ADVERTISEMENT

ಸಂಗತ: disabled person– ಪ್ರೋತ್ಸಾಹ ಅಗತ್ಯ, ಅನುಕಂಪದ ಕಾಸಲ್ಲ

ಅನುಕಂಪದಿಂದ ನೋಡುವುದರ ಮೂಲಕ ಅಂಗವಿಕಲರನ್ನು ಪರಾವಲಂಬನೆಗೆ ತಳ್ಳುವ ಸಮಾಜದ ಮನಃಸ್ಥಿತಿಯಲ್ಲಿ ಬದಲಾವಣೆ ಅಗತ್ಯ

ರಾಮಕೃಷ್ಣ ಶಾಸ್ತ್ರಿ
Published 16 ಜೂನ್ 2025, 23:34 IST
Last Updated 16 ಜೂನ್ 2025, 23:34 IST
   

ಹುಟ್ಟಿನಿಂದಲೇ ಎರಡೂ ಕಣ್ಣುಗಳು ಇಲ್ಲದ ವ್ಯಕ್ತಿಯೊಬ್ಬರು ಎಂಬತ್ತರ ವಯಸ್ಸಿನಲ್ಲಿ ಸಾವು ಬರುವವರೆಗೂ ಬಳಪದ ಕಲ್ಲಿನ ಕಾವಲಿಗಳನ್ನು ಹೊತ್ತುಕೊಂಡು ಊರಿಂದೂರಿಗೆ ಹೋಗುತ್ತಿದ್ದರು. ಕಾವಲಿಗಳ ಮಾರಾಟದಿಂದ ಬಂದ ಆದಾಯದಲ್ಲಿ ಬದುಕು ಸಾಗಿಸಿದರು. ಕಣ್ಣಿಲ್ಲದಿದ್ದರೂ ಅವರು ಊರಿಂದೂರಿಗೆ ಸಂಚರಿಸುತ್ತಿದ್ದುದು ಆಶ್ಚರ್ಯಕರ ವಾಗಿತ್ತು. ಅನುಕಂಪದಿಂದ ಯಾರಾದರೂ ಹಣ ಕೊಡಲು ಬಂದರೆ ಅದನ್ನು ನಿರಾಕರಿಸುತ್ತ ಹೇಳುತ್ತಿದ್ದರು: ‘ಕಾವಲಿ ತೆಗೆದುಕೊಂಡು ಅದರ ಬೆಲೆ ಕೊಡಿ. ಉಚಿತವಾಗಿ ಹಣ ಕೊಟ್ಟು ನನ್ನನ್ನು ಭಿಕ್ಷುಕನಾಗಿ ಮಾಡಬೇಡಿ’.

ಭಿಕ್ಷೆ ಬೇಡುವುದು ಬಿಟ್ಟರೆ ಬೇರೆ ಏನನ್ನೂ ಮಾಡುವುದು ಅಂಗವಿಕಲರಿಗೆ ಸಾಧ್ಯವಿಲ್ಲ ಎಂದು ಭಾವಿಸಿರುವವರು ಹೆಚ್ಚಾಗಿದ್ದಾರೆ. ಆ ಭಾವನೆಯಿಂದಲೇ ಅಂಗವಿಕಲರಿಗೆ ‘ಅನುಕಂಪದ ಕಾಸು’ ನೀಡಲು ಸಮಾಜ ಮುಂದಾಗುತ್ತದೆ. ಅವರಲ್ಲಿ ಇರಬಹುದಾದ ಪ್ರತಿಭೆಯನ್ನು ಗುರುತಿಸುವ ಮೂಲಕ ಅಂಗವೈಕಲ್ಯದ ನಡುವೆಯೂ ಸ್ವಾವಲಂಬನೆಯಿಂದ ಜೀವನ ಸಾಗಿಸಲು ಸಮಾಜ ಪ್ರೇರಣೆ ನೀಡುವ ಸಂದರ್ಭಗಳು ಕಡಿಮೆ. ಅಂಗವಿಕಲರನ್ನು ಅಸಹಾಯಕರೆಂದೇ ಬಿಂಬಿಸಿ, ಪರರ ಆಶ್ರಯದಲ್ಲಿ ಅವರು ಬದುಕುವ ವಾತಾವರಣ ರೂಪಿಸುವ ಕೆಲಸವನ್ನು ಎಲ್ಲಾ ಅಂಗಾಂಗಗಳು ಸರಿಯಾಗಿಯೇ ಇರುವವರು ಮಾಡುವುದಿದೆ.

ಕಣ್ಣಿಲ್ಲದ, ಕೈಗಳಿಲ್ಲದ ಮಗು ಜನಿಸಿದಾಗ ಹೆತ್ತವರು ಪರಿತಪಿಸುತ್ತಾರೆ. ‘ನಾವು ಅಗಲಿದ ಬಳಿಕ ಮಗುವನ್ನು ಯಾರು ನೋಡಿ ಕೊಳ್ಳುತ್ತಾರೆ’ ಎಂಬ ಭವಿಷ್ಯದ ಚಿಂತೆಯಿಂದ, ಮಗುವಿನ ಬದುಕಿಗೆ ಮುಳ್ಳಾದವರೂ ಇದ್ದಾರೆ. ಇದಕ್ಕೆ ತದ್ವಿರುದ್ಧವಾಗಿ, ಅಂಗಾಂಗ ನ್ಯೂನತೆ ಮಗುವಿಗೆ ಅರಿವಾಗದಂತೆ ಬೆಳೆಸಿ, ದಿಟ್ಟತನದಿಂದ ಜೀವನ ನಿರ್ವಹಿಸುವ ಮಾರ್ಗ ಕಲಿಸಿದ ದಿಟ್ಟ ತಂದೆ– ತಾಯಂದಿರೂ ಇದ್ದಾರೆ. ದಾರಿ ಹುಡುಕುತ್ತಾ ಹೋದರೆ, ಕೃತಕ ಅಂಗಾಂಗಗಳನ್ನು ಬಳಸಿ ಮುನ್ನಡೆಯಲು ಸಹಾಯಕವಾಗುವಂತೆ ವೈದ್ಯಕೀಯ ಆವಿಷ್ಕಾರಗಳೂ ಸಾಕಾರಗೊಂಡಿವೆ.

ADVERTISEMENT

ಪೋಲಿಯೊ ಬಾಧೆಯಿಂದಾಗಿ ಎಳವೆಯಿಂದಲೇ ಕಾಲುಗಳೆರಡೂ ನಿಷ್ಕ್ರಿಯವಾಗಿರುವ ಮಕ್ಕಳೊಂದಿಗೆ ತೀರ್ಥಕ್ಷೇತ್ರಗಳಿಗೆ ಯಾತ್ರೆ ಕೈಗೊಂಡು, ಮಗುವಿನ ಕಾಲುಗಳನ್ನು ಸರಿಪಡಿಸುವಂತೆ ಬೇಡುವ ದೈವಭಕ್ತರಿಗೂ ಬರವಿಲ್ಲ. ಅದರಿಂದ ಫಲ ಸಿಗುವುದಿಲ್ಲ ಎಂಬ ತಥ್ಯವನ್ನು ಅವರಿಗೆ ಹೇಳಿದರೂ ಜೀರ್ಣಿಸಿಕೊಳ್ಳಲಾರರು.

ಅಂಗವೈಕಲ್ಯವನ್ನು ಮೆಟ್ಟಿ ನಿಂತು ನಿಶ್ಚಿಂತೆಯ ಬದುಕು ರೂಪಿಸಿಕೊಂಡ ಸಾಧಕರ ನೈಜ ಕಥೆಗಳು ಪಠ್ಯಪುಸ್ತಕ ಗಳಿಗೆ ಸೇರುವ ಅಗತ್ಯವಿದೆ. ಇಂಥ ಸ್ಫೂರ್ತಿ ಕಥನಗಳು, ಅಂಗಾಂಗ ಕೊರತೆಯ ಮಗು ಜನಿಸಿದಾಗ ‘ಅಯ್ಯೋ’ ಎಂದು ಪರಿತಪಿಸದೆ, ಸವಾಲಿನ ಬದುಕನ್ನು ನಿರ್ವಹಿಸಲು ಮಗುವನ್ನು ಸಜ್ಜುಗೊಳಿಸಲು ಪೋಷಕರಿಗೆ ಪ್ರೇರಣೆ ದೊರೆಯಬಹುದು.

ಅಂಗವೈಕಲ್ಯ ಹೊಂದಿರುವ ವ್ಯಕ್ತಿ ಬೀದಿಬದಿಯಲ್ಲಿ ಬಟ್ಟೆ ಹಾಸಿ ಕುಳಿತುಕೊಂಡು ಕೈ ಚಾಚುವ ಅಗತ್ಯವಿಲ್ಲ ಎಂಬುದನ್ನು, ಅಂತಹ ಮಕ್ಕಳಿಗೆ ಜನ್ಮನೀಡಿದ ಪೋಷಕರು ಗಮನಿಸಬೇಕಾಗಿದೆ. ಪಾರ್ಶ್ವವಾಯು ತಗುಲಿ ದೇಹದ ಒಂದು ಭಾಗದ ಮೇಲೆ ಹಿಡಿತ ಕಳೆದುಕೊಂಡವರು ಕೂಡ ಔಷಧೋಪಚಾರಗಳಿಂದ ಸುಧಾರಿಸಬಹುದೆಂಬುದನ್ನು ವೈದ್ಯಕೀಯ ಜಗತ್ತು ಸಾಧಿಸಿ ತೋರಿಸಿದೆ. ಒಂದು ಅಂಗವಿಲ್ಲ ಎಂಬ ಮಾತ್ರಕ್ಕೆ ಸಹಾನುಭೂತಿ, ಅನುಕಂಪಗಳ ಮಹಾಪೂರವನ್ನೇ ಹರಿಸುವ ಮೂಲಕ, ಸ್ವಂತಿಕೆಯ ಬದುಕಿನ ನಿರ್ಮಾಣದತ್ತ ಲಕ್ಷ್ಯ ಹರಿಸಲೂ ಆಗದಷ್ಟು ವ್ಯಕ್ತಿಯನ್ನು ಮಾನಸಿಕ ದೌರ್ಬಲ್ಯಕ್ಕೆ ಸಮಾಜ ಗುರಿ ಮಾಡಬಾರದು.

ಅಂಗವಿಕಲರ ಕಲ್ಯಾಣವನ್ನೇ ಗುರಿ ಮಾಡಿಕೊಂಡ ಹಲವು ಸಂಸ್ಥೆಗಳು ನಮ್ಮ ನಡುವೆ ಇವೆ. ಕೆಲವು ಸಂಸ್ಥೆಗಳು ಅಂಗವಿಕಲ ವ್ಯಕ್ತಿಗಳಿಗೆ ಗೂಡಂಗಡಿ ಹಾಕಿಕೊಂಡು ವ್ಯಾಪಾರ ಮಾಡಲು ನೆರವಾಗುತ್ತವೆ. ಅದರ ಬದಲಾಗಿ, ದೈಹಿಕ ಕೊರತೆಯನ್ನು ಬದಿಗೊತ್ತಿ ಇತರರಿಗೆ ಸರಿ ಸಮಾನವಾಗಿ ಬಾಳುವಂತಹ ಹುರುಪನ್ನು ಅವರಲ್ಲಿ ಉದ್ದೀಪನಗೊಳಿಸುವುದು ಅಗತ್ಯ. ಅಂಗವೈಕಲ್ಯದ ನಡುವೆಯೂ ಮಹತ್ವವಾದುದನ್ನು ಸಾಧಿಸಬಹುದು ಎನ್ನುವುದಕ್ಕೆ ಮಾಲತಿ ಹೊಳ್ಳ ಅವರಂತಹ ಕ್ರೀಡಾಪಟುಗಳು ನಮಗೆ ಮಾದರಿ. ಪ್ರತಿಯೊಬ್ಬ ಅಂಗವಿಕಲ ವ್ಯಕ್ತಿಯ ಆಳದಲ್ಲಿ ಹುದುಗಿರಬಹುದಾದ ಪ್ರತಿಭೆಯನ್ನು ಹೆಕ್ಕಿ ಪ್ರೋತ್ಸಾಹಿಸುವ ಕೆಲಸ ಸಂಘ–ಸಂಸ್ಥೆಗಳಿಂದ ಆಗಬೇಕು.

ಜನಿಸಿದ ಮಗು ದೈಹಿಕವಾಗಿ ಊನವಾಗಿದ್ದರೆ, ದೇವರ ಶಾಪವೆಂದು ಪೋಷಕರು ಪರಿತಪಿಸುತ್ತಾರೆ. ತಮ್ಮ ಹತಾಶ ಭಾವವನ್ನೇ ಬೆಳೆಯುತ್ತಿರುವ ಮಗುವಿನ ಮನಸ್ಸಿನಲ್ಲೂ ತುಂಬುತ್ತಾರೆ. ದುರ್ದೈವ ಎಂದು ಭಾವಿಸಿದ ಮಗುವಿನ ಭವಿಷ್ಯದ ಬದುಕನ್ನು ಸುದೈವವಾಗಿ ರೂಪಿಸುವ ಹೊಣೆ ಜನ್ಮದಾತರದು.

ಮಗುವಿಗಿಂತ ಹೆಚ್ಚಿನ ಆತ್ಮವಿಶ್ವಾಸ ಹೆತ್ತವರಿಗೆ ಇದ್ದಾಗ, ಮಗು ಬೀದಿಬದಿಯ ಗಳಿಕೆಗೆ ಶರಣಾಗದೆ ಸ್ವಾವಲಂಬನೆಯ ಹಾದಿ ಹುಡುಕಿಕೊಂಡು ಜೀವಿಸುವ ಸಾಧಕನಾಗಬಹುದು. ಮಗುವಿಗೆ ಶಾಪ ಎಂದುಕೊಂಡಿದ್ದ ಬದುಕನ್ನು ಸಹನೆ, ಛಲ ಇವೆರಡರಿಂದಲೇ ವರವಾಗಿ ಪರಿವರ್ತಿಸಬಹುದು. ಅಂತಹ ಮಗು ಯಾರದೋ ಬಳಿ ಕೈಯೊಡ್ಡಿ ವಿದ್ಯಾಭ್ಯಾಸ ಮಾಡಲು ಅವಕಾಶ ಕೊಡಬಾರದು. ಆತ್ಮಾಭಿಮಾನವನ್ನು ಮಗುವಿನಲ್ಲಿ ಬೆಳೆಸುವ ಮೂಲಕ ಮಾದರಿಯ ಜೀವನ ವಿಧಾನವನ್ನು ರೂಪಿಸಬೇಕು. ಹಿರಿಯರ ಪರಿಶ್ರಮ ಎಂದಿಗೂ ವ್ಯರ್ಥ ವಾಗುವುದಿಲ್ಲ. ಚಿಗುರಿನಲ್ಲೇ ಸಿಗುವ ದೃಢ ಸಾಧನೆಯ ಪೋಷಣೆ, ಅನುಕಂಪದ ಹಂಗಿಲ್ಲದ ಸ್ವಾವಲಂಬನೆಗೆ ಮಾದರಿಯಾಗಿ ಮಗುವನ್ನು ಸದೃಢವಾಗಿ ರೂಪಿಸುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.