ADVERTISEMENT

ನುಡಿ ಬೆಳಗು | ಹದವರಿತು ಇಂದ್ರಿಯ ಬಳಸಬೇಕು!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 2 ಏಪ್ರಿಲ್ 2025, 0:34 IST
Last Updated 2 ಏಪ್ರಿಲ್ 2025, 0:34 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ನಾವು ವಾಸಿಸುವ ಈ ಭೂಮಿ ಶಕ್ತಿಕೇಂದ್ರ. ಇಲ್ಲಿ ಒಂದು ಶಕ್ತಿಯ ಸೆಳೆತ ಇದೆ; ವಸ್ತು ವಸ್ತುಗಳ ಮಧ್ಯೆ, ವಸ್ತು ವ್ಯಕ್ತಿಗಳ ಮಧ್ಯೆ, ವ್ಯಕ್ತಿ ವ್ಯಕ್ತಿಗಳ ಮಧ್ಯೆ ಒಂದು ಶಕ್ತಿಯ ಸೆಳೆತ ಕಾಣುತ್ತದೆ. ಆ ಸೆಳೆತಕ್ಕೆ ನಾವು ಆಕರ್ಷಣೆ ಎಂದು ಕರೆಯುತ್ತೇವೆ. ಸೂರ್ಯನ ಸುತ್ತ ಭೂಮಿ ತಿರುಗುತ್ತಿದೆ. ಭೂಮಿ ಮತ್ತು ಸೂರ್ಯನ ಮಧ್ಯೆ ಒಂದು ಆಕರ್ಷಣೆ ಇದೆ. ಅದಕ್ಕೆ ಭೂಮಿ ಸೂರ್ಯನ ಸುತ್ತವೇ ತಿರುಗುತ್ತಿದೆ. ಭೂಮಿ ಕಾಣುತ್ತದೆ, ಸೂರ್ಯನೂ ಕಾಣುತ್ತಾನೆ. ಆದರೆ ಭೂಮಿ ಮತ್ತು ಸೂರ್ಯನ ನಡುವೆ ಇರುವ ಆಕರ್ಷಣೆಯ ಶಕ್ತಿ ಕಾಣುವುದಿಲ್ಲ. ಯಾವುದೇ ವಸ್ತುವನ್ನು ಮೇಲೆಕ್ಕೆ ಎಸೆದರೆ ಅದು ಕೆಳಕ್ಕೆ ಬೀಳುತ್ತದೆ. ಯಾಕೆಂದರೆ, ಭೂಮಿಗೆ ಗುರುತ್ವಾಕರ್ಷಣೆ ಶಕ್ತಿ ಇದೆ. ದೀಪದ ಹುಳುಗಳೂ ಹಾಗೇ. ದೀಪಕ್ಕೆ ಬಂದು ಮುತ್ತು ಕೊಟ್ಟು ಸುಟ್ಟು ಬೀಳುತ್ತವೆ. ದೀಪದ ರೂಪಕ್ಕೆ ಮರುಳಾಗಿ ದೀಪಕ್ಕೆ ಮುತ್ತಿಡುತ್ತವೆ. ಅದಕ್ಕೇನು ರುಚಿಯೂ ಇಲ್ಲ, ವಾಸನೆಯೂ ಇಲ್ಲ. ಆದರೂ ದೀಪಕ್ಕೆ ಮುತ್ತಿಕ್ಕುತ್ತವೆ. ಅಂದರೆ ದೀಪಕ್ಕೂ ಒಂದು ಆಕರ್ಷಣೆಯ ಶಕ್ತಿ ಇದೆ.

ಒಬ್ಬ ಬೇಟೆಗಾರ ಬಲೆ ಬೀಸಿದ. ಅದರ ನಡುವೆ ಒಂದಿಷ್ಟು ಕಾಳುಗಳನ್ನು ಬಿಸಾಕಿದ. ಮರದ ಮೇಲೆ ಇದ್ದ ಹಕ್ಕಿಯೊಂದು ಅದರಿಂದ ಆಕರ್ಷಿತವಾಯಿತು. ಆಗ ಮುದಿ ಪಕ್ಷಿ ಆ ಯುವ ಪಕ್ಷಿಗೆ ‘ಕಾಳು ತಿನ್ನಲು ಹೋಗಬೇಡ. ಹೋದರೆ ಬಲೆಯಲ್ಲಿ ಸಿಕ್ಕಿ ಬೀಳುತ್ತಿ. ಇಲ್ಲೇ ಮರದಲ್ಲಿ ಬೇಕಾದಷ್ಟು ಹಣ್ಣುಗಳಿವೆ. ಅದನ್ನು ತಿನ್ನು. ಪಕ್ಕದಲ್ಲಿ ಬೇಕಾದಷ್ಟು ನೀರಿದೆ. ಅದನ್ನು ಕುಡಿ’ ಎಂದು ಹೇಳಿತು. ಆದರೆ, ಯುವ ಪಕ್ಷಿ ಕೇಳದೇ ಕಾಳು ತಿನ್ನಲು ಹೋಗಿ ಬಲೆಗೆ ಸಿಕ್ಕಿಬಿತ್ತು. ಇದಕ್ಕೆ ಕಾರಣ ಸೆಳೆತ. ಬರೀ ಹೊರಗಷ್ಟೇ ಆಕರ್ಷಣೆ ಇಲ್ಲ. ನಮ್ಮ ಒಳಗೂ ಆಕರ್ಷಣೆ ಇದೆ. ನಮ್ಮ ಮನಸ್ಸು ಕಣ್ಣಿನಿಂದ ಯಾವುದಾದರೂ ಒಂದು ರೂಪವನ್ನು ನೋಡಿತು ಎಂದರೆ ಆಕರ್ಷಣೆಗೆ ಒಳಗಾಗುತ್ತದೆ. ಕಿವಿಯಿಂದ ಏನಾದರೂ ಕೇಳಿದರೆ, ಚರ್ಮಕ್ಕೆ ಏನಾದರೂ ಸ್ಪರ್ಶವಾದರೂ ಆಕರ್ಷಣೆ ಶುರುವಾಗುತ್ತದೆ. ನಾಲಿಗೆ ಏನಾದರೂ ರುಚಿ ನೋಡಿತು ಎಂದರೆ, ಮತ್ತೆ ಮತ್ತೆ ಅದನ್ನೇ ತಿನ್ನಬೇಕು ಎಂಬ ಆಕರ್ಷಣೆಗೆ ಒಳಗಾಗುತ್ತದೆ.

ADVERTISEMENT

ಗಂಡು ಹೆಣ್ಣಿನ ನಡುವೆಯೂ ಆಕರ್ಷಣೆ ಇದೆ. ರಾಜ್ಯವನ್ನು ತ್ಯಜಿಸಿ ಋಷಿಯಾಗಲು ಬಂದು ತಪಸ್ಸಿಗೆ ಕುಳಿತ ವಿಶ್ವಾಮಿತ್ರ ಸುಮ್ಮನೆ ಒಂದು ಗೆಜ್ಜೆಯ ಆಕರ್ಷಣೆಗೆ ಒಳಗಾಗಿದ್ದ. ಆಕರ್ಷಣೆಯ ಕಾರಣಕ್ಕೆ ಜನ ಬೀಡಿ ಸಿಗರೇಟ್, ಕುಡಿತದ ದಾಸರಾಗುತ್ತಾರೆ. ಕಣ್ಣು, ಕಿವಿ, ನಾಲಿಗೆ, ಚರ್ಮ ಎಲ್ಲವೂ ಆಕರ್ಷಣೆಗೆ ಒಳಗಾಗುತ್ತವೆ. ನೋಡಿ, ನೋಡಿ ಕಣ್ಣಿಗೆ ಕನ್ನಡಕ ಬಂದರೂ ನೋಡುವ ಹಸಿವು ಮುಗಿಯೋದಿಲ್ಲ ಕಣ್ಣಿಗೆ, ಕಿವಿಗೆ ಮಿಶಿನ್ ಬಂದರೂ ಕೇಳುವ ಚಟ ಬಿಟ್ಟಿಲ್ಲ. ಹಲ್ಲುಗಳು ಮುರಿದು ಬಿದ್ದರೂ ತಿನ್ನಬಾರದು ಅನಿಸಿಲ್ಲ. ಅಂದ್ರೆ ಈ ಜಗತ್ತಿನಲ್ಲಿ ಇಂದ್ರಿಯ ಮತ್ತು ವಿಷಯಗಳನ್ನು ಅನುಭವಿಸಿ ಮುಗಿಸುತ್ತೀವಿ ಅನ್ನುವವರು ಯಾರೂ ಇಲ್ಲ. ಅನುಭವಿಸದೆ ಬಿಟ್ಟರೆ ಇಂದ್ರಿಯಗಳು ಕೆಡುತ್ತವೆ. ಮಿತಿಮೀರಿ ಅನುಭವಿಸಿದರೆ ಅವು ನಮ್ಮನ್ನು ಕೆಡಿಸುತ್ತವೆ. ಅಂದರೆ ಇಂದ್ರಿಯಗಳನ್ನು ಹದವರಿತು ಬಳಸಬೇಕು. ಅದಕ್ಕೆ ಪತಂಜಲಿ ಮಹರ್ಷಿಗಳು ಬ್ರಹ್ಮಚರ್ಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.