ADVERTISEMENT

ನುಡಿ ಬೆಳಗು: ಪ್ರಾಮಾಣಿಕತೆಯೇ ಪ್ರಾರ್ಥನೆಯಾಗಬೇಕು

ಡಾ.ದಾದಾಪೀರ್ ನವಿಲೇಹಾಳ್
Published 8 ಫೆಬ್ರುವರಿ 2026, 23:30 IST
Last Updated 8 ಫೆಬ್ರುವರಿ 2026, 23:30 IST
   

ಪವಿತ್ರ ಮೆಕ್ಕಾ ನಗರದ ಅಲ್ ಹರಾಮ್ ಮಸೀದಿಯ ಕಡೆ ಹೊರಟರೆ ಲಕ್ಷಾಂತರ ಜನರ ಲಗುಬಗೆಯ ಓಡಾಟದ ನಡುವೆ ಸಾವಿರಾರು ಪಾರಿವಾಳಗಳು ಹಾರಿ ಬರುತ್ತವೆ. ಭಕ್ತಿ, ಶ್ರದ್ಧೆಯ ಜೊತೆಯಲ್ಲಿ ಹುಟ್ಟಿದ ಧಾವಂತದಲ್ಲಿ ಜನರು ಮಸೀದಿಯ ಕಡೆ ಧಾವಿಸಿದರೆ ಪ್ಲಾಸ್ಟಿಕ್ ಕವರ್‌ಗಳಲ್ಲಿ ಗೋಧಿ, ಮೆಕ್ಕೆಜೋಳವನ್ನು ಕಟ್ಟಿ ಮಾರುವವರು ‘ಕಬೂತರ್ ಧಾನ, ದೋ ರಿಯಾಲ್, ದೋ ರಿಯಾಲ್ ' ಎಂದು ಕೂಗುತ್ತ ಕಾಣಸಿಗುತ್ತಾರೆ. ಪಾರಿವಾಳಗಳನ್ನು ಪ್ರವಾದಿಯವರು ಅಪಾರ ಪ್ರೀತಿಯಿಂದ ಸಲಹುತ್ತಿದ್ದರು ಎಂಬುದನ್ನು ಕೇಳಿ ಭಕ್ತಪರವಶರಾಗುವ ಕೆಲವರು ಕಬೂತರ್ ಧಾನವನ್ನು ಖರೀದಿಸಿ ಪಾರಿವಾಳಗಳಿಗೆ ತಿನ್ನಿಸುತ್ತಾ ಹೊರಡುತ್ತಾರೆ. ಪಾರಿವಾಳಗಳು ಹಾರಿ ಬಂದು ಕಾಳು ತಿಂದು ಹೋದ ಜಾಗವನ್ನು ಕ್ಷಣಮಾತ್ರದಲ್ಲಿ ಸ್ವಚ್ಛಗೊಳಿಸುತ್ತಲೇ ಇರುವ ಕಾರ್ಮಿಕರ ಕರ್ತವ್ಯ ಶ್ರದ್ಧೆ ದೈವಭಕ್ತರ ಪ್ರಾರ್ಥನೆಗೆ ತೋರುವ ಗೌರವದ ಭಾಗದಂತೆ ಕಾಣುತ್ತದೆ.

ಇದ್ದಕ್ಕಿದ್ದ ಹಾಗೆ ಲಕ್ಷುರಿ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬರು ಕೈಚಾಚಿ ಕಬೂತರ್ ಧಾನ ಮಾರುವ ಪುಟ್ಟ ಹುಡುಗನಿಗೆ ಎರಡು ರಿಯಾಲ್ ಕೊಟ್ಟು ಕಾಯದೆ ಹೊರಟು ಹೋದರು. ಕಬೂತರ್ ಧಾನದ ಪ್ಯಾಕೆಟ್ಟನ್ನು ಕೊಡುವುದರೊಳಗೆ ಹೋದ ಕಾರಿನ ಕಡೆ ನೋಡುತ್ತಾ ಬೇಸರಿಸಿಕೊಂಡ ಆ ಹುಡುಗ ತಕ್ಷಣ ಪ್ಯಾಕೆಟ್ಟಿನ ಕಾಳುಗಳನ್ನೆಲ್ಲಾ ಪಾರಿವಾಳಗಳಿಗೆ ಸುರಿದು ಬಿಟ್ಟು ಮಾಮೂಲಿನಂತೆ ಕಬೂತರ್ ಧಾನ ಎಂದು ಕೂಗುತ್ತಾ ಮುಂದೆ ಸಾಗಿದ. ದೈವಶ್ರದ್ಧೆಯ ತೀವ್ರ ಭಾವುಕ ಸ್ಥಿತಿಯ ಮನಸ್ಸಿಗೆ ಈ ಸಣ್ಣ ಹುಡುಗನ ದೊಡ್ಡ ವರ್ತನೆಯನ್ನು ಗಮನಿಸುವ ವ್ಯವಧಾನ ಹೇಗಿದ್ದೀತು? ಇದು ಬಿಸಿಲು ಮಳೆ ಎನ್ನದೆ ಕಷ್ಟಪಟ್ಟು ದುಡಿದು ತಿನ್ನುವವರ ದೇಶಕಾಲಾತೀತ ಪ್ರಾಮಾಣಿಕತೆ ಮತ್ತು ಧರ್ಮಶ್ರದ್ಧೆಯ ಜೀವಂತ ನಿದರ್ಶನವಾಗಿದೆ.

ಧರ್ಮ ಮತ್ತು ದೈವಶ್ರದ್ಧೆಯ ಪರಿಣಾಮಕಾರಿಯಾದ ಅನುಷ್ಠಾನಕ್ಕಾಗಿ ಕೆಲವು ಸಿರಿವಂತರು ತಮ್ಮ ಸಂಪತ್ತಿನ ಸ್ವಲ್ಪ ಭಾಗವನ್ನು ತ್ಯಾಗ ಮಾಡುವ ಔದಾರ್ಯ ತೋರಿಸುವುದು ಸಾಮಾನ್ಯ ಸಂಗತಿ. ತ್ಯಜಿಸಲು ಏನೂ ಇಲ್ಲದವರು ತಮ್ಮ ನಿಷ್ಕಲ್ಮಶವಾದ ನಡೆನುಡಿಯ ಮೂಲಕ ಧಾರ್ಮಿಕ ಶ್ರದ್ಧೆಯನ್ನು ಸ್ಥಾಪಿಸುವುದು ನಿಜಕ್ಕೂ ವಿಶೇಷ. ಇದನ್ನು ಪ್ರಾಮಾಣಿಕತೆ ಎನ್ನಿ, ಸ್ವಾಭಿಮಾನ ಎನ್ನಿ, ದೈವ ನಿಷ್ಠೆಯ ಸರಳ ಪ್ರದರ್ಶನ ಎನ್ನಿ ಅದು ಯಾವುದನ್ನೂ ನಿರಾಕರಿಸಲಾಗದ ಸತ್ಯದ ಸಾಕ್ಷಾತ್ಕಾರವಿದು. 

ADVERTISEMENT

ಕಾರಿನ ಶ್ರೀಮಂತ ಕೊಟ್ಟ ದುಡ್ಡಿನಲ್ಲಿ ಪಾರಿವಾಳಗಳ ಅನ್ನದ ಪಾಲೂ ಇದೆ. ಶ್ರೀಮಂತನಿಗೆ ಅನ್ನವು ದಯೆಯೋ ಅನುಕಂಪೆಯೋ ಆಗಿದ್ದೀತು! ಆದರೆ ಬಿಸಿಲಲ್ಲಿ ನಿತ್ಯವೂ ನಿಂತು ಧಾನ್ಯ ಮಾರುವ ಬಾಲಕನಿಗೆ ಅನ್ನವೇ ಅವನ ದುಡಿಮೆಯ ಧ್ಯಾನ. ತನಗೆ ಈ ದುಡ್ಡು ಯಾವ ಕಾರಣಕ್ಕೆ ಲಭಿಸುತ್ತಿದೆಯೋ ಅದೇ ಕಾರಣಕ್ಕೆ ಅದನ್ನು ವಿನಿಯೋಗಿಸಲಾರದೇ ಹೋದರೆ ಅದು ತನ್ನ ಅನ್ನಕ್ಕೆ ತಾನೇ ಬಗೆಯುವ ಅನ್ಯಾಯ! ಪ್ರವಾದಿಯವರ ಪ್ರಿಯ ಪಾರಿವಾಳಗಳ ಹೊಟ್ಟೆಗೆ ಹೊಡೆದು ಸ್ವಾರ್ಥ ಮೆರೆದರೆ ತಾನಿನ್ನೆಂತಹ ಧರ್ಮಿಷ್ಠ? ಇದು ಇಂತಹ ಅಸಂಖ್ಯಾತ ಜನರ ದೇಶಕಾಲಗಳನ್ನು ಮೀರಿದ ಪ್ರಾರ್ಥನೆಯ ಅಪೂರ್ವ ಸೃಷ್ಟಿ; ದುಡಿಯುವವರ ಎತ್ತರದ ನೈತಿಕತೆಯ ದ್ಯೋತಕ; ನ್ಯಾಯಯುತವಾದ ದುಡಿಮೆಯಲ್ಲಿ ದೇವರನ್ನು ಕಾಣುವವರ ಆತ್ಮದ ತವಕ.

ನಮ್ಮ ನಂಬಿಕೆಯ ದೇವರು ಜೀವಂತವಾಗಿರುವುದು ದುಡಿಯುವವರ ಎದೆಯಲ್ಲಿ! ನಮ್ಮ ಬಯಕೆಯ ಧರ್ಮ ಮತ ನಿರೀಕ್ಷೆಯ ಒಣರಾಜಕಾರಣವಲ್ಲ, ಅದು ನಿಜಕ್ಕೂ ಉಸಿರಾಡುತ್ತಿರುವುದು ಪ್ರಾಮಾಣಿಕತೆಯ ಪ್ರತಿ ಹೆಜ್ಜೆಗಳಲ್ಲಿ! ಪ್ರಾಮಾಣಿಕತೆಯೇ ನಮ್ಮ ಪ್ರಾರ್ಥನೆಯಾಗಬೇಕು. ಈ ಬಗೆಯ ಮೌಲ್ಯಗಳನ್ನು ಜೀವನದ ಜೊತೆಗೆ ಜೋಡಿಸುವುದು ಧರ್ಮವಾಗಿದೆ. ಜನರಿಂದ ಜನರನ್ನು ಬೇರ್ಪಡಿಸುವುದು ಧರ್ಮವಲ್ಲ. ಒಳಿತಿನ ಸಂಸ್ಥಾಪನೆ ಮತ್ತು ಕೆಡುಕಿನ ನಿರ್ಮೂಲನೆ ನಿಜಧರ್ಮದ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.