ವಾಣಿಜ್ಯ ಬೆಳೆಗಳ ಬೆಲೆ ಕುಸಿದಾಗ ಬೆಂಬಲ ಬೆಲೆ ಪ್ರಕಟಿಸುವ ಧಾವಂತವು ಸಿರಿಧಾನ್ಯಗಳ ವಿಚಾರದಲ್ಲಿ ಮಾತ್ರ ನಾಪತ್ತೆ! ಮೇಳ, ಉತ್ಸವದಂಥ ಅಬ್ಬರದ ಪ್ರಚಾರಕ್ಕೆ ಮಾತ್ರ ಸಿರಿಧಾನ್ಯಗಳು ಮೀಸಲಾಗಿವೆಯೇ?
ಸುಸ್ಥಿರ ಕೃಷಿಗೆ ಮಾದರಿಯೆನಿಸಿದ ಸಿರಿಧಾನ್ಯಗಳ ಬೇಸಾಯ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರಗಳು ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಅಬ್ಬರದ ಪ್ರಚಾರಕ್ಕೆ ‘ದಾಳ’ವಾದ ಸಿರಿಧಾನ್ಯಗಳನ್ನು ನೆಚ್ಚಿದ ರೈತರಿಗೆ ದಿಕ್ಕು ತೋಚದ ಸ್ಥಿತಿ ಎದುರಾಗಿದೆ. ಕಡಿಮೆ ಮಳೆ ಹಾಗೂ ಕಡಿಮೆ ಒಳಸುರಿಗಳಲ್ಲಿ ಬೆಳೆಯಬಹುದಾದ ಸಿರಿಧಾನ್ಯಗಳು ಸಾಂಪ್ರದಾಯಿಕ ಕೃಷಿಯ ಭಾಗ. ವರ್ಷವಿಡೀ ಕುಟುಂಬದ ಆಹಾರ ಹಾಗೂ ಪೋಷಕಾಂಶ ಭದ್ರತೆಗೆ ಮಹತ್ವದ ಕೊಡುಗೆ ನೀಡುತ್ತವೆ. ಇತ್ತೀಚಿನ ದಿನಗಳಲ್ಲಿ ಜಗತ್ತನ್ನು ಕಾಡುತ್ತಿರುವ ಹವಾಮಾನ ವೈಪರೀತ್ಯಕ್ಕೆ ಸಿರಿಧಾನ್ಯ ಕೃಷಿ ಪರಿಹಾರ ಎಂಬುದು ಸಾಬೀತಾಗಿದೆ.
ವಾಣಿಜ್ಯ ಬೆಳೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದ ಆಧುನಿಕ ಕೃಷಿ ವಿಜ್ಞಾನವು ಸಿರಿಧಾನ್ಯಗಳನ್ನು ‘ತೃಣಧಾನ್ಯ’ ಎಂದೇ ಹೆಸರಿಸಿತ್ತು. ರೈತಪರ ಸಂಘಟನೆಗಳ ಒತ್ತಾಸೆ ಹಾಗೂ ಕ್ರಿಯಾಶೀಲ ಚಟುವಟಿಕೆಯಿಂದ ಸಿರಿಧಾನ್ಯ ಮಹತ್ವ ಪಡೆಯಿತು. ಆಗ ಕೃಷಿ ವಿಶ್ವವಿದ್ಯಾಲಯಗಳೂ ಸಂಶೋಧನಾ ಕೇಂದ್ರಗಳೂ ಎದ್ದು ಕೂತವು. ಸಿರಿಧಾನ್ಯಕ್ಕೆ ಒಂದು ವಿಭಾಗ, ಅದಕ್ಕೆ ಒಂದಷ್ಟು ವಿಜ್ಞಾನಿಗಳು, ಸಿಬ್ಬಂದಿ ಹೀಗೆ... ಪರಿಸ್ಥಿತಿ ಹೀಗಾದಾಗ ಸರ್ಕಾರ ಸುಮ್ಮನಿರುತ್ತದೆಯೇ? ಮರೆತೇಹೋಗಿದ್ದ ಸಿರಿಧಾನ್ಯಗಳಿಗೆ
ಭರ್ಜರಿಯಾದ ಮಹತ್ವ ದಕ್ಕಿತು. ಅದರ ಪರಿಣಾಮವೇ ಸಿರಿಧಾನ್ಯದ ಪ್ರಚಾರ ಭರಾಟೆ.
ಕೃಷಿ ಗುಂಪುಗಳು ನಡೆಸುತ್ತಿದ್ದ ಮೇಳಗಳನ್ನು ಸರ್ಕಾರವೇ ಆಯೋಜಿಸಲು ಮುಂದಾಯಿತು. ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಮೇಳ, ಮೌಲ್ಯವರ್ಧನೆ ತರಬೇತಿ, ಸಂಸ್ಕರಣೆಗೆ ಮಿಲ್‌ಗಳು... ಒಂದೇ ಎರಡೇ? ಸಿರಿಧಾನ್ಯ ಬೆಳೆಯುವವರಿಗೆ ಧನಸಹಾಯ ಬೇರೆ! ಪರಿಣಾಮವಂತೂ ಕಣ್ಣಿಗೆ ಕಾಣಿಸಲು ಶುರುವಾಯಿತು. ಮೂರ್ನಾಲ್ಕು ದಶಕಗಳಿಂದ ಬೆಳೆಯುತ್ತಿದ್ದ ವಾಣಿಜ್ಯ ಬೆಳೆ ಬಿಟ್ಟು ರೈತರು ಸಿರಿಧಾನ್ಯಗಳತ್ತ ವಾಲಿದರು, ಉತ್ಪಾದನೆಯೂ ಹೆಚ್ಚಿತು. ಸಿರಿಧಾನ್ಯ ಕೃಷಿಕರಿಗೆ ಪ್ರಶಸ್ತಿ, ಗೌರವ, ಜಿಲ್ಲಾ ಮಟ್ಟದಿಂದ ಹಿಡಿದು ಬೆಂಗಳೂರಿನ ಅರಮನೆ ಆವರಣದ ಅಂತರರಾಷ್ಟ್ರೀಯ ಮೇಳದವರೆಗೂ ಸಿರಿಧಾನ್ಯ ಮಿಂಚತೊಗಿತು. ಸಿರಿಧಾನ್ಯಗಳಿಗೂ ಅವುಗಳ ಉತ್ಪನ್ನಗಳಿಗೂ ಅತಿ ಎನಿಸುವಷ್ಟರ ಮಟ್ಟಿಗೆ ಬೇಡಿಕೆ ಉಂಟಾಯಿತು.
ಸಿಹಿ ಇದ್ದಲ್ಲಿ ಇರುವೆ ಬರುವುದು ಸಹಜವೇ! ವ್ಯಾಪಾರಿಗಳು ಈಗ ರಂಗಪ್ರವೇಶ ಮಾಡಿದ್ದಾರೆ. ಹೊಲದ ಅಂಚಿನಲ್ಲೇ ಸಿರಿಧಾನ್ಯ ಖರೀದಿಸುವ ‘ಜಾಲ’ ಸೃಷ್ಟಿಯಾಗಿದೆ. ಆರಂಭದಲ್ಲಿ ಒಳ್ಳೆಯ ದರ ಗಿಟ್ಟಿಸುತ್ತಿದ್ದ ರೈತರು, ಈಗ ಎರಡು– ಮೂರು ವರ್ಷಗಳಿಂದ ಬೇಸ್ತು ಬೀಳುತ್ತಿದ್ದಾರೆ. ಸಿರಿಧಾನ್ಯಗಳ ಮಾರುಕಟ್ಟೆ ದೊಡ್ಡ ವ್ಯಾಪಾರಿಗಳ ಕಪಿಮುಷ್ಟಿಗೆ ಸಿಲುಕಿದೆ. ಧಾನ್ಯಗಳನ್ನು ಖರೀದಿಸಿ, ಗೋದಾಮುಗಳಲ್ಲಿ ಸಂಗ್ರಹಿಸಿ, ಬೇಡಿಕೆ ಸೃಷ್ಟಿಯಾದಾಗ ಅವುಗಳ ಅಕ್ಕಿ ಮಾಡಿ, ಗ್ರಾಹಕರಿಗೆ ಒದಗಿಸುವ ‘ವ್ಯವಸ್ಥಿತ ಪೂರೈಕೆ ಜಾಲ’ ರೂಪುಗೊಂಡಿದೆ. ಇದರಿಂದ ಅತ್ತ ರೈತರಿಗೂ ಲಾಭವಿಲ್ಲ, ಇತ್ತ ಗ್ರಾಹಕರಿಗೂ ಪ್ರಯೋಜನವಿಲ್ಲ.
‘ಅಧಿಕ ನಾರಿನಂಶ ಹೊಂದಿರುವ ಕೊರಲೆಗೆ ಹೆಚ್ಚು ಬೇಡಿಕೆ ಇದೆ. ಹಿಂದಿನ ವರ್ಷದವರೆಗೆ ಇದರ ದರ ಕ್ವಿಂಟಲಿಗೆ ₹ 6,800 ಇದ್ದುದು ಈ ವರ್ಷ ₹ 3,400ಕ್ಕೆ ಕುಸಿದಿದೆ. ಅದೇ ರೀತಿ ಸಾವಿರಾರು ಟನ್ ನೆರೆರಾಜ್ಯಗಳಿಗೆ ಹೋಗುವ ಸಾಮೆಯ ದರ ₹ 4,800ರಿಂದ ₹ 3,200 ಹಾಗೂ ಜನಪ್ರಿಯ ಆಹಾರಧಾನ್ಯವಾದ ನವಣೆಯು ₹ 6,000ದಿಂದ ₹ 3,000ಕ್ಕೆ ಇಳಿದಿದೆ. ಮೊದಲೆಲ್ಲ ಹೊಲಕ್ಕೇ ಹೋಗಿ ಖರೀದಿ ಮಾಡುತ್ತಿದ್ದ ವ್ಯಾಪಾರಿಗಳು, ಈಗ ರೈತರೇ ತಮ್ಮ ಬಳಿ ಬಂದು ಧಾನ್ಯ ಕೊಡಬಹುದು ಎನ್ನುತ್ತಿದ್ದಾರೆ ಎಂದು ಕುಂದಗೋಳ ತಾಲ್ಲೂಕಿನ ಹನುಮನಹಳ್ಳಿಯ ಸಿರಿಧಾನ್ಯ ಕೃಷಿಕ ಯಲ್ಲಪ್ಪ ರಾಮಜಿ ಬೇಸರಿಸುತ್ತಾರೆ.
ಕಡಲೆ, ಈರುಳ್ಳಿ, ಹೆಸರು, ಭತ್ತದಂಥ ಧಾನ್ಯಗಳ ಬೆಲೆ ಕುಸಿದಾಗ ಸರ್ಕಾರಗಳು ಮಧ್ಯ ಪ್ರವೇಶಿಸಿ ಬೆಂಬಲ ಬೆಲೆ ಘೋಷಿಸಿ ದೊಡ್ಡ ರೈತರಿಗೆ ನೆರವಾಗುತ್ತವೆ. ಸಿರಿಧಾನ್ಯಗಳಿಗೆ ಆ ಅದೃಷ್ಟ ಇಲ್ಲ. ಅಬ್ಬರದ ಪ್ರಚಾರಕ್ಕಷ್ಟೇ ಸಿರಿಧಾನ್ಯಗಳನ್ನು ಬಳಸಿಕೊಳ್ಳುವ ಸರ್ಕಾರಗಳೂ ಇಂಥ ಸಮಯದಲ್ಲಿ ಬೆಳೆಗಾರರನ್ನು ಮರೆತೇಬಿಡುತ್ತವೆ. ಅದರಲ್ಲೂ ರೈತ ಗುಂಪುಗಳಿಗೆ ಸರ್ಕಾರ ನೀಡಿರುವ ಸಿರಿಧಾನ್ಯ ಸಂಸ್ಕರಣೆಯ ಮಿನಿ ಘಟಕ (ಮಿಲ್) ಮಾರುಕಟ್ಟೆ ಗುಣಮಟ್ಟಕ್ಕೆ ಹೊಂದಿಕೆಯಾಗದೆ ಬರೀ ಪ್ರಚಾರದ ಭಾಗವೆಂಬಂತೆ ಭಾಸವಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನದ ಸುಸಜ್ಜಿತ ಮಿಲ್‌ಗಳನ್ನು ಒದಗಿಸದ ವಿನಾ ರೈತರಿಗೆ ಈ ಮಿನಿ ಮಿಲ್‌ಗಳಿಂದ ಏನೇನೂ ಉಪಯೋಗ ಇಲ್ಲ. ಸಿರಿಧಾನ್ಯ ವಹಿವಾಟು ಕೇಂದ್ರೀಕರಿಸಿರುವ ರೈತ ಉತ್ಪಾದಕ ಕಂಪನಿಗಳು, ಆವರ್ತ ನಿಧಿ ಹಾಗೂ ದಾಸ್ತಾನಿಗೆ ಗೋದಾಮು ಇಲ್ಲದೆ ಏದುಸಿರು ಬಿಡುತ್ತಿವೆ.
ಧಾನ್ಯಗಳ ಬೆಲೆ ಇಳಿದರೆ ಅದರ ಲಾಭ ಗ್ರಾಹಕರಿಗೆ ಸಿಗಬೇಕು. ಆದರೆ ಸಿರಿಧಾನ್ಯಗಳ ಅಕ್ಕಿ ದರ ನೂರು ರೂಪಾಯಿಗೂ ಕಡಿಮೆ ಇಲ್ಲ! ಧಾನ್ಯ ದಾಸ್ತಾನು ಮಾಡಿ, ಬೇಡಿಕೆಯಿದ್ದಾಗ ಸಂಸ್ಕರಿಸಿ ಗ್ರಾಹಕರಿಗೆ ಅಧಿಕ ದರದಲ್ಲಿ ಮಾರುವ ಪಕ್ಕಾ ವ್ಯಾಪಾರಿ ತಂತ್ರವಿದು. ಸಿರಿಧಾನ್ಯದ ಹೆಸರಿನಲ್ಲಿ ಮೇಳ, ಉತ್ಸವ ಆಯೋಜಿಸಿ ಕೋಟಿಗಟ್ಟಲೆ ಹಣ ಖರ್ಚು ಮಾಡುವ ಸರ್ಕಾರ, ಸಿರಿಧಾನ್ಯ ಬೆಳೆಗಾರರ ನೆರವಿಗೆ ಬರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.