ್ಯನಿಗೆ ಅಭ್ಯಾಸದ ಬಲ ಬೇಕು. ಮನುಷ್ಯನಿಗೆ ಇನ್ನೊಂದು ಮುಖ್ಯವಾದದ್ದು ವೈರಾಗ್ಯ. ವೈರಾಗ್ಯ ಅಂದರೆ ನಾವು ಏನಂತ ತಿಳಕೊಂಡೀವಿ ಅಂದ್ರೆ, ಎಲ್ಲ ಮನೆ ಮಠ, ಹೆಂಡ್ರು, ಗಂಡ, ಮಕ್ಕಳು, ಆಸ್ತಿಪಾಸ್ತಿ ಎಲ್ಲಾ ಬಿಟ್ಟು ಹಿಮಾಲಯಕ್ಕೆ ಹೋಗೋದು ಅಂದುಕೊಂಡೇವಿ. ಎಲ್ಲ ಬಿಟ್ಟು ಹೋಗೋದು ವೈರಾಗ್ಯ ಅಲ್ಲ. ಇಲ್ಲಿಯೇ ಇದ್ದು ಸಾಧಿಸೋದು ವೈರಾಗ್ಯ. ಆಲಯ ಬಿಟ್ಟು ಹಿಮಾಲಯಕ್ಕೆ ಹೋದರೂ ಹಿಮಾಲಯದಲ್ಲಿಯೂ ಒಂದು ಆಲಯ ಐತಲ್ಲ, ಅದನ್ನು ತಿಳ್ಕೊಬೇಕು. ಈ ಬಗ್ಗೆ ಶರಣರು ಸಂಶೋಧನೆ ಮಾಡಿದರು. ಅದಕ್ಕೆ ಮಸಣಯ್ಯಗಳ ಪುಣ್ಯಸ್ತ್ರಿ ಒಂದು ವಚನದಲ್ಲಿ ‘ಹೊನ್ನು ಬಿಟ್ಟು ಲಿಂಗವ ಒಲಿಸಬೇಕೆಂಬರು, ಹೊನ್ನಿಗೂ ಲಿಂಗಕ್ಕೂ ವಿರೋಧವೇ? ಹೆಣ್ಣು ಬಿಟ್ಟು ಲಿಂಗವ ಒಲಿಸಬೇಕೆಂಬರು ಹೆಣ್ಣಿಗೂ ಲಿಂಗಕ್ಕೂ ವಿರುದ್ಧವೇ? ಮಣ್ಣುಬಿಟ್ಟು ಲಿಂಗವ ಒಲಿಸಬೇಕೆಂಬರು ಮಣ್ಣಿಗೂ ಲಿಂಗಕ್ಕೂ ವಿರುದ್ಧವೇ? ಅಂಗ ಬಿಟ್ಟು ಲಿಂಗವನೊಲಿಸಬೇಕೆಂಬರು, ಇಂದ್ರಿಯಗಳನ್ನು ಬಿಟ್ಟು ಲಿಂಗವನೊಲಿಸಬೇಕೆಂಬರು ಇಂದ್ರಿಯಕ್ಕೂ ಲಿಂಗಕ್ಕೂ ವಿರೋಧವೇ? ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು. ಅಂಗ, ಇಂದ್ರಿಯ, ಜಗತ್ತು ಎಲ್ಲದಕ್ಕೂ ಲಿಂಗ ವಿರುದ್ಧವೇ?’ ಎಂದು ಪ್ರಶ್ನೆ ಮಾಡಿದರು. ದೇವರ ಸಾಕ್ಷಾತ್ಕಾರ ಆಗಬೇಕಾದರೆ ಸಂಪತ್ತು ಬಿಡಬೇಕು ಅನ್ನುತ್ತಾರಲ್ಲ. ಸಂಪತ್ತಿಗೂ ದೇವರ ಒಲುಮೆಗೂ ಏನು ಸಂಬಂಧ? ರೊಕ್ಕ ಇದ್ದರೆ ದೇವರು ಒಲಿಯುವುದಿಲ್ಲವೇ? ರೊಕ್ಕಕ್ಕೂ ದೇವರ ಒಲುಮೆಗೂ ಏನು ಸಂಬಂಧ? ರೊಕ್ಕ ಬಿಟ್ಟರೆ, ಸಂಪತ್ತು ಬಿಟ್ಟರೆ, ಜಗತ್ತು ಬಿಟ್ಟರೆ ದೇವರ ಸಾಕ್ಷಾತ್ಕಾರ ಆಗತೈತಿ ಅಂತ ಎಲ್ಲೈತಿ? ವೈರಾಗ್ಯ ಎಂದರೆ ಏನು ಅಂತ ಅವರು ಸುಂದರವಾಗಿ ಹೇಳಿದ್ದಾರೆ. ‘ಪರಂಜ್ಯೋತಿ, ಪರಮ ಕರುಣಿ, ಪರಮಶಾಂತ ಲಿಂಗವು ಕೋಪದ ಮುನಿಸದರಿದೊಡೆ ಕಾಣುವುದು, ಮರೆದಡೆ ಕಾಣದು. ಅರಿವಿನಿಂದ ಸುಖವು. ನಮ್ಮ ಮಸಣಯ್ಯ ಪ್ರಿಯ ಗಜೇಶ್ವರಲಿಂಗ’ ಎಂದರು. ಅವರು ಎಷ್ಟು ಚೆಂದ ವಿಮರ್ಶೆ ಮಾಡ್ತಾರೆ ನೋಡಿ. ಹೊನ್ನು ಬಿಡುವುದು ವೈರಾಗ್ಯ ಅಲ್ಲ. ಇನ್ನೊಬ್ಬರ ಹಣಕ್ಕೆ ಆಸೆ ಮಾಡದ ಹಾಗೆ ಇದ್ದರೆ ಅದೇ ವೈರಾಗ್ಯ. ಹೆಣ್ಣು ಬಿಡುವುದು ವೈರಾಗ್ಯ ಅಲ್ಲ. ನಿನ್ನ ಕೈ ಹಿಡಿದ ಹೆಣ್ಣಿಗೆ ಮೋಸ ಮಾಡದ ಹಾಗೆ ಬದುಕುವುದು ವೈರಾಗ್ಯ.

ಒಂದು ಕೈಯಲ್ಲಿ ಮೊಬೈಲ್, ಇನ್ನೊಂದು ಕೈಯಲ್ಲಿ ಪುಸ್ತಕ ಹಿಡಕೊಂಡು ಕುಳಿತ ಹುಡುಗನಿಗೆ ಇವರೆಡರ ನಡುವೆ ಏನು ವ್ಯತ್ಯಾಸ ಅನ್ನೋದನ್ನು ತಿಳಿಸಿಕೊಡಬೇಕು. ಮೊಬೈಲ್ ಹಿಡಕೊಂಡರೆ ತಲೆ ತಗ್ಗಿಸಿ ನಡೆಯಬೇಕು. ಅದು ನಮ್ಮನ್ನು ತಲೆ ಎತ್ತದಂತೆ ಮಾಡುತ್ತದೆ. ಪುಸ್ತಕ ಹಿಡಕೊಂಡರೆ ತಲೆ ಎತ್ತಿ ನಡೆಯುವಂತೆ ಮಾಡುತ್ತದೆ ಎನ್ನೋದನ್ನು ಅರ್ಥ ಮಾಡಿಸಬೇಕು. ಎಷ್ಟು ಪುಸ್ತಕ ಓದೋದು? ಪುರಾಣಗಳಿವೆ, ಭಗವದ್ಗೀತೆ, ವೇದ ಉಪನಿಷತ್, ವಚನ, ಅಭಂಗ ಎಲ್ಲವೂ ಇವೆ. ಎಲ್ಲವನ್ನೂ ಓದಲು ನಮ್ಮ ಆಯುಷ್ಯ ಸಾಲೋದಿಲ್ಲ. ಹಾಗಂತ ಓದೋದು ಬಿಡಬಾರದು. ಜೀವನದಲ್ಲಿ ಅಭ್ಯಾಸ ಮತ್ತು ವೈರಾಗ್ಯ ಎರಡೂ ಬಹಳ ಮುಖ್ಯ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.