ADVERTISEMENT

ಸಂಗತ: ಪ್ರೇಮ ವಿವಾಹ.. ದೃಷ್ಟಿಕೋನ ಬದಲಾಗಲಿ

ಪ್ರೇಮಿಗಳಿಗೆ ತಮ್ಮ ಪ್ರೇಮವನ್ನು ಹೆತ್ತವರಲ್ಲಿ ಹೇಳಿಕೊಳ್ಳುವ ಧೈರ್ಯ ಅಗತ್ಯ. ಪ್ರೇಮವನ್ನು ಮುಚ್ಚಿಡುವುದು ಮುಜುಗರಕ್ಕೆ, ಅನಾಹುತಕ್ಕೆ ಕಾರಣ ಆಗಬಹುದು.

ಸಿದ್ದಯ್ಯ ಹಿರೇಮಠ
Published 8 ಜನವರಿ 2026, 23:48 IST
Last Updated 8 ಜನವರಿ 2026, 23:48 IST
<div class="paragraphs"><p>ಸಂಗತ: ಪ್ರೇಮ ವಿವಾಹ.. ದೃಷ್ಟಿಕೋನ ಬದಲಾಗಲಿ</p></div>

ಸಂಗತ: ಪ್ರೇಮ ವಿವಾಹ.. ದೃಷ್ಟಿಕೋನ ಬದಲಾಗಲಿ

   

‘ಮದುವೆಯ ದಿನ ಅಥವಾ ಮುನ್ನಾದಿನ ಕಲ್ಯಾಣಮಂಟಪದಿಂದ ವಧು ಪರಾರಿ. ದೀರ್ಘಕಾಲದ ಪ್ರೇಮಿಯೊಂದಿಗೆ ದೇವಸ್ಥಾನದಲ್ಲಿ ಮದುವೆ’ ಎಂಬಂಥ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇವೆ. ಪ್ರೇಮಿಗಳು ತಾವು ಸಂಕಷ್ಟ ಅನುಭವಿಸುತ್ತಲೇ, ಉಳಿದವರನ್ನೂ ತಲ್ಲಣಕ್ಕೆ ಒಳಗುಮಾಡುವ ಪ್ರಸಂಗಗಳು ಒಂದೆರಡಲ್ಲ.

ಮದುವೆ ಮಂಟಪದಿಂದ ವರ ಪರಾರಿಯಾಗಿ ಇಷ್ಟಪಟ್ಟವಳೊಂದಿಗೆ ಸಪ್ತಪದಿ ತುಳಿದ; ಪ್ರೀತಿಸಿದ ಯುವಕ ಕೈಕೊಟ್ಟು ಮತ್ತೊಬ್ಬಳನ್ನು ಮದುವೆಯಾಗಲು ಮುಂದಾದಾಗ ಯುವತಿ ಅಡ್ಡಿಪಡಿಸಿದಳು ಎನ್ನುವಂಥ ಪ್ರಸಂಗಗಳೂ ನಡೆಯುತ್ತಿವೆ. ಕೆಲವು ಯುವತಿಯರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಮದುವೆ ಆದ ಹೊಸದರಲ್ಲೇ ಗಂಡನ ಮನೆಯಿಂದ ಪರಾರಿಯಾಗಿ ಪ್ರಿಯಕರನನ್ನು ವರಿಸಿದಂಥ ಬೆಳವಣಿಗೆಗಳು ಈಚೆಗೆ ಕಂಡುಬರುತ್ತಿವೆ.

ADVERTISEMENT

ಮದುವೆಯ ಹಿಂದಿನ ದಿನ ವಧುವೊಬ್ಬಳು ಪರಾರಿಆಗಿದ್ದರಿಂದ, ಮದುವೆಯ ಸಿದ್ಧತೆ ಹಾಗೂ ಕಲ್ಯಾಣ
ಮಂಟಪಕ್ಕೆ ಮಾಡಲಾದ ವೆಚ್ಚವನ್ನೆಲ್ಲ ಭರಿಸುವಂತೆ ವರನ ಕಡೆಯವರು ಹೆಣ್ಣಿನ ತಂದೆ–ತಾಯಿಗೆ ಕಾಟ ಕೊಟ್ಟ ಘಟನೆ ಇತ್ತೀಚೆಗಷ್ಟೇ ನಡೆದಿದೆ.

ಆರತಕ್ಷತೆಗೆ ಮೊದಲೇ ಮಗಳು ಪರಾರಿಯಾಗಿದ್ದರಿಂದ ಅವಮಾನ ತಾಳಲಾರದೇ ತಂದೆ–ತಾಯಿ ಮತ್ತು ಮನೆಯವರು ಸಾಕಷ್ಟು ಮಾನಸಿಕ ವೇದನೆ ಅನುಭವಿಸಿದರು, ವಧು ತಾಳಿ ಕಟ್ಟುವುದಕ್ಕೆ ಮೊದಲು, ಕೊನೆಯ ಕ್ಷಣದಲ್ಲಿ ಹಸೆಮಣೆಯಿಂದ ಎದ್ದುಹೋಗಿ ಪ್ರಿಯಕರನನ್ನು ವರಿಸಿದ್ದರಿಂದ ಮದುವೆಯಾಗದೇ ಬರಿಗೈಯಲ್ಲಿ ಹಿಂದಿರುಗಿದ ವರನಿಗೆ ವರ್ಷಗಳು ಕಳೆದರೂ ಮದುವೆಯಾಗುವ ಯೋಗ ಕೂಡಿಬಂದಿಲ್ಲ ಎಂಬ ಸುದ್ದಿಗಳೂ ವರದಿಯಾಗಿವೆ.

ಕಳೆದ ವರ್ಷವಷ್ಟೇ ಗದಗ ಜಿಲ್ಲೆಯ ಗ್ರಾಮವೊಂದರಲ್ಲಿ ನಗುತ್ತಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ವಿದ್ಯಾವಂತ ಯುವತಿಯೊಬ್ಬಳು, ಮೂರು ತಿಂಗಳು ಆ ಯುವಕನೊಂದಿಗೆ ಮೊಬೈಲ್‌ ಫೋನ್‌ನಲ್ಲಿ ಮಾತನಾಡಿದ್ದಳು. ಯುವಕ ಕರೆ ಮಾಡುವುದು ಸ್ವಲ್ಪ ತಡವಾದರೂ ಮುನಿಸಿಕೊಳ್ಳುತ್ತಿದ್ದಳು. ‘ವಿಡಿಯೊ ಕಾಲ್‌ ಮಾಡಿ ಮುಖ ತೋರಿಸದಿದ್ದರೆ ಊಟವನ್ನೇ ಮಾಡುವುದಿಲ್ಲ’ ಎಂದು ತನ್ನೊಂದಿಗೆ ಹಸೆಮಣೆ ಏರಲು ಸನ್ನದ್ಧನಾಗಿದ್ದ ಆ ಯುವಕನಿಗೆ ಹೇಳುತ್ತಿದ್ದಳು. ಆಕೆ, ಒಂದು ದಿನ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿ ಬಾಲ್ಯದ ಗೆಳೆಯನೊಂದಿಗೆ ಪಕ್ಕದೂರಿನ ದೇವಸ್ಥಾನದಲ್ಲಿ ಮದುವೆ ಆಗಿದ್ದಳು. ಪೊಲೀಸ್‌ ಠಾಣೆಗೆ ತೆರಳಿ ರಕ್ಷಣೆ ನೀಡುವಂತೆ ಕೋರಿದ್ದಳು.

ಹೆತ್ತು, ಹೊತ್ತು, ಸಾಕಿ, ಸಲಹಿದ ಆಕೆಯ ಮನೆಯವರಿಗೆ ಇದರಿಂದ ತೀವ್ರ ಆಘಾತ ಆಗಿತ್ತು. ಮೂರು ತಿಂಗಳ ಹಿಂದಷ್ಟೇ ಹೆಣ್ಣು ನೋಡಲು ಹೋಗಿ, ‘ಒಪ್ಪಿಗೆ ಆಗಿದೆ’ ಎಂದು ತಿಳಿಸಿದ ನಂತರವಷ್ಟೇ ಊರವರನ್ನೆಲ್ಲ ಕರೆದೊಯ್ದು ನಿಶ್ಚಿತಾರ್ಥ ಮಾಡಿಕೊಂಡು, ಮದುವೆಗೆ ಸಿದ್ಧತೆ ನಡೆಸುತ್ತಿದ್ದ ಯುವಕ ಮಾನಸಿಕವಾಗಿ ಗಾಸಿಗೊಂಡಿದ್ದ. ‘ಮೊದಲೇ ತಿಳಿಸಿದ್ದರೆ ಮಗಳ ಪ್ರೇಮವಿವಾಹಕ್ಕೆ ನಾವು ಅಡ್ಡಿಪಡಿಸುತ್ತಲೇ ಇರಲಿಲ್ಲ’ ಎಂದು ಯುವತಿಯ ಪಾಲಕರು ಹೇಳಿದರೆ, ‘ಪ್ರೀತಿಯ ವಿಷಯವನ್ನು ತಿಳಿಸಿದ್ದರೆ ನಾವಾದರೂ ಯಾಕಾಗಿ ನಿಶ್ಚಿತಾರ್ಥದವರೆಗೆ ಹೋಗುತ್ತಿದ್ದೆವು?’ ಎಂದು ಯುವಕನ ಕಡೆಯವರು ಪ್ರಶ್ನಿಸಿದ್ದರು.

ತಮ್ಮ ಪ್ರೇಮದ ವಿಷಯವನ್ನು ಬಹಿರಂಗಪಡಿಸದೆ, ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಮದುವೆಗೆ ಒಪ್ಪುವ ತರುಣ, ತರುಣಿಯರಿದ್ದಾರೆ. ಮದುವೆ ನಿಶ್ಚಯವಾದ ನಂತರವೂ, ತಾಳಿ ಕಟ್ಟುವ ಕೊನೆಯ ಕ್ಷಣದವರೆಗೂ ಏನನ್ನೂ ಹೇಳದೆ, ಇದ್ದಕ್ಕಿದ್ದಂತೆ ಪರಾರಿಯಾಗಿ ಪ್ರೇಮಿಯೊಂದಿಗೆ ಮದುವೆಯಾಗುವ ಬದಲು, ಮೊದಲೇ ಧೈರ್ಯದಿಂದ ನಿಜಸ್ಥಿತಿ ಹೇಳಿದಲ್ಲಿ ಮುಂದಾಗುವ ಅನಾಹುತ, ಮುಜುಗರವನ್ನು ತಪ್ಪಿಸಲು ಸಾಧ್ಯವಿದೆ.

21 ದಾಟಿದ ಯುವಕ, 18 ದಾಟಿದ ಯುವತಿ ಜೀವನ ಸಂಗಾತಿಯ ಆಯ್ಕೆ ಮತ್ತು ಪ್ರೇಮದ ವಿಷಯವನ್ನು ಬಹಿರಂಗಪಡಿಸುವ ವಿಷಯದಲ್ಲಿ ವಿವೇಚನೆಯ ಹೆಜ್ಜೆ ಇರಿಸಿದಲ್ಲಿ ಅನಾಹುತಕ್ಕೆ ಆಸ್ಪದ ಕೊಡದೆ ಜೀವನ ನಡೆಸಲು ಅವಕಾಶ ಇದೆ. ಆದರೆ, ದುಡುಕುತನ ಅಥವಾ ಭಯ, ಇಲ್ಲಸಲ್ಲದ ಬೆಳವಣಿಗೆಗಳಿಗೆ ಕಾರಣವಾಗುತ್ತಿದೆ.

ಪ್ರೇಮ ವಿವಾಹಗಳು ಈಗ ಅಚ್ಚರಿಯಾಗೇನೂ ಉಳಿದಿಲ್ಲ. ಅನ್ಯಜಾತಿ, ಅನ್ಯಧರ್ಮೀಯ ಯುವಕ– ಯುವತಿಯರು ಪ್ರೀತಿಸುತ್ತಿದ್ದಾಗ, ಅವರ ಮದುವೆಗೆ ಅನೇಕರು ಬೆಂಬಲವನ್ನೂ ಸೂಚಿಸುತ್ತಿದ್ದಾರೆ. ಕಾನೂನಿನ ರಕ್ಷಣೆಯೂ ಪ್ರೇಮಿಗಳಿಗೆ ಸಿಗುತ್ತಿದ್ದು, ಪ್ರೇಮವಿವಾಹಗಳ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿದೆ.

ದುರದೃಷ್ಟವಶಾತ್‌, ಮರ್ಯಾದೆಗೇಡು ಹತ್ಯೆಯಂಥ ಹೇಯಕೃತ್ಯಗಳೂ ನಡೆಯುತ್ತಿವೆ. ಹುಬ್ಬಳ್ಳಿ ತಾಲ್ಲೂಕಿನಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂಥ ಕೃತ್ಯ ನಡೆದಿದೆ. ಸ್ವಜಾತಿಯ ಯುವಕ–ಯುವತಿ ಮನೆಯಿಂದ ಹೊರಹೋಗಿ ಪ್ರೇಮವಿವಾಹ ಮಾಡಿಕೊಂಡು, ಪೊಲೀಸ್‌ ಠಾಣೆಗೆ ಬಂದು ರಕ್ಷಣೆ ಕೋರಿದ ಸಂದರ್ಭದಲ್ಲಿ, ಪ್ರೇಮಿಗಳನ್ನು ಬೆಂಬಲಿಸಿದ ಆರೋಪದಲ್ಲಿ ಸಂಬಂಧವೇ ಇಲ್ಲದ ಇಬ್ಬರನ್ನು ಯುವತಿಯ ಸಂಬಂಧಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಭದ್ರಾವತಿಯಲ್ಲಿ ಈಚೆಗಷ್ಟೇ ಸಂಭವಿಸಿದೆ.

ಮೆಚ್ಚಿದ ಹುಡುಗ ಅಥವಾ ಹುಡುಗಿಯೊಂದಿಗೆ ಜೀವನ ನಡೆಸಬೇಕು ಎಂದು ಬಯಸುವವರು ಹೃದಯದಲ್ಲಿ ಹುದುಗಿದ ಪ್ರೇಮದ ಬಗ್ಗೆ ಪಾಲಕರೆದುರು ಹೇಳುವ ಧೈರ್ಯ ಮಾಡಬೇಕು. ಈ ಕುರಿತ ನಿರ್ಧಾರ ಅಚಲ ಎಂಬುದನ್ನೂ ಸ್ಪಷ್ಟಪಡಿಸಬೇಕು. ಅದು ಆಗದೆ ಹೋದರೆ, ಪ್ರೇಮ ವಿವಾಹದ ಬಗೆಗಿನ ಸಂಕುಚಿತ ದೃಷ್ಟಿಕೋನಗಳಿಗೆ ಒತ್ತಾಸೆ ನೀಡಿದಂತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.