ADVERTISEMENT

ನುಡಿ ಬೆಳಗು: ಜ್ಞಾನ ಮಾರ್ಗ

ಡಾ.ದಾದಾಪೀರ್ ನವಿಲೇಹಾಳ್
Published 1 ಫೆಬ್ರುವರಿ 2026, 22:36 IST
Last Updated 1 ಫೆಬ್ರುವರಿ 2026, 22:36 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಬಹಳ ದಿನಗಳಿಂದ ಗುರುಗಳನ್ನು ಕೇಳಬೇಕೋ, ಬೇಡವೋ ಎಂಬ ಅಳುಕಿನಿಂದಿದ್ದ ಶಿಷ್ಯನೊಬ್ಬ ಕೊನೆಗೂ ಧೈರ್ಯ ಮಾಡಿ ಮೂರು ಪ್ರಶ್ನೆಗಳನ್ನು ಕೇಳಿಯೇ ಬಿಟ್ಟ.

ಒಂದು: ನಿಮಗಿರುವ ಕೆಟ್ಟ ಅಭ್ಯಾಸ ಯಾವುದು? ಎರಡು: ನೀವು ಮನುಷ್ಯ ದೇಹದ ಯಾವ ಅಂಗವನ್ನು ಇಷ್ಟಪಡುತ್ತೀರಿ? ಮೂರು: ನಿಜವಾದ ಜ್ಞಾನಿ ಯಾರು? ಗುರುಗಳು ಕ್ರಮವಾಗಿ ಊಟ, ಕಿವಿ ಮತ್ತು ನಾನು ಎಂದು ಉತ್ತರಿಸಿದರು.

ADVERTISEMENT

ಅವರು ಹೇಳಿದ್ದಿಷ್ಟು: ‘ಭೂಮಿಯಲ್ಲಿನ ಪ್ರತಿಯೊಂದು ಜೀವವೂ ನಿದ್ರಾಹಾರ ಮೈಥುನಗಳಿಲ್ಲದೇ ಬದುಕುವುದಿಲ್ಲ. ಅದರಲ್ಲೂ ಆಹಾರಕ್ಕಾಗಿಯೇ ಎಲ್ಲರ ನಡುವೆ ಪೈಪೋಟಿಯಿದೆ. ಮನುಷ್ಯ ಕುಲದ ಎಲ್ಲ ಬಗೆಯ ಅಸಮಾನತೆಗೆ ಅದು ಮುಖ್ಯ ಕಾರಣ. ಒಮ್ಮೆ ಯೋಚಿಸಿ ನೋಡು, ಅನ್ನದ ಅವಶ್ಯಕತೆಯೊಂದು ಇಲ್ಲದಿದ್ದರೆ ಈ ಧರಣಿ ಅದೆಷ್ಟು ಶಾಂತವಾಗಿರುತ್ತಿತ್ತು! ಸದಾ ತಳಮಳಿಸುತ್ತಿರುವ ಈ ಭುವಿಯ ಅಶಾಂತಿಗೆ ನಾನೂ ಕಾರಣನಾಗಿರುವೆನಲ್ಲಾ ಅನ್ನುವ ನಿರಪರಾಧಿ ಯಾತನೆ ನನ್ನನ್ನು ಕಾಡುತ್ತಿದೆ. ನಾನು ತಿನ್ನುವ ಅನ್ನದ ಪ್ರತಿ ಅಗುಳು ಯಾರೋ ದುಡಿದದ್ದು, ಯಾರೋ ಯೋಗ್ಯರಿಗೆ ಸಲ್ಲಬೇಕಾದದ್ದು ಅಂತ ಅನಿಸಿ ಸಂಕಟವಾಗುತ್ತದೆ. ಸಂಕಟ ಹುಟ್ಟಿಸುವ ಎಲ್ಲ ಅಭ್ಯಾಸಗಳೂ ಕೆಟ್ಟವೇ ತಾನೇ?’

‘ಮಾತು ಸೋತ ನೆಲದಲ್ಲಿ ಬದುಕಿದ್ದೇನೆ ಅಂತ ಅನಿಸಿದ ದಿನದಿಂದ ನನಗೆ ಕಿವಿಗಳೆಂದರೆ ಇಷ್ಟ. ನಾಲಗೆಯ ಸ್ವಾತಂತ್ರ್ಯವನ್ನು ಮಾತ್ರ ನೆಚ್ಚಿಕೊಂಡ ಜನ ಮತ್ತು ದೇಶ ನಂಬಿಕೆಗೆ ಯೋಗ್ಯವಲ್ಲ. ‘ಇಂದಲ್ಲಾ ನಾಳೆ ರಾಜಕುಮಾರನೊಬ್ಬ ಕುದುರೆಯೇರಿ ಬಿರುಗಾಳಿಯಂತೆ ಬರುತ್ತಾನೆ. ನಮ್ಮೆಲ್ಲರ ನೋವು ನಿವಾರಣೆಯ ಮಾಯಕಾರ ಅವನು’ ಎಂದು ಇಂತಹ ದೇಶದ ಜನರು ಕಾದು ಕುಳಿತಿರುತ್ತಾರೆ. ಅವತಾರಗಳು ಬಂದವು, ಹೋದವು. ಮಹಾತ್ಮರೂ ಬಂದರು, ಹೋದರು. ಸತ್ಯದ ಹಾದಿಯಲ್ಲಿ ಸುಳ್ಳುಗಳನ್ನು ಸುರಿಯಲಾಗುತ್ತಿದೆ. ದನಿಯಿಲ್ಲದವರ ಚರಿತ್ರೆಗೆ ಮಾತು ಬಂದ ಕೂಡಲೇ ಮಾತು ದನಿ ಕಳೆದುಕೊಳ್ಳುವ ವಿಪರ್ಯಾಸವಿದೆಯಲ್ಲಾ, ಅದು ನನ್ನ ಕಿವಿಗಳ ಸಾಮರ್ಥ್ಯವನ್ನು ನೆನಪಿಸಿತು. ಆಲಿಸುವುದು ನನ್ನ ಮನೋಬಲವನ್ನು ಇಮ್ಮಡಿಗೊಳಿಸುತ್ತದೆ. ನಮ್ಮನ್ನು ಆಳುವವರಿಗೂ ಹೀಗೇ ಆಗಿದ್ದಿದ್ದರೆ ಎಷ್ಟು ಸೊಗಸಾಗಿರುತ್ತಿತ್ತು ಅನಿಸುತ್ತದೆ’.

ಗುರುಗಳ ಮುಖದಲ್ಲಿ ಮುಗುಳುನಗೆ ಅರಳಿದಂತಾಗಿ ಶಿಷ್ಯನನ್ನು ತಲುಪುತ್ತಿರುವ ಸುಖ ಅನುಭವಿಸುತ್ತಿದ್ದಂತೆ ಕಂಡರು. ‘ಇಂತಹ ಸಾವಿರಾರು ಶಿಷ್ಯರು ನನ್ನನ್ನು ಒಂದರ್ಧ ಶತಮಾನದಿಂದ ಗುರುಗಳು ಎಂದು ಸಂಬೋಧಿಸುತ್ತಿದ್ದಾರೆ. ಹಾಗೆ ಕರೆಸಿಕೊಂಡ ದಿನದಿಂದ ಈವರೆಗೆ ನಾನು ಆ ಪದವಿಗೆ ಯೋಗ್ಯನೇ ಅಂತ ಪ್ರಶ್ನಿಸಿಕೊಳ್ಳುತ್ತಾ ಉತ್ತರ ಕಂಡುಕೊಳ್ಳಲು ಹೆಣಗಾಡಿದ್ದೇನೆ. ಯಾರೂ ಕೇಳದ ಪ್ರಶ್ನೆಯನ್ನು ಈ ಹುಡುಗ ಕೇಳಿಬಿಟ್ಟ. ಅಷ್ಟು ಮಾತ್ರವಲ್ಲ ಇತರರು ನಾಚಿಕೊಂಡು ಅಣಕಿಸುವಂತಹ ಉತ್ತರವನ್ನು ನಾನು ಆತ್ಮವಿಶ್ವಾಸದಿಂದಲೇ ಕೊಟ್ಟುಬಿಟ್ಟೆ. ಹೌದು, ನಾನು ಜ್ಞಾನಿ. ಕೇವಲ ಸಾಮಾನ್ಯ ಜ್ಞಾನವೇ ಬುದ್ಧಿಮತ್ತೆಯ ಗುಣಮಟ್ಟವನ್ನು ಅಳೆಯುವ ಮಾನದಂಡವಾಗಿರುವ ವರ್ತಮಾನದಲ್ಲಿ ಇತ್ತ ಲೌಕಿಕವಲ್ಲದ, ಅತ್ತ ಅಲೌಕಿಕವೂ ಅಲ್ಲದ ಉತ್ತರವೊಂದರಿಂದ ನಾನು ಹೊಸದೇನನ್ನು ಹೇಳಹೊರಟಿದ್ದೇನೆ? ನೈಜ ಜ್ಞಾನವು ವಿನಯಮಾರ್ಗದ ಪಥಿಕನನ್ನು ಹಿಂಬಾಲಿಸುತ್ತದೆ. ಎಲ್ಲ ಬಗೆಯ ಜ್ಞಾನ ಶಿಸ್ತು ಮತ್ತು ಕೌಶಲಗಳ ಮಹತ್ವವನ್ನು ಗುರುತಿಸಿ ಗೌರವಿಸುವುದು ಜ್ಞಾನಿಯ ಗುಣ. ಪ್ರಾಣಿಯ ಚರ್ಮವನ್ನು ಹದಗೊಳಿಸಿ ತನಗೆ ಬೇಕಾದ ಆಕಾರಕ್ಕೆ ಹೊಂದಿಸಿಕೊಂಡು ಬಳಸಿದವನು ಈ ನೆಲದ ಮೊದಲ ಕಲಾವಿದ ಮತ್ತು ವಿಜ್ಞಾನಿ. ಗೊತ್ತಿಲ್ಲದ್ದನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತ ಕಲಿಯುತ್ತಾ ಇರುವವನು ಜ್ಞಾನಿ’.

ಹಣತೆ ಹಿಡಿದು ನಡೆಯುತ್ತಿದ್ದ ತರುಣಿಯನ್ನು ತಡೆದು ‘ಎಲ್ಲಿಂದ ಬಂತು ಈ ಬೆಳಕು?’ ಎಂದು ಕೇಳಿದೆ. ಆಕೆ ಫಕ್ಕನೆ ದೀಪವನ್ನು ನಂದಿಸಿ ‘ಎಲ್ಲಿ ಹೋಯಿತು ಈ ಬೆಳಕು?’ ಅಂದಳು. ಆ ಬೆಳಕು ಎಲ್ಲಿ ಎಂದು ಯೋಚಿಸುತ್ತಾ ಶಿಷ್ಯ ತಾನೇ ಗುರುವಾದ. ಆಗಲೂ ಗುರುಗಳು ಸುಮ್ಮನಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.