ADVERTISEMENT

ಬನ್ನೇರುಘಟ್ಟ: ಅಪಾಯದ ಕಾಲಘಟ್ಟ

ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯನ್ನು ಕುಗ್ಗಿಸುವ ನಡೆ ಸಮರ್ಥನೀಯವಲ್ಲ

ಗುರುರಾಜ್ ಎಸ್.ದಾವಣಗೆರೆ
Published 8 ಮಾರ್ಚ್ 2020, 19:45 IST
Last Updated 8 ಮಾರ್ಚ್ 2020, 19:45 IST
   

ಬೆಂಗಳೂರು ನಗರದ ‘ಶ್ವಾಸಕೋಶ’ ಎಂದೇ ಕರೆಯಲಾಗುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ರಾಜ್ಯ ಸರ್ಕಾರದ ಪರಿಸರ ವಿರೋಧಿ ನಡೆಯಿಂದಾಗಿ ಮತ್ತೆ ಸುದ್ದಿಯಲ್ಲಿದೆ. ಉದ್ಯಾನದ ಪರಿಸರಸೂಕ್ಷ್ಮ ವಲಯದ (ಇಎಸ್‍ಝಡ್) ವ್ಯಾಪ್ತಿಗೆ ಸಂಬಂಧಿಸಿದಂತೆ ನಾಲ್ಕು ವರ್ಷಗಳ ಹಿಂದೆ ತಾನೇ ಹೊರಡಿಸಿದ್ದ ಕರಡು ಅಧಿಸೂಚನೆಯನ್ನು ಗಾಳಿಗೆ ತೂರಿ, ಈ ವ್ಯಾಪ್ತಿಯನ್ನು ಸುಮಾರು ನೂರು ಚದರ ಕಿ.ಮೀ.ನಷ್ಟು ಕಡಿತಗೊಳಿಸುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಪತ್ರ ಬರೆದಿದೆ.

ಬನ್ನೇರುಘಟ್ಟ ನೇಚರ್ ಕನ್ಸರ್‍ವೇಶನ್ ಟ್ರಸ್ಟ್‌ನವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಜನವರಿಯಲ್ಲಿ ವಿಲೇವಾರಿ ಮಾಡಿ ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್, ಕೇಂದ್ರ ಸರ್ಕಾರವು ಇಎಸ್‌ಝಡ್‌ ವ್ಯಾಪ್ತಿಯನ್ನು ನಿಗದಿಗೊಳಿಸಿ ಅಧಿಸೂಚನೆ ಹೊರಡಿಸುವವರೆಗೆ ಉದ್ಯಾನದ ಸುತ್ತಲಿನ ಹತ್ತು ಕಿ.ಮೀ.ವರೆಗಿನ ವ್ಯಾಪ್ತಿಯಲ್ಲಿ ಯಾವುದೇ ವಾಣಿಜ್ಯ ಅಥವಾ ಅಭಿವೃದ್ಧಿ ಚಟುವಟಿಕೆ
ಯನ್ನು ನಡೆಸುವಂತಿಲ್ಲ ಎಂದು ಹೇಳಿತ್ತು. ಇದಾದ ಕೆಲವೇ ದಿನಗಳಲ್ಲಿ, ಉದ್ಯಾನದ ವ್ಯಾಪ್ತಿ ಕುಗ್ಗಿಸುವ ಸಂಬಂಧ ರಾಜ್ಯ ಸರ್ಕಾರದಿಂದ ಬೇಡಿಕೆ ಸಲ್ಲಿಕೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ರಾಜಧಾನಿಗೆ ಅಂಟಿಕೊಂಡಿರುವ ಈ ಉದ್ಯಾನದಲ್ಲಿ ಕೃಷ್ಣಗಿರಿ, ಹೊಸೂರು, ಕಾವೇರಿ ಅಭಯಾರಣ್ಯಗಳಿಗೆ ಸೇರಿದ ಆನೆ ಕಾರಿಡಾರ್‌ಗಳಿವೆ. ಚಿರತೆ, ಕರಡಿ, ಅಡವಿನಾಯಿ, ಕಡವೆ, ರಣಹದ್ದುಗಳಿಗೆ ಆವಾಸಸ್ಥಾನವಾಗಿರುವ ಅರಣ್ಯ ಪ್ರದೇಶದ ಸುತ್ತಮುತ್ತ 77 ಹಳ್ಳಿಗಳಿವೆ. ದಕ್ಷಿಣ ಭಾರತದ ಜನಪ್ರಿಯ ಉದ್ಯಾನವೆನಿಸಿರುವ ಇದು, ರಾಜ್ಯದ ಬೊಕ್ಕಸಕ್ಕೆ ಆದಾಯವನ್ನೂ ತರುತ್ತಿದೆ. ಜನರಿಗೆ ವನ್ಯಜೀವಿಗಳ ಬಗ್ಗೆ ತಿಳಿವಳಿಕೆ ನೀಡುತ್ತಾ, ಬೆಂಗಳೂರಿಗೆ ನಿಸರ್ಗವೇ ನೀಡಿದ ಅಮೂಲ್ಯ ಉಡುಗೊರೆಯಂತಿದೆ. ಇಲ್ಲಿರುವ ಜೈವಿಕ ಉದ್ಯಾನ ಮತ್ತು ಚಿಟ್ಟೆ ಉದ್ಯಾನವು ಜನರಲ್ಲಿ ಪರಿಸರ ಜ್ಞಾನ ವೃದ್ಧಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಇದೆಲ್ಲವನ್ನೂ ಮರೆತಂತಿರುವ ರಾಜ್ಯ ಸರ್ಕಾರ, ಗ್ರಾನೈಟ್ ಉದ್ಯಮ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಅತ್ಯಮೂಲ್ಯ ನೈಸರ್ಗಿಕ ತಾಣವನ್ನು ಕತ್ತರಿಸಿ ಹಾಕುವ ಕೆಲಸಕ್ಕೆ ಕೈ ಹಾಕಿದೆ.

ADVERTISEMENT

ಇಎಸ್‍ಝಡ್ ಮಾರ್ಗದರ್ಶಿ ಅಂಶಗಳಲ್ಲಿ, ಯಾವುದೇ ರಾಷ್ಟ್ರೀಯ ಉದ್ಯಾನ ಮತ್ತು ಅಭಯಾರಣ್ಯದ ಸುತ್ತಲಿನ ಹತ್ತು ಕಿ.ಮೀ.ವರೆಗಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಹೆಸರಿಸಿ ಸಂರಕ್ಷಿಸಬಹುದು ಮತ್ತು ಅಗತ್ಯ ಬಂದರೆ ಈ ವ್ಯಾಪ್ತಿಯನ್ನು ಹೆಚ್ಚಿಸಲೂಬಹುದು ಎಂದಿದೆ. ಅಲ್ಲದೆ ಯಾವುದೇ ವಾಣಿಜ್ಯ ಅಥವಾ ಅಭಿವೃದ್ಧಿ ಚಟುವಟಿಕೆ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಪಡೆಯಲೇಬೇಕೆಂಬ ನಿಯಮವಿದೆ. ಇದನ್ನು ಲೆಕ್ಕಿಸದೆ ವಸತಿ ಬಡಾವಣೆಗಳು, ಕಲ್ಲುಕ್ವಾರಿಗಳು
ತಲೆ ಎತ್ತತೊಡಗಿದ್ದರಿಂದ ಆತಂಕಗೊಂಡ ಪರಿಸರವಾದಿಗಳು, ಅದನ್ನು ತಡೆಯುವಂತೆ ಸಂಬಂಧಿಸಿದ ಇಲಾಖೆಗಳ ಮೇಲೆ ಒತ್ತಡ ಹಾಕಿದರು.

ಈ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರವು 2016ರಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವದ ಕರಡನ್ನೇ ಅಧಿಕೃತವೆಂದು ಪರಿಗಣಿಸಿ, ಇಎಸ್‍ಝಡ್ ವ್ಯಾಪ್ತಿಯನ್ನು 268.96 ಚ.ಕಿ.ಮೀ.ಗೆ ನಿಗದಿಪಡಿಸಿದೆ. ಈ ಸಂಬಂಧದ ಕರಡನ್ನು ಗೆಜೆಟ್‍ನಲ್ಲಿ ಪ್ರಕಟಿಸಿದೆ. ದೇಶದ ವಿವಿಧ ಭಾಗಗಳ ರಾಷ್ಟ್ರೀಯ ಉದ್ಯಾನಗಳ ಇಎಸ್‍ಝಡ್ ನಿಗದಿಗೆ ಹೆಚ್ಚುವರಿ ಕಾರ್ಯದರ್ಶಿ ಮತ್ತು ತಜ್ಞರ ಸಮಿತಿಯ ಉಸ್ತುವಾರಿಯಲ್ಲಿ 2017ರಲ್ಲಿ ನಡೆದ ಕೇಂದ್ರ ಸರ್ಕಾರದ ಸಭೆಯಲ್ಲಿ, ರಾಜ್ಯ ಸರ್ಕಾರವು ಇಎಸ್‍ಝಡ್‍ನ ವ್ಯಾಪ್ತಿಯನ್ನು ಕಡಿತಗೊಳಿಸುವಂತೆ ಪ್ರಸ್ತಾವ ಸಲ್ಲಿಸಿತ್ತು. ಇದನ್ನು ಪರಿಗಣಿಸಿದ ಸಚಿವಾಲಯವು ಹತ್ತು ಕಿ.ಮೀ.ವರೆಗಿದ್ದ ಸಂರಕ್ಷಣೆಯ ವ್ಯಾಪ್ತಿಯನ್ನು ಕೇವಲ 1 ಕಿ.ಮೀ.ಗೆ ಇಳಿಸಿ ಆದೇಶ ಹೊರಡಿಸಿತ್ತು. ಇದರಿಂದ ಬೇರೆ ಉದ್ಯಾನಗಳಿಗೂ ಕುತ್ತು ಬರುತ್ತದೆ ಎಂದು ವಿರೋಧಿಸಿದ ಗೋವಾ ಫೌಂಡೇಶನ್, ನ್ಯಾಯಾಲಯದ ಮೆಟ್ಟಿಲೇರಿತು.

ಸರ್ಕಾರದ ಕ್ರಮವು ತೀರಾ ಅಚ್ಚರಿದಾಯಕ ಎಂದ ಸುಪ್ರೀಂ ಕೋರ್ಟ್, ಇದರಿಂದ ದೇಶದ ಅನೇಕ ಅರಣ್ಯ ಪ್ರದೇಶಗಳು ನಾಶವಾಗಿ ಹೋಗುತ್ತವೆ, ಇದನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ಹೇಳಿತು. ಇದನ್ನು ಲೆಕ್ಕಕ್ಕೇ ತೆಗೆದುಕೊಳ್ಳದ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮರು ಪ್ರಸ್ತಾವವನ್ನು ಸ್ವೀಕರಿಸಿ, ಬನ್ನೇರುಘಟ್ಟ ಅರಣ್ಯದ ಸುತ್ತ 4.5 ಕಿ.ಮೀ.ನಷ್ಟಿದ್ದ ಇಎಸ್‍ಝಡ್ ವ್ಯಾಪ್ತಿಯನ್ನು ಕೇವಲ 1 ಕಿ.ಮೀ.ಗೆ ಇಳಿಸಿ ಅಧಿಸೂಚನೆ ಹೊರಡಿಸಿತು. ಇದರಲ್ಲಿ ಅನೇಕ ಹಳ್ಳಿಗಳನ್ನು ಇಎಸ್‌ಝಡ್‌ ವ್ಯಾಪ್ತಿಯಿಂದ ಹೊರಗಿಡಲಾಯಿತು. ಇದು ಸಾಲದೆಂಬಂತೆ ರಾಜ್ಯದ ಅರಣ್ಯ ಇಲಾಖೆಯ ಮುಖ್ಯ ವಾರ್ಡನ್, ವ್ಯಾಪ್ತಿ ಕಡಿತಗೊಳಿಸುವುದು ಬೆಂಗಳೂರಿನ ಅಭಿವೃದ್ಧಿಗೆ ಪೂರಕ ಮತ್ತು ಅನಿವಾರ್ಯ, ಆದ್ದರಿಂದ ಇಎಸ್‍ಝಡ್‍ ಅನ್ನು ನೂರು ಚದರ ಕಿ.ಮೀ.ನಷ್ಟು ಕಡಿಮೆ ಮಾಡಿ ಎಂದು ಕೇಂದ್ರಕ್ಕೆ ಪತ್ರ ಬರೆದು, ಸರ್ಕಾರದ ತಾಳಕ್ಕೆ ತಕ್ಕಂತೆ ವರ್ತಿಸಿದರು.

ಸದ್ಯಕ್ಕೆ ಹೈಕೋರ್ಟ್‌ನ ತಡೆ ಇರುವುದರಿಂದ ಯಾವುದೇ ಕಲ್ಲುಕ್ವಾರಿಯಾಗಲೀ ಹೊಸ ಉದ್ಯಮವಾಗಲೀ ತಲೆ ಎತ್ತಲು ಸಾಧ್ಯವಿಲ್ಲ. ಆದರೂ ಅಭಿವೃದ್ಧಿಯ ನೆಪ ಹೇಳಿ ಕಾಡು ನಾಶಕ್ಕೆ ಮುಂದಾಗುವ ಸರ್ಕಾರದ ನಡೆ ಸರಿಯಾದುದಲ್ಲ. ವಸತಿ ಬಡಾವಣೆ, ಕಲ್ಲುಕ್ವಾರಿಗಳನ್ನು ಬೇರೆಡೆ ಮಾಡಬಹುದು. ನೈಸರ್ಗಿಕ ಕಾಡನ್ನು ಯಾರಿಂದಲೂ ಮರು ಸೃಷ್ಟಿಸಲಾಗದು. ರಾಜ್ಯ ಸರ್ಕಾರವು ಅರ್ಜಿಯನ್ನು ಹಿಂಪಡೆದು ಯಥಾಸ್ಥಿತಿ ಕಾಪಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.