ADVERTISEMENT

ನುಡಿ ಬೆಳಗು | ಮನಸ್ಸಿನ ಕಾಯಿಲೆ!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 7 ಜನವರಿ 2025, 23:30 IST
Last Updated 7 ಜನವರಿ 2025, 23:30 IST
   

12ನೇ ಶತಮಾನದಲ್ಲಿ ಶರಣೆಯೊಬ್ಬಳು ಒಂದು ಸುಂದರ ಮಾತು ಬರೆಯುತ್ತಾಳೆ. ‘ಘನವ ಕಾಂಬುದಕ್ಕೆ ಈ ಮನವು ಎಂತಾಗಬೇಕೆಂದೊಡೆ, ಗಾಳಿ ಬೀಸದ ಜಲದಂತೆ, ಮೋಡ ಮುಸುಕದ ಸೂರ್ಯನಂತೆ, ಬೆಳಗಿದ ದರ್ಪಣದಂತೆ, ಮನ ನಿರ್ಮಲವಾದಲ್ಲದೆ ಘನವ ಕಾಣಬಾರದು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ’ ಎಂದು.

ಏನನ್ನೇ ಸಾಧಿಸಬೇಕು ಅಂದರ ಮನಸ್ಸು ಸ್ವಚ್ಛವಾಗಿರಬೇಕು. ಮನದಲ್ಲಿಯೂ ಮಲ, ವಿಕ್ಷೇಪ, ಆವರಣ ಎಂಬ ದೋಷಗಳಿವೆ. ಈ ದೋಷಗಳು ಇರುವುದರಿಂದ ನಮಗೆ ದುಃಖ, ಅಹಂಕಾರ ಬಂದೈತಿ. ಮಲ ದೋಷ ಎಂದರೆ ಒಳ್ಳೇದು ಅನ್ನೋದು ಗೊತ್ತಿದ್ದರೂ ಅದನ್ನು ಮಾಡಲು ಬಿಡುವುದಿಲ್ಲ. ಕೆಟ್ಟದ್ದು ಅಂತಾ ಗೊತ್ತಿದ್ರೂ ಅದನ್ನು ಮಾಡಿಸುತ್ತದೆ. ಉದಾಹರಣೆಗೆ ಸಿಗರೇಟ್ ಸೇದುವ ಚಟ. ‌ಸಿಗರೇಟ್ ಪ್ಯಾಕಿನ ಮೇಲೆ ‘ಆರೋಗ್ಯಕ್ಕೆ ಹಾನಿಕರ’ ಎಂದು ಬರೆದಿದ್ದರೂ ಅದನ್ನು ಓದಿಯೂ ಸೇದುತ್ತಾನೆ. ಇದು ಮಲ ದೋಷ. ಮನೆಯಲ್ಲಿ ಹೆಂಡತಿ ‘ಸಿಗರೇಟ್ ಸೇದಬ್ಯಾಡಿ’ ಅಂತ ಹೇಳಿದರೆ ‘ಬಿಟ್ಟರೆ ನಿನ್ನ ಬಿಟ್ಟೇನು, ಇದನ್ನು ಬಿಡಲ್ಲ’ ಅಂತಾನೆ ಇವ. ಅದನ್ನು ನೋಡಿ ಸಿಗರೇಟ್ ಹೇಳತೈತಿ, ‘ನೀನೂ ಅಗ್ನಿಸಾಕ್ಷಿಯಾಗೇ ಬಂದಿ, ನಾನೂ ಅಗ್ನಿಸಾಕ್ಷಿಯಾಗೇ ಬಂದಿದ್ದೀನಿ. ವ್ಯತ್ಯಾಸ ಇಷ್ಟೆ ನೀನು ಅಗ್ನಿಸಾಕ್ಷಿಯಾಗಿ ಇವನ ಜೊತೆ ಕೂಡಿರಲು ಬಂದಿದ್ದಿ. ನಾನು ಕರಕೊಂಡು ಹೋಗಾಕೆ ಬಂದೀನಿ’ ಅಂತ.‌ ವಿದ್ಯಾರ್ಥಿಗಳಿಗೆ ಮೊಬೈಲ್ ಹಿಡಿದರೆ ಏನಾಗುತೈತಿ, ಪುಸ್ತಕ ಹಿಡಿದರೆ ಏನಾಗುತೈತಿ ಅಂತಾ ಗೊತ್ತೈತಿ. ಆದರೂ ಮೊಬೈಲ್ ಹಿಡಿತಾರ. ಇದು ಮಲದೋಷ.

ಸಂತ ಸಿದ್ಧಾರೂಢರು ಪ್ರತಿ ದಿನ ಪ್ರವಚನ ಮಾಡುತ್ತಿದ್ದರು. ಧರ್ಮ, ದೇವರು, ಮೋಕ್ಷ ಅಂತ ಷಟ್ ಶಾಸ್ತ್ರಗಳನ್ನೂ ಹೇಳುತ್ತಿದ್ದರು. ಒಂದು ದಿನ ನಾಗಲಿಂಗಪ್ಪ ಅವಧೂತರು ಬಂದರು. ‘ಇವತ್ತು ನಾನೇ ಪ್ರವಚನ ಮಾಡ್ತೀನಿ’ ‌ಅಂದರು. ಅದಕ್ಕೆ ಸಿದ್ಧಾರೂಢರು ಒಪ್ಪಿದರು. ನಾಗಲಿಂಗಪ್ಪನವರು ಒಂದು ಗಂಟೆ ಪ್ರವಚನ ಮಾಡಿ ಅಲ್ಲಿದ್ದವರನ್ನು ಬೈದರು. ಪ್ರವಚನದ ತುಂಬಾ ಬರೀ ಬೈಗುಳ ಅಷ್ಟೆ. ಮತ್ತೆ ಮಾರನೇ ದಿನವೂ ನಾಗಲಿಂಗಪ್ಪ ಬಂದು ತಾವೇ ಪ್ರವಚನ ಮಾಡುವುದಾಗಿ ಹೇಳಿದರು. ಅದಕ್ಕೆ ಭಕ್ತರು ವಿರೋಧ ಮಾಡಿದಾಗ, ‘ಸಿದ್ಧಾರೂಢರು ಎಷ್ಟು ದಿನದಿಂದ ಪ್ರವಚನ ಮಾಡುತ್ತಿದ್ದಾರೆ’ ಎಂದು ನಾಗಲಿಂಗಪ್ಪ ಕೇಳಿದರು. ‘ಹತ್ತು ವರ್ಷಗಳಿಂದ’ ಎಂದರು ಭಕ್ತರು. ‘ಅವರು ಮಾಡಿದ ಪ್ರವಚನ ನಿಮ್ಮ ನೆನಪಲ್ಲಿ ಐತೇನು’ ಎಂದು ಪ್ರಶ್ನಿಸಿದಾಗ ‘ಇಲ್ರೀ, ದೇವರು, ಧರ್ಮ, ಮೋಕ್ಷ ಅಂತ ಏನೇನೋ ಹೇಳುತ್ತಿದ್ದರು’ ಎಂದು ಉತ್ತರಿಸಿದರು ಭಕ್ತರು.

ADVERTISEMENT

‘ಮತ್ತೆ ನಾನು ನಿನ್ನೆ ಮಾಡಿದ ಪ್ರವಚನ ನೆನಪಿನಲ್ಲಿ ಐತೇನು’ ಎಂದು ಕೇಳಿದರು ನಾಗಲಿಂಗಪ್ಪ. ‘ಅಯ್ಯೋ ಅದು ಪ್ರವಚನ ಏನು? ಬರೀ ಬೈಗುಳ. ಏನೇನು ಬೈದಿರಿ ನೀವು’ ಎಂದು ಹೇಳಿ ಎಲ್ಲ ಬೈಗುಳಗಳನ್ನೂ ಪುನರುಚ್ಚರಿಸಿದರು. ಅದನ್ನು ಕೇಳಿದ ಅವಧೂತರು, ‘ಇದೇ ಕಾರಣಕ್ಕೆ ನಿಮ್ಮ ಮನೆಯಲ್ಲಿ ದ್ವೇಷ, ಅಸೂಯೆ, ಮನಸ್ತಾಪ ಎಲ್ಲಾ ತುಂಬ್ಯಾವ. ಸಿದ್ಧಾರೂಢರು ಹತ್ತು ವರ್ಷ ಪ್ರವಚನ ಮಾಡಿದರೂ ಅದು ನಿಮ್ಮ ನೆನಪಿನಲ್ಲಿ ಉಳಿಯಲಿಲ್ಲ. ಆದರೆ, ನಿನ್ನೆ ನಾನು ಒಂದು ಗಂಟೆ ಬೈದಿದ್ದು ಸಂಪೂರ್ಣ ನೆನಪೈತಿ ಅಂದರೆ ನಿಮ್ಮ ಅವನತಿಗೆ ಇದೇ ಕಾರಣ’ ಎಂದರು. ನಮಗೆ ಕೆಟ್ಟದ್ದು ನೆನಪಿರತೈತಿ. ಒಳ್ಳೇದು ನೆನಪಿರಲ್ಲ. ಇದು ಮನಸ್ಸಿನ ಕಾಯಿಲೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.