ADVERTISEMENT

ನುಡಿ ಬೆಳಗು: ಈ ಭೂಮಿ ಕರ್ತಾರನ ಕಮ್ಮಟ

ನುಡಿ ಬೆಳಗು: 174

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 16 ಏಪ್ರಿಲ್ 2025, 0:17 IST
Last Updated 16 ಏಪ್ರಿಲ್ 2025, 0:17 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಯಾವಾಗ ದೇಶ ಶ್ರೇಷ್ಠ ಆಗುತ್ತದೆ? ಬುದ್ಧ, ಬಸವ, ಅಂಬೇಡ್ಕರ್, ಅಬ್ದುಲ್‌ ಕಲಾಂ ಅವರಂತಹ ಹತ್ತಾರು ಮಂದಿ ಶ್ರೇಷ್ಠರಾದರೆ ಭಾರತ ಶ್ರೇಷ್ಠವಾಗುವುದಿಲ್ಲ. ದೇಶದಲ್ಲಿ ಇರುವ ಎಲ್ಲ ವ್ಯಕ್ತಿಗಳೂ ಶ್ರೇಷ್ಠರಾದರೆ ದೇಶವೂ ಶ್ರೇಷ್ಠವಾಗುತ್ತದೆ. ಕಾನೂನಿಗೂ ಕರುಣೆಗೂ ಏನು ವ್ಯತ್ಯಾಸ? ಕಾನೂನು ಕ್ರೂರಿಗೆ ಶಿಕ್ಷೆ ಕೊಟ್ಟರೆ, ಕರುಣೆ ಕ್ರೌರ್ಯಕ್ಕೆ ಶಿಕ್ಷೆ ಕೊಡುತ್ತದೆ. ಕ್ರೌರ್ಯ ಹೋಗಬೇಕು ಎಂದರೆ ಅಸ್ತೇಯ ವ್ರತ ಪಾಲನೆ ಮಾಡಬೇಕು ಎಂದು ಪತಂಜಲಿ ಮಹರ್ಷಿ ಹೇಳುತ್ತಾರೆ.

ಕಲ್ಯಾಣ ಪಟ್ಟಣದಲ್ಲಿ ಒಂದು ಘಟನೆ ನಡೆಯಿತು. ಅಲ್ಲಮಪ್ರಭುಗಳು ಕಲ್ಯಾಣಕ್ಕೆ ಬಂದರು. ಬಸವಣ್ಣನವರು ಅಲ್ಲಮಪ್ರಭುಗಳನ್ನು ಮಹಾಮನೆಗೆ ಸ್ವಾಗತಿಸಿದರು. ‘ತನು, ಮನ, ಧನ ಎಲ್ಲವನ್ನೂ ಕೊಡ್ತೀನಿ’ ಅಂದರು. ‘ತನುವ ಬೇಡಿದರೆ ಈವೆ, ಮನವ ಬೇಡಿದರೆ ಈವೆ, ಧನವ ಬೇಡಿದರೆ ಈವೆ ನಿಮ್ಮ ಚರಣಕ್ಕೆ’ ಎನ್ನುತ್ತಾರೆ ಬಸವಣ್ಣ. ಅದಕ್ಕೆ ಅಲ್ಲಮಪ್ರಭು ‘ತನು, ಮನ ಧನ ಯಾರ ಒಡವಿ, ಮೇರುಗಿರಿಗಳೆಲ್ಲವೂ ಪ್ರಮಥರೊಡವೆ. ರಜತಗಿರಿಗಳೆಲ್ಲವೂ ಪುರಾತರೊಡವೆ. ಚತುರ್ದಶ ಭುವನವೆಲ್ಲವೂ ಲಿಂಗದೊಡವೆ. ಪೃಥ್ವಿ ಎಂಬುದು ಕರ್ತಾರನ ಕಮ್ಮಟ ಅಚ್ಚಿನ
ಮೊಳೆ ಬಾಣಸದ ಮನೆ. ತನುಮನಧನಂಗಳೆಲ್ಲವು ನಮ್ಮ ಗುಹೇಶ್ವರಲಿಂಗದ ಸೊಮ್ಮು. ನೀನೇನ ಕೊಟ್ಟು ಭಕ್ತನಾದೆ ಹೇಳಾ ಬಸವಣ್ಣಾ?’ ಎಂದು ಕೇಳುತ್ತಾರೆ. ‘ತನುಮನಧನ ಎಲ್ಲಾ ದೇವ ಕೊಟ್ಟಿದ್ದು. ನಿನ್ನದೇನು ಕೊಟ್ಟು ಭಕ್ತನಾದೆ ಹೇಳು’ ಎನ್ನುತ್ತಾರೆ ಅವರು.

ADVERTISEMENT

ಮೌಂಟ್ ಎವರೆಸ್ಟ್ ಇದೆ. ಹಿಮಾಲಯದಲ್ಲಿ ಸಾಕಷ್ಟು ಪರ್ವತಗಳಿವೆ. ಅವುಗಳನ್ನು ಮನುಷ್ಯ ನಿರ್ಮಾಣ ಮಾಡಿದ್ದಾನೇನು? ಕವಿ ಕಾಳಿದಾಸ ಹಿಮಾಲಯವನ್ನು ದೇವತೆಗಳ ಆವಾಸಸ್ಥಾನ ಎಂದು ವರ್ಣಿಸುತ್ತಾನೆ. ಹಿಮಾಲಯವನ್ನು ಮನುಷ್ಯ ನಿರ್ಮಾಣ ಮಾಡಿದ್ದೇನು? ಬಹಳ ಎಂದರೆ ನಾವು ಪ್ರವಾಸ ಹೋಗಬಹುದು ಅಷ್ಟೆ. ಫೋಟೊ ತೆಗೆಸಿಕೊಳ್ಳಬಹುದು ಅಷ್ಟೆ. ಹುಡುಗಿಗೆ ಒಂದು ತೊಲೆ, ಎರಡು ತೊಲೆ ಬಂಗಾರ ಹಾಕಿದ್ದೇನೆ ಎಂದು ಜಂಬ ಕೊಚ್ಚಿಕೊಳ್ಳುತ್ತೀರಿ. ಆದರೆ ಬಂಗಾರದ ಗಣಿಗಳೇ ನಿರ್ಮಾಣವಾಗಿರದಿದ್ದರೆ ಹಗ್ಗ ಹಾಕಬೇಕಿತ್ತು ಅಷ್ಟೆ. ಬಂಗಾರ ನಿರ್ಮಾಣ ಮಾಡಿದವರು ಯಾರು? ತಳ, ಸುತಳ, ಪಾತಾಳ ಎಂದು ಹೇಳುತ್ತೇವೆಲ್ಲ, ಎಲ್ಲವೂ ದೇವನ ಜಗತ್ತು. ದೇವರು ನಿರ್ಮಾಣ ಮಾಡಿದ್ದಾನೆ ಎಂದು ನಾವು ಅನುಭವಿಸುತ್ತಿದ್ದೇವೆ. ಸಪ್ತ ಸಾಗರಗಳು ಇಲ್ಲದೇ ಇದ್ದರೆ ಮೋಡಗಳು ಕಟ್ಟುತ್ತಿರಲಿಲ್ಲ. ಮಳೆ ಸುರಿಯುತ್ತಿರಲಿಲ್ಲ. ಭೂಮಿ ಬೆಳೆ ಬೆಳೆಯುತ್ತಿರಲಿಲ್ಲ.

ಕಾರ್ತಿಕ ಮಾಸದಲ್ಲಿ ನಾವು ದೇವರ ಮುಂದೆ ದೀಪ ಹಚ್ಚುತ್ತೇವೆ. ನಾವು ಹಚ್ಚಿದ ಹಣತೆ ದೀಪ ಆರಿದೆ. ಬತ್ತಿ ಸುಟ್ಟಿದೆ. ಆದರೆ ಯಾವಾಗಲೂ ಆರದಂತಹ ಸೂರ್ಯ ಚಂದ್ರರನ್ನು ಇಟ್ಟಿದ್ದಾನಲ್ಲ, ಅವನ ಕಾರ್ತಿಕ ಹೇಗಿದೆ ನೋಡಿ. ಅವನದ್ದು ನಿತ್ಯ ಕಾರ್ತಿಕೋತ್ಸವ. ಸೂರ್ಯ ಚಂದ್ರರನ್ನು ನಾವು ಮಾಡಲು ಸಾಧ್ಯವಿದೆಯೇನು? ಭೂಮಿ ಎಂಬುದು ಕರ್ತಾರನ ಕಮ್ಮಟ. ಕಮ್ಮಟ ಎಂದರೆ ಶೋರೂಮ್. ಶೋರೂಮ್‌ನಲ್ಲಿ ಹೊಸ ಗಾಡಿಯನ್ನು ಮುಂದೆ ಇಟ್ಟಿರುತ್ತಾರೆ. ಹಳೆಯ ಗಾಡಿಗಳನ್ನು ಗ್ಯಾರೇಜ್‌ಗೆ ಹಾಕುತ್ತಾರೆ. ಈ ಭೂಮಿಯೂ ಹಾಗೆಯೇ. ಹೊಸ ಕುಡಿಗಳನ್ನು ತೊಟ್ಟಿಲಿಗೆ ಹಾಕುತ್ತಾರೆ. ಹಳಬರನ್ನು ಐಸಿಯುಗೆ ಕಳಿಸುತ್ತಾರೆ. ಮನೆಯಲ್ಲಿ ಒಂದು ಮಗು ಹುಟ್ಟಿರುತ್ತದೆ. ಅಜ್ಜ ಸಾಯುತ್ತಿರುತ್ತಾನೆ. ಆದರೆ ನಿಸರ್ಗ ಹೇಗಿದೆ ಎಂದರೆ, ಹುಟ್ಟಿದ ಮಗುವಿಗೆ ತೊಟ್ಟಿಲು ನಿರ್ಮಾಣಕ್ಕೂ ಒಂದು ಗಿಡ ಬೆಳೆಸಿದೆ. ಸತ್ತ ಅಜ್ಜನ ಚಟ್ಟಕ್ಕೂ ಒಂದು ಗಿಡ ಬೆಳೆಸಿದೆ. ಅದೇ ನಿಸರ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.