ADVERTISEMENT

ಸಂಗತ: ತರಗತಿಗೆ ಬರಲಿ ದುಂಡುಮೇಜು

ಶಿಕ್ಷಕರು– ವಿದ್ಯಾರ್ಥಿಗಳ ಸಂಬಂಧ ಸಮರ್ಥ ತರಗತಿ ನಿರ್ವಹಣೆಗೆ ತಳಹದಿ

ಯೋಗಾನಂದ
Published 27 ಮಾರ್ಚ್ 2023, 20:54 IST
Last Updated 27 ಮಾರ್ಚ್ 2023, 20:54 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬದಲಾದ ಈ ದಿನಗಳಲ್ಲಿ ಮಕ್ಕಳಿಗೆ ಸುಧಾರಿತ ಗುಣಮಟ್ಟದ ಶಿಕ್ಷಣ ನೀಡುವುದರ ಬಗ್ಗೆ ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ. ಶಾಲಾ ಹಂತದಲ್ಲೇ ತೆರೆದ ಮನಸ್ಸು, ವಿಮರ್ಶಾತ್ಮಕ ಚಿಂತನೆ ಹಾಗೂ ಜಗತ್ತು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳ ಅರಿವು ಮಕ್ಕಳಲ್ಲಿ ಮೂಡಬೇಕೆನ್ನುವುದು ಆಶಯ.

ಒಂದು ದೇಶದ ಏಳಿಗೆಯ ಭವಿತವ್ಯದ ನೀಲನಕ್ಷೆ ರೂಪುಗೊಳ್ಳುವುದು ತರಗತಿಯೆಂಬ ಪುಟ್ವಿಶ್ವವಿದ್ಯಾಲಯದಲ್ಲಿ. ಅರ್ಥಪೂರ್ಣ ಶಿಕ್ಷಣವು ವಾಸ್ತವ ವಿಶ್ವವನ್ನು ತರಗತಿಯ ಮುಂದಿಡುತ್ತದೆ. ಬೋಧನೆ ಮತ್ತು ಕಲಿಕೆ ಜೀವನಪರ್ಯಂತ ಅಧ್ಯಯನಾಸಕ್ತ ಸಮಾಜದ ನಿರ್ಮಿತಿಯ ಮೂಲಗಳು. ಆದರೆ ತರಗತಿ ಸ್ವಾತಂತ್ರ್ಯಪೂರ್ವದಲ್ಲಿ ಹೇಗಿತ್ತೊ ಹಾಗೆಯೇ ಇದೆ. ಅದೇ ಬೋರ್ಡು, ಅದೇ ಸೀಮೆಸುಣ್ಣ, ಅದೇ ಹೋಂವರ್ಕ್, ಅದೇ ಪರೀಕ್ಷೆ, ಅದೇ ಮೌಲ್ಯಮಾಪನ. ತರಗತಿಯಲ್ಲಿ ಶಿಕ್ಷಕರೇ ಜ್ಞಾನದ ಮೂಲ ಆಕರ ಎಂದು ಭಾವಿಸಲಾಗುತ್ತದೆ. ವಾಸ್ತವವಾಗಿ ತರಗತಿಯಲ್ಲಿ ಗುರುವರ್ಯರು ಮಕ್ಕಳಿಗೆ ಕಲಿಸುವುದರ ಜೊತೆಗೆ ಮಕ್ಕಳಿಂದಲೂ ಕಲಿಯುತ್ತಾರೆ.

ಬೋಧನೆ ಮತ್ತು ಕಲಿಕೆ ಬೇರ್ಪಡಿಸಲಾಗದಷ್ಟು ಪರಸ್ಪರ ಹೆಣೆದುಕೊಂಡಿವೆ. ಈ ಕಾರಣಕ್ಕಾಗಿಯೇ ತರಗತಿಯು ಸಂವಾದದ ರೂಪದಲ್ಲಿರಬೇಕೆಂದು ಹೇಳುವುದು. ಶಿಕ್ಷಕಕೇಂದ್ರಿತ ಆಗುವುದರ ಜೊತೆಗೆ ವಿದ್ಯಾರ್ಥಿಕೇಂದ್ರಿತವೂ ಆದಾಗ ಮಾತ್ರ ತರಗತಿ ಎಂಬ ಬಂಡಿಯ ಸುಸ್ಥಿರ ಓಟ. ‘ನಿರಂತರ ಐದು ನಿಮಿಷಗಳಿಗಿಂತ ಹೆಚ್ಚು ಬೋಧಿಸಬೇಡಿ, ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುತ್ತಿದ್ದಾರೆಯೇ ಎಂದು ಹಿಂದಿರುಗಿ ನೋಡಿ’ ಎನ್ನುವುದು ಶಿಕ್ಷಕರಿಗೆ ತಜ್ಞರ ಕಿವಿಮಾತು. ವಿದ್ಯಾರ್ಥಿಗಳು ಪಾಠ ಗ್ರಹಿಸಿದ್ದೇವೆಂದು ತಲೆಯಾಡಿಸಿ ಆತ್ಮವಂಚನೆ ಮಾಡಿಕೊಳ್ಳಬಾರದು. ಮಾಸ್ತರರು ಬಂದು ಹೋಗುವವರನ್ನು ಗಮನಿಸುವ ಮತ್ತು ಗೌಜು, ಗದ್ದಲವಿಲ್ಲದಂತೆ ನೋಡಿಕೊಳ್ಳುವ ತರಗತಿಯ ದ್ವಾರಪಾಲಕರಲ್ಲ.

ADVERTISEMENT

ತರಗತಿ ನಿರ್ವಹಣೆಯೆಂದರೆ ಮಕ್ಕಳನ್ನು ತೆಪ್ಪಗಿರುವಂತೆ ನಿಯಂತ್ರಿಸುವುದಲ್ಲ. ಶಿಕ್ಷಕರು ಮಕ್ಕಳೊಂದಿಗೆ ಅವರು ಒಟ್ಟಾಗಿ ಕಲಿಯುವಂತೆ, ಬೆಳೆಯುವಂತೆ, ಯಶಸ್ವಿಯಾಗುವಂತೆ ಸಕ್ರಿಯರಾಗುವುದು. ಹೇರುವ ಕಠಿಣ ಶಿಸ್ತು, ಕಟ್ಟುಪಾಡುಗಳೇ ಕೆಲವೊಮ್ಮೆ ಮಕ್ಕಳ ಕಲಿಕೆಗೆ ಅಡೆತಡೆಗಳಾಗಬಹುದು.ಒಪ್ಪ ಓರಣ, ನಾಜೂಕು ಸಾಮಾನ್ಯ ಪ್ರಜ್ಞೆ. ಇಂಥ ನಿಯಮಗಳನ್ನು ವಿಧಿಸುವ ಹಿನ್ನೆಲೆಯನ್ನು ವಿವರಿಸಿದರೆ ಬಹುಮಟ್ಟಿಗೆ ಮಕ್ಕಳು ತಪ್ಪದೆ ಪಾಲನೆಗಿಳಿದಾರು.

ಕ್ಯಾಲಿಫೋರ್ನಿಯಾದ ಶಾಲೆಯೊಂದರಲ್ಲಿ ಮಕ್ಕಳಿಗೆ ಬರೆಯಲು ಅವರವರ ಹೆಸರು ನಮೂದಿಸಿಯೇ ಪೆನ್ಸಿಲ್ ಒದಗಿಸುತ್ತಾರೆ. ಯಾರ್‍ಯಾರು ಪೆನ್ಸಿಲ್ ಮುರಿಯುತ್ತಾರೆ, ಮೊಂಡಾಗಿಸುತ್ತಾರೆ, ಅಗಿಯುತ್ತಾರೆಂದು ತಿಳಿಯುವ ಉಪಾಯವಿದು! ಇವು ವಿದ್ಯುನ್ಮಾನ ದಿನಮಾನಗಳು. ಮಕ್ಕಳು ಮೊಬೈಲ್, ಸ್ಮಾರ್ಟ್‌ಫೋನ್‍ಗಳಿಂದ ಕಲಿಯುವ ಅವಕಾಶಗಳು ಹೆಚ್ಚು. ಆದರೆ ಎಲ್ಲಿ, ಹೇಗೆ ಅವನ್ನು ಹಿತಮಿತವಾಗಿ ಬಳಸಬೇಕೆಂಬ ಮಾರ್ಗದರ್ಶನ ಅವರಿಗೆ ಬೇಕಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವಿದ್ಯುನ್ಮಾನ ಪರಿಕರಗಳು ಅತಿಕ್ರಮಿಸಬಾರದೆಂಬ ಎಚ್ಚರವನ್ನು ಅವರಲ್ಲಿ ಮೂಡಿಸುವುದು ಅಗತ್ಯ.

ತರಗತಿಗೆ ಬರುತ್ತಲೇ ಗಣಿತದ ಮಾಸ್ತರರು ಬೋರ್ಡಿನ ಮೇಲೆ ಅಸಂಬದ್ಧ ಒಕ್ಕಣೆಗಳನ್ನು ಗಮನಿಸುತ್ತಾರೆನ್ನಿ. ಸಿಟ್ಟಿಗೆ ಬದಲಾಗಿ ಶಾಂತಚಿತ್ತದ ಪರ್ಯಾಯ ಮಾರ್ಗಗಳಿಗೆ ಅವರಿಗೆ ಬರವಿಲ್ಲ. ದುರ್ವರ್ತನೆ ನಿರ್ಲಕ್ಷಿಸಬಹುದು, ಸ್ವತಃ ಬೋರ್ಡ್ ಅಳಿಸಿದರೂ ಆಯಿತು. ನೋಡಿ, ಹೀಗೆಲ್ಲ ಗೀಚುವ ಬದಲು ಹೇಳಿಕೊಟ್ಟ ಕೋಷ್ಟಕ, ಸಮೀಕರಣಗಳನ್ನು ಬರೆದರೆ ನಿಮಗೇನೆ ಉಪಯೋಗವಾಗುವುದಲ್ಲ ಎನ್ನುವುದು ರಾಜಮಾರ್ಗ. ಮಕ್ಕಳು ಪಠ್ಯರೀತಿಯ ಸಲಹಾಸೂತ್ರ ಗಳಿಗಿಂತ ಬದುಕಿನ ಆಗುಹೋಗುಗಳ ನಿದರ್ಶನಗಳಿಗೆ ಗಾಢವಾಗಿ ಸ್ಪಂದಿಸುತ್ತಾರೆ. ಮಗು ತಂತಾನೆ ನಡಿಗೆ ಕಲಿಯುವುದು. ನಡೆಯುತ್ತಿರುವ ಇನ್ನೊಂದು ಮಗುವನ್ನು ಅದು ಕಣ್ಣೆತ್ತಿಯೂ ನೋಡದು! ಒಂದೊಂದು ಶಸ್ತ್ರಚಿಕಿತ್ಸೆಯೂ ಭಿನ್ನ. ಅಕ್ಕಪಕ್ಕದ ಮೇಜು ನೋಡಿ ಶಸ್ತ್ರಕ್ರಿಯೆ ನಡೆಸಲಾದೀತೆ? ಇಂತಹ ಉದಾಹರಣೆಗಳು ಹೋಮ್‌ವರ್ಕ್‌, ಪರೀಕ್ಷೆಗಳಲ್ಲಿ ನಕಲು ತಪ್ಪಿಸುವ ಪ್ರವೃತ್ತಿಗೆ ಕಡಿವಾಣ ಹಾಕಬಲ್ಲವು.

18ನೇ ಶತಮಾನದ ವಿಶ್ವಮಾನ್ಯ ಬಹುಮುಖ ಸಾಧಕ ಪ್ರತಿಭೆ ಬೆಂಜಮಿನ್ ಫ್ರಾಂಕ್ಲಿನ್‍ರ ನುಡಿ ಪ್ರಸಿದ್ಧ
ವಾಗಿದೆ: ‘ಹೇಳು, ನಾನು ಮರೆಯುವೆ. ಬೋಧಿಸು, ನಾನು ನೆನಪಿಡುವೆ. ಒಳಗೊಳ್ಳು, ನಾನು ಕಲಿಯುವೆ’. ಇಂದಿನ ವಿದ್ಯಾರ್ಥಿಗಳನ್ನು ನಾಳೆಗೆ ಪುನರ್ ಕಲ್ಪಿಸಿಕೊಳ್ಳುವ ದಿಸೆಯಲ್ಲಿ ಶಿಕ್ಷಕರು ಕರ್ತವ್ಯಶೀಲರಾಗಬೇಕಿದೆ.

‘ಪ್ರಶ್ನೆ- ಉತ್ತರ’ ಕ್ರಮದಲ್ಲಿ ಕಲಿಸುವುದಕ್ಕಿಂತ ಮಕ್ಕಳು ಪ್ರಶ್ನೆಗಳಿಗೆ ತಾವೇ ಉತ್ತರಗಳನ್ನುಕಂಡುಕೊಳ್ಳುವಂತೆ ಬೋಧಿಸುವ ವಿಧಾನ ಪರಿಣಾಮಕಾರಿ. ಈ ಉದ್ದೇಶಕ್ಕಾಗಿ ಅವರಲ್ಲಿ ಸಮೂಹ ಚರ್ಚೆ ಏರ್ಪಡಬೇಕು. ಚಿಕ್ಕ ಚಿಕ್ಕ ಗುಂಪುಗಳನ್ನು ರಚಿಸಿ ಚರ್ಚೆಗೆ ಅನುವು ಮಾಡಿಕೊಡಬೇಕು. ತರಗತಿಯಲ್ಲಿ ಸಾಂಪ್ರದಾಯಿಕ ಮೇಜುಗಳನ್ನು ತೆಗೆದು ದುಂಡುಮೇಜುಗಳನ್ನು ಹಾಕಬೇಕಿದೆ. ವಿದ್ಯಾರ್ಥಿಗಳಲ್ಲಿ ಸ್ವಜಾಗೃತಿ ಉಂಟಾಗಲು ಅವರಿಗೆ ಪೂರ್ಣ ಅಧಿಕಾರ ನೀಡಬೇಕು, ಅವರ ಆಯ್ಕೆ ಮತ್ತು ವಿಧಾನಗಳಲ್ಲಿ ವಿಶ್ವಾಸವಿಡಬೇಕು.

ಕಲಿಕೆ ಒಟ್ಟಾರೆ ಮಕ್ಕಳ ಹೊಣೆಗಾರಿಕೆಯೆ. ಕುದುರೆಯನ್ನು ನೀರಿನತನಕ ಒಯ್ಯಬಹುದು. ನೀರು ಕುಡಿಯಬೇಕಾದ್ದು ಕುದುರೆಯೇ. ‘ವಿದ್ಯಾರ್ಥಿಗಳು ಒಳ್ಳೆಯ ನಡತೆ ಹೊಂದಿರುವುದಲ್ಲದೆ ತಮ್ಮ ಸಹಪಾಠಿಗಳೂ ಅಸಭ್ಯ ವರ್ತನೆಗೆ ಮುಂದಾಗದಂತೆ ನೋಡಿಕೊಳ್ಳಬೇಕು’ ಎಂದರು ಮಹಾತ್ಮ ಗಾಂಧಿ. ಸಂಪನ್ನತೆ ಇಲ್ಲದಿದ್ದರೆ ಎಷ್ಟು ವಿದ್ಯೆ ಕಲಿತರೂ ಅದೆಲ್ಲವೂ ವ್ಯರ್ಥ ಎನ್ನುವುದು ಅವರ ನಿಲುವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.