ADVERTISEMENT

ಸಂಗತ: ಪ್ರಶ್ನಾತೀತವಾಗಲಿ ಪ್ರಶ್ನೆಪತ್ರಿಕೆ

ಪ್ರಶ್ನೆಗಳು ಗೊಂದಲ ಮೂಡಿಸುವಂತೆ ಇರಬಾರದು. ಹಾಗೆ ಇದ್ದರೆ ಮೌಲ್ಯಮಾಪನದ ಬಗ್ಗೆಯೇ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ

ಬಿ.ಎಸ್.ಭಗವಾನ್
Published 24 ಫೆಬ್ರುವರಿ 2025, 0:00 IST
Last Updated 24 ಫೆಬ್ರುವರಿ 2025, 0:00 IST
.
.   

ಯಾವುದೇ ಪರೀಕ್ಷೆಗೆ ಅನುಗುಣವಾದ ಪ್ರಶ್ನೆಪತ್ರಿಕೆಯ ರಚನೆ ಶಿಕ್ಷಕರ ಪಾಲಿಗೆ ಪ್ರಯಾಸಕರ ಮತ್ತು ಜವಾಬ್ದಾರಿಯುತವಾದ ಕಾರ್ಯ. ವಿದ್ಯಾರ್ಥಿಗಳು ನಿರೀಕ್ಷಿಸಿದ್ದನ್ನು ಕಲಿತಿದ್ದಾರೆಯೇ ಎನ್ನುವುದಕ್ಕೆ ಪ್ರಶ್ನೆಪತ್ರಿಕೆಯು ಅಳತೆಗೋಲು. ಅದು ಔಪಚಾರಿಕವಾಗದೆ ಆಯಾ ವಿಷಯಗಳಲ್ಲಿನ ಎಲ್ಲ ಅಧ್ಯಾಯಗಳನ್ನೂ ಒಳಗೊಂಡು ಸಂಕಲನಾತ್ಮಕ ಆಗಿರಬೇಕು.

ಆಕಸ್ಮಿಕವಾಗಿಯೊ ಅಥವಾ ನಿರ್ಲಕ್ಷ್ಯದಿಂದಲೊ ಒಂದು ಸಣ್ಣ ತಪ್ಪಾದರೂ ರಗಳೆ, ರಂಪತಾರಕಕ್ಕೇರುತ್ತದೆ. ವಿದ್ಯಾರ್ಥಿಗಳು ಖಿನ್ನರಾಗುತ್ತಾರೆ, ಉಳಿದ ಪ್ರಶ್ನೆಗಳನ್ನೂ ಸಮರ್ಥವಾಗಿ ಎದುರಿಸಲಾರದಷ್ಟು ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. ಪೋಷಕರು ಹಾಗೂ ಬೋಧಕರಲ್ಲಿ ಅಸಮಾಧಾನ ಉಂಟಾಗುತ್ತದೆ. ಸಾರ್ವಜನಿಕರು ಶಿಕ್ಷಣ ವ್ಯವಸ್ಥೆಯಲ್ಲಿ ಇಟ್ಟಿರುವ ವಿಶ್ವಾಸ ಸಹ ಕ್ಷೀಣಿಸುತ್ತದೆ.

ಪ್ರಶ್ನೆಪತ್ರಿಕೆಯು ಪಾಂಡಿತ್ಯ ಪ್ರದರ್ಶನವೂ ಅಲ್ಲ, ಸವಾಲೂ ಅಲ್ಲ. ವಿದ್ಯಾರ್ಥಿಗಳು ಅಧ್ಯಾಯಗಳನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆಯೇ ಎನ್ನುವುದರ ಸಮೀಕ್ಷೆಯಷ್ಟೆ. ಪ್ರಶ್ನೆಗಳು ಕಠಿಣವಾದಷ್ಟೂ ಪ್ರಶ್ನೆ ಪತ್ರಿಕೆಯ ಗುಣಮಟ್ಟ ಹೆಚ್ಚುವುದೆಂಬ ಭಾವನೆಯಿದೆ. ಬಹುಶಃ ಬುದ್ಧಿವಂತಿಕೆಗೆ ಉತ್ತೇಜನ, ನಕಲು ತಡೆ ಇದರ ಹಿಂದೆ ಇರಬಹುದು. ಆದರೆ ಕಗ್ಗಂಟಾದ ಪ್ರಶ್ನೆಗಳಿಂದ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಆಗುವುದೇ ಹೆಚ್ಚು. ಕೆಲವು ವಿದ್ಯಾರ್ಥಿಗಳು ನಿರುತ್ಸಾಹದಿಂದ ಬೇಗ ಕೊಠಡಿ ತ್ಯಜಿಸುವಂತೆ ಆಗಬಹುದು. ಅವರ ವರ್ತನೆ ಇತರರನ್ನೂ ಪ್ರಭಾವಿಸುತ್ತದೆ. ಸರಳ ಮತ್ತು ನೇರ ಪ್ರಶ್ನೆಗಳ ಮೂಲಕವೇ ವಿದ್ಯಾರ್ಥಿಗಳ ಜ್ಞಾನವನ್ನು ಪರೀಕ್ಷಿಸಬಹುದು. ಪರೀಕ್ಷೆಯು ಮಾಪನ ಮಾಡುವುದು ನೆನಪಿನ ಶಕ್ತಿಯನ್ನಲ್ಲ, ಬದಲಿಗೆ ಸ್ವಂತಿಕೆಯನ್ನು.

ADVERTISEMENT

ಬಹು ಆಯ್ಕೆ ಪ್ರಶ್ನೆಗಳ ಬಗ್ಗೆ ವಿಶೇಷ ಗಮನ ಅಗತ್ಯ. ಸೌರವ್ಯೂಹದಲ್ಲಿ ಸೂರ್ಯನಿಗೆ ಅತಿ ಸಮೀಪದ ಗ್ರಹ ಯಾವುದು ಎನ್ನುವಾಗ ಆಯ್ಕೆ ಪಟ್ಟಿಯಲ್ಲಿ ಗುರು, ಬುಧ, ಮಂಗಳನ ಜೊತೆಗೆ ಚಂದ್ರನೂ ಇದ್ದರೆ ಎಂಥ ಆಭಾಸ. ಚಂದ್ರನು ಭೂಮಿಯ ಉಪಗ್ರಹ ತಾನೆ? ಬಳಸುವ ಪರಿಭಾಷೆ ಅಸ್ಪಷ್ಟವಾದರೆ ಅಥವಾ ಪಠ್ಯಕ್ರಮಕ್ಕೆ ಹೊರತಾಗಿದ್ದರೆ ಗೊಂದಲ ಕಟ್ಟಿಟ್ಟ ಬುತ್ತಿ.

ಪ್ರಶ್ನೆಪತ್ರಿಕೆ ಎಂದರೇನೆ ಗೋಪ್ಯತೆ. ಹಾಗಾಗಿ, ಶತಾಯಗತಾಯ ಎಲ್ಲ ಹಂತಗಳಲ್ಲೂ ಗೋಪ್ಯತೆ ಕಾಪಾಡಬೇಕು. ಪರೀಕ್ಷಾಪೂರ್ವ ಜಾಗ್ರತೆ ವಹಿಸಿದರೆ ಪರೀಕ್ಷೆ ನಂತರದ ಗಲಿಬಿಲಿಗಳನ್ನು ತಪ್ಪಿಸಬಹುದು. ಮಿಂಚಿಹೋದುದಕ್ಕೆ ಸಮಜಾಯಿಷಿ, ವಿಷಾದದಿಂದ ಆಗುವುದು ತಾನೇ ಏನು? ಜಾಗರೂಕತೆಯು ಚಿಕಿತ್ಸೆಗಿಂತ ಮೇಲು. ಪ್ರಶ್ನೆಪತ್ರಿಕೆಯು ವಿದ್ಯಾರ್ಥಿಗಳ ಅರಿವನ್ನು ವೃದ್ಧಿಸುವುದರ ಜೊತೆಗೆ ಸೃಜನಶೀಲತೆಯನ್ನೂ ಪ್ರಚೋದಿಸುವಂತೆ ಇರಬೇಕು. ಯಾವುದೇ ಧರ್ಮ, ಜಾತಿ, ವರ್ಗ, ದೇಶ, ಜನಾಂಗದ ಕುರಿತು ಪ್ರಶ್ನೆಗಳು ಇರಬೇಕಿಲ್ಲ. ವಸ್ತುನಿಷ್ಠತೆ ಮುಖ್ಯವೇ ವಿನಾ ವ್ಯಕ್ತಿನಿಷ್ಠತೆ ಅಲ್ಲ.

ಸಂಗ್ರಹಯೋಗ್ಯವಾದ ಪ್ರಶ್ನೆಪತ್ರಿಕೆಗಳೇ ಮುಂದೆ ಗ್ರಂಥಾಲಯದಲ್ಲಿ ಒಂದು ಮೌಲಿಕ ಪರಾಮರ್ಶನ ಪುಸ್ತಿಕೆಯ ರೂಪ ತಳೆದಾವು. ಪ್ರಶ್ನಿಸುವವರು ಉತ್ತರಗಳನ್ನು ಚೆನ್ನಾಗಿ ತಿಳಿದೇ ಪ್ರಶ್ನಿಸುತ್ತಾರೆ ಎಂಬ ನಂಬಿಕೆ ಪರೀಕ್ಷಾರ್ಥಿಗಳದ್ದು. ಹಾಗಾಗಿ, ಪ್ರಶ್ನೆಪತ್ರಿಕೆಯು ಈ ವಿಶ್ವಾಸದ ಸಾಕಾರವಾಗಿರಬೇಕು ಅಲ್ಲವೆ? ಪ್ರಶ್ನೆಪತ್ರಿಕೆ ಒಂದೇ. ಆದರೆ ಅದರ ಹಿಂದಿರುವ ಕನಸುಗಳು ಅಸಂಖ್ಯ. ಪೋಷಕ- ಬೋಧಕರ ಸಭೆ, ಸಂವಾದಗಳಲ್ಲಿ, ಪ್ರಶ್ನೆಪತ್ರಿಕೆ ಹೇಗಿರಬೇಕು, ಎಂತಿರಬೇಕು ಎನ್ನುವ ಕುರಿತು ಆಗಿಂದಾಗ್ಗೆ ವಿಚಾರಪೂರಿತ ಚರ್ಚೆ ನಡೆಯಬೇಕಿದೆ.

ಪ್ರಶ್ನೆಗಳಲ್ಲಿ ಲೋಪವಾದರೆ ಅದು ಮೌಲ್ಯ ಮಾಪನದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಾಗೋ ಹೀಗೋ ಆಯಾ ಉತ್ತರಗಳಿಗೆ ಅಂಕ ನಿಗದಿಯಲ್ಲಿ ಔದಾರ್ಯ ತೋರಲು ಮುಖ್ಯಮೌಲ್ಯಮಾಪಕರು ಸಹಮೌಲ್ಯಮಾಪಕರಿಗೆ ನಿರ್ದೇಶಿಸ ಬಹುದು. ಆದರೆ ಮೌಲ್ಯಮಾಪನದಲ್ಲಿ ಏಕರೂಪತೆ ನಿಭಾಯಿಸುವುದೇ ಒಂದು ತೊಡಕಾಗುತ್ತದೆ. ಮತ್ತೆ ಇಲ್ಲಿ ವಿದ್ಯಾರ್ಥಿಗಳೇ ಸಂತ್ರಸ್ತರು. ಕೃಪಾಂಕದ ಹಂಗೇ ಇರದಂತೆ ಪ್ರಶ್ನೆಪತ್ರಿಕೆಯು ವಿದ್ಯಾರ್ಥಿಗಳ ಕೈಸೇರಬೇಕು. ಉತ್ತಮ ಪ್ರಶ್ನೆಪತ್ರಿಕೆಯ ರಚನೆಯು ಕಲೆಗೂ ಮೀರಿದ ಒಂದು ಕೌಶಲ. ಶಿಕ್ಷಕರು ತಮ್ಮ ಅಧ್ಯಯನ, ಅನುಭವಗಳನ್ನು ಸಮಗ್ರವಾಗಿ ಬಳಸಿಕೊಂಡರೆ ವಿದ್ಯಾರ್ಥಿಸ್ನೇಹಿ ಪ್ರಶ್ನೆಪತ್ರಿಕೆ ಸಿದ್ಧವಾಗುತ್ತದೆ.

ಶಿಕ್ಷಣ ವಲಯದಲ್ಲಿ ಒಂದು ಗೊತ್ತುವಳಿ ಪ್ರಚಲಿತ ದಲ್ಲಿದೆ. ಶೇಕಡ 50ರಷ್ಟು ಪ್ರಶ್ನೆಗಳು ಸಾಮಾನ್ಯ ವಿದ್ಯಾರ್ಥಿಗಳು ಸಹ ಸುಲಭವಾಗಿ ಉತ್ತರಿಸುವಂತೆ ಇರಬೇಕು. ಶೇಕಡ 30ರಷ್ಟು ಪ್ರಶ್ನೆಗಳು ಬುದ್ಧಿವಂತರಿಗೆ ನಿಲುಕಬೇಕು, ಇನ್ನುಳಿದ ಶೇಕಡ 20ರಷ್ಟು ಪ್ರಶ್ನೆಗಳು ಆಳವಾಗಿ ಆಲೋಚಿಸಿ ಎದುರಿಸುವಂತೆ ಇರಬೇಕು. ಇದೊಂದು ಮಾದರಿ ಆಶಯವಷ್ಟೆ. ಯಾವ್ಯಾವ ಪ್ರಶ್ನೆಗೆ ಉತ್ತರಿಸಲು ಎಷ್ಟು ಸಮಯ ತಗಲುತ್ತದೆ ಎನ್ನುವುದನ್ನೂ ಪರಿಗಣಿಸುವುದು ಅಗತ್ಯ. ಪ್ರಶ್ನೆಪತ್ರಿಕೆ ರಚನಾ ಸಮಿತಿಯವರು ತಾವೇ ವಿದ್ಯಾರ್ಥಿಗಳ ಸ್ಥಾನದಲ್ಲಿ ನಿಂತು ಪ್ರಶ್ನೆಗಳಿಗೆ ಉತ್ತರ ಬರೆದು ಪರಿಶೀಲಿಸುವುದು ಉತ್ತಮ. ಪ್ರಶ್ನೆಗಳನ್ನು ನಿಗದಿತ ಸಮಯದಲ್ಲಿ ಉತ್ತರಿಸಲು ಆದೀತೆ ಅಥವಾ ಇಲ್ಲವೇ ಎನ್ನುವುದೂ ತಿಳಿಯುತ್ತದೆ.

ವಿದ್ಯಾರ್ಥಿಗಳು, ಪೋಷಕರು, ಬೋಧಕರ ಒಕ್ಕೊರಲ ಆಗ್ರಹ ಒಂದೇ: ತಪ್ಪಿಲ್ಲದ ಪ್ರಶ್ನೆಪತ್ರಿಕೆ ತನ್ನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.