ADVERTISEMENT

ಸಂಗತ | ಮಾಲಿನ್ಯ: ಸೆರಗಿನೊಳಗಿನ ಕೆಂಡ

ವಿಶ್ವವನ್ನೇ ನಡುಗಿಸಿದ ಭೋಪಾಲ್‌ ಅನಿಲ ದುರಂತದಿಂದ ನಾವು ಪಾಠ ಕಲಿತಿಲ್ಲ ಎಂಬುದು ಪದೇಪದೇ ಸಾಬೀತಾಗುತ್ತಲೇ ಇದೆ

ಗುರುರಾಜ್ ಎಸ್.ದಾವಣಗೆರೆ
Published 1 ಡಿಸೆಂಬರ್ 2021, 19:31 IST
Last Updated 1 ಡಿಸೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅದು, 1984ರ ಡಿಸೆಂಬರ್ 2ರ ಸರಿರಾತ್ರಿ. ಭೋಪಾಲ್‍ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ಕ್ರಿಮಿ– ಕೀಟನಾಶಕ ತಯಾರಿಸಲು ಶೇಖರಿಸಿಟ್ಟಿದ್ದ ದ್ರವರೂಪಿ ಮೀಥೈಲ್ ಐಸೋ ಸಯನೇಟ್ ಸಂಯುಕ್ತದಿಂದ ಸೋರಿದ ವಿಷಾನಿಲ ಒಂದೇ ತಾಸಿನಲ್ಲಿ ಕಾರ್ಖಾನೆಯ ಸುತ್ತಮುತ್ತಲಿನ ಮೂರೂವರೆ ಸಾವಿರ ಜನರ ಜೀವ ತೆಗೆದಿತ್ತು. ಔದ್ಯೋಗಿಕ ರಂಗದ ಇತಿಹಾಸದಲ್ಲಿ ಪ್ರಪಂಚವೇ ಕಂಡರಿಯದ ಘೋರ ದುರಂತ ಇದಾಗಿತ್ತು.

ಎಳೆಯ ಕಂದಮ್ಮಗಳು, ಯುವಕರು, ಹೆಂಗಸರು, ವಯಸ್ಸಾದವರು ಕೊಟ್ಟಿಗೆಯ ದನಕರುಗಳ ಸಹಿತ ಬೆಂಕಿಗೆ ಸಿಲುಕಿದ ಹುಳಗಳಂತೆ ಸತ್ತುಬಿದ್ದಿದ್ದರು. ವಿಷಗಾಳಿಯು ಮರ–ಗಿಡಗಳನ್ನೂ ಕೊಂದುಹಾಕಿತ್ತು. ಸತ್ತವರ ಒಟ್ಟು ಸಂಖ್ಯೆ 20 ಸಾವಿರಕ್ಕೂ ಹೆಚ್ಚು. ಕಾಯಿಲೆಗೆ ತುತ್ತಾದವರು ಆರು ಲಕ್ಷ ಜನ. ಪರಿಮಿತಿಗೂ ಮೀರಿ ರಾಸಾಯನಿಕ ತುಂಬಿಟ್ಟಿದ್ದರಿಂದ ಹೀಗಾಗಿತ್ತು. ಅನಿಲ ಸೋರಿಕೆ ತಡೆಯುವ ಸುರಕ್ಷಾ ಕ್ರಮಗಳೂ ವ್ಯವಸ್ಥಿತವಾಗಿರಲಿಲ್ಲ. ಈ ದುರಂತದ ಕರಾಳ ನೆನಪಿಗೆ ಡಿಸೆಂಬರ್ 2 ಅನ್ನು ಪ್ರತಿವರ್ಷ ‘ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ’ ಎಂದು ಆಚರಿಸುತ್ತೇವೆ.

‘ಭೋಪಾಲ್ ಅನಿಲ ದುರಂತ’ ಎಂದೇ ವಿಶ್ವದಾದ್ಯಂತ ಕರೆಯಲಾಗುವ ಈ ದುರ್ಘಟನೆಯಿಂದ ನಾವು ಪಾಠ ಕಲಿಯಲಿಲ್ಲ ಎಂಬುದು ಪದೇಪದೇ ಸಾಬೀತಾಗುತ್ತಿದೆ. ಜನವಸತಿ ಪ್ರದೇಶದಲ್ಲಿ ಅಪಾಯಕಾರಿ ರಾಸಾಯನಿಕ ಕಾರ್ಖಾನೆಗಳನ್ನು ಸ್ಥಾಪಿಸುವಂತಿಲ್ಲ ಎಂಬ ಕಾನೂನಿದೆ. ಆದರೆ ದೇಶದ ಹಲವು ನಗರ, ಪಟ್ಟಣ ಪ್ರದೇಶಗಳಲ್ಲಿ ಕಾರ್ಖಾನೆಗಳು ತಲೆ ಎತ್ತಿ ಅಪಾಯವನ್ನು ಮಡಿಲಲ್ಲಿಟ್ಟುಕೊಂಡೇ ನಡೆಯುತ್ತಿವೆ. ಅದಕ್ಕೆ ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದ ಅವಘಡಗಳೇ ಸಾಕ್ಷಿ.

ADVERTISEMENT

ವಿಶಾಖಪಟ್ಟಣದಲ್ಲಿರುವ ಎಲ್‍ಜಿ ಪಾಲಿಮರ್ಸ್‌ ಕಾರ್ಖಾನೆಯಲ್ಲಿ ಅಪಾಯಕಾರಿ ಸ್ಟೈರೀನ್ ಅನಿಲ ಸೋರಿ 11 ಜನರ ಪ್ರಾಣ ತೆಗೆದಿತ್ತು. ಅನಿಲದ ಪ್ರಭಾವಕ್ಕೆ ಸಿಲುಕಿದ ನೂರಾರು ಜನ ಈಗಲೂ ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತನಿಖೆ ಮಾಡಿದಾಗ, ಕಂಪನಿಯು ಉತ್ಪಾದನೆಗೆ ಸಂಬಂಧಿಸಿದಂತೆ ಪರಿಸರ ಅನುಮತಿ ಇಲ್ಲದೆಯೇ ಕೆಲಸ ನಿರ್ವಹಿಸುತ್ತಿದ್ದುದು ಕಂಡುಬಂತು. ಕಂಪನಿಯ ನಿರ್ಲಕ್ಷ್ಯದ ವಿರುದ್ಧ ಆಂಧ್ರಪ್ರದೇಶದ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಾಗಿದೆ. ಘಟನೆ ನಡೆದ ಬೆನ್ನಲ್ಲೇ ರಾಜ್ಯ ಸರ್ಕಾರವು ಕಾರ್ಖಾನೆಯನ್ನು ಮುಚ್ಚಿಸಿದೆ.

ಕಾರ್ಖಾನೆಯಲ್ಲಿ ನಡೆಯುವ ಅಪಘಾತಗಳು ಕಾರ್ಖಾನೆಗಷ್ಟೇ ಸೀಮಿತವಾಗಿರುವುದಿಲ್ಲ. ಅವುಗಳ ಮಾಲಿನ್ಯ ಸುತ್ತಲಿನ ಜನರಿಗೂ ಅಪಾಯ ತಂದೊಡ್ಡುತ್ತದೆ. ತಮಿಳುನಾಡಿನ ಕಡಲೂರು ಜಿಲ್ಲೆಯ ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ ಕಾರ್ಖಾನೆಯಲ್ಲಿ ಕಳೆದ ಮೇ ಮತ್ತು ಜುಲೈ ತಿಂಗಳುಗಳಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟಗಳಲ್ಲಿ ಕನಿಷ್ಠ 20 ಜನ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರು. ಕೋವಿಡ್ ಲಸಿಕೆ ಉತ್ಪಾದಿಸಿ ದೇಶಕ್ಕೆಲ್ಲಾ ಹಂಚುತ್ತಿರುವ ಪುಣೆಯ ‘ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ’ದಲ್ಲಿ ಇದೇ ವರ್ಷ ಜನವರಿ 21ರಂದು ಅಗ್ನಿ ಅವಘಡ ಸಂಭವಿಸಿ ಐವರು ಕಾರ್ಮಿಕರು ಸಾವನ್ನಪ್ಪಿದ್ದರು. ಬೆಂಕಿಯು ಲಸಿಕೆ ತಯಾರಿಕೆ ವಿಭಾಗಕ್ಕೆ ವ್ಯಾಪಿಸಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು.

ಗುಜರಾತ್‍ನಲ್ಲಿ ಯುನೈಟೆಡ್ ಫಾಸ್ಫರಸ್ ಕಾರ್ಖಾನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ ಸಂಭವಿಸಿ ನಾಲ್ಕು ಜನರ ಪ್ರಾಣ ಹೋಗಿತ್ತು. ಕಾರ್ಖಾನೆಯಿಂದ ಹೊಮ್ಮಿದ ಹೊಗೆ ಅತೀವ ಮಾಲಿನ್ಯ ಉಂಟು ಮಾಡಿದ್ದರಿಂದ ಗುಜರಾತ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಖಾನೆಯನ್ನು ಮುಚ್ಚಿಸಿಬಿಟ್ಟಿತು. ಮಾರ್ಚ್‌ನಲ್ಲಿ ರಿಲಯನ್ಸ್‌ ಸಿಮೆಂಟ್‌ ಒಡೆತನದ ಗೋಗ್ರಿ ಕಲ್ಲಿದ್ದಲು ಗಣಿಯಲ್ಲಿ ಚಾವಣಿ ಕುಸಿದು ಇಬ್ಬರು ಸಾವನ್ನಪ್ಪಿ ನಲವತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಫೆಬ್ರುವರಿಯಲ್ಲಿ ತಮಿಳುನಾಡಿನ ವಿರುಧುನಗರದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 24ಕ್ಕೂ ಹೆಚ್ಚು ಜನ ಅಸುನೀಗಿದ್ದರು.

ಗೋಡಂಬಿ ಬೆಳೆಗೆ ತಗಲುತ್ತಿದ್ದ ಕೀಟಗಳನ್ನು ನಿಯಂತ್ರಿಸಲು 80ರ ದಶಕದಲ್ಲಿ ಸಿಂಪಡಿಸಿದ ಎಂಡೊಸಲ್ಫಾನ್‌ನ ಅಡ್ಡ ಪರಿಣಾಮಗಳು ಕೇರಳ ಹಾಗೂ ನಮ್ಮ ರಾಜ್ಯವನ್ನು ಈಗಲೂ ಕಾಡುತ್ತಿವೆ. ಕಳೆದೊಂದು ವರ್ಷದಲ್ಲಿ ಗಣಿ ಮತ್ತು ರಾಸಾಯನಿಕ ಉದ್ಯಮಗಳಲ್ಲಿ ನೂರಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು 300ಕ್ಕೂ ಹೆಚ್ಚು ಜನ ಸತ್ತಿದ್ದಾರೆ. 140 ದೇಶಗಳ 50 ಕೋಟಿ ಕಾರ್ಮಿಕರ ಪ್ರತಿನಿಧಿ ಎನಿಸಿರುವ ‘ಇಂಡಸ್ಟ್ರಿಆಲ್’ ಸಂಸ್ಥೆಯು ತರಬೇತಿ ಇಲ್ಲದ ಕಾರ್ಮಿಕರು, ದೋಷಪೂರಿತ ತಪಾಸಣಾ ವಿಧಾನಗಳು ಮತ್ತು ಸುರಕ್ಷಾ ಕ್ರಮಗಳ ಅಸಮರ್ಪಕ ಅನುಷ್ಠಾನವೇ ಅಪಘಾತಗಳಿಗೆ ಕಾರಣ ಎನ್ನುತ್ತದೆ.

ಅಪಘಾತದಲ್ಲಿ ಕಾರ್ಮಿಕರಷ್ಟೇ ಸಾಯುವುದಿಲ್ಲ. ವಿಷಾನಿಲ, ಬೆಂಕಿ, ವಿದ್ಯುತ್‌ ಶಾಕ್‍ನಿಂದ ಕಾರ್ಖಾನೆಯ ಹೊರಗಿನ ಅಮಾಯಕರೂ ಬಲಿಯಾಗಿ ಅಪಾರ ಪ್ರಮಾಣದ ಪ್ರಾಣ–ಆಸ್ತಿ ಹಾನಿಯಾಗುತ್ತದೆ. ಕೃಷಿಗೆ ತೊಂದರೆ ಕೊಡುವ ಕೀಟಗಳ ನಿಯಂತ್ರಣಕ್ಕೆ ವಿಷ ಬೇಕೇ ಬೇಕು. ತಯಾರಿಕೆ ಜಾಗವು ಜನವಸತಿಯಿಂದ ದೂರವಿರಬೇಕು. ಅಷ್ಟಾದರೆ ಕೆಲಸ ಮುಗಿದಂತಲ್ಲ. ದುರಂತಗಳಾದಾಗ ಜನ ತಕ್ಷಣ ಸಾಯುವುದಿಲ್ಲ. ಕಾರ್ಖಾನೆಗಳು ಹೊಮ್ಮಿಸುವ, ಹರಿಬಿಡುವ ತ್ಯಾಜ್ಯ ನೆಲ- ನೀರು– ಗಾಳಿಯಲ್ಲಿ ಸೇರಿ ಮಾಲಿನ್ಯ ಆಗೇ ಆಗುತ್ತದೆ. ಅದನ್ನು ನಿಯಂತ್ರಣದಲ್ಲಿ ಇಡಬೇಕು. ಮಾಲಿನ್ಯ ನಿಯಂತ್ರಣ ಮಂಡಳಿ ಎಲ್ಲ ಸುರಕ್ಷಾ ಕ್ರಮ ಕೈಗೊಳ್ಳಬೇಕೆಂಬ ಕಟ್ಟುನಿಟ್ಟಿನ ನಿಯಮ ವಿಧಿಸಿ ಆಗಾಗ ತಪಾಸಣೆ ಮಾಡುತ್ತಲೇ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.