
ಪುಸ್ತಕ ಸಂಸ್ಕೃತಿಯನ್ನು ಎಳೆಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಸಂವಿಧಾನದ ನಿರ್ಮಾತೃ ಅಂಬೇಡ್ಕರ್ ಅವರ ಪುಸ್ತಕಪ್ರೀತಿ ಬಹುದೊಡ್ಡ ಪ್ರೇರಣೆಯಾಗಿ ಒದಗಿಬರುವಂತಹದ್ದು. ಜ್ಞಾನ, ವಿವೇಕ, ವಿಮರ್ಶಾಶಕ್ತಿ ಇವೆಲ್ಲವೂ ಪುಸ್ತಕಗಳ ಓದಿನ ಮೂಲಕವೇ ಮನುಷ್ಯನಲ್ಲಿ ಅರಳುವ ಗುಣಗಳು ಎನ್ನುವ ನಂಬಿಕೆಯನ್ನು ತಮ್ಮ ಜೀವನದ ಮೂಲಕವೇ ಸಾಬೀತುಪಡಿಸಿದ ಮಹನೀಯರಲ್ಲಿ ಅಂಬೇಡ್ಕರ್ ಪ್ರಮುಖರು.
ಅಂಬೇಡ್ಕರ್ ಅವರ ಜೀವನಗಾಥೆಯಲ್ಲಿ ಪುಸ್ತಕಪ್ರೀತಿಯೇ ಕೇಂದ್ರಬಿಂದು. ಬಾಲ್ಯದಿಂದ ಅಂತ್ಯದವರೆಗೆ ಬಾಬಾ ಸಾಹೇಬರು ಪುಸ್ತಕಗಳನ್ನು ಕೈಬಿಡಲಿಲ್ಲ; ಪುಸ್ತಕಗಳು ಅವರ ಕೈಬಿಡಲಿಲ್ಲ.
ಬಡತನ, ಜಾತಿ ಆಧಾರಿತ ಅವಮಾನ, ಸಾಮಾಜಿಕ ನಿರಾಕರಣೆಗಳಂತಹ ಕಠಿಣ ಸಂದರ್ಭಗಳಲ್ಲೂ ಅಂಬೇಡ್ಕರ್ ಓದನ್ನು ನಿಲ್ಲಿಸಿರಲಿಲ್ಲ. ಪುಸ್ತಕಗಳನ್ನು ಖರೀದಿಸಲು ಆಗದಿದ್ದಾಗ ಗ್ರಂಥಾಲಯವೇ ಅವರಿಗೆ ಓದಿನಮನೆಯಾಗಿತ್ತು. ಅಂಬೇಡ್ಕರ್ ಅವರಿಗೆ ಓದುವುದಕ್ಕೆ ವಿರಾಮ ಬೇಕಿರಲಿಲ್ಲ; ಓದು ಎನ್ನುವುದೇ ಅವರ ಪಾಲಿಗೆ ವಿರಾಮವಾಗಿತ್ತು; ಬದುಕಿನ ಅನುದಿನದ ಸಂಕಟಗಳಿಗೆ ಉತ್ತರವಾಗಿತ್ತು. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅವರು ದಿನಕ್ಕೆ 18 ತಾಸು ಓದುವ ಅಭ್ಯಾಸ ಹೊಂದಿದ್ದರು. ಅವರ ಓದನ್ನು ನೋಡಿದ ಗ್ರಂಥಾಲಯದ ಅಧಿಕಾರಿ– ‘ಈ ವಿದ್ಯಾರ್ಥಿ ಓದುತ್ತಿಲ್ಲ, ಪುಸ್ತಕಗಳನ್ನು ಅರಗಿಸಿ ಕುಡಿಯುತ್ತಿದ್ದಾನೆ’ ಎಂದು ಹೇಳಿರುವುದು ಅವರ ಜ್ಞಾನಾಸಕ್ತಿ ಎಷ್ಟು ತೀವ್ರವಾಗಿತ್ತು ಎನ್ನುವುದಕ್ಕೆ ಉದಾಹರಣೆ. ಓದನ್ನು ಅವರು ಸಂಶೋಧನೆಗಾಗಿ ಮಾತ್ರವಲ್ಲದೆ, ಜೀವನಕ್ಕೆ ಅರ್ಥ ಕೊಡುವ ಸಾಧನವಾಗಿಯೂ ಬಳಸಿಕೊಂಡರು.
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಇದ್ದಾಗ ತಿಂಗಳಿಗೊಮ್ಮೆ 20–25 ಪುಸ್ತಕಗಳನ್ನು ಖರೀದಿಸಿ ಸಂಗ್ರಹಿಸುತ್ತಿದ್ದರು. ಇಂಗ್ಲೆಂಡ್ ತೊರೆದು ಭಾರತಕ್ಕೆ ಮರಳುವಾಗ ಅವರಲ್ಲಿದ್ದ ಪುಸ್ತಕಗಳು 32 ದೊಡ್ಡ ಪೆಟ್ಟಿಗೆಗಳಲ್ಲಿ ತುಂಬುವಷ್ಟಿದ್ದವು. ಅಷ್ಟೂ ಪುಸ್ತಕಗಳ ಸಾಗಣೆಯ ವೆಚ್ಚ ಭರಿಸುವುದು ಅವರಿದ್ದ ಸ್ಥಿತಿಯಲ್ಲಿ ಕಷ್ಟವಾಗಿತ್ತು. ಆದರೆ, ಅವುಗಳನ್ನು ಬಿಟ್ಟು ಬರಲು ಅವರಿಗೆ ಮನಸ್ಸಾಗಲಿಲ್ಲ. ಜೀವನದಲ್ಲಿ ಏನನ್ನು ಬೇಕಾದರೂ ಕಳೆದುಕೊಳ್ಳಬಹುದು, ಪುಸ್ತಕಗಳನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಅವರ ನಂಬಿಕೆಯಾಗಿತ್ತು. ಅಂಬೇಡ್ಕರ್ ಅವರ ವೈಚಾರಿಕ, ರಾಜಕೀಯ ಮತ್ತು ಸಾಮಾಜಿಕ ಕ್ರಾಂತಿಗೆ ಪುಸ್ತಕಗಳೇ ಅಡಿಪಾಯವಾದವು. ಅವರು ಓದಿದ ವಿಶ್ವಸಂವಿಧಾನಗಳು, ಕಾನೂನುಗ್ರಂಥಗಳು ಮತ್ತು ಐತಿಹಾಸಿಕ ದಾಖಲೆಗಳು ಭಾರತದ ಸಂವಿಧಾನ ರಚನೆಗೆ ದ್ರವ್ಯವಾಗಿ ಪರಿಣಮಿಸಿದವು. ಅಂಬೇಡ್ಕರ್ ಅವರ ಜ್ಞಾನಾರ್ಜನೆ ಭಾರತದ ಪ್ರಜಾಪ್ರಭುತ್ವದ ಮೂಲಸ್ತಂಭವನ್ನೇ ರೂಪಿಸಿತು. ಬಹುಶಃ, ಓದಿನ ಬಹುದೊಡ್ಡ ಪ್ರಯೋಜನಕ್ಕೆ ‘ಭಾರತದ ಸಂವಿಧಾನ’ಕ್ಕಿಂತ ಅತ್ಯುತ್ತಮ ಉದಾಹರಣೆ ಇರಲಾರದು.
ಅಂಬೇಡ್ಕರ್ ಅವರ ಓದಿನ ಮೂಲ ಉದ್ದೇಶ, ಜ್ಞಾನವನ್ನು ಮಾನವದಾಸ್ಯದ ಮುಕ್ತಿಗಾಗಿ ಉಪಯೋಗಿಸುವುದೇ ಆಗಿತ್ತು. ಬೌದ್ಧಧಮ್ಮ ದೀಕ್ಷೆ ಸ್ವೀಕರಿಸುವ ಮುನ್ನ ಅವರು ವರ್ಷಗಳ ಕಾಲ ಬೌದ್ಧಧರ್ಮದ ಮೂಲಗ್ರಂಥಗಳನ್ನು ಅಧ್ಯಯನ ಮಾಡಿದ್ದರು. ಪುಸ್ತಕಗಳು ಅವರ ಆಧ್ಯಾತ್ಮಿಕ ನವೋತ್ಥಾನದ ಮೂಲಸೆಲೆ ಆಗಿದ್ದವು. ಅಂಬೇಡ್ಕರ್ ಬರೀ ಅತ್ಯುತ್ತಮ ಓದುಗರಷ್ಟೇ ಆಗಿರಲಿಲ್ಲ; ಪುಸ್ತಕಗಳ ಬಹುದೊಡ್ಡ ಸಂಗ್ರಹಕರ್ತರೂ ಹೌದು. ಐವತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳು ಅವರ ಸಂಗ್ರಹದಲ್ಲಿದ್ದವು ಹಾಗೂ ಆ ಸಂಗ್ರಹ ವಿಶ್ವದ ಬಹು ಅಮೂಲ್ಯ ಪುಸ್ತಕಸಂಗ್ರಹಗಳಲ್ಲಿ ಒಂದಾಗಿದೆ. ಬಾಬಾಸಾಹೇಬರ ಪುಸ್ತಕಸಂಗ್ರಹ ನಿಧಿಯನ್ನು ಈಗಲೂ ಮುಂಬೈಯಲ್ಲಿನ ‘ರಾಜಗೃಹ’ದಲ್ಲಿ ನೋಡಬಹುದು. ‘ನನ್ನ ನಿಜವಾದ ಆಸ್ತಿ ನನ್ನ ಪುಸ್ತಕಗಳು’ ಎನ್ನುವುದು ಅವರ ಹೃದಯದ ಮಾತು ಹಾಗೂ ಪುಸ್ತಕ ಸಂಸ್ಕೃತಿಯ ಮಹತ್ವವನ್ನು ಮನಗಾಣಿಸುವ ಹೇಳಿಕೆ.
ಇತಿಹಾಸ, ರಾಜಕೀಯ, ಆರ್ಥಿಕತೆಯ ಜೊತೆಗೆ ಮನೋವಿಜ್ಞಾನ, ಧರ್ಮ, ಕಾನೂನು ಹಾಗೂ ಸಮಾಜಶಾಸ್ತ್ರ ಸೇರಿದಂತೆ ಜೀವನಕ್ಕೆ ಸಂಬಂಧಿಸಿದ ಅನೇಕ ಕ್ಷೇತ್ರಗಳನ್ನು ಅಂಬೇಡ್ಕರ್ ಅವರ ಓದು ಒಳಗೊಂಡಿತ್ತು. ವ್ಯಾಪಕ ಓದಿನ ಪರಿಣಾಮವಾಗಿಯೇ ಅವರ ಚಿಂತನೆಗಳಲ್ಲಿ ಭಾವುಕತೆ ಹಿಂದೆಸರಿದು, ವೈಜ್ಞಾನಿಕತೆ ಮತ್ತು ನೈತಿಕತೆಯೇ ಪ್ರಧಾನವಾಗಿದೆ. ‘ಜ್ಞಾನವಿಲ್ಲದೇ ಸಮಾಜದ ಪರಿವರ್ತನೆ ಸಾಧ್ಯವಿಲ್ಲ’ ಹಾಗೂ ‘ಎಲ್ಲಕ್ಕಿಂತ ದೊಡ್ಡ ಕ್ರಾಂತಿಯೇ ವಿದ್ಯೆಯ ಕ್ರಾಂತಿ’ ಎನ್ನುವ ಅವರ ಮಾತುಗಳ ಓದಿನ ಮಹತ್ವವನ್ನು ಸಾರುವಂತಿವೆ.
ಇಂದಿನ ತಂತ್ರಜ್ಞಾನಯುಗದಲ್ಲೂ ಅಂಬೇಡ್ಕರ್ ಅವರ ಪುಸ್ತಕಪ್ರೀತಿ ನಮಗೆ ದಿಕ್ಕು ತೋರಿಸುವಂತಿದೆ. ಮಾಹಿತಿಯ ಅತಿರೇಕದ ಕಾಲದಲ್ಲೂ ನಿಖರವಾದ ಓದು, ತತ್ತ್ವಪರ ವಿಶ್ಲೇಷಣೆ ಮತ್ತು ವಿಮರ್ಶಾತ್ಮಕ ಚಿಂತನೆ ಅತ್ಯಗತ್ಯ ಎಂಬ ಸಂದೇಶವನ್ನು ಅವರ ಜೀವನವೇ ಸಾರುತ್ತದೆ. ಓದಿನಿಂದ ವ್ಯಕ್ತಿ ಬದಲಾಗುತ್ತಾನೆ; ವ್ಯಕ್ತಿಯ ಬದಲಾವಣೆ ಸಮಾಜದ ಬದಲಾವಣೆಗೆ ಬೀಜವಾಗುತ್ತದೆ ಎನ್ನುವ ಬಾಬಾಸಾಹೇಬರ ನಿಲುವು ಇಂದಿನ ಯುವತಲೆಮಾರಿಗೆ ಅತ್ಯಂತ ಪ್ರಸ್ತುತವಾಗಿದೆ. ಅಂಬೇಡ್ಕರ್‌ಪ್ರಣೀತ ‘ಪುಸ್ತಕಪ್ರೀತಿ’ ವೈಯಕ್ತಿಕ ಆಸಕ್ತಿ ಮಾತ್ರವಲ್ಲ; ಅದು ಮಾನವ ದಾಸ್ಯದ ಮುಕ್ತಿಯನ್ನು ಗುರಿಯನ್ನಾಗಿಸಿಕೊಂಡ ಜ್ಞಾನಯೋಗದ ವಿಶಿಷ್ಟ ಪಥ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.