ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕವಲ್ಲ ಅಥವಾ ಪಠ್ಯಪುಸ್ತಕವನ್ನು ಆಧರಿಸಿದ ಅಂಕ ಗಳಿಕೆಯ ಮೌಲ್ಯಮಾಪನವಲ್ಲ ಎನ್ನುವ ಮಾತುಗಳನ್ನು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮತ್ತೆ ಮತ್ತೆ ಆಡುತ್ತಿರುತ್ತೇವೆ. ಹೀಗೆ ಹೇಳುತ್ತಲೇ, ಶಿಕ್ಷಣವೆಂದರೆ ಕೇವಲ ಪುಸ್ತಕಗಳಿಂದ ಪಡೆದದ್ದು ಎನ್ನುವಂಥ ವ್ಯವಸ್ಥೆಯನ್ನೂ ರೂಪಿಸಿದ್ದೇವೆ. ಶಾಲೆಗಳಲ್ಲಿ ಮಕ್ಕಳು ಸ್ವಚ್ಛತಾ ಚಟುವಟಿಕೆಗಳಲ್ಲಿ ತೊಡಗಿರುವ ಸುದ್ದಿಗಳನ್ನು ಅತಿಯಾಗಿ ಬಿಂಬಿಸಿ, ಮಕ್ಕಳು ಸ್ವಚ್ಛತೆಯ ಕೆಲಸಗಳನ್ನು ಮಾಡುವುದೇ ತಪ್ಪು ಎನ್ನುವ ವಾತಾವರಣ ನಿರ್ಮಿಸುತ್ತಿದ್ದೇವೆ.
ಶಿಕ್ಷಣವೆಂದರೆ ಕೇವಲ ಪುಸ್ತಕದ ಬದನೆಕಾಯಿ ಅಲ್ಲ; ಪಠ್ಯದೊಂದಿಗೆ ಕಲಿಯುವ ಹಲವಾರು ಚಟುವಟಿಕೆಗಳು, ಕೆಲಸಗಳು ಕೂಡ ಶಿಕ್ಷಣದ ಪ್ರಮುಖ ಅಂಶಗಳೇ ಆಗಿರುತ್ತವೆ ಎಂದು ಶಿಕ್ಷಕರು ತರಗತಿಗಳಲ್ಲಿ ಮಕ್ಕಳಿಗೆ ಹೇಳುವುದಿದೆ. ಕಲಿಕೆಯೊಂದಿಗೆ ಕಲಿಯುವ ಎಲ್ಲಾ ಕೆಲಸ ಕಾರ್ಯಗಳೂ ಶಿಕ್ಷಣದ ಬುನಾದಿ ಸಾಮರ್ಥ್ಯಗಳೇ ಆಗಿವೆ. ಇದರ ಹಿನ್ನೆಲೆಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ‘ವೃತ್ತಿಶಿಕ್ಷಣ’ ಎನ್ನುವುದಿದೆ. ಇದರ ಮೂಲಕ ಮಕ್ಕಳಿಗೆ ಸ್ವಚ್ಛತೆ, ಶಾಲಾ ಪರಿಸರ, ಶಾಲಾ ಕೈದೋಟದ ಮೂಲಕ ನಮ್ಮ ಕೃಷಿ ಸಂಸ್ಕೃತಿಯ ಮಹತ್ವ ಹೇಳುತ್ತಾ ಬರಲಾಗಿದೆ. ವೃತ್ತಿ ಶಿಕ್ಷಕರ ಮೂಲಕ ಮಕ್ಕಳು ಸ್ವಯಂ ಸ್ವಚ್ಛತಾ ಕಾರ್ಯಗಳಲ್ಲಿ ಭಾಗವಹಿಸಿ, ಒಂದಿಷ್ಟು ಶಿಸ್ತಿನ ಪಾಠ ಕಲಿಯಬಹುದಾದ ಸಾಧ್ಯತೆ ಮೊದಲಿನಿಂದಲೂ ಇದೆ.
ಹಿಂದೆಲ್ಲಾ ವಸತಿ ಶಿಕ್ಷಣವಿರುವ ಶಾಲೆಗಳಲ್ಲಿ ಮಕ್ಕಳೇ ಕೈದೋಟ ಮಾಡಿ ತರಕಾರಿ, ಸೊಪ್ಪು ಬೆಳೆಯುವ ಮೂಲಕ ತಮ್ಮ ದಿನನಿತ್ಯದ ಅಡುಗೆಗೆ ಒಂದಿಷ್ಟು ನೆರವಾಗುತ್ತಿದ್ದರು. ಶಾಲೆಯಲ್ಲಿ ತಾವು ಬಳಸುವ ಶೌಚಾಲಯಗಳನ್ನು ತಾವೇ ಸ್ವಚ್ಛಗೊಳಿಸುವ ಸ್ವಚ್ಛ ಮನಸ್ಸುಗಳೂ ಇದ್ದವು. ಶಾಲಾ ಕೊಠಡಿಗಳಲ್ಲಿನ ಕಸವನ್ನು ಮಕ್ಕಳೇ ಸರದಿ ಪ್ರಕಾರ ಗುಡಿಸುತ್ತಿದ್ದರು. ಶಾಲಾ ಆವರಣವನ್ನು ಸ್ವಚ್ಛಗೊಳಿಸುತ್ತಿದ್ದರು. ಆದರೆ, ಈಗ ಮಕ್ಕಳು ಶಾಲೆಯಲ್ಲಿ ಪುಸ್ತಕ ಬಿಟ್ಟರೆ ಏನನ್ನೂ ಮುಟ್ಟುವಂತಿಲ್ಲ ಎನ್ನುವ ನಕಾರಾತ್ಮಕವಾದ ಧೋರಣೆ ಬಲಗೊಳ್ಳುತ್ತಿದೆ. ಇಂಥ ಮನೋಭಾವ ರೂಪುಗೊಳ್ಳುವಲ್ಲಿ ಮಾಧ್ಯಮಗಳ ಪಾತ್ರವೂ ಇದೆ. ಇದು ಎಷ್ಟರಮಟ್ಟಿಗೆ ಸರಿ ಎಂದು ಪ್ರಜ್ಞಾವಂತರು ಯೋಚಿಸಬೇಕಾಗಿದೆ.
ಬಹಳಷ್ಟು ಪೋಷಕರೂ ತಮ್ಮ ಮಕ್ಕಳ ಬಗ್ಗೆ ಅತಿಯಾದ ಪ್ರೀತಿಯ ಕಾರಣದಿಂದ ‘ಓದುವುದಷ್ಟೇ ಮುಖ್ಯ’ವೆಂದು ಭಾವಿಸಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಪರಿಸರವನ್ನು ಸ್ವಚ್ಛವಾಗಿಸಲು ಪೊರಕೆ ಕೊಟ್ಟರೆ ಅದನ್ನು ಪ್ರಶ್ನೆ ಮಾಡುವಂಥ ಪೋಷಕರಿದ್ದಾರೆ. ‘ನಾವೇ ಮನೆಯಲ್ಲಿ ನನ್ನ ಮಗ/ಮಗಳಿಂದ ಒಂದು ಕೆಲಸವನ್ನೂ ಮಾಡಿಸುವುದಿಲ್ಲ. ನೀವು ಶಾಲೆಯಲ್ಲಿ ಸ್ವಚ್ಛತಾ ಕಾರ್ಯ ಮಾಡಿಸಬಹುದೇ?’ ಎಂದು ಗಡುಸು ಧ್ವನಿಯಲ್ಲಿ ಪ್ರಶ್ನಿಸಿದ ಉದಾಹರಣೆಗಳೂ ಇವೆ. ಇಂತಹ ಪೋಷಕರಿಗೆ, ಅವರ ಮಕ್ಕಳು ಪ್ರೌಢರಾದರೂ ಮನೆಯಲ್ಲಿ ತಾವೇ ಕಸ ಹೊಡೆಯುವ ಕೆಲಸ ಕಾಯಂ ಆಯಿತಲ್ಲ ಎಂದು ಕೊರಗುವ ಸ್ಥಿತಿ ಬಾರದೇ ಇರದು.
ಕಣ್ಣುಗಳಿದ್ದರೆ ಸಾಲದು, ನೋಡುವುದನ್ನು ಕಲಿಯಬೇಕು. ಕಿವಿಗಳಿದ್ದರೆ ಸಾಲದು, ಕೇಳುವುದನ್ನು ಕಲಿಯಬೇಕು ಎನ್ನುವ ಮಾತಿದೆ. ಅಂದರೆ, ಬದುಕಿನಲ್ಲಿ ಶಿಕ್ಷಣವೆಂದರೆ ಓದುವುದು ಹಾಗೂ ಬರೆಯುವುದು ಅಷ್ಟೇ ಅಲ್ಲ. ಬದುಕಿಗೆ ದಾರಿ ತೋರಬಲ್ಲ ಎಲ್ಲಾ ಕೆಲಸ ಕಾರ್ಯಗಳು, ಚಟುವಟಿಕೆಗಳು ಸಹ ಶಿಕ್ಷಣದ ಬಹುಮುಖ್ಯವಾದ ಅಂಶಗಳು ಎನ್ನುವ ವಿವೇಚನೆ ನಮ್ಮೆಲ್ಲರಿಗೂ ಬೇಕು.
ಸ್ವಚ್ಛತಾ ಕಾರ್ಯ ಹೀನಾಯವಲ್ಲ ಎನ್ನುವುದನ್ನು ಪೋಷಕರೂ ವಿದ್ಯಾರ್ಥಿಗಳೂ ಅರಿತುಕೊಳ್ಳಬೇಕಾಗಿದೆ. ಶಾಲೆಯಲ್ಲಿ ಸ್ವಚ್ಛತಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಮನೋವಿಕಾಸ ಹಾಗೂ ಸ್ವಾವಲಂಬನೆಯ ಕಲಿಕೆ ಆಗಿರುವಂತೆಯೇ, ತರತಮ ಭಾವಗಳಿಂದ ಎಳೆಯರನ್ನು ಪಾರು ಮಾಡುವ ಮಾರ್ಗವೂ ಆಗಿದೆ.
‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ’ ಎನ್ನುವಂತೆ ಮಕ್ಕಳಿಗೆ ಮನೆಯಲ್ಲಿ, ಶಾಲೆಯಲ್ಲಿ ಒಂದಿಷ್ಟು ಸ್ವಚ್ಛತಾ ಪಾಠವನ್ನು ಕಲಿಸದೆ ಹೋದರೆ, ಮುಂದೆ ವ್ಯಥೆಪಡುವವರು ಯಾರು? ಸ್ವಚ್ಛತೆಯಂತಹ ಸೂಕ್ಷ್ಮ ವಿಚಾರಗಳನ್ನು ಸಕಾರಾತ್ಮಕವಾಗಿ ನೋಡುವುದಕ್ಕಿಂತ ನಕಾರಾತ್ಮಕವಾಗಿ ನೋಡುವುದು ಹೆಚ್ಚಾಗಿದೆ. ಇಂತಹ ವಿಷಯಗಳಲ್ಲಿ ಸಂವೇದನಾಶೀಲತೆ ಹೆಚ್ಚಬೇಕಾಗಿದೆ.
ಸ್ವಚ್ಛತಾ ಚಟುವಟಿಕೆಗೆ ಸಂಬಂಧಿಸಿದಂತೆ ಶಿಕ್ಷಕರ ಹೊಣೆಗಾರಿಕೆ ಮುಖ್ಯವಾದುದು. ಶಾಲೆಯಲ್ಲಿ ಶೌಚ ಗುಂಡಿಯನ್ನು ಮಕ್ಕಳಿಂದ ಸ್ವಚ್ಛಗೊಳಿಸುವುದನ್ನು ಯಾರೂ ಒಪ್ಪುವುದು ಸಾಧ್ಯವಿಲ್ಲ. ಮಕ್ಕಳಿಂದ ಯಾವ ಕೆಲಸವನ್ನು ಮಾಡಿಸಬೇಕು, ಯಾವುದನ್ನು ಮಾಡಿಸಬಾರದು ಎನ್ನುವ ವಿವೇಕ ಶಿಕ್ಷಕರಿಗೆ ಇರಬೇಕು. ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಶಿಕ್ಷಕರ ಧೋರಣೆ ಬದಲಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಯಾವುದೋ ಒಂದು ಘಟನೆಯನ್ನು ಆಧರಿಸಿ, ಮಕ್ಕಳು ಯಾವುದೇ ಸ್ವಚ್ಛತಾ ಕಾರ್ಯ ಮಾಡಬಾರದು ಎನ್ನುವ ಸಂಕುಚಿತ ಭಾವನೆ ಸಲ್ಲದು.
ಕಲಿಕೆಗೆ ಪೂರಕವಾಗಿ ಶಾಲೆಯಲ್ಲಿ ಕೈಗೊಳ್ಳುವ ಕೆಲಸ ಕಾರ್ಯಗಳನ್ನು ‘ನಮ್ಮ ಮನೆಯ ಕಾರ್ಯಗಳು’ ಎನ್ನುವ ಮುಕ್ತ ಮನೋಭಾವದಿಂದ ನೋಡಬೇಕಾಗಿದೆ. ಹಾಗೆ ನೋಡುವುದು ಸಾಧ್ಯವಾದರೆ, ಶಿಕ್ಷಣದ ಬಹುಮುಖ್ಯವಾದ ಉದ್ದೇಶ ಈಡೇರಿದಂತೆ. ಸ್ವಚ್ಛ ಮನಸ್ಸುಗಳ ಜೊತೆಗೆ ಸ್ವಚ್ಛ ವ್ಯವಸ್ಥೆಯನ್ನು ರೂಪಿಸುವುದು ಸದ್ಯದ ತುರ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.