ಆಕಾಶವಾಣಿಗೆ ಜನ ಕಿವಿಗೊಡುತ್ತಾ ತಮ್ಮ ದಿನಚರಿಯನ್ನು ಪ್ರಾರಂಭಿಸುತ್ತಿದ್ದಂತಹ ಕಾಲವೊಂದಿತ್ತು. ಬೆಳಿಗ್ಗೆ ಆಕಾಶವಾಣಿ ಕಾರ್ಯಾರಂಭಿಸಲು ತೊಡಗುತ್ತಿದ್ದಂತೆ ಶುರುವಾಗುತ್ತಿದ್ದ ಧ್ವನಿಮುದ್ರಿತ ಸಂಗೀತದ ‘ಸಿಗ್ನೇಚರ್ ಟೋನ್’ ದಿನಚರಿಗೆ ಮುನ್ನುಡಿ ಹಾಕುವಂತೆ ಇರುತ್ತಿತ್ತು. ಆದರೆ ಇಂದು ಆಕಾಶವಾಣಿ ಆಲಿಸುವವರ ಸಂಖ್ಯೆ ಇಳಿಮುಖವಾಗಿದೆ. ಒಂದು ತಲೆಮಾರನ್ನು ಜ್ಞಾನ, ಮಾಹಿತಿ, ಮನರಂಜನೆಯ ಮೂಲಕ ಪೊರೆದಿದ್ದ ಆಕಾಶವಾಣಿ ಇಂದು ದೃಶ್ಯ ಮಾಧ್ಯಮಗಳ ಪ್ರಭಾವ, ಆಕರ್ಷಣೆಗಳ ಮುಂದೆ ಬಸವಳಿದಿದೆ.
ಇಂದಿನ ಯುವಜನ ಟಿ.ವಿ., ಮೊಬೈಲ್ ಫೋನ್ ಬಳಕೆಯ ನಡುವೆ ಆಗೊಮ್ಮೆ ಈಗೊಮ್ಮೆ ಎಫ್.ಎಂ. ರೇಡಿಯೊಗೆ ಕಿವಿಗೊಟ್ಟಿರಬಹುದು. ಆದರೆ ಇವರಿಗೆ ಆಕಾಶವಾಣಿಯಂತಹ ಉಪಯುಕ್ತ ಮಾಧ್ಯಮ ಹತ್ತಿರವಾದಂತೆ ಕಂಡುಬರುತ್ತಿಲ್ಲ.
ಬದಲಾವಣೆ ಜಗದ ನಿಯಮ. ಕಾಲದ ಪರೀಕ್ಷೆಯಲ್ಲಿ ಯಾವುದು ಉಳಿಯುತ್ತದೆ, ಯಾವುದು ಅಳಿಯುತ್ತದೆ ಎಂದು ಹೇಳಲು ಬರುವುದಿಲ್ಲ. ಇದಕ್ಕೆ ಆಕಾಶವಾಣಿಯೂ ಹೊರತಲ್ಲ. ಆದರೆ ಅದು ಸಮಕಾಲೀನ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮುಂದೆ ಸಾಗುತ್ತಿದೆ. ಒಂದು ಕಾಲದಲ್ಲಿ ಸುದ್ದಿ, ಮಾಹಿತಿ, ಮನರಂಜನೆಯಂತಹ ಕ್ಷೇತ್ರಗಳ ಏಕಮೇವಾ ಮಾಧ್ಯಮವಾಗಿ ಮೆರೆದಿದ್ದ ಆಕಾಶವಾಣಿ ತನ್ನ ಅಭಿಮಾನಿ ಕೇಳುಗರನ್ನು ಯಾವತ್ತೂ ನಿರಾಸೆಗೊಳಿಸಿಲ್ಲ. ಇದು ಅದರ ಹೆಗ್ಗಳಿಕೆ ಮಾತ್ರವಲ್ಲ ಅದರ ಪ್ರಸ್ತುತ ಸ್ಥಾನಮಾನ, ಮಹತ್ವವನ್ನೂ ಸಾರುವಂತಿದೆ.
ಆಕಾಶವಾಣಿಯಲ್ಲಿ ಹಿಂದೆ ಪ್ರಸಾರವಾಗುತ್ತಿದ್ದ ವಾರ್ತೆಗಳು, ನಾಟಕಗಳು, ಚಲನಚಿತ್ರ ಗೀತೆಗಳು, ಕ್ರಿಕೆಟ್ ವೀಕ್ಷಕ ವಿವರಣೆಯಂತಹವುಗಳ ನೆನಪು ರೋಮಾಂಚನವನ್ನು ಉಂಟುಮಾಡುತ್ತದೆ. ಹಿಂದೆ ಎಷ್ಟೋ ಮಂದಿ ಕಾದು ಕುಳಿತು ನಾಟಕಗಳು, ಚಲನಚಿತ್ರ ಗೀತೆಗಳನ್ನು ಕೇಳುತ್ತಿದ್ದರು. ಪರ್ವತವಾಣಿಯವರ ನಾಟಕಗಳು, ಬಿನಾಕ ಗೀತ್‌ಮಾಲಾದಂತಹ ಕಾರ್ಯಕ್ರಮಗಳು ಜನಮಾನಸದಲ್ಲಿ ಸವಿನೆನಪುಗಳಾಗಿ ಉಳಿದಿವೆ. ರೇಡಿಯೊ ಇದ್ದಂತಹ ಮನೆಗಳು ಅಥವಾ ಅಂಗಡಿ ಮುಂಗಟ್ಟುಗಳ ಮುಂದೆ ಕ್ರಿಕೆಟ್ ಕಾಮೆಂಟರಿಗಾಗಿ ಜನಜಂಗುಳಿ ಸೇರುತ್ತಿದ್ದ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ದಿನಪತ್ರಿಕೆ, ನಿಯತಕಾಲಿಕಗಳೊಂದಿಗೆ ಆಕಾಶವಾಣಿಯೂ ಜನರ ಬದುಕಿನ ಭಾಗವಾಗಿದ್ದ ಕಾಲಮಾನ ಅದು. ಟಿ.ವಿ., ಇಂಟರ್ನೆಟ್, ಸ್ಮಾರ್ಟ್ ಫೋನ್‌ಗಳು ಬಂದ ಬಳಿಕ ಜನರ ಆಯ್ಕೆಗಳು, ಪ್ರಾಶಸ್ತ್ಯಗಳಲ್ಲಿ ಸ್ಥಿತ್ಯಂತರಗಳಾದವು.
ಒಂದು ದೃಷ್ಟಿಯಿಂದ ಈ ಬೆಳವಣಿಗೆಯನ್ನು ಸಹಜ ಎನ್ನಬಹುದಾದರೂ ಯುವಪೀಳಿಗೆಗೆ ಆಕಾಶವಾಣಿಯ ಸರಿಯಾದ ಪರಿಚಯ ಆಗದಿರುವುದು ಮುಖ್ಯ ಲೋಪದಂತೆ ಕಾಣುತ್ತದೆ. ಸ್ಥಿತ್ಯಂತರ ಕಾಲದಲ್ಲಿ ಆಕಾಶವಾಣಿಯ ಸಾಂಗತ್ಯ ತೊರೆದ ಕೇಳುಗರಿಗೂ ಆಕಾಶವಾಣಿಯ ಮರು ಪರಿಚಯದ ಅಗತ್ಯವಿದೆ ಎಂದೆನಿಸುತ್ತದೆ. ಆಕಾಶವಾಣಿಯಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಪ್ರಸಾರವಾಗುವಂತಹ ವಾರ್ತೆಗಳು ಸಂಕ್ಷಿಪ್ತ ಹಾಗೂ ನಿಖರವಾಗಿರುತ್ತವೆ. ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರಗಳಿಗೆ ಸಂಬಂಧಿಸಿದ ತಜ್ಞರ ಸಂದರ್ಶನಗಳು, ಭಾಷಣಗಳು ಉಪಯುಕ್ತವಾಗಿರುತ್ತವೆ. ಹಾಗೆಯೇ ಈ ದಿಸೆಯಲ್ಲಿ ನಡೆಸಿಕೊಡಲಾಗುವ ಫೋನ್- ಇನ್ ಕಾರ್ಯಕ್ರಮ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿರುವುದು ಮೆಚ್ಚುಗೆಗೆ ಪಾತ್ರವಾಗುವ ಸಂಗತಿ. ಬದುಕಿನಲ್ಲಿ ಸಮಕಾಲೀನ ಸಂಕಷ್ಟಗಳಿಗೆ ಸಿಲುಕಿ ಗೆದ್ದಂತಹ ಶೋಷಿತರು, ದುರ್ಬಲರ ಸಂದರ್ಶನಗಳು ಪ್ರೇರಣಾದಾಯಕ ಆಗಿರುತ್ತವೆ. ಇಂತಹ ವಿಶಿಷ್ಟ ಕಾರ್ಯಕ್ರಮಗಳು ಉಳಿದ ಮಾಧ್ಯಮಗಳಲ್ಲಿ ದುರ್ಲಭವೆಂದೇ ಹೇಳಬಹುದು.
ಸ್ವಾತಂತ್ರ್ಯಪೂರ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಆಕಾಶವಾಣಿಯು ದೇಶದ ಶೇ 92ರಷ್ಟು ಭೌಗೋಳಿಕ ಪ್ರದೇಶವನ್ನು ತನ್ನ ವ್ಯಾಪ್ತಿಗೆ ಒಳಪಡಿಸಲು ಶಕ್ತವಾಗಿದೆ. ಇದು ಶೇ 99ರಷ್ಟು ಜನಸಂಖ್ಯೆಯನ್ನು ಒಳಗೊಂಡಿರುವುದನ್ನು ಗಮನಿಸಿದರೆ, ಆಕಾಶವಾಣಿಯನ್ನು ಪರಿಣಾಮಕಾರಿಯಾಗಿ ಬಳಸುವಂತಹ ಅಪಾರ ಅವಕಾಶಗಳಿರುವುದು ತಿಳಿಯುತ್ತದೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಕೇಳುಗರ ಸಂಖ್ಯೆ ಕುಸಿದಿರುವುದು ವಿಷಾದಕರ ಅಂಶ.
1997ರಲ್ಲಿ ಪ್ರಸಾರ ಭಾರತಿ ಕಾಯ್ದೆ ಜಾರಿಗೆ ಬಂದ ಬಳಿಕ ಈ ದಿಸೆಯಲ್ಲಿ ಹೆಚ್ಚಿನ ಭರವಸೆ ಮೂಡಿತ್ತಾದರೂ ಆಕಾಶವಾಣಿಯ ಜನಪ್ರಿಯತೆ ಹೆಚ್ಚಾಗಲಿಲ್ಲ. ಹೆಸರಿಗೆ ಆಕಾಶವಾಣಿಯು ಸ್ವಾಯತ್ತ ಸಂಸ್ಥೆಯಾದರೂ ಅದು ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆಧೀನದಲ್ಲಿಯೇ ಹೆಚ್ಚಿನ ಸ್ವಾಯತ್ತೆ ಕಾಣದೆ ಮುಂದುವರಿಯುತ್ತಿದೆ. ಹೀಗಾಗಿ, ಅದರ ಕಾರ್ಯದಕ್ಷತೆ, ಪಾರದರ್ಶಕತೆ, ನಿಷ್ಪಕ್ಷಪಾತ ಧೋರಣೆ ಮನವರಿಕೆಯಾಗುವಂತಿಲ್ಲ. ಆದ್ದರಿಂದ ಆಕಾಶವಾಣಿಗೆ ನಿಜವಾದ ಸ್ವಾಯತ್ತೆ ದೊರೆಯುವುದು ಕೂಡ ಅಗತ್ಯ.
ಆಕಾಶವಾಣಿಯ ಒಂದು ಅನುಕೂಲವೆಂದರೆ, ಅದನ್ನು ನಾವು ನಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿ
ಕೊಂಡೇ ಆಲಿಸಬಹುದಾಗಿರುವುದು. ವಿಶೇಷವಾಗಿ ಮಹಿಳೆಯರು ಅಡುಗೆ ಮತ್ತು ಇತರ ಗೃಹಕೃತ್ಯಗಳಲ್ಲಿ ನಿರತರಾಗಿದ್ದುಕೊಂಡು ರೇಡಿಯೊ ಆಲಿಸುವುದರಿಂದ ಏಕಕಾಲದಲ್ಲಿ ಕೆಲಸವೂ ಸಾಗುತ್ತದೆ, ಮಾಹಿತಿ, ಮನರಂಜನೆಯೂ ದೊರೆಯುತ್ತದೆ. ಈ ರೀತಿ ಮಾಡುವಂತಹ ಬಹಳಷ್ಟು ಮಂದಿ ನಮ್ಮ ನಡುವೆ ಇದ್ದಾರೆ ಕೂಡ. ಆದರೆ ಹೆಚ್ಚಿನ ಮನೆಗಳಲ್ಲಿ ರೇಡಿಯೊ ಇಲ್ಲದಿರುವುದೇ ಒಂದು ದೊಡ್ಡ ಕೊರತೆಯಾಗಿದೆ. ಈ ದಿಸೆಯಲ್ಲಿ ಜನರಿಗೆ ಮಾಹಿತಿ, ತಿಳಿವಳಿಕೆ ನೀಡುವಂತಹ ಕಾರ್ಯವನ್ನು ಆಕಾಶವಾಣಿ ಮತ್ತು ಸರ್ಕಾರ
ಕೈಗೊಳ್ಳಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.