ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕ, ಪೋಷಕ, ವಿದ್ಯಾರ್ಥಿಗಳನ್ನು ಒಳಗೊಂಡ ತ್ರಿಕೋನವು ಪ್ರಮುಖ ಪಾತ್ರ ವಹಿಸುತ್ತದೆ. ಈ ತ್ರಿಕೋನವು ಸಮಬಾಹು ತ್ರಿಕೋನವಾಗಿದ್ದು, ಎಲ್ಲ ಮೂರು ಬಾಹುಗಳೂ ಸಮಾನ ಪಾತ್ರ, ಜವಾಬ್ದಾರಿ ವಹಿಸಿದಲ್ಲಿ ಮಾತ್ರ ವಿದ್ಯಾರ್ಥಿಯ ಅಭಿವೃದ್ಧಿ ಸಾಧ್ಯ.
ಹೆಚ್ಚಿನ ವೇಳೆ ತಮ್ಮ ಮಕ್ಕಳನ್ನು ಶಾಲೆ, ಕಾಲೇಜಿಗೆ ಸೇರಿಸುವುದಕ್ಕೆ ಮಾತ್ರ ಪೋಷಕರ ಜವಾಬ್ದಾರಿ ಸೀಮಿತವಾಗಿರುತ್ತದೆ. ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗೆಗಿನ ಮಾಹಿತಿಯು ಪ್ರಗತಿ ಪತ್ರದ ಮೂಲಕ ಆಗಾಗ್ಗೆ ಪೋಷಕರಿಗೆ ತಿಳಿಯುತ್ತದೆ. ಕಡಿಮೆ ಅಂಕ ಬಂದಾಗ ಮಾತ್ರ ಕೆಲ ಪೋಷಕರು ಶಿಕ್ಷಕರನ್ನು ಭೇಟಿಯಾಗಿ ತಮ್ಮ ಆತಂಕವನ್ನು ಹೊರಹಾಕುತ್ತಾರೆ. ಇನ್ನು ಪೋಷಕರು ಶಾಲೆಗೆ ಬಂದರೆ ಶಾಲೆಯ ಶೈಕ್ಷಣಿಕ ಸಮಯ ನಷ್ಟ, ಅದರಿಂದ ಹೆಚ್ಚಿನ ಉಪಯೋಗವಾಗದು ಎಂಬ ಧೋರಣೆ ಕೆಲ ಶಾಲೆಗಳದ್ದಾಗಿರುತ್ತದೆ. ತಾವು ಸಭೆಗಳನ್ನು ಆಯೋಜಿಸಿದರೂ ಬೆರಳೆಣಿಕೆಯಷ್ಟು ಪೋಷಕರು ಮಾತ್ರ ಹಾಜರಾಗುತ್ತಾರೆ ಎಂಬ ದೂರು ಸಾಮಾನ್ಯವಾಗಿ ಹೆಚ್ಚಿನ ಶಾಲೆಗಳದ್ದಾಗಿರುತ್ತದೆ.
ಈ ಶೈಕ್ಷಣಿಕ ಸಾಲಿನಲ್ಲಿ ಪೋಷಕರನ್ನು ಶಾಲೆಗೆ ಆಹ್ವಾನಿಸಿ, ವ್ಯವಸ್ಥಿತವಾಗಿ ಸಭೆ ನಡೆಸುವುದರ ಪ್ರಾಮುಖ್ಯ ಹಾಗೂ ವಿಧಾನದ ಕುರಿತು ಶಿಕ್ಷಕರನ್ನು ಸಜ್ಜುಗೊಳಿಸುವ ಉಪಕ್ರಮವೊಂದನ್ನು ಶಿಕ್ಷಣ ಇಲಾಖೆಯು ಬೆಂಗಳೂರು ನಗರ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಆಯೋಜಿಸಿತ್ತು. ಈ ಸಂಬಂಧ, ವರ್ಷದಲ್ಲಿ ಮೂರು ಬಾರಿ ಪೋಷಕರ ಸಭೆಗಳನ್ನು ಯಾವ ರೀತಿ ನಡೆಸಬೇಕು ಎಂಬ ಬಗ್ಗೆ ವಿಸ್ತೃತ ಮಾರ್ಗಸೂಚಿಯ ಸಹಿತ ಶಿಕ್ಷಕರಿಗೆ ತರಬೇತಿಯನ್ನು ನೀಡಲಾಗಿತ್ತು.
ಪೋಷಕರ ಸಭೆಗಳಿಗೆ ಪೋಷಕರು ಸರಿಯಾಗಿ ಹಾಜರಾಗುವುದಿಲ್ಲ ಎಂಬ ಸಾಮಾನ್ಯ ಧೋರಣೆಗೆ ವಿರುದ್ಧವಾದ ಅಭಿಪ್ರಾಯವನ್ನು ಇತ್ತೀಚೆಗೆ ನಡೆದ ಆಯ್ದ ಶಾಲೆಗಳ ಶಿಕ್ಷಕರ ಅನುಭವ ಹಂಚಿಕೆ ಸಭೆಯಲ್ಲಿ ಶಿಕ್ಷಕರು ಹಂಚಿಕೊಂಡದ್ದು ವಿಶೇಷವೆನಿಸಿತು. ಪೋಷಕರನ್ನು ತೊಡಗಿಸಿಕೊಳ್ಳುವ ದಿಸೆಯಲ್ಲಿ ಶಾಲೆಗಳು ಕೈಗೊಂಡ ನವೀನ ಪ್ರಯತ್ನಗಳ ಫಲವಾಗಿ ಸಭೆಗಳಿಗೆ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಸಕ್ರಿಯವಾಗಿ ಪಾಲ್ಗೊಂಡರು. ಮೊದಲ ಪೋಷಕರ ಸಭೆಯಲ್ಲಿ ಶೇ 20ರಿಂದ ಶೇ 30ರಷ್ಟು ಪೋಷಕರ ಹಾಜರಾತಿ ಇದ್ದದ್ದು, ಎರಡು ಮತ್ತು ಮೂರನೇ ಸಭೆಗಳಲ್ಲಿ ಕ್ರಮವಾಗಿ ಶೇ 60 ಹಾಗೂ ಶೇ 90ಕ್ಕಿಂತ ಹೆಚ್ಚಾಗಿದ್ದ ಬಗ್ಗೆ ಶಿಕ್ಷಕರು ಆಸಕ್ತಿ, ಉತ್ಸಾಹದಿಂದ ವಿವರಿಸಿದರು.
ಪೋಷಕರ ಸಭೆಗೆ ವಿಶೇಷವಾಗಿ ಸಿದ್ಧಪಡಿಸಿದ ಚಂದದ ಆಹ್ವಾನಪತ್ರಗಳನ್ನು ಮಕ್ಕಳ ಮೂಲಕ ಕಳುಹಿಸಿ, ಹಾಜರಾಗಲು ಶಿಕ್ಷಕರು ಮಾಡಿದ್ದ ಪ್ರೀತಿಯ ಮನವಿಗೆ ಪೋಷಕರು ಓಗೊಡದೇ ಇರಲಾಗಲಿಲ್ಲ. ಪೋಷಕರು ಶಾಲೆಗೆ ಬಂದಾಗ ಅವರಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿ, ಹಾಜರಾದ ಪೋಷಕರ ಭಾವಚಿತ್ರಗಳನ್ನು ‘ಶಾಲೆಯ ಕೃತಜ್ಞತಾ ಫಲಕ’ದಲ್ಲಿ ಪ್ರಕಟಿಸಲಾಯಿತು. ಹಾಜರಾಗದೇ ಇದ್ದ ಪೋಷಕರಿಗೆ ಆ ಸುದ್ದಿ ತಲುಪಿ, ತಾವೂ ಮುಂದಿನ ಪೋಷಕರ ಸಭೆಗೆ ಹಾಜರಾಗಬೇಕು ಎಂಬ ಸಂಕಲ್ಪ ಮಾಡುವಂತೆ ಪ್ರೇರೇಪಿಸಿತು.
ಒಂದು ಶಾಲೆಯಂತೂ ಪೋಷಕರಿಗಾಗಿ ಆಹಾರ ಮೇಳ, ಥ್ರೋಬಾಲ್, ಮ್ಯೂಸಿಕಲ್ ಚೇರ್ ಆಟದಂತಹ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿತ್ತು. ಈ ಮೂಲಕ ಪೋಷಕರ ದುಗುಡವನ್ನು ಕಡಿಮೆ ಮಾಡಿ, ಅವರಲ್ಲಿ ಆಸಕ್ತಿ, ಹುಮ್ಮಸ್ಸು, ಉತ್ಸಾಹ, ಸಂತಸ ಉಂಟಾಗುವಂತೆ ಕ್ರಮ ಕೈಗೊಂಡಿತು.
ಇನ್ನೊಂದು ಶಾಲೆಯಲ್ಲಿ ‘ಪೋಷಕರ ಪ್ರತಿಭಾನ್ವೇಷಣೆ’ ಕಾರ್ಯಕ್ರಮ ಆಯೋಜಿಸಿ, ಪೋಷಕರಲ್ಲಿರುವ ವಿವಿಧ ಪ್ರತಿಭೆಗಳನ್ನು ಗುರುತಿಸಿ, ಅವರ ಮೂಲಕ ಶಾಲೆಯ ವಿದ್ಯಾರ್ಥಿ ಸಮೂಹಕ್ಕೆ ತರಬೇತಿ ಕೊಡಿಸುವ ಕಾರ್ಯ ಕೈಗೊಂಡಿದ್ದು, ವಿಭಿನ್ನವಾದ ಪ್ರಯತ್ನವೆನಿಸಿತು.
ಬಹುತೇಕ ಎಲ್ಲಾ ಪೋಷಕರು ತಮ್ಮ ದೈನಂದಿನ ಕೆಲಸಗಳಿಗೆ ತೆರಳಬೇಕಾದ್ದರಿಂದ ಶಾಲೆಯು ಆಯೋಜಿಸುವ ಸಭೆಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಇದನ್ನು ಗಮನಿಸಿದ ಒಂದು ಶಾಲೆಯು ಪೋಷಕರೊಂದಿಗೆ ಚರ್ಚಿಸಿ, ಅವರಿಗೆ ಅನುಕೂಲಕರ ಸಮಯವಾದ ಬೆಳಗಿನ 7.30ರಿಂದ 9.30ರವರೆಗೆ ಪೋಷಕರ ಸಭೆಯನ್ನು ಆಯೋಜಿಸಿತ್ತು. ಇದರಿಂದ ಸಭೆಗೆ ಪೋಷಕರ ಹಾಜರಿ ಶೇ 95 ಮೀರಿತ್ತು.
ಸಾಮಾನ್ಯವಾಗಿ ಶಿಕ್ಷಕರಿಗೆ ತಮ್ಮ ವಿದ್ಯಾರ್ಥಿಗಳ ಕಲಿಕೆ, ಶಿಸ್ತು, ತುಂಟತನದಂತಹ ವಿಷಯಗಳ ಬಗ್ಗೆ ಒಂದಷ್ಟು ತಕರಾರು, ದೂರು ಇರುತ್ತದೆ. ಈ ಕುರಿತು ಪೋಷಕರ ಬಳಿ ದೂರು ದಾಖಲಿಸುವ ಕಾತರ ಅವರಲ್ಲಿ ಇರುತ್ತದೆ. ಪೋಷಕರನ್ನು ಕಂಡ ತಕ್ಷಣ ತಮ್ಮ ಮಕ್ಕಳ ಕುರಿತಾದ ದೂರುಗಳ ಪಟ್ಟಿಯನ್ನು ಹೇಳಲು ಶಿಕ್ಷಕರು ಶುರು ಮಾಡುವುದರಿಂದ, ಪೋಷಕರು ಶಾಲೆಯತ್ತ ಮುಖ ಮಾಡಲು ಹಿಂಜರಿಯುವಂತೆ ಆಗುತ್ತದೆ. ಇದಕ್ಕೆ ಬದಲಾಗಿ ಪೋಷಕರನ್ನು ಪ್ರೀತಿ, ಗೌರವದಿಂದ ಕಂಡು, ತಮ್ಮ ಮಕ್ಕಳಲ್ಲಿರುವ ಕೆಲ ಒಳ್ಳೆಯ ಗುಣಗಳ ಬಗ್ಗೆ ತಿಳಿಸಿ, ಇನ್ನಷ್ಟು ಪ್ರಗತಿಗೆ ಸಹಕಾರ ಕೋರುವ ಪ್ರಯತ್ನ ಖಂಡಿತ ಫಲ ನೀಡುತ್ತದೆ.
ಪೋಷಕರು- ಶಿಕ್ಷಕರ ಸೌಹಾರ್ದ ಭೇಟಿಗಳು ಹೆಚ್ಚಿದಷ್ಟೂ ವಿದ್ಯಾರ್ಥಿಗಳಲ್ಲಿ ಶಿಸ್ತು, ಕಲಿಕೆ, ಸದ್ವರ್ತನೆಯ ಗುಣಗಳು ಸಹಜವಾಗಿ ಉತ್ತಮಗೊಳ್ಳುತ್ತವೆ. ಈ ದಿಸೆಯಲ್ಲಿ ಶಾಲೆಗಳು ಅವರ ಸ್ಥಳೀಯ ಅಗತ್ಯಗಳಿಗೆ ತಕ್ಕಂತಹ ವಿನೂತನ, ನವೀನ ಪ್ರಯತ್ನಗಳನ್ನು ಕೈಗೊಳ್ಳಬೇಕಾದುದು ಅಗತ್ಯ.
ಲೇಖಕ: ಹಿರಿಯ ಉಪನ್ಯಾಸಕ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಬೆಂಗಳೂರು ನಗರ ಜಿಲ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.