ADVERTISEMENT

ನುಡಿ ಬೆಳಗು: ನಿನ್ನ ಮನಸ್ಸೇ ನಿನ್ನ ಸ್ವರ್ಗ, ನರಕ

ರೇಣುಕಾ ನಿಡಗುಂದಿ
Published 16 ಜನವರಿ 2026, 0:31 IST
Last Updated 16 ಜನವರಿ 2026, 0:31 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಒಂದು ಊರು. ಆ ಊರಿನ ಮುಖ್ಯ ಬೀದಿಯ ಕೊನೆಯಲ್ಲಿ ಒಂದು ದೇವಸ್ಥಾನ. ಅದರ ಎದುರಿನ ಒಂದು ದೊಡ್ಡ ಬಂಗಲೆಯಲ್ಲಿ ಒಬ್ಬ ವೇಶ್ಯೆ ವಾಸಿಸುತ್ತಿದ್ದಳು. ಆ ದೇವಸ್ಥಾನಕ್ಕೆ ಒಬ್ಬ ಪೂಜಾರಿ. ದೀರ್ಘಕಾಲದ ಬದುಕು ಸವೆಸಿ ಇಬ್ಬರೂ ಕಾಲವಾದ ನಂತರ ಯಮಲೋಕದಲ್ಲಿ ಅವರ ಪಾಪಕರ್ಮಗಳ ಲೆಕ್ಕವನ್ನು ಪರಿಶೀಲಿಸಿ ವೇಶ್ಯೆಯನ್ನು ಸ್ವರ್ಗಕ್ಕೂ, ಆ ದೇವಸ್ಥಾನದ ಅರ್ಚಕನನ್ನು ನರಕಕ್ಕೂ ಕಳುಹಿಸಲು ಆದೇಶ ನೀಡಲಾಗುತ್ತದೆ. ಆಗ ಅರ್ಚಕನಿಗೆ ಸಿಟ್ಟು ಬಂದು ಹಾಗೇಕೆಂದು ವಿಚಾರಿಸಲಾಗಿ, ಚಿತ್ರಗುಪ್ತ, ‘ನೀನು ವೃತ್ತಿಯಿಂದ ಅರ್ಚಕನಾದರೂ ನಿನ್ನ ಮನಸೆಲ್ಲ ಆ ವೇಶ್ಯೆಯ ಮನೆಗೆ ಬಂದು ಹೋಗುವವರು, ಅಲ್ಲಿ ನಡೆಯಬಹುದಾದ ಕಾರ್ಯ ಕಲಾಪಗಳು ಮತ್ತು ಅಲ್ಲಿಗೆ ಹೋಗಲಾಗಲಿಲ್ಲವಲ್ಲ ಎನ್ನುವ ಚಿಂತೆಯಲ್ಲೇ ಮುಳುಗಿತ್ತು. ಆದರೆ ಆ ವೇಶ್ಯೆ ವೃತ್ತಿಯಲ್ಲಿ ನಿರತಳಾದರೂ ಅವಳ ಮನಸ್ಸು ತಾನು ಹೋಗಲಾಗದ ಆ ದೇವಸ್ಥಾನದಲ್ಲಿ ನೆಟ್ಟು, ಒಂದು ಬಾರಿಯೂ ಅಲ್ಲಿಗೆ ಹೋಗಲಾಗಲಿಲ್ಲವಲ್ಲ ಎನ್ನುವ ಚಿಂತೆಯಿಂದ ಸದಾ ಭಗವಂತನ ನಾಮ ಸ್ಮರಣೆಯನ್ನು ಮಾಡುತ್ತಿದ್ದಳು. ಹಾಗಾಗಿ ನಿನಗೆ ನರಕ ಮತ್ತು ಆಕೆಗೆ ಸ್ವರ್ಗ’. ಎಂದರಂತೆ.

ಮನುಷ್ಯನ ಮನಸ್ಸು ಬಹಳ ವಿಚಿತ್ರ. ಅದೇ ರೀತಿ ಈ ಜಗತ್ತಿನ ಜೀವರಾಶಿಗಳಲ್ಲಿನ ವೈವಿಧ್ಯವೂ ವಿಸ್ಮಯಕಾರಿ. ಒಬ್ಬರಂತೆ ಇನ್ನೊಬ್ಬರಿಲ್ಲ. ಅವರವರ ಜೀವನ ಅವರವರದು. ಅವರವರ ಭಾಗ್ಯ ಅವರವರದು. ಒಬ್ಬರ ಸುಖ ಇನ್ನೊಬ್ಬರ ದುಃಖಕ್ಕೆ ಕಾರಣವಾಗಬಹುದು. ಒಬ್ಬರ ನೋವು ಮತ್ತು ಆ ನೋವಿನ ಕಾರಣ ಇನ್ನೊಬ್ಬರ ಊಹೆಗೂ ನಿಲುಕದ್ದಿರಬಹುದು. ನಮ್ಮ ಬಾಹ್ಯ ರೂಪ ಸ್ವರೂಪಕ್ಕಿಂತ ನಮ್ಮೊಳಗಿನ ವಿಚಾರಗಳೇ ನಮ್ಮ ವ್ಯಕ್ತಿತ್ವವನ್ನು ನಮ್ಮ ಭಾಗ್ಯವನ್ನು ರೂಪಿಸುತ್ತವೆ.

ADVERTISEMENT

ಕಿಮೇಕಂ ದೈವತಂ ಲೋಕೇ ಕಿಂ ವಾಽಪ್ಯೇಕಂ ಪರಾಯಣಂ |

ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಮ್ ||

ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ |

ಕಿಂ ಜಪನ್ ಮುಚ್ಯತೇ ಜಂತುರ್ಜನ್ಮಸಂಸಾರಬಂಧನಾತ್ ||


ಮಹಾಭಾರತದಲ್ಲಿ ಅರ್ಜುನನು ಈ ಪ್ರಶ್ನೆಗಳನ್ನು ಶ್ರೀಕೃಷ್ಣನಿಗೆ ಕೇಳುತ್ತಾನೆ — ‘ಎಲ್ಲ ದೇವತೆಗಳಲ್ಲಿ ಅತ್ಯುನ್ನತ ಯಾರು? ಎಲ್ಲ ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಯಾವುದು? ಯಾವ ಜಪದಿಂದ ಜನ್ಮಮರಣದ ಚಕ್ರದಿಂದ ಮುಕ್ತಿ ಸಿಗುತ್ತದೆ’ ಎಂದು.

ಮನೆ ಸಂಸಾರ, ವೃತ್ತಿ, ವ್ಯಾಪಾರ, ಕೆಲಸ, ಸಂಪಾದನೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಮತ್ತು ಆ ವಿಷಯಗಳಿಂದ ನಮಗುಂಟಾಗುವ ಸಂಬಂಧ ಸಂಪರ್ಕಗಳಿಂದ ನಮ್ಮ ಮನದೊಳಕ್ಕೆ ನುಗ್ಗುವ ವಿಚಾರಗಳ ಸುಳಿಯಲ್ಲಿ ಮುಳುಗಿ ಸಾಯುತ್ತೇವೆ. ಮನಃಶಾಂತಿಗಾಗಿ ದೇವಸ್ಥಾನಕ್ಕೆ ಹೋಗುವವರೂ ಉಂಟು. ಆದರೇನು ಮನಸ್ಸೆಲ್ಲೋ ಅಲೆಯುತ್ತಿರುತ್ತದೆ. ‘ಕಾಯಕವೇ ಕೈಲಾಸವೆಂದರು’ ಶರಣರು. ಚಿತ್ತಶುದ್ಧಿಯಿಂದ ಮಾಡುವ ಯಾವುದೇ ಕಾಯಕವಾದರೂ ಸರಿ. ಆ ಕೆಲಸಗಳನ್ನೂ ಸಮರ್ಪಕವಾಗಿ ಮಾಡಬೇಕು. ಆದರೆ ಇಲ್ಲದ ವಿಷಯಗಳನ್ನು ಮನದೊಳಗೆ ಚಿಂತಿಸುತ್ತಾ, ಮನದೊಳಗೆ ಒಂದು ನರಕವನ್ನೇ ಸೃಷ್ಟಿಸಿಕೊಂಡು ಬದುಕಬಾರದು. ಸ್ವರ್ಗ ನರಕಗಳೆಂಬವು ಹೊರಗಿನ ಲೋಕಗಳಲ್ಲ ನಮ್ಮೊಳಗೇ ಇವೆ.

ನಮಗೆ ಏನು ಮತ್ತು ಎಷ್ಟು ಬೇಕು ಎಂದು ಆಯ್ದುಕೊಳ್ಳುವ, ನಿರ್ಧರಿಸುವ ಅಧಿಕಾರ ಮತ್ತು ಸಂಪೂರ್ಣ ಸ್ವಾತಂತ್ರವಿದೆ. ಹಾಗಾಗಿ, ಆ ಒಂದು ಸ್ವಾತಂತ್ರವನ್ನು ಸೂಕ್ತವಾಗಿ ಉಪಯೋಗಿಸಿ ಬದುಕನ್ನು ಹಸನಾಗಿಸಿಕೊಳ್ಳಬೇಕು. ಶಾಂತವಾಗಿಸಿಕೊಳ್ಳಬೇಕು. ಆನಂದಮಯವಾಗಿಸಿ ಕೊಳ್ಳಬೇಕು ಎನ್ನುವುದೇ ಬದುಕಿನ ಒಳಗುಟ್ಟು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.