ನುಡಿ ಬೆಳಗು
ಬದಲಾಗಬೇಕಿರುವುದು ಸೃಷ್ಟಿಯಲ್ಲ; ಸೃಷ್ಟಿ ಬದಲಾಗುವುದೂ ಇಲ್ಲ. ಬದಲಾಗಬೇಕಿರುವುದು ಸೃಷ್ಟಿಯನ್ನು ನೋಡುವ ನಮ್ಮ ದೃಷ್ಟಿ. ಒಬ್ಬ ಗುರುಗಳು ಇದ್ದರು. ಒಂದು ದಿನ ಅವರು ಗಿಡದ ಬಳಿ ಕುಳಿತಿದ್ದರು. ಒಬ್ಬ ಮಹಾರಾಜ ಅವರ ಬಳಿಗೆ ಬಂದ; ‘ನೀವು ಬಹಳ ದೊಡ್ಡ ಯೋಗಿಗಳು ಎಂದು ನಾನು ಕೇಳಿದ್ದೇನೆ. ನಿಮ್ಮಲ್ಲಿ ಯಾವ ಆಸೆ, ಅಪೇಕ್ಷೆಗಳೂ ಇಲ್ಲ. ಬಹಳ ದಿನಗಳಿಂದ ಇಲ್ಲಿಯೇ ಇದ್ದೀರಿ. ನಿಮ್ಮಂತಹವರು ನಮ್ಮ ರಾಜ್ಯದ ರಾಜಗುರು ಆಗಬೇಕು. ನೀವು ನಮ್ಮ ರಾಜ್ಯಕ್ಕೆ ಬನ್ನಿರಿ’ ಎಂದು ವಿನಂತಿಸಿದ. ತಕ್ಷಣವೇ ಒಪ್ಪಿಕೊಂಡ ಗುರುಗಳು ‘ನಡಿ ಹೋಗೋಣ’ ಎಂದರು. ಗುರುಗಳು ಅರಮನೆಗೆ ಹೋದರು. ಅವರನ್ನು ಒಂದು ದೊಡ್ಡ ಕೋಣೆಯಲ್ಲಿ ಉಳಿಸಿದರು. ಹತ್ತಾರು ಆಳುಗಳನ್ನು ನಿಯೋಜಿಸಿದರು. ಗುರುಗಳು ಏನು ಕೇಳಿದರೂ ಕೊಡಬೇಕು ಎಂದು ರಾಜ ಆದೇಶಿಸಿದ. ತಿಂಗಳಾನುಗಟ್ಟಲೆ ಗುರುಗಳು ಅಲ್ಲಿಯೇ ಉಳಿದರು. ರಾಜನಿಗೆ ಸಂಶಯ ಬಂತು. ‘ದಿನಪೂರ್ತಿ ತಿಂದು ಉಂಡುಕೊಂಡು ಗುರುಗಳು ಅರಾಂ ಇದ್ದಾರೆ. ಮತ್ತೆ ನನಗೂ ಇವರಿಗೂ ಏನು ವ್ಯತ್ಯಾಸ’ ಎಂಬ ಪ್ರಶ್ನೆ ಮೂಡಿತು. ನೇರವಾಗಿ ಗುರುಗಳ ಬಳಿಗೆ ಹೋಗಿ ‘ಗುರುಗಳೇ, ನೀವು ರಾಜವಾಡೆಯಲ್ಲಿ ಇದ್ದೀರಿ. ನಮ್ಮ ಹಾಗೆ ರಾಜಾನ್ನ ಊಟ ಮಾಡುತ್ತಿದ್ದೀರಿ. ಮತ್ತೆ ನಮಗೂ ನಿಮಗೂ ಏನು ವ್ಯತ್ಯಾಸ ಎಂದು ಹೇಳಿ’ ಎಂದು ಕೇಳಿದ. ಅದಕ್ಕೆ ಗುರುಗಳು ‘ಬೆಳಿಗ್ಗೆ 6 ಗಂಟೆಗೆ ಬಾ ಹೇಳುತ್ತೀನಿ’ ಎಂದರು.
ರಾಜ ಬೆಳಿಗ್ಗೆ ಬಂದ. ಗುರುಗಳು ಇವನನ್ನು ಕರೆದುಕೊಂಡು ಹೊರಟರು. ಹಾಗೆಯೇ ಸುಮಾರು 10 ಕಿಮೀ ನಡೆದರು. ರಾಜ ಮತ್ತೆ ಅದನ್ನೇ ಕೇಳಿದ; ‘ನಮಗೂ ನಿಮಗೂ ಏನು ವ್ಯತ್ಯಾಸ’ ಅಂತ. ಗುರುಗಳು ಏನೂ ಹೇಳದೇ ಹಾಗೆಯೇ ನಡೆಯುತ್ತಿದ್ದರು. ಮಧ್ಯಾಹ್ನ ಆಯಿತು. ಸಂಜೆ ಆಯಿತು. ನಡೆಯುತ್ತಲೇ ಇದ್ದರು. ಸಂಜೆ ವೇಳೆಗೆ ರಾಜ ಗುರುಗಳ ಕೈ ಹಿಡಿದು ‘ನನ್ನ ಪ್ರಶ್ನೆಗೆ ಉತ್ತರ ಹೇಳಿ’ ಎಂದು ಕೇಳಿದ. ‘ಇನ್ನೂ ಎಷ್ಟು ದೂರ ಹೋಗೋದು? ಬೆಳಿಗ್ಗೆ 6 ಗಂಟೆಗೆ ಹೊರಟಿದ್ದೀವಿ. ಈಗ ಸಂಜೆ 6 ಗಂಟೆ ಆಯಿತು’ ಎಂದ ರಾಜ. ಅದಕ್ಕೆ ಗುರುಗಳು ‘ಹೀಗೆಯೇ ಹೋಗೋಣ’ ಎಂದರು. ‘ಹಾಗೆ ಹೋಗಲು ಆಗಲ್ಲ. ನಾನು ರಾಜ, ನನಗೆ ಒಂದು ರಾಜ್ಯ ಇದೆ. ಒಂದು ವ್ಯವಸ್ಥೆ ಇದೆ. ಪ್ರಜೆಗಳು ಇದ್ದಾರೆ. ಹೆಂಡತಿ ಮಕ್ಕಳೂ ಇದ್ದಾರೆ. ಅವರನ್ನೆಲ್ಲಾ ನೋಡಿಕೋ ಬೇಕು’ ಎಂದು ಹೇಳಿದ ರಾಜ. ಆಗ ಗುರುಗಳು ‘ಇದೇ ವ್ಯತ್ಯಾಸ ನೋಡು, ನೀನು ಹಿಂದೆ ನೋಡತಿ. ನಾನು ಮುಂದೆ ನೋಡಕೋತ ಹೋಗ್ತೀನಿ. ನಿನಗೆ ನಂದು ಎನ್ನುವುದು ಹಿಡಿದುಕೊಂಡಿದೆ. ನನಗೆ ನಂದು ಎನ್ನುವುದು ಅಳಿಸಿ ಹೋಗಿದೆ. ಇಷ್ಟೇ ವ್ಯತ್ಯಾಸ ನೋಡು’ ಎಂದರು.
ಸಂತರಿಗೂ ನಮಗೂ ಏನು ವ್ಯತ್ಯಾಸ ಎಂದರೆ, ಅವರು ಭೂಮಿ ಮೇಲೆ ಇದ್ದಾರೆ. ಆದರೆ ನಂದು ಎನ್ನುವುದನ್ನು ಬಿಟ್ಟಿದ್ದಾರೆ. ಅದಕ್ಕೆ ಅವರು ಅರಾಂ ಇದ್ದಾರೆ. ನಾವೂ ಹಾಗೆಯೇ ನನ್ನದು ಎನ್ನುವುದನ್ನು ತಲೆಯಿಂದ ತೆಗೆದು ಹಾಕಬೇಕು. ಮನೆಯಲ್ಲಿ ಜಗಳ ಯಾಕೆ ಆಗಿದೆ ಹೇಳಿ. ಮನೆ ರಣರಂಗ ಆಗಿದ್ದು ಯಾತಕ್ಕೆ ಎಂದರೆ, ನಂದು ಎನ್ನುವುದರಿಂದಲೇ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.