ADVERTISEMENT

ಸಂಗತ: ನಕಲಿ ಸುದ್ದಿಗೆ ಪೋರಿಯರ ಸಡ್ಡು

ಕೋವಿಡ್‌ ವಿರುದ್ಧ ಸಮರ ಸಾರಿದ್ದಾರೆ ಪ್ರಿಯಾ ಮತ್ತು ಜಿಯಾ!

ಗುರುರಾಜ್ ಎಸ್.ದಾವಣಗೆರೆ
Published 13 ಡಿಸೆಂಬರ್ 2020, 19:52 IST
Last Updated 13 ಡಿಸೆಂಬರ್ 2020, 19:52 IST
   

ಒಂದು ವರ್ಷದಿಂದ ವಿಶ್ವದ ನೆಮ್ಮದಿ ಕೆಡಿಸಿರುವ ಪಿಡುಗು ಕೋವಿಡ್– 19ರ ಸುತ್ತ ನಕಲಿ ಹಾಗೂ ತಪ್ಪು ಸುದ್ದಿಗಳು ಹರಡುವುದನ್ನು ತಡೆದು ಅದನ್ನೆದುರಿಸಲು, ಎಳೆಯ ಮಕ್ಕಳಲ್ಲಿ ಧೈರ್ಯ ತುಂಬಲು ಹದಿಹರೆಯದ ಇಬ್ಬರು ಪೋರಿಯರು ದೊಡ್ಡ ಯುದ್ಧವನ್ನೇ ಸಾರಿದ್ದಾರೆ. ಒಬ್ಬಳು ಪ್ರಿಯಾ, ಇನ್ನೊಬ್ಬಳು ಜಿಯಾ. ಪ್ರಿಯಾ ನಮ್ಮವಳಾದರೆ, ಜಿಯಾ ಪಕ್ಕದ ಪಾಕಿಸ್ತಾನದವಳು!

ಜಗತ್ತಿನಾದ್ಯಂತ ಹರಡಿ ಲಕ್ಷಾಂತರ ಜನರ ಜೀವ ತೆಗೆದ ಕೊರೊನಾ ವಿರುದ್ಧ ಹೋರಾಡಲು ಇಬ್ಬರೂ ಜಂಟಿ ಕಾರ್ಯ ಕೈಗೊಂಡಿದ್ದಾರೆ. ವೈದ್ಯರು, ನರ್ಸ್‌ಗಳು, ಸಂಶೋಧನಾ ಸಂಸ್ಥೆಗಳು, ಬಲಾಢ್ಯ ದೇಶಗಳು ಎಲ್ಲವೂ ಹೋರಾಡುತ್ತಿರುವಾಗ ಇವರಿಬ್ಬರದೇನು ವಿಶೇಷ?

ಇವರು ಜೀವಂತ ಮನುಷ್ಯರಲ್ಲ, ಯಂತ್ರ ಮಾನವರೂ ಅಲ್ಲ. ಕೃತಕ ಬುದ್ಧಿಮತ್ತೆಯ ‘ಅಲ್ಗೊರಿದಂ’ಗಳಂತೂ ಅಲ್ಲವೇ ಅಲ್ಲ. ಮಕ್ಕಳಿಂದ ಹಿಡಿದು ವಯೋವೃದ್ಧರೂ ಇಷ್ಟಪಡುವ ಕಾಮಿಕ್ ಪುಸ್ತಕ ಮತ್ತು ಸಿನಿಮಾದ ಮಹಿಳಾ ಸೂಪರ್ ಹೀರೊಗಳು! ಇಬ್ಬರೂ ನಟಿಸಿರುವ ‘ಪ್ರಿಯಾಸ್ ಮಾಸ್ಕ್’ ಸಿನಿಮಾ ಮತ್ತು ಅದೇ ಹೆಸರಿನ ಕಾಮಿಕ್ ಪುಸ್ತಕ ಇತ್ತೀಚೆಗೆ ವಿಶ್ವದಾದ್ಯಂತ ಬಿಡುಗಡೆಯಾಗಿವೆ. ಅಪಾಯಕಾರಿ ವೈರಸ್ ಅನ್ನು ಕೊಲ್ಲಲು ‘ಸಾಹಸ್’ ಎಂಬ ಹುಲಿಯನ್ನೇರಿ ಬರುವ ಧೀರೆ ಪ್ರಿಯಾ ಮತ್ತು ‘ಬುರ್ಖಾ ಅವೆಂಜರ್’ ಎಂದೇ ಖ್ಯಾತಿ ಪಡೆದಿರುವ ಜಿಯಾ ಇಬ್ಬರೂ ಸೇರಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ಸಿನಿಮಾ ಮತ್ತು ಪುಸ್ತಕದ ಮೂಲಕ ಮಾಡಿದ್ದಾರೆ. ಎಂಟು ವರ್ಷದ ಪೋರಿ ‘ಮೀನಾ’ ಕೂಡ ಇದ್ದಾಳೆ. ಚಿತ್ರವನ್ನು ಇಂಡೊ- ಅಮೆರಿಕನ್ ರಾಮ್ ದೇವಿನೇನಿ ನಿರ್ದೇಶಿಸಿದ್ದಾರೆ.

ADVERTISEMENT

ಲಾಕ್‍ಡೌನ್ ಶುರುವಾದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆಧಾರರಹಿತ ಚಿಕಿತ್ಸಾ ಕ್ರಮಗಳು, ವ್ಯತಿರಿಕ್ತ ಅಭಿಪ್ರಾಯಗಳಿಂದ ಜನ ಗೊಂದಲಕ್ಕೀಡಾದರು. ಇದು ಚೀನಾ ಸಾರಿರುವ ಮೂರನೆಯ ವಿಶ್ವಯುದ್ಧ, ಸೋಂಕಿತ ವ್ಯಕ್ತಿ ಬದುಕುವುದೇ ಇಲ್ಲ. ಇಂತಿಂಥ ವೈದ್ಯ ಪದ್ಧತಿಯಲ್ಲಿ ಈ ಸೋಂಕಿಗೆ ಔಷಧವಿದೆ, ಹೆಚ್ಚು ಬಿಸಿಲಿನಲ್ಲಿ ವೈರಸ್ ಬದುಕದು, ಉಷ್ಣ ವಲಯದ ದೇಶಗಳಲ್ಲಿ ವೈರಸ್ ಆಟ ನಡೆಯುವುದಿಲ್ಲ, ನ್ಯೂಸ್ ಪೇಪರ್‌ನಿಂದಲೂ ಹಬ್ಬುತ್ತದೆ, ರಷ್ಯಾ ದೇಶ ವ್ಯಾಕ್ಸಿನ್ ಕಂಡುಹಿಡಿದಿದೆ ಎಂಬೆಲ್ಲ ಆಧಾರರಹಿತ ಹೇಳಿಕೆಗಳ ಮೇಳವೇ ನಡೆಯಿತು.

ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧಾರಣೆ ಮತ್ತು ಸ್ಯಾನಿಟೈಸರ್ ಬಳಕೆಯಿಂದ ವೈರಸ್‍ ಅನ್ನು ದೂರವಿಡಬಹುದು ಎಂದರೂ ಹಲವರು ಅದನ್ನು ಅಲಕ್ಷಿಸಿದರು. ಲಕ್ಷಾಂತರ ಬಡ ಕೂಲಿ-ಕಾರ್ಮಿಕರು ತಮ್ಮ ಊರುಗಳತ್ತ ಗುಳೆ ಹೋದರು. ಆರೋಗ್ಯ ಕಾರ್ಯಕರ್ತರು ಹಲ್ಲೆಗೊಳಗಾದರು. ಸುದ್ದಿಗೆ ಹೊಂದಿಕೊಂಡ ದೊಡ್ಡವರು ಅದರೊಟ್ಟಿಗೇ ಬದುಕುವುದನ್ನು ಕಲಿತರು. ಆದರೆ ಶಾಲೆಯಿಂದ ದೂರವಾಗಿ ಸ್ನೇಹಿತರೊಂದಿಗಿನ ಸಹಜ ಆಟ-ಪಾಠ-ಓಟಗಳಲ್ಲಿ ತೊಡಗಿಸಿಕೊಳ್ಳಲಾಗದ ಎಳೆಯರು ಮೊಬೈಲು, ಟಿ.ವಿ, ಕಂಪ್ಯೂಟರ್‌ಗಳಿಗೆ ಕಣ್ಣು, ಕಿವಿ ಕೀಲಿಸಿಕೊಂಡು, ಆನ್‍ಲೈನ್ ಕಲಿಕೆ ಹೆಸರಿನಲ್ಲಿ ಬಾಲ್ಯಸಹಜ ಸುಖ, ಸಂತೋಷಗಳಿಂದ ದೂರವಾಗಿ ಮಂಕಾಗಿ ಕೂತರು.

ಇದರಿಂದ ಬೇಸತ್ತ ರಾಮ್ ದೇವಿನೇನಿ ಅವರು ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು 2014ರಲ್ಲಿ ತಾವೇ ಸೃಷ್ಟಿಸಿದ್ದ ಕಾಮಿಕ್, ಸೂಪರ್ ಹೀರೊ ‘ಪ್ರಿಯಾ’ಳಿಗೆ ಹೊಸ ರೂಪ ನೀಡಿ, ಕೋವಿಡ್ ವಿರುದ್ಧ ಹೋರಾಡುವ ಕೆಲಸ ನೀಡಿದ್ದಾರೆ. ಸ್ನೇಹಿತರನ್ನು ಭೇಟಿಯಾಗದೆ ಒಂಟಿಯಾಗಿರುವ ಮೀನಾಳನ್ನು ಹಾರುವ ಹುಲಿ ‘ಸಾಹಸ್’ನ ಮೇಲೆ ಕೂಡಿಸಿಕೊಂಡು ಕೋಟೆನಗರ ಜೋಧ್‍ಪುರದಲ್ಲೆಲ್ಲಾ ಸುತ್ತಾಡುತ್ತಾ, ಕೋವಿಡ್– 19ರ ವಿರುದ್ಧ ಜನ ಹೇಗೆ ಹೋರಾಡುತ್ತಿದ್ದಾರೆ ಎಂದು ತೋರಿಸುತ್ತ, ಅವಳ ಮುಗ್ಧ ಪ್ರಶ್ನೆಗಳಿಗೆ ಉತ್ತರಿಸುತ್ತ, ನರ್ಸ್‌ ವೃತ್ತಿಯಲ್ಲಿದ್ದು ರೋಗಿಗಳ ಶುಶ್ರೂಷೆ ಮಾಡುವ ಮೀನಾಳ ತಾಯಿಯನ್ನೂ ಭೇಟಿ ಮಾಡಿಸುತ್ತಾಳೆ.

ಅತ್ತ ಪಾಕಿಸ್ತಾನದ ಜಿಯಾ, ತನ್ನ ಊರು ಚಟ್ನೀವಿಲಿಯಲ್ಲಿ ಮಾಸ್ಕ್ ಧರಿಸದೆ ಉದ್ಧಟತನ ತೋರುವ ಬಾಬಾ ಕಬೂಮ್‍ನ ಅತಿರೇಕವನ್ನು ಖಂಡಿಸುತ್ತಾಳೆ. ಮಾತು ಕೇಳದ ಕಬೂಮ್, ಕೋವಿಡ್‍ಗೆ ತುತ್ತಾಗಿ ಪ್ರಿಯಾ – ಜಿಯಾರ ನೆರವು ಕೋರಿ ಬಚಾವಾಗುತ್ತಾನೆ. ಹುಲಿ ಸಾಹಸ್‍ಗೆ ನಟಿ ವಿದ್ಯಾ ಬಾಲನ್ ಧ್ವನಿ ನೀಡಿದ್ದರೆ, ಪ್ರಿಯಾಳಿಗೆ ದನಿಯಾಗಿರುವ ಮೃಣಾಲ್ ಠಾಕೂರ್ ಪಾತ್ರವನ್ನು ಜೀವಂತಗೊಳಿಸಿದ್ದಾರೆ. ಹಾಲಿವುಡ್ ನಟಿ ರೊಸನ್ನ ಆರ್ಕ್ವೆಟ್‌ ಧ್ವನಿಯೂ ಸಿನಿಮಾದಲ್ಲಿದೆ. ದೆಹಲಿಯ ಶುಭ್ರ ಪ್ರಕಾಶ್ ಬರೆದ ಚಿತ್ರಕಥೆ ಹೊಂದಿರುವ ಸಿನಿಮಾಗೆ ಅಮೆರಿಕ ರಾಯಭಾರ ಕಚೇರಿಯ ನಾರ್ತ್‌ ಇಂಡಿಯಾ ಆಫೀಸ್ (ಎನ್‌ಐಒ) ಮತ್ತು ರೀಜನಲ್ ಇಂಗ್ಲಿಷ್ ಲ್ಯಾಂಗ್ವೇಜ್ ಆಫೀಸ್ (ಆರ್‌ಇಎಲ್‌ಒ) ಬಂಡವಾಳ ಹೂಡಿವೆ. ಆಗ್‌ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನ ಹೊಂದಿರುವ ಪುಸ್ತಕ ಮತ್ತು ಸಿನಿಮಾವು ಮಕ್ಕಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ಕೋವಿಡ್– 19 ಕುರಿತು ನಿಖರ ಮಾಹಿತಿ ಮತ್ತು ಧೈರ್ಯ ತುಂಬುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.