ADVERTISEMENT

ಸಂಗತ: ಶಾಲೆಗೆ ಬೇಕು ಶಿಸ್ತು ನೀತಿ

ಈ ಕಾರ್ಯದಲ್ಲಿ ವಿದ್ಯಾರ್ಥಿಗಳನ್ನೂ ತೊಡಗಿಸಿಕೊಳ್ಳುವುದು ಪರಿಣಾಮಕಾರಿ

ಡಾ.ಎಚ್.ಬಿ.ಚಂದ್ರಶೇಖರ್
Published 23 ಡಿಸೆಂಬರ್ 2021, 19:32 IST
Last Updated 23 ಡಿಸೆಂಬರ್ 2021, 19:32 IST
   

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದ ಪ್ರೌಢಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ಶಿಕ್ಷಕರೊಬ್ಬರಿಗೆ ಕಿರುಕುಳ ನೀಡಿ ಪುಂಡಾಟಿಕೆ ಮೆರೆದ ಪ್ರಕರಣವು ಮಕ್ಕಳು ತೋರುವ ಅಶಿಸ್ತಿನ ವರ್ತನೆ ಹಾಗೂ ಅದಕ್ಕೆ ಪ್ರತಿಯಾಗಿ ಶಾಲೆಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಎಲ್ಲೆಡೆ ಚರ್ಚೆಗಳನ್ನು ಹುಟ್ಟುಹಾಕಿದೆ. ಮಕ್ಕಳ ಇಂಥ ವರ್ತನೆಗೆ ಕೆಲವರು ಉಗ್ರ ಶಿಕ್ಷೆಯ ಅಗತ್ಯವನ್ನು ಪ್ರತಿಪಾದಿಸಿದರೆ, ಇನ್ನು ಕೆಲವರು ಮಕ್ಕಳಿಗೆ ಶಿಕ್ಷೆಯ ಭಯವಿಲ್ಲದೇ ಇರುವುದರಿಂದ ಅವರ ವರ್ತನೆ ಮಿತಿ ಮೀರುತ್ತಿದೆ ಎನ್ನುತ್ತಿದ್ದಾರೆ.

ಸಂಬಂಧಿಸಿದ ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡಿರಬಹುದಾದ ಅತಿ ಸಲುಗೆ, ಔದಾರ್ಯದ ಕಾರಣದಿಂದ ಕೆಲ ಮಕ್ಕಳು ಇಂಥ ವರ್ತನೆಯನ್ನು ತೋರ್ಪಡಿಸಿರಬಹುದೇ ಎಂಬ ಸಂಶಯವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ.

ನಲ್ಲೂರು ಪ್ರಕರಣದ ವಿಡಿಯೊ ಎಲ್ಲೆಡೆ ಹರಿದಾಡಿದ ಪರಿಣಾಮ, ಸಂಬಂಧಿಸಿದ ಶಾಲೆಯ ಶಿಕ್ಷಕರು, ಪೋಷಕರು, ಸ್ಥಳೀಯ ಸಮುದಾಯದ ಮೇಲೆ ತೀವ್ರ ಒತ್ತಡ ಸೃಷ್ಟಿಯಾಯಿತು. ಇದರ ಪರಿಣಾಮ ಸಭೆಗಳು ನಡೆದು, ತಪ್ಪು ಮಾಡಿದರೆನ್ನಲಾದ ವಿದ್ಯಾರ್ಥಿಗಳು ಶಿಕ್ಷಕರ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಘಟನೆಯ ವಿಡಿಯೊ ಸಹ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಸೂಕ್ಷ್ಮ ಸಂವೇದನೆಗಳಿಂದ ಹೊರತಾಗಿಸಿ ಎಲ್ಲವನ್ನೂ ಚಿತ್ರೀಕರಿಸಿ ವಿಡಿಯೊ ಹರಿಬಿಡುವ ಅಭ್ಯಾಸವು ಒಳಿತಲ್ಲ.

ADVERTISEMENT

ತಪ್ಪೆಸಗುವ ಮಕ್ಕಳ ಚಿತ್ರಗಳನ್ನು ಮಸುಕು ಮಾಡಿ ತೋರಿಸಬೇಕೆಂಬ ನಿಯಮ ಮೀರಿ ವಿಡಿಯೊಗಳನ್ನು ಪ್ರಸಾರ, ಪುನಃ ಪ್ರಸಾರ ಮಾಡುವುದು ಸಂಬಂಧಿಸಿದ ಮಕ್ಕಳು, ಪೋಷಕರು ಹಾಗೂ ಶಿಕ್ಷಕರ ಮನಸ್ಸಿಗೆ ಗಾಸಿಯುಂಟು ಮಾಡುವ ಜೊತೆಗೆ ಅನೇಕ ಪೂರಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಪ್ರತೀ ಶಾಲೆಯು ಶಿಸ್ತಿಗೆ ಸಂಬಂಧಿಸಿದಂತೆ ತನ್ನದೇ ಆದ ಕಾರ್ಯನೀತಿಯನ್ನು ಹೊಂದುವುದು ಅಗತ್ಯ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಶಾಲೆಯ ವಿವಿಧ ಸನ್ನಿವೇಶಗಳಲ್ಲಿ ಯಾವ ರೀತಿ ವರ್ತಿಸಬೇಕು ಎಂಬ ನಿರೀಕ್ಷೆಗಳ ಪಟ್ಟಿಯನ್ನು ಶಾಲೆಯ ಶಿಸ್ತಿನ ಕಾರ್ಯನೀತಿಯು ಹೊಂದಿರಬೇಕಾಗುತ್ತದೆ. ಇದರ ಜೊತೆ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಯಾವ ರೀತಿ ವರ್ತಿಸಬೇಕು ಎಂಬ ಕುರಿತ ಉಲ್ಲೇಖವೂ ಇದರಲ್ಲಿರಬೇಕು. ಒಂದೊಮ್ಮೆ ಶಾಲೆಯು ನಿಗದಿಪಡಿಸಿದ ಶಿಸ್ತಿನ ನಿಯಮಗಳನ್ನು ವಿದ್ಯಾರ್ಥಿಗಳು ಉಲ್ಲಂಘಿಸಿದರೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನೂ ಈ ನೀತಿಯು ಒಳಗೊಂಡಿರಬೇಕು.

ಶಿಸ್ತಿನ ನೀತಿಯನ್ನು ರೂಪಿಸುವ ಮೊದಲ ಹಂತವಾಗಿ ಶಾಲೆಯ ಎಲ್ಲಾ ಶಿಕ್ಷಕರ ಜೊತೆ ಮುಖ್ಯ ಶಿಕ್ಷಕರು ಸಮಾಲೋಚನೆ ನಡೆಸಬೇಕು. ನಂತರ ವಿದ್ಯಾರ್ಥಿಗಳ ಜೊತೆಯೂ ಸಮಾಲೋಚನೆ ನಡೆಸಿ, ಅವರ ಅಭಿಪ್ರಾಯಗಳನ್ನೂ ಸಂಗ್ರಹಿಸಬೇಕು. ಸಾಮಾನ್ಯವಾಗಿ ನಿಯಮ ರೂಪಿಸುವಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು ಅವುಗಳನ್ನು ಉಲ್ಲಂಘಿಸುವ ಪ್ರಕರಣಗಳು ವಿರಳ.

ಶಾಲೆಯು ಶಿಸ್ತಿನ ಕುರಿತಾಗಿ ರೂಪಿಸಿದ ಕರಡು ನೀತಿಯನ್ನು ಪೋಷಕರ ಜೊತೆ ಚರ್ಚಿಸಿ ಅಂತಿಮಗೊಳಿಸಬೇಕು. ಅಂತಿಮಗೊಂಡ ನೀತಿಯನ್ನು ಸಂಬಂಧಿಸಿದ ಎಲ್ಲರಿಗೂ ತಿಳಿಯುವಂತೆ ಪ್ರಕಟಿಸಬೇಕು. ಈ ನೀತಿಯಲ್ಲಿ ವಿದ್ಯಾರ್ಥಿಗಳು ತೋರುವ ಅಶಿಸ್ತಿನ ವರ್ತನೆಗಳಿಗೆ ಮನೋವೈಜ್ಞಾನಿಕ ಹಿನ್ನೆಲೆಗಳಿಂದ ನೀಡಬಹುದಾದ ಲಘು ದಂಡನೆಗಳನ್ನು ವಿಧಿಸುವ ಅಂಶಗಳು ಇರುವಂತೆ ನೋಡಿಕೊಳ್ಳಬೇಕು. ದೈಹಿಕ ಶಿಕ್ಷೆ ನೀಡಿಕೆಯ ಅಂಶಗಳು ಇಲ್ಲದಂತೆ ಎಚ್ಚರ ವಹಿಸಬೇಕು.

ಶಾಲೆಯು ಅಳವಡಿಸಿಕೊಳ್ಳುವ ಶಿಸ್ತಿನ ಕಾರ್ಯನೀತಿಯ ಜೊತೆ ಶಿಕ್ಷಕರು ತರಗತಿಯೊಳಗೆ ಹಾಗೂ ತರಗತಿಯಾಚೆ ವಿದ್ಯಾರ್ಥಿಗಳೊಂದಿಗೆ ಯಾವ ರೀತಿ ಒಡನಾಟ ಹೊಂದಿರುತ್ತಾರೆ ಹಾಗೂ ವಿದ್ಯಾರ್ಥಿಗಳಿಂದ ಯಾವ ರೀತಿಯ ಶಿಸ್ತಿನ ವರ್ತನೆಯನ್ನು ನಿರೀಕ್ಷಿಸುತ್ತಾರೆ ಎಂಬ ಅಂಶವು ಪ್ರಮುಖವಾಗುತ್ತದೆ. ಅಶಿಸ್ತನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಆರಂಭದಿಂದಲೂ ವಿದ್ಯಾರ್ಥಿಗಳಿಗೆ ರವಾನಿಸುವುದು ಅಗತ್ಯ. ಕಠಿಣ ಸಂದೇಶಗಳನ್ನು ರವಾನಿಸುವ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ಸುಲಭವಾಗಿ ಅಶಿಸ್ತಿನ ವರ್ತನೆ ತೋರುವುದಿಲ್ಲ ಎಂಬುದನ್ನು ನಾವು ಗಮನಿಸಬಹುದು.

ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಅದಮ್ಯ ಶಕ್ತಿ, ಉತ್ಸಾಹ ಮತ್ತು ಧೈರ್ಯ ಇರುತ್ತವೆ. ಇವು ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವಂತೆ ಮಾಡಲು ವಿದ್ಯಾರ್ಥಿಗಳನ್ನು ದೈಹಿಕ ಚಟುವಟಿಕೆ, ಆಟೋಟಗಳಲ್ಲಿ ಸಕ್ರಿಯವಾಗಿ ತೊಡಗಿಸಿ, ಅವರು ಆರೋಗ್ಯಕರವಾಗಿ ದಣಿಯುವಂತೆ ಮಾಡಬೇಕು. ಶಾಲೆಯ ಪ್ರಾರ್ಥನೆಯ ವೇಳೆ ಕೆಲ ನಿಮಿಷಗಳ ಕಾಲ ಮಕ್ಕಳಿಗೆ ಧ್ಯಾನದ ಅಭ್ಯಾಸವನ್ನು ಮಾಡಿಸುವುದೂ ಪರಿಣಾಮಕಾರಿಯಾಗುತ್ತದೆ.

ಶಿಕ್ಷೆ ನೀಡಿಕೆಗಿಂತಲೂ ಮನೋವೈಜ್ಞಾನಿಕ ಕ್ರಮಗಳು ಶಿಸ್ತು ಕಾಪಾಡಲು ನೆರವಾಗುತ್ತವೆ ಎಂಬ ನಂಬಿಕೆ, ವಿಶ್ವಾಸ ಶಿಕ್ಷಕರಿಗೆ ಇರುವುದು ಬಹಳ ಮುಖ್ಯವಾದ ಅಂಶ. ವಿದ್ಯಾರ್ಥಿಗಳ ಅಶಿಸ್ತು, ಪುಂಡಾಟಿಕೆ ಮಿತಿಮೀರಿದ ಬಿಡಿ ಪ್ರಕರಣಗಳ ಬಗ್ಗೆ ಶೈಕ್ಷಣಿಕ ಹಾಗೂ ಮನೋವೈಜ್ಞಾನಿಕ ಹಿನ್ನೆಲೆಗಳಿಂದ ಪ್ರಕರಣವಾರು ಅಧ್ಯಯನ ಕೈಗೊಂಡು ಅಶಿಸ್ತನ್ನು ಕೊನೆಗಾಣಿಸಲು ಸಾಮಾನ್ಯವಾದ ದೂರಗಾಮಿ ಪರಿಹಾರಗಳ ಕುರಿತಂತೆ ತೆಗೆದುಕೊಳ್ಳಬಹುದಾದ ಕಾರ್ಯತಂತ್ರ ಮತ್ತು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಅಗತ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.