ADVERTISEMENT

ಸಂಗತ: ಚೌಕಾಸಿ ಎಂಬ ನುಂಗಲಾರದ ತುತ್ತು

ಏರುತ್ತಲೇ ಇರುವ ಬೆಲೆ ಎಷ್ಟೋ ವ್ಯಾಪಾರಿಗಳು ಹಾಗೂ ಸ್ವಉದ್ಯೋಗಗಳನ್ನು ನೆಚ್ಚಿಕೊಂಡವರ ಪಾಲಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಿದೆ

ಎಚ್.ಕೆ.ಶರತ್
Published 3 ಜುಲೈ 2022, 20:30 IST
Last Updated 3 ಜುಲೈ 2022, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಾರುಕಟ್ಟೆಯಲ್ಲಿ ಸೌತೆಕಾಯಿ ಮಾರುತ್ತಿದ್ದ ಯುವತಿಯ ಬಳಿ ವ್ಯಕ್ತಿಯೊಬ್ಬರು ಚೌಕಾಸಿ ಮಾಡತೊಡಗಿದರು. ‘10 ರೂಪಾಯಿಗೆ ಒಂದು’ ಎಂದು ಯುವತಿ ಹೇಳಿದರೆ, ‘ಇಪ್ಪತ್ತು ರೂಪಾಯಿಗೆ ಮೂರು ಮಾಡ್ಕೊಂಡು ಕೊಡು’ ಅಂತ ಆ ವ್ಯಕ್ತಿ ಕೇಳುತ್ತಿದ್ದರು. ತಾನು ಹೇಳಿದ ದರ ಸಡಿಲಿಸದ ಯುವತಿ, ‘ಬೇಕಿದ್ದರೆ 10 ರೂಪಾಯಿಗೆ ಒಂದರಂತೆ ತಗೊಂಡು ಹೋಗಿ’ ಅಂದರು ಕೊನೆಯದಾಗಿ. ಆ ವ್ಯಕ್ತಿ ಕೊಳ್ಳದೆ ಹಾಗೇ ಹೋದರು.

ಆನಂತರ ಪಕ್ಕದಲ್ಲೇ ತರಕಾರಿ ಮಾರುತ್ತಿದ್ದ ಮಹಿಳೆಯ ಬಳಿ, ‘ನೋಡಕ್ಕ, ನಾವಿಲ್ಲಿ ನಾಕು ಕಾಸು ಸಂಪಾದಿಸೋಣ ಅಂತ ವ್ಯಾಪಾರಕ್ಕೆ ಬಂದಿದ್ರೆ ಇವ್ರು ಹೇಗೆ ಚೌಕಾಸಿ ಮಾಡ್ತಾರೆ ಅಂತ? ಇವರಿಗೆ ಮನುಷ್ಯತ್ವನೇ ಇಲ್ಲ...’ ಅಂತ ಅಸಮಾಧಾನ ಹೊರಹಾಕಿದರು. ಚೌಕಾಸಿ ಮಾಡದೆ ಎರಡು ಸೌತೆಕಾಯಿ ಖರೀದಿಸಿದ ಗ್ರಾಹಕರೊಬ್ಬರಿಗೆ ಸ್ವಯಂಪ್ರೇರಿತರಾಗಿ ತಾವೇ ಒಂದು ಸೌತೆಕಾಯಿ ಹೆಚ್ಚುವರಿಯಾಗಿ ಕೊಟ್ಟರು.

ಆಟೊ ಚಾಲಕರೊಬ್ಬರು ಮೂರು ಕಿಲೊಮೀಟರ್ ದೂರದ ಪ್ರಯಾಣಕ್ಕೆ ₹ 200 ನೀಡುವಂತೆ ಕೇಳಿದರು. ‘ಕೇಳ್ತಿರೋದು ತೀರಾ ಹೆಚ್ಚಾಯ್ತಲ್ವೆ’ ಎಂದು ಕೇಳಿದ್ದಕ್ಕೆ, ‘ಎಲ್ಲ ರೇಟೂ ಜಾಸ್ತಿ ಆಗಿದೆ ಸರ್, ಏನ್ ಮಾಡೋಣ ಹೇಳಿ’ ಅಂದರು. ಆಟೊ ಓಡಿಸುವಾಗಲೇ ಅವರಿಗೊಂದು ಮೊಬೈಲ್ ಕರೆ ಬಂತು. ‘ಟೀವಿ ರಿಪೇರಿ ಮಾಡ್ಸೋಕೂ ನಿಮ್ ಕೈಯಲ್ಲಿ ಆಗಲ್ವಾ? ಟೀವಿ ಇಲ್ದೆ ಮನೇಲಿ ಸಮಯ ಕಳೆಯೋದು ಹೇಗೆ’ ಅಂತ ಹೆಂಡತಿ ದಬಾಯಿಸುತ್ತಿದ್ದಾಳೆ ಅಂತ ಕರೆಯ ಸಾರಾಂಶ ತಿಳಿಸಿದರು. ಅವರು ಓಡಿಸುತ್ತಿದ್ದ ಆಟೊ ಕೂಡ ರಿಪೇರಿ ಬೇಡುತ್ತಿತ್ತು. ಹರಿದ ಸೀಟಿಗೆ ಪ್ಲಾಸ್ಟಿಕ್ ಚೀಲದ ತೇಪೆ ಹಾಕಿದ್ದರು. ಇಳಿಯುವ ಸ್ಥಳ ತಲುಪಿದಾಗ ₹ 500ರ ನೋಟು ಕೊಟ್ಟರೆ, ‘ನನ್ ಹತ್ರ ಇರೋದೆ ನೂರೈವತ್ತು ರೂಪಾಯಿ’ ಅಂತ ಚಿಲ್ಲರೆ ಕೊಡಲೂ ಹಣವಿಲ್ಲದ ಪರಿಸ್ಥಿತಿ ಮನಗಾಣಿಸಿದರು.

ADVERTISEMENT

ಹಲವು ವರ್ಷಗಳಿಂದ ಆಟೊ ಓಡಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದ ಪರಿಚಿತರೊಬ್ಬರು ಇತ್ತೀಚೆಗೆ ರಸ್ತೆ ಬದಿ ಆಟೊ ನಿಲ್ಲಿಸಿ, ಪಕ್ಕದಲ್ಲೇ ತರಕಾರಿ ಗುಡ್ಡೆ ಹಾಕಿ ಮಾರುತ್ತಿದ್ದದ್ದು ಅಚಾನಕ್ಕಾಗಿ ಕಣ್ಣಿಗೆ ಬಿತ್ತು.

ಕಾರ್ಪೆಟ್ ಮಾರಲು ಮನೆಗಳತ್ತ ಬಂದ ಯುವಕನನ್ನು ತಡೆದು ನಿಲ್ಲಿಸಿದ ನಾಲ್ವರು ಮಹಿಳೆಯರು, ದರ ವಿಚಾರಿಸತೊಡಗಿದರು. ಯುವಕ ಒಂದು ಕಾರ್ಪೆಟ್‍ಗೆ ₹ 3,000 ಎಂದ. ಚೌಕಾಸಿ ಶುರು ಹಚ್ಚಿಕೊಂಡ ಮಹಿಳೆಯರು ‘800 ರೂಪಾಯಿ ಕೊಡ್ತೀವಿ’ ಅಂತ ಹೇಳಿದವರು, ಅದಕ್ಕೆ ಆ ಯುವಕ ಒಪ್ಪದೇ ಹೋದಾಗ ಕೊನೆಗೆ ₹ 1,600 ಕೊಟ್ಟರು. ಯುವಕ ‘ಇನ್ನೂ ನೂರು ರೂಪಾಯಿ ಆದ್ರೂ ಕೊಡಿ, ಏನೂ ಗಿಟ್ಟಲ್ಲ’ ಅಂದ. ‘ಕೊಡೋದಾದ್ರೆ ಇಷ್ಟಕ್ಕೆ ಕೊಡು, ಇಲ್ಲಾಂದ್ರೆ ತಗೊಂಡು ಹೋಗು’ ಅಂದವರ ಮಾತಿಗೆ ಮತ್ತಷ್ಟು ಬೇಸರ ಪಟ್ಟುಕೊಂಡು, ‘ಹೊತ್ತು ತಿರುಗೋಕಾದ್ರೂ ಲಾಭ ಬೇಡ್ವಾ?’ ಅಂತ ಹೇಳಿ ನೊಂದುಕೊಂಡು ಹೊರಟ. ಆತ ಹೋದ ಮೇಲೆ, ‘ಇದೇ ಕ್ವಾಲಿಟಿ ಕಾರ್ಪೆಟ್‍ಗೆ ಅಂಗಡಿಯಲ್ಲಾದ್ರೆ ಎರಡೂವರೆ ಸಾವಿರ ಕೇಳ್ತಾರೆ’ ಅಂತ ಹೇಳಿ ಮಹಿಳೆಯರು ಗೆಲುವಿನ ನಗೆ ಬೀರಿದರು.

ವ್ಯಾಪಾರಿಗಳು ಮತ್ತು ಗ್ರಾಹಕರ ನಡುವಿನ ಚೌಕಾಸಿ ಹೊಸದೇನೂ ಅಲ್ಲ. ಆದರೆ, ಕೆಲ ವರ್ಷಗಳಿಂದ ಏರುತ್ತಲೇ ಸಾಗಿರುವ ಬೆಲೆ ಎಷ್ಟೋ ವ್ಯಾಪಾರಿಗಳು ಹಾಗೂ ಸ್ವಉದ್ಯೋಗಗಳನ್ನು ನೆಚ್ಚಿಕೊಂಡವರ ಪಾಲಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಿದೆ. ‘ಮೊದಲಿನಷ್ಟು ಲಾಭ ಗಳಿಸಲು ಆಗುತ್ತಿಲ್ಲ’ ಎನ್ನುವ ಅಳಲು ವ್ಯಾಪಾರದಲ್ಲಿ ತೊಡಗಿರುವ ಬಹುತೇಕರದ್ದು. ಒಂದೆಡೆ ಆದಾಯದ ಮೂಲಗಳು ಬರಿದಾಗತೊಡಗಿರುವುದರಿಂದ ಹಲವರಲ್ಲಿ ಕೊಳ್ಳುವ ಶಕ್ತಿಯೇ ಕ್ಷೀಣಿಸತೊಡಗಿದ್ದರೆ, ಮತ್ತೊಂದೆಡೆ, ಕೆಲವರು ನಡೆಸುವ ವಿಪರೀತ ಚೌಕಾಸಿ ಎಷ್ಟೋ ವ್ಯಾಪಾರಸ್ಥರ ತಾಳ್ಮೆಯನ್ನು ಪರೀಕ್ಷೆಗೆ ಒಡ್ಡುತ್ತಿದೆ.

ಸಕಾಲಕ್ಕೆ ನಿಗದಿತ ಸಂಬಳ ಪಡೆಯಬಹುದಾದಂತಹ ಕೆಲಸಗಳು ಅಗತ್ಯಕ್ಕೆ ತಕ್ಕಷ್ಟು ಸೃಷ್ಟಿಯಾಗದ ಕಾರಣ, ಅನಿವಾರ್ಯವಾಗಿ ಹಲವರು ಸ್ವಉದ್ಯೋಗಗಳ ಮೊರೆ ಹೋಗುತ್ತಿದ್ದಾರೆ. ಬಹುತೇಕ ವ್ಯಾಪಾರಗಳಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಗ್ರಾಹಕರನ್ನು ಆಕರ್ಷಿಸಲು ತಮ್ಮ ಲಾಭದ ಪ್ರಮಾಣ ತಗ್ಗಿಸಿಕೊಳ್ಳುವ ಅನಿವಾರ್ಯವೂ ಸೃಷ್ಟಿಯಾಗುತ್ತಿದೆ. ಇದರ ಜೊತೆಗೆ ದೊಡ್ಡವರ ಜೊತೆಗೆ ಸ್ಪರ್ಧಿಸಬೇಕಿರುವ ಒತ್ತಡವೂ ಇದೆ. ಆನ್‍ಲೈನ್ ಖರೀದಿಗೆ ಗ್ರಾಹಕರು ಒಗ್ಗಿಕೊಳ್ಳುತ್ತಿರುವುದರಿಂದಲೂ ಹೊಡೆತ ತಿನ್ನಬೇಕಿದೆ. ನಿಯಮಿತವಾಗಿ ಖರೀದಿಸುತ್ತಿದ್ದ ವಸ್ತುಗಳ ಬೆಲೆಯಲ್ಲಿ ದಿಢೀರನೆ ಬಹಳಷ್ಟು ಏರಿಕೆಯಾದಾಗ ವಾಸ್ತವ ಅರಗಿಸಿಕೊಳ್ಳಲು ಗ್ರಾಹಕರು ಸಮಯಾವಕಾಶ ತೆಗೆದುಕೊಳ್ಳುತ್ತಿದ್ದಾರೆ. ತೀರಾ ಅನಿವಾರ್ಯ ಅಲ್ಲದಿದ್ದರೆ ಖರೀದಿಯನ್ನೇ ಮುಂದೂಡುತ್ತಿದ್ದಾರೆ.

ಚೌಕಾಸಿ ಮಾಡದೆ ಖರೀದಿಸಲು ಮುಂದಾಗುವುದು ದಡ್ಡತನವೆಂಬ ನಿಲುವು ನಮ್ಮಲ್ಲಿ ಆಳವಾಗಿ ಬೇರೂರಿದೆ. ಗ್ರಾಹಕರ ಚೌಕಾಸಿ ಪ್ರವೃತ್ತಿ ಮನಗಂಡ ವ್ಯಾಪಾರಿಗಳು ಮೊದಲಿಗೆ ತೀರಾ ದುಬಾರಿ ಬೆಲೆ ಹೇಳಿ ಆನಂತರ ಚೌಕಾಸಿ ವೇಳೆ ದರ ಇಳಿಸಿ ಮಾರುತ್ತಿದ್ದರು. ಬದಲಾದ ಸನ್ನಿವೇಶದಲ್ಲಿ ಚೌಕಾಸಿ ಎಂಬುದು ಎಷ್ಟೋ ವ್ಯಾಪಾರಿಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.