ADVERTISEMENT

ಸಂಗತ | ಶೋಕಿಗೆ ಪೇಟೆಂಟ್‌ ಇದೆಯೇ?

ದೀಪಾ ಹಿರೇಗುತ್ತಿ
Published 1 ಜೂನ್ 2020, 3:01 IST
Last Updated 1 ಜೂನ್ 2020, 3:01 IST
   

ಸಚಿವರೊಬ್ಬರು ಇತ್ತೀಚೆಗೆ ಮಹಿಳೆಯೊಬ್ಬರಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ವಿಷಯ ಮಾಧ್ಯಮಗಳಲ್ಲಿ ಸಂಚಲನವನ್ನುಂಟು ಮಾಡಿತ್ತು. ಆದರೆ, ಈ ವಿಷಯದ ಚರ್ಚೆ ಪಡೆದುಕೊಂಡ ತಿರುವು ನನ್ನಲ್ಲಿ ಅಚ್ಚರಿ ಮತ್ತು ಸಂಕಟವನ್ನು ಏಕಕಾಲದಲ್ಲಿ ಮೂಡಿಸಿತು. ಅದೆಂದರೆ, ಬಹಳ ಮಂದಿ, ಪ್ರಜ್ಞಾವಂತರೆನಿಸಿಕೊಂಡಿರುವ ಮಹಿಳೆಯರನ್ನೂ ಒಳಗೊಂಡಂತೆ, ಸಚಿವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಆ ಮಹಿಳೆಯ ವೈಯಕ್ತಿಕ ನಿಂದನೆಗೆ ಮುಂದಾಗಿದ್ದು! ಅದರಲ್ಲೂ ಆಕೆ ಬೈಕ್ ಓಡಿಸುವ, ಜೀನ್ಸ್ ಹಾಕಿರುವ ಪಟಗಳನ್ನು ಹಾಕಿ, ‘ಈಕೆ ರೈತ ಮಹಿಳೆಯಾ’ ಎಂದು ಅಸಂಬದ್ಧ ಮಾತುಗಳನ್ನು ಆಡಿದ್ದು!

ರೈತ ಮಹಿಳೆಯರು ಜೀನ್ಸ್ ಧರಿಸಬಾರದು ಎಂದು ಯಾವುದಾದರೂ ನಿಯಮವಿದೆಯೇ? ಬೈಕ್ ಓಡಿಸಬಾರದು ಎಂದು ಕಾನೂನಿದೆಯೇ? ಖಂಡಿತ ಇಲ್ಲ. ಆದರೆ ರೈತರೆಂದರೆ, ಮಹಿಳೆಯರೆಂದರೆ ಹೀಗೆಯೇ ಇರಬೇಕು, ಬಡವರೆಂದರೆ ಇಂಥದ್ದೇ ಬಟ್ಟೆ ಹಾಕಬೇಕು ಎಂಬ ಕಲ್ಪನೆಗಳು ಎಷ್ಟರಮಟ್ಟಿಗೆ ಸರಿ? ತಮ್ಮದೇ ಆದ ಕಂಫರ್ಟ್ ಝೋನ್‍ಗಳಲ್ಲಿ ಬೆಚ್ಚಗೆ ಇದ್ದುಕೊಂಡು ಬೇರೆಯವರ ಬಗ್ಗೆ ಕಮೆಂಟ್‍ಗಳ ಬಾಣ ಬಿಡುವ ಇಂಥ ಮಂದಿಯ ಬಗ್ಗೆ ಕನಿಕರ ಹುಟ್ಟುತ್ತದೆ. ಇವರಿಗೆ ತಿನ್ನಲು ಬೇಕಾಗಿದ್ದು ರೈತರು ಬೆಳೆದ ಪದಾರ್ಥಗಳೇ. ಆದರೆ ಅದನ್ನು ಬೆಳೆಯುವ ರೈತ ಬಂಧುಗಳು ಯಾವಾಗಲೂ ಮಣ್ಣು ಮೆತ್ತಿದ ಬಟ್ಟೆ ಹಾಕಿಕೊಂಡು ಹೊಲದಲ್ಲಿ ಗೇಯುತ್ತಾ ಇರಬೇಕು! ಅವರು ಆಧುನಿಕ ಬಟ್ಟೆ ಧರಿಸಿದರೆ, ಕೂಲಿಂಗ್ ಗ್ಲಾಸ್ ಹಾಕಿದರೆ, ಬೈಕು, ಕಾರುಗಳಲ್ಲಿ ಓಡಾಡಿದರೆ ಅವರು ರೈತರೇ ಅಲ್ಲ ಎಂಬ ಏಕಪಕ್ಷೀಯ ನಿರ್ಧಾರಕ್ಕೆ ಬಂದುಬಿಡುತ್ತಾರೆ!

‘ಅಬ್ಬಬ್ಬಾ, ರೈತರಾದ್ರೂ ಏನು ಶೋಕಿ’ ಎಂದು ಮನೆಯಲ್ಲಿ ಕೂತು ಪೋಸ್ಟ್ ಹಾಕುತ್ತಿರುವ ಮೂರ್ಖರೇ ಒಮ್ಮೆ ಚಿಕ್ಕಮಗಳೂರು, ಕೊಡಗಿನ ಕಡೆಗೆ ಬನ್ನಿ. ನಿಮ್ಮನ್ನೇ ಖರೀದಿ ಮಾಡುವ ಸಾಮರ್ಥ್ಯವಿರುವ ರೈತರು ಮಣ್ಣಲ್ಲಿ ಇಳಿದು ಕೆಲಸ ಮಾಡುವುದನ್ನು ನೋಡಿ! ಅದೇ ರೈತರು ಯಾವುದಾದರೂ ಕಾರ್ಯಕ್ರಮಕ್ಕೆ ಹೊರಟಾಗ ನಿಮ್ಮ ಪೇಜ್ ತ್ರೀ ಸೆಲೆಬ್ರಿಟಿಗಳೂ ನಾಚಬೇಕು! ಹಾಕುವ ಬಟ್ಟೆಯಿಂದ ಒಬ್ಬರ ವ್ಯಕ್ತಿತ್ವವನ್ನು ಅಳೆಯುವ ಅಸೂಕ್ಷ್ಮತೆ ಈ ಆಧುನಿಕ ಯುಗದಲ್ಲೂ ಇರುವುದು ನಿಜಕ್ಕೂ ರೇಜಿಗೆ ಹುಟ್ಟಿಸುವ ಸಂಗತಿ.

ADVERTISEMENT

ಪ್ರಾಣಿಗಳಿಗಿಂತ ಮನುಷ್ಯ ಏಕೆ ಭಿನ್ನ ಎಂದರೆ ಆತ ತನ್ನ ಇರುವಿಕೆಯನ್ನು, ಶ್ರೇಷ್ಠತೆಯನ್ನು ಸಾಬೀತುಪಡಿಸಲು ಸದಾ ಹೆಣಗುತ್ತಿರುತ್ತಾನೆ. ಹಾಗಾಗಿಯೇ ಊಟ, ಬಟ್ಟೆ ಎರಡೂ ಇದ್ದರೂ ಆತ ಸಾಹಸಗಳಿಗೆ ಕೈ ಹಾಕುತ್ತಾನೆ, ಅಸಾಧ್ಯವನ್ನು ಸಾಧಿಸಲು ಶ್ರಮಪಡುತ್ತಾನೆ. ಚೆನ್ನಾಗಿ ಬದುಕುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಅದೇ ರೀತಿ ನಾವು ಹೇಗೆ ಕಾಣಬೇಕು, ಎಂತಹ ಬಟ್ಟೆ ಧರಿಸಬೇಕು ಎಂಬುದು ವ್ಯಕ್ತಿಯ ಆಯ್ಕೆ.

ಬೇರೆಯವರನ್ನು ಕೀಳಾಗಿಸಿ ತಾವು ಮೇಲು ಎನಿಸಿಕೊಳ್ಳುವುದು ಶತಶತಮಾನಗಳಿಂದ ನಡೆದುಕೊಂಡು ಬಂದ ಪ್ರಕ್ರಿಯೆ. ಈ ಮೇಲು– ಕೀಳು ಎಂಬುದು ಸ್ವತಃ ದೇವರೇ ಮಾಡಿದ್ದು ಎಂದು ಜಗತ್ತಿನ ಜನರೆಲ್ಲ ಅದನ್ನು ಒಪ್ಪಿಕೊಂಡಿದ್ದರು. ರಾಜನಂತೂ ದೇವರಿಂದಲೇ ಕಳುಹಿಸಿದವನು, ದೇವರೊಂದಿಗೆ ನೇರ ಸಂಪರ್ಕ ಹೊಂದಿರುವವನು, ಮನುಷ್ಯಮಾತ್ರರಿಂದ ಅವನನ್ನು ಪಟ್ಟದಿಂದ ಇಳಿಸುವುದಿರಲಿ, ಕೂದಲು ಕೊಂಕಿಸಲೂ ಆಗದು ಎಂಬ ನಂಬಿಕೆ ಜನರಲ್ಲಿತ್ತು. ಹಾಗಾಗಿ ಜನರೆಲ್ಲರೂ ಈ ಮೇಲು– ಕೀಳಿನ ಶ್ರೇಣೀಕೃತ ವ್ಯವಸ್ಥೆಯನ್ನು ಬಾಯಿಮುಚ್ಚಿ ಒಪ್ಪಿಕೊಳ್ಳುತ್ತಿದ್ದರಷ್ಟೇ ಅಲ್ಲ, ತಮ್ಮ ಹೀನ ಸ್ಥಿತಿಯನ್ನು ಮೀರಲು ಯಾವ ಪ್ರಯತ್ನವನ್ನೂ ಮಾಡುತ್ತಿರಲಿಲ್ಲ ಮತ್ತು ಈ ನಂಬಿಕೆಯನ್ನು ಜನರಲ್ಲಿ ಕಾಯಮ್ಮಾಗಿ ಇರಿಸಲು ರಾಜರು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದರು. ಆದರೆ ತಾವು ನಂಬಿರುವುದು, ಹೇಳುತ್ತಿರುವುದು ವಾಸ್ತವವಲ್ಲ ಎಂದು ಅವರಿಗೂ ಗೊತ್ತಿತ್ತು. ರಾಜನನ್ನು ಯಾರಿಂದ ಏನೂ ಮಾಡಲಾಗದು ಎಂದು ನಂಬಿದ್ದರಷ್ಟೇ, ಆದರೆ ಜಗತ್ತಿನಾದ್ಯಂತ ಪ್ರತೀ ರಾಜನೂ ತನ್ನ ಆಹಾರ ಸ್ವೀಕರಿಸುವ ಮುನ್ನ ಮತ್ತೊಬ್ಬರು ಅದನ್ನು ಪರೀಕ್ಷಿಸಲೇ ಬೇಕಿತ್ತು! ಇದು ನಂಬಿಕೆಗೂ ವಾಸ್ತವಿಕತೆಗೂ ಇರುವ ವ್ಯತ್ಯಾಸವನ್ನೂ ರಾಜವರ್ಗದ ಪೊಳ್ಳುತನವನ್ನೂ ತೋರಿಸುತ್ತದೆ.

ಅದೇ ರೀತಿ ನಮ್ಮನ್ನು ನಾವು ಸ್ಟ್ಯಾಂಡರ್ಡ್ ಜನ ಎಂದು ಕರೆದುಕೊಳ್ಳುವ ನಾವೂ ಆಂತರ್ಯದಲ್ಲಿ ನಮ್ಮ ಪೊಳ್ಳುತನವನ್ನು ಬಲ್ಲವರೇ ಆಗಿದ್ದೇವೆ. ಬಹುಶಃ ಅದನ್ನು ಮುಚ್ಚಿಕೊಳ್ಳಲೆಂದೇ ಇಂತಹ ಮಾತುಗಳನ್ನು ಆಡುತ್ತಿರುತ್ತೇವೆ. ಮುಖ್ಯ ವಿಚಾರದಿಂದ ಹೊರಳಿ, ರೈತ ಹೆಣ್ಣುಮಗಳು ಜೀನ್ಸ್ ಹಾಕಿದ್ದಕ್ಕೆ, ಗಾಡಿ ಓಡಿಸಿದ್ದಕ್ಕೆ ಟ್ರೋಲ್ ಮಾಡುತ್ತೇವೆ, ಜತೆಜತೆಗೇ ಯಾರೋ ಬುರ್ಖಾ ಹಾಕುವುದನ್ನು, ತಲೆ ಮೇಲೆ ಸೆರಗು ಹಾಕುವುದನ್ನು, ಯಾವುದೋ ದೇಶದಲ್ಲಿ ಹೆಣ್ಣು ಮಕ್ಕಳಿಗೆ ವಾಹನ ಚಾಲನೆಗೆ ನಿಷೇಧ ಇರುವುದನ್ನೂ ಟೀಕಿಸುತ್ತೇವೆ. ಇವೆರಡೂ ಒಂದಕ್ಕೊಂದು ವಿರುದ್ಧ ವಿಚಾರಗಳೆಂದು ನಮಗೆ ಗೊತ್ತಾಗುವುದೇ ಇಲ್ಲ! ಅಥವಾ ಗೊತ್ತಾದರೂ ಗಮನಿಸದ ಹುಂಬತನ ಅಥವಾ ದಾರ್ಷ್ಟ್ಯ!

ಹೆಸರಿಗೆ ವೈಚಾರಿಕತೆಯ ಸಮುದ್ರದಲ್ಲಿ ತೇಲುತ್ತಿರುವೆವಾದರೂ ‘ಯಾರ‍್ಯಾರು ಎಲ್ಲೆಲ್ಲಿ ಇರಬೇಕೋ ಅಲ್ಲೇ ಇರಬೇಕ್ರೀ’ ಎನ್ನುತ್ತ, ನಮ್ಮ ಅಸ್ತಿತ್ವ ಇರುವುದು ಕ್ಷುದ್ರತೆಯ ಹಾಳುಬಾವಿಯಲ್ಲಿಯೇ ಎಂಬುದನ್ನು ಪುರಾವೆ ಸಮೇತ ಮತ್ತೆಮತ್ತೆ ಸಾಬೀತುಪಡಿಸುತ್ತಲೇ ಇದ್ದೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.