ನುಡಿ ಬೆಳಗು
ಆಫೀಸಿಗೆ ತಡವಾಯಿತೆಂದು ಗಡಿಬಿಡಿಯಲ್ಲಿ ಮೆಟ್ರೋ ಸ್ಟೇಷನ್‌ಗೆ ಬಂದ ಗೀತಾ ಅವಸರದಲ್ಲಿ ಈಗಾಗಲೇ ಇದ್ದ ಕ್ಯೂನಲ್ಲಿ ಹೋಗಿ ನಿಂತಳು. ಇನ್ನೇನು ಮೂರು ನಿಮಿಷವಿತ್ತು ಟ್ರೇನ್ ಬರಲು. ಅವಳ ಮುಂದೆ ಮೂರು ಜನ ಅವಳಂತೆಯೇ ತಡವಾದವರು ಚಡಪಡಿಕೆಯಲ್ಲಿ ಕಾಯುತ್ತಾ ನಿಂತಿದ್ದರು. ಅಷ್ಟರಲ್ಲಿ ಟಿಪ್‌ಟಾಪಾಗಿ ಡ್ರೆಸ್ ಮಾಡಿಕೊಂಡಿದ್ದ ಸುಮಾರು 25–26 ವರ್ಷ ವಯಸ್ಸಿನ ಯುವಕನೊಬ್ಬ ಕಿವಿಗೆ ಇಯರ್ ಫೋನ್ ಸಿಗಿಸಿಕೊಂಡು ಯಾರ ಜೊತೆಯೋ ಮಾತಾಡಿಕೊಂಡು ಹಿಂದಿನಿಂದ ಬಂದವನೇ ಅವಳನ್ನೂ ಸೇರಿದಂತೆ ಮುಂದಿದ್ದ ವಯಸ್ಸಾದ ವ್ಯಕ್ತಿಯನ್ನು ತಳ್ಳಿದವನು ಅದರ ಗಮನವೂ ಇಲ್ಲದವನಂತೆ ಸೀದಾ ಹೋಗಿ ಸಾಲಿನ ಮುಂದಕ್ಕೆ ನಿಂತುಬಿಟ್ಟ. ತಾನು ಮಾಡಿದ್ದು ತಪ್ಪು ಎಂಬ ಸಣ್ಣ ತಿಳುವಳಿಕೆಯೂ ಆತನ ಮುಖದ ಮೇಲಿರಲಿಲ್ಲ. ಗೀತಾ, ‘ನೋಡ್ಕೊಂಡು ಹೋಗಪ್ಪಾ’ ಎಂದಿದ್ದನ್ನು ಕೇಳಿಸಿಕೊಳ್ಳಲೂ ಇಲ್ಲ.
ಎಲ್ಲರೂ ಅಲ್ಲೇ ಮುಂದೆ ನಿಂತಿದ್ದ ಸೆಕ್ಯುರಿಟಿ ಮಹಿಳೆಯ ಕಡೆ ಅವನಿಗೆ ಬುದ್ಧಿ ಹೇಳಬಾರದೇ ಎಂಬಂತೆ ನೋಡಿದರು. ಆಕೆ ಆತನ ಬಳಿ ಹೋಗಿ ಅವನನ್ನು ನೋಡಿ ನಕ್ಕಳು. ಅವಳ ನಗು ಅದೆಷ್ಟು ಚಂದವಿತ್ತು ಅಂದರೆ ಆ ಹುಡುಗ ತಾನೂ ನಕ್ಕ. ಅವಳು ‘ಕೆಲಸಕ್ಕೆ ತಡವಾಯ್ತಾ ಸರ್’ ಅಂದಳು. ಅವನು ‘ಯಾ ಯಾ’ ಅಂದ. ‘ಏನು ಸಾಫ್ಟ್‌ವೇರ್ ಕೆಲಸಾನ, ಯಾವ ಕಂಪನಿ’ ಅಂದಳು. ಅವನು ತುಸು ಹೆಮ್ಮೆಯಿಂದ ಯಾವುದೋ ಕಂಪನಿಯ ಹೆಸರು ಹೇಳಿದ, ಇವಳು ಅಬ್ಬಾ ಎಂಬಂತೆ ಕಣ್ಣು ಅರಳಿಸಿ ನಕ್ಕಳು. ಇವರಿಗೆಲ್ಲಾ ಭಲೇ ಕೋಪ. ಬೈಯುವುದು ಬಿಟ್ಟು ಕಣಿ ಹೇಳ್ತಿದೆಯಲ್ಲ ಈ ಯಮ್ಮ ಅಂತ, ಆಕೆಯನ್ನೇ ದುರುಗುಟ್ಟಿ ನೋಡಿದರು. ಆಕೆ ಮತ್ತೆ ಕೇಳಿದಳು. ‘ಹಾಗಾದರೆ ಎಂಜಿನಿಯರಿಂಗ್ ಓದಿದ್ದೀರಿ. ತಂದೆ ತಾಯಿ ಚೆನ್ನಾಗಿ ಓದಿಸಿದ್ದಾರೆ ಅಲ್ವಾ’ ಹುಡುಗ ಜಂಬದಿಂದ ತಲೆ ಆಡಿಸಿದ. ಮತ್ತೊಮ್ಮೆ ಚಂದಗೆ ನಕ್ಕ ಅವಳು ‘ನೋಡಿ ಸರ್ ಮನೆಯ ತೊಂದರೆಗಳ ಕಾರಣ ನನಗೆ ಹೆಚ್ಚು ಓದಲು ಆಗಲೇ ಇಲ್ಲ. ಆದರೆ ಇಲ್ಲಿ ಬರೆದಿದ್ದಾರಲ್ಲ ‘ಸರತಿ ಸಾಲಿನಲ್ಲಿ ನಿಲ್ಲಿ. Stand in Queue’ ಎಂಬುದನ್ನು ಓದುವಷ್ಟು ಕಲಿತಿದ್ದೇನೆ ಸರ್. ಅದನ್ನು ಅಚ್ಚುಕಟ್ಟಾಗಿ ಪಾಲಿಸ್ತೀನಿ ಸರ್’ ಎಂದಳು ನಗುನಗುತ್ತಲೇ. ಆ ಹುಡುಗ ತೆಪ್ಪಗೆ ನಗುತ್ತಾ ಸರತಿ ಸಾಲಿಗೆ ಬಂದು ನಿಂತ.
ಎಲ್ಲಾ ಸಮಯದಲ್ಲೂ ದನಿ ಎತ್ತರಿಸಿ, ಕಿರುಚಿಯೇ ವಿಷಯವನ್ನು ಅರ್ಥ ಮಾಡಿಸಬೇಕಿಲ್ಲ. ಎಲ್ಲಾ ಮಾತುಗಳೂ ಕೋಪದಲ್ಲೇ ಕೊನೆಯಾಗಬೇಕಿಲ್ಲ. ಬಹಳ ತಣ್ಣಗೆಯೂ ನಮ್ಮ ವಿಚಾರಗಳನ್ನು ದಾಟಿಸಬಹುದು ಅನ್ನೋದು ಇವತ್ತಿನ ಕೂಗುಮಾರಿ ಕಾಲದಲ್ಲಿ ನಾವು ಕಲಿಯಬೇಕಾದ ವಿಷಯ ಅಲ್ವಾ?
ತಿದ್ದುಪಡಿ: ‘ಪ್ರಜಾವಾಣಿ’ಯ ಗುರುವಾರದ (ಜೂನ್ 12) ಸಂಚಿಕೆಯಲ್ಲಿ ‘ನುಡಿ ಬೆಳಗು’ ಅಂಕಣದಲ್ಲಿ ‘ಸಹಜ ಪ್ರೀತಿ’ ಬರಹ ಪ್ರಕಟವಾಗಿದೆ. ಅದನ್ನು ಬರೆದವರು ದೀಪಾ ಹಿರೇಗುತ್ತಿ ಎಂದು ಮುದ್ರಿತವಾಗಿದೆ. ಆದರೆ, ಅದನ್ನು ಬರೆದವರು ಪಿ.ಚಂದ್ರಿಕಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.