
ಮೂವತ್ತು ವರ್ಷಗಳ ಹಿಂದಿನ ಮಾತು. ತಾಲ್ಲೂಕು ಕೇಂದ್ರದಿಂದ ನಾಲ್ಕೇ ಕಿ.ಮೀ. ದೂರದ ಹಳ್ಳಿ. ಅಡುಗೆ ಅನಿಲದ ಸಿಲಿಂಡರ್ ಪೂರೈಕೆ ಆಗುತ್ತಿದ್ದುದು ಆ ತಾಲ್ಲೂಕು ಕೇಂದ್ರದ ಒಬ್ಬಾಕೆಯ ಮನೆಯಲ್ಲಿ. ಪರವಾನಗಿ ಅವರೊಬ್ಬರಿಗೇ ಹೇಗೋ ಸಿಕ್ಕಿತ್ತು. ಸಿಲಿಂಡರ್ ಬುಕ್ ಮಾಡಿ, ಕನಿಷ್ಠ ಹತ್ತು ದಿನ ಕಾಯಬೇಕಿತ್ತು. ತರುವುದು ಒಂದು ದಿನ ವಿಳಂಬ ಆದರೂ ಮತ್ತೆ ಅಷ್ಟೇ ದಿನ ಕಾಯಬೇಕಾದ ಅನಿವಾರ್ಯ. ಹೆಚ್ಚು ಬೆಲೆಗೆ ಬೇರೆ ಯಾರಿಗೋ ಅದನ್ನು ಮಾರಿಕೊಳ್ಳುವುದು ಮುಕ್ತವಾಗಿ ನಡೆದಿತ್ತು. ಮುಂದೆ ಸಿಲಿಂಡರ್ ಪರವಾನಗಿ ಒಬ್ಬ ಸ್ಥಳೀಯ ರಾಜಕಾರಣಿಯ ಸಂಬಂಧಿಕರಿಗೆ ಸಿಕ್ಕಿತು. ಆಗಲೂ ಅದೇ ಸ್ಥಿತಿ. ಒಂದೇ ಕಂಪನಿಯ, ಒಬ್ಬರೇ ಏಜೆಂಟರು ಇಡೀ ತಾಲ್ಲೂಕಿಗೆ ಸಿಲಿಂಡರ್‌ಗಳನ್ನು ಪೂರೈಸುತ್ತಿದ್ದರು. ದಶಕಗಳ ಕಾಲ ಈ ಏಕಸ್ವಾಮ್ಯ ಒಡ್ಡಿದ್ದ ಸಾಮಾಜಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಲೇ ಗ್ರಾಹಕರು ಏಗಬೇಕಾಗಿ ಬಂದದ್ದು ಚೋದ್ಯ.
ಇಂಡಿಗೊ ವಿಮಾನಗಳು ಕಳೆದ ವಾರ ಪುಂಖಾನುಪುಂಖವಾಗಿ ರದ್ದಾದ ವಿದ್ಯಮಾನವೂ ಇದೇ ವ್ಯಾಪಾರಿ ಧೋರಣೆಯನ್ನು ಬಿಂಬಿಸುತ್ತದೆ. ಏರ್ ಇಂಡಿಯಾ ಸಂಸ್ಥೆಯ ನೆರವಿಗೆ ಟಾಟಾ ಸಂಸ್ಥೆ ಬಂದ ನಂತರವೂ ಅದರ ಪರಿಸ್ಥಿತಿ ಹೆಚ್ಚೇನೂ ಚೇತರಿಸಿಕೊಂಡಿಲ್ಲ.
ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಕೆಂಪು ಬಣ್ಣದ ತಳುಕು ಉಲ್ಕಾಪಾತದಂತೆ ಉದುರಿದ್ದನ್ನೂ ಕಂಡೆವು. ಜೆಟ್ ಏರ್‌ವೇಸ್, ಗೋ ಏರ್ ಇವೆಲ್ಲವೂ ಅಸ್ತಿತ್ವಕ್ಕಾಗಿ ಪರದಾಡುತ್ತಿರುವ ಹೊತ್ತಿನಲ್ಲೇ ಇಂಡಿಗೊ ವಿಮಾನಯಾನ ಸಂಸ್ಥೆಯು ತನ್ನ ಕಬಂಧಬಾಹುಗಳ ಒಳಗೆ ಗ್ರಾಹಕರನ್ನು ಸೆಳೆದುಕೊಂಡಿತು. ಇಂತಹ ಏಕಸ್ವಾಮ್ಯ ಏನೆಲ್ಲ ಅನಾಹುತಗಳನ್ನು ಮಾಡಬಹುದು ಎಂಬುದಕ್ಕೆ ಸಾವಿರಾರು ಉದಾಹರಣೆಗಳನ್ನು ನಾವು ಕಂಡುಂಡಿದ್ದೇವೆ, ಈಗಲೂ ಆಗಾಗ ಅನುಭವಿಸುತ್ತಿದ್ದೇವೆ.
ಸಿಬ್ಬಂದಿ ಕೊರತೆಯ ನಡುವೆಯೂ ದೀರ್ಘಾವಧಿ ವಿಮಾನಯಾನ ಮುಂದುವರಿಸಿಕೊಂಡು ಬಂದಿದ್ದ ಸಂಸ್ಥೆಗೆ, ಪೈಲಟ್‌ಗಳು ದಿನವೊಂದರಲ್ಲಿ ಇಷ್ಟೇ ಅವಧಿ ವಿಮಾನ ಹಾರಾಟ ನಡೆಸಬೇಕು ಎನ್ನುವುದೂ ಸೇರಿ ಕೆಲವು ನಿಯಮಗಳು ಬಿಸಿತುಪ್ಪದಂತೆ ಆದವು. ಎಂಟು ತಿಂಗಳ ಕಾಲಾವಕಾಶ ಇದ್ದರೂ ಅಗತ್ಯ ಸಿಬ್ಬಂದಿಯನ್ನು ಇಂಡಿಗೊ ಸಂಸ್ಥೆಯು ನೇಮಕ ಮಾಡಿಕೊಳ್ಳಲಿಲ್ಲ. ಇದು ಏಕಸ್ವಾಮ್ಯ ತಂದುಕೊಡುವ ನಿರ್ಲಕ್ಷ್ಯ ಹಾಗೂ ಉಡಾಫೆಗೆ ಸಾಕ್ಷಿ.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಒಟ್ಟಾರೆ ವ್ಯಾಪಾರಿ ಪರಿಸರವೇ ಈ ಬದಲಾವಣೆಯಿಂದ ನಲುಗಿಹೋಯಿತು. ವಿಮಾನಗಳು ರದ್ದಾಗುವುದು ಹೆಚ್ಚಾದದ್ದೇ ಮನೆಗೆ ವಾಪಸ್ ತೆರಳಲು ಹೊರಟ ಗ್ರಾಹಕರಲ್ಲಿ ಟ್ಯಾಕ್ಸಿವಾಲಾಗಳು ಹಣ ಪೀಕಿದರು. ಒಂದೆರಡು ದಿನ ಕಳೆದದ್ದೇ, ಅದೇ ಟ್ಯಾಕ್ಸಿವಾಲಾಗಳು ಕೇಳುವವರೇ ಇಲ್ಲದೆ ಕಂಗಾಲಾದರು. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಹೋಟೆಲ್‌ಗಳೂ ದರಗಳನ್ನು ಗಗನಕ್ಕೆ ಏರಿಸಿದವು. ‘ಹುಚ್ಚನ ಮದುವೆಯಲ್ಲಿ ಉಂಡೋನೇ ಜಾಣ’ ಎನ್ನುವ ನಡೆ ಇದು.
ಇವೆಲ್ಲವೂ ವಿಮಾನ ನಿಲ್ದಾಣದ ಸುತ್ತಮುತ್ತಲಿನ ವಹಿವಾಟಿನ ಬಿಂಬಗಳಾದರೆ, ಒಳಗೆ ಇತರ ವಿಮಾನಯಾನ ಸಂಸ್ಥೆಗಳೂ ನಿಯಂತ್ರಣವಿಲ್ಲದಂತೆ ಪ್ರಯಾಣ ದರವನ್ನು ದಿಢೀರ್ ಏರಿಸಿಬಿಟ್ಟವು. ನಾಗರಿಕ ವಿಮಾನಯಾನ ಸಚಿವಾಲಯವು ಪ್ರಯಾಣ ದರಕ್ಕೆ ಮಿತಿ ಹೇರುವಷ್ಟರಲ್ಲಿ ಸಂಸ್ಥೆಗಳು ಎಷ್ಟು ಸಾಧ್ಯವೋ ಅಷ್ಟೂ ಹಣ ಬಾಚಿಕೊಂಡವು.
ಇಂಡಿಗೊ ತಂದೊಡ್ಡಿದ ಬಿಕ್ಕಟ್ಟನ್ನು ನಾವು ಏಕಸ್ವಾಮ್ಯದ ಅವಘಡದ ರೂಪಕವಾಗಿ ನೋಡಬೇಕು. ಇವತ್ತು ಜಿಯೊ ಹಾಗೂ ಏರ್‌ಟೆಲ್ ಕಂಪನಿಗಳು ದೂರಸಂಪರ್ಕ ಕ್ಷೇತ್ರದ ಸುಮಾರು ಶೇ 90ರಷ್ಟು ಗ್ರಾಹಕರನ್ನು ತಮ್ಮ ತೆಕ್ಕೆಯಲ್ಲಿ ಇಟ್ಟುಕೊಂಡಿವೆ. ಒಂದು ಕಾಲದಲ್ಲಿ ಉಚಿತ ಇಂಟರ್ನೆಟ್ ಸಂಪರ್ಕದ ಗಾಳವನ್ನು ಜಿಯೊ ಹೇಗೆಲ್ಲ ಹಾಕಿತ್ತೆನ್ನುವ ನೆನಪೂ ನಮಗೆ ಇರಬೇಕು. ಒಂದು ವೇಳೆ ಇಂಡಿಗೊ ಸೃಷ್ಟಿಸಿದ ಪರಿಸ್ಥಿತಿಯನ್ನು ಈ ದೂರಸಂಪರ್ಕ ಕಂಪನಿಗಳು ತಂದೊಡ್ಡಿದರೆ ಏನಾಗಬಹುದು ಎಂಬ ಪ್ರಶ್ನೆ ಹಾಕಿಕೊಳ್ಳೋಣ. ಮೊಬೈಲ್‌ಗಳ ರಿಂಗಣ ನಿಲ್ಲುತ್ತದೆ. ಇಂಟರ್ನೆಟ್ ಸಂಪರ್ಕವೇ ಇಲ್ಲವಾದರೆ ಬಹುತೇಕ ಕಚೇರಿ ಚಟುವಟಿಕೆಗಳು ಬಂದ್ ಆಗುತ್ತವೆ. ಯಾವುದೋ ದೇಶದಲ್ಲಿ ಇರುವ ತಮ್ಮವರ ಸಂಪರ್ಕವೇ ಸಾಧ್ಯವಾಗದೆ ಚಡಪಡಿಕೆ ಶುರುವಾಗುತ್ತದೆ. ಜನಸಾಮಾನ್ಯರ ರಂಜನೆಯ ಅಂಗೈಕನ್ನಡಿ ಚೂರಾಗುತ್ತದೆ. ಏಕಸ್ವಾಮ್ಯವು ಸಾಮಾಜಿಕ ನ್ಯಾಯವನ್ನು ನೀಡಲಾರದು ಎನ್ನುವುದನ್ನು ಈ ಕಲ್ಪನಾ ಪ್ರಕರಣ ಸ್ಪಷ್ಟಪಡಿಸುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಏಕಸ್ವಾಮ್ಯ ದೊಡ್ಡಮಟ್ಟದ ಅಹಂಭಾವ ತುಂಬುತ್ತದೆ. ಅದು ಉಡಾಫೆಯ ಧೋರಣೆ, ಯಾಜಮಾನಿಕೆಯ ರಕ್ತ–ಮಾಂಸ ತುಂಬಿ, ತಾತ್ಕಾಲಿಕವಾದರೂ ಅನೇಕರು ನಿಟ್ಟುಸಿರು ಬಿಡುವಂತಹ ಪರಿಸ್ಥಿತಿಗಳನ್ನು ರೂಪಿಸುತ್ತದೆ. ಹೀಗಾಗಿ ಅಂತಹ ಅಹಂಭಾವದ ಬಲೂನಿಗೆ ಸೂಜಿಮೊನೆ ತಾಕಿಸುವ ಸಾಮಾಜಿಕ ವ್ಯಾಪಾರ ವ್ಯವಸ್ಥೆಯೊಂದು ಇರಬೇಕು. ಇಂಡಿಗೊ ಕಂಬಂಧಬಾಹುವಿನ ಬದಲು, ಕೆಲವಾದರೂ ಕಂಪನಿಗಳ ಬಿಗಿಯಪ್ಪುಗೆ ಬೇಕು.
ಕೆಲವೊಮ್ಮೆ ನಮ್ಮ ನಿರೀಕ್ಷೆಗಳನ್ನೆಲ್ಲ ಮೀರಿ ಯಾವುದೋ ಕ್ಷೇತ್ರದಲ್ಲಿ ಏಕಸ್ವಾಮ್ಯ ರೂಪುಗೊಂಡು, ಅದರಿಂದ ಬಿಕ್ಕಟ್ಟು ತಲೆದೋರಿ ನಾಗರಿಕರು ಸಮಸ್ಯೆಗೊಳಗಾದಾಗ, ಸರ್ಕಾರದ ಪಾತ್ರ ಏನು ಎನ್ನುವ ಪ್ರಶ್ನೆಯನ್ನೂ ನಾವು ಕೇಳಿಕೊಳ್ಳಬೇಕು. ನಾಗರಿಕರ ಸುಲಿಗೆಯನ್ನು ಸರ್ಕಾರ ನೋಡಿಕೊಂಡು ಸುಮ್ಮನಿರುವುದೂ ರಾಜಕಾರಣದಲ್ಲಿನ ಒಂದು ಬಗೆಯ ಏಕಸ್ವಾಮ್ಯದ ಪರಿಣಾಮ ಇರಬಹುದೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.