
ಜನನಿಬಿಡ ರಸ್ತೆಯಲ್ಲಿ ಕೂತ ವೃದ್ಧ ಭಿಕ್ಷುಕ ಹುಟ್ಟಿನಿಂದಲೂ ಅಂಧ. ಹೊಟ್ಟೆ ಹೊರುವುದೇ ನಿತ್ಯದ ಪ್ರಶ್ನೆ. ಹಗಲು ಮತ್ತು ರಾತ್ರಿಗಳ ಪರಿವೆಯೇ ಇರದ ಅವನ ಬಾಳಿನಲ್ಲಿ ಶಬ್ದ ಮತ್ತು ವಾಸನೆಗಳೇ ಪ್ರಚಂಡ ಶಕ್ತಿಗಳು. ರಸ್ತೆಯಲ್ಲಿ ಒಂದು ಬೋರ್ಡನ್ನು ಇಟ್ಟುಕೊಂಡೇ ಹೊಟ್ಟೆ ಹೊರೆಯುವಿಕೆ; ‘ನಾನು ಅಂಧ. ದಯವಿಟ್ಟು ನನಗೆ ಸಹಾಯ ಮಾಡಿ’. ದಾರಿಹೋಕರೆಲ್ಲ ಒಂದಿಷ್ಟು ಕಾಸನ್ನು ಅವನ ಬಟ್ಟಲಿಗೆ ಹಾಕಿ ಸಾಗುತ್ತಿದ್ದರು. ಬಹುತೇಕರು ಅನುಕೂಲಸ್ಥರಿದ್ದರೂ ಅಸಡ್ಡೆ. ಒಂದು ಕಾಸನ್ನೂ ಹಾಕುತ್ತಿರಲಿಲ್ಲ. ಇಡೀ ದಿನ ಬಿಸಿಲು ಮಳೆ ಚಳಿಗೆ ಕೂತರೂ ಸಿಗುತ್ತಿದ್ದ ಭಿಕ್ಷೆ ತೀರಾ ನಿರಾಶಾದಾಯಕವೇ. ಮತ್ತದೇ ದಿನಚರಿ, ಮತ್ತದೇ ಜನರ ಮನೋಭಾವ.
ಈ ಬೆಳಗು ಒಂದು ವಿಸ್ಮಯವನ್ನೇ ಹುಟ್ಟುಹಾಕಿತು. ನಾಲ್ಕಾರು ದಿನಗಳಿಂದ ಎಲ್ಲವನ್ನೂ ದೂರದ ಅಂಗಡಿಯಿಂದಲೇ ಗಮನಿಸುತ್ತಿದ್ದ ಯುವಕನೊಬ್ಬ ಆ ವೃದ್ಧನ ಬಳಿ ಬಂದು ಅವನಿಗೆ ಅರಿವಿಲ್ಲದೆಯೇ ಅದೇ ಬೋರ್ಡಿನ ಮೇಲೆ ಬರೆದಿದ್ದ ‘ನಾನು ಅಂಧ. ದಯವಿಟ್ಟು ನನಗೆ ಸಹಾಯ ಮಾಡಿ’ ಎಂಬ ವಾಕ್ಯವನ್ನು ಅಳಿಸಿ ಅದರ ಮೇಲೆ ಹೀಗೆ ಬರೆದು ಬದಲಾಯಿಸಿ ಹೋದ: ‘ಈ ಲೋಕ ಅದೆಷ್ಟು ಸುಂದರವಾಗಿದೆ. ಇದನ್ನು ನೋಡುವ ಭಾಗ್ಯ ನನಗೆ ಇಲ್ಲ’.
ಈ ಬರಹವನ್ನು ಓದಿಕೊಂಡು ಸ್ವಲ್ಪ ನಿಂತು ಹೋಗುವ ಜನರೆಲ್ಲರೂ ತಮಗೆ ಆದಷ್ಟು ಹಣವನ್ನು ವೃದ್ಧನ ಬಟ್ಟಲಿಗೆ ಹಾಕುತ್ತ ಸಾಗಿದರು. ಸಂಜೆ ಒಳಗೆ ಬಟ್ಟಲು ತುಂಬಿ ನಾಣ್ಯಗಳು ಹೊರಕ್ಕೆ ಬಿದ್ದವು. ಬಟ್ಟಲ ಸುತ್ತಲೂ ಚೆಲ್ಲಿದ ನಾಣ್ಯ, ನೋಟುಗಳು. ವೃದ್ಧನಿಗೆ ಅಚ್ಚರಿ. ಇದನ್ನು ಬರೆದ ಯುವಕ ಮತ್ತೆ ಅವನ ಬಳಿ ಬಂದು ಸಮಾಧಾನದ ಮಾತಾಡಿ ತಾನು ಮಾಡಿದ ಈ ಬದಲಾವಣೆ ಕುರಿತು ಹೇಳಿದ. ಜೀವನದ ಬಗೆಗಿನ ಒಂದು ದೃಷ್ಟಿಕೋನ ಲೋಕವನ್ನು ನೋಡುವ ಕ್ರಮವನ್ನೇ ಬದಲಾಯಿಸಬಹುದು.
ತಾನು ಅಂಧನಾದರೂ ತನಗೆ ಸಹಾಯ ಮಾಡದ ಜನರ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ ವೃದ್ಧನ ಆಲೋಚನೆಯನ್ನೇ ಬದಲಾಯಿಸಿ ಭರವಸೆಯನ್ನು ಕೊಟ್ಟ ವಾಖ್ಯಾನವಿದು. ಲೋಕ ಸುಂದರ ಎಂಬ ಮಾತು ಓದುವ ಜನರಲ್ಲೂ ಹುಟ್ಟಿಸಿದ ಭಾವ ಮತ್ತು ಲೋಕವನ್ನು ಕಾಣದೆ ಇದ್ದರೂ ಲೋಕದ ಬಗ್ಗೆ ಆ ವೃದ್ಧನಿಗೆ ಇದ್ದ ಅಭಿಮಾನ ವಿಶ್ವಾಸಕ್ಕೆ ಜನ ಪುಳಕಗೊಂಡ ಬಗೆ ಇದು. ಈ ಲೋಕದ ಸೌಂದರ್ಯ ನಮ್ಮ ನಮ್ಮ ಪ್ರತಿಕ್ರಿಯೆಗಳನ್ನು ಅವಲಂಬಿಸಿದೆ. ವೃದ್ಧ ಕಂಡನೋ ಕಾಣನೋ ಅದು ಬೇರೆ ಮಾತು. ಲೋಕವನ್ನು ಸುಂದರಗೊಳಿಸುವಲ್ಲಿ ಸಹಾನುಭೂತಿಯ ಪಾತ್ರದ ಕುರಿತ ಎಚ್ಚರ ಇಲ್ಲಿದೆ. ಒಂದೇ ಒಂದು ವಾಕ್ಯ ಅದೆಷ್ಟು ದಾರಿಹೋಕರ ಮನದಲ್ಲಿ ಖುಷಿಯನ್ನು ತಂದಿದೆ ನೋಡಿ. ಒಂದು ಒಳ್ಳೆಯ ಮಾತು, ಒಂದು ಒಳ್ಳೆಯ ಪ್ರತಿಕ್ರಿಯೆ, ಒಂದು ಒಳ್ಳೆಯ ನಡೆ ಇಡೀ ಲೋಕವನ್ನು ಸುಂದರಗೊಳಿಸಬಹುದಾದರೆ ಅದಕ್ಕೂ ಏಕೆ ಹಿಂಜರಿತ.
ಡಾ ರಾಜಕುಮಾರ್ ಅವರು ಅಭಿನಯಿಸಿದ ‘ದೇವರು ಕೊಟ್ಟ ತಂಗಿ’ ಚಿತ್ರದ ಕು.ರಾ.ಸೀತಾರಾಮ ಶಾಸ್ತ್ರಿ ಅವರು ರಚಿಸಿರುವ ‘ಈ ಲೋಕವೆಲ್ಲ ನೀನೇ ಇರುವ ಪೂಜಾ ಮಂದಿರ’ ಹಾಡೊಮ್ಮೆ ಕೇಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.