
ಭಾರತ ಕ್ರಿಕೆಟ್ ತಂಡದ ಪಳಗಿದ ಆಟಗಾರರೂ ಈಗ ತಲೆಮೇಲೆ ಕೈಹೊತ್ತು ಕೂರಬೇಕಾದ ಪರಿಸ್ಥಿತಿ. ಕೆಂಪು ಚೆಂಡಿನ ಆಟವೀಗ ಭಾರತದ ಪಾಲಿಗೆ ಅಗ್ನಿಪರೀಕ್ಷೆ. ಕೋಲ್ಕತ್ತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಮ್ಮ ದೇಶದ ತಂಡ ಟೆಸ್ಟ್ ಕ್ರಿಕೆಟ್ ಸೋಲುತ್ತದೆ ಎನ್ನುವುದೇ ದೊಡ್ಡ ಪ್ರಶ್ನೆಯನ್ನು ಎದುರಲ್ಲಿ ಇಡುವಂಥ ವಿದ್ಯಮಾನ. ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬ ಬವುಮಾ ಅವುಡುಗಚ್ಚಿ ಎರಡನೇ ಪಾಳಿಯಲ್ಲಿ ಕಟ್ಟಿಕೊಟ್ಟ ಇನಿಂಗ್ಸ್ ಭಾರತದ ಸಂಯಮಹೀನ ಆಟಗಾರರಿಗೆ ಪ್ರಾತ್ಯಕ್ಷಿಕೆಯಂತೆ ಇತ್ತು.
ಸೋಲು, ಗೆಲುವು ಕ್ರಿಕೆಟ್‌ನಲ್ಲಿ ಸಹಜ. ಆದರೆ, ತವರಿನ ಈಡನ್ ಗಾರ್ಡನ್ಸ್‌ನಲ್ಲಿ ಪಿಚ್ ಕ್ಯುರೇಟರ್ ಸುಜನ್ ಮುಖರ್ಜಿ ತಾವು ಕೇಳಿದಂತಹುದೇ ಟ್ರ್ಯಾಕ್ ಮಾಡಿಕೊಟ್ಟಿದ್ದರು ಎಂದು ತರಬೇತುದಾರ ಗೌತಮ್ ಗಂಭೀರ್ ಹೇಳಿದ್ದಾರೆ. ಆ ಪಿಚ್ ಬ್ಯಾಟಿಂಗ್ ಮಾಡಲಿಕ್ಕೆ ಅಸಾಧ್ಯ ಎನ್ನುವಂತೇನೂ ಇರಲಿಲ್ಲವೆಂದೂ ಮಾತು ಸೇರಿಸಿದ್ದಾರೆ. ಆ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ನೋಡಿದರೆ, ಭಾರತ ಟೆಸ್ಟ್ ಕ್ರಿಕೆಟ್ ತಂಡದ ಎದುರಲ್ಲಿ ಹಲವು ಪ್ರಶ್ನೆಗಳು ಇರುವುದು ಸ್ಪಷ್ಟ.
ಯಶಸ್ವಿ ಜೈಸ್ವಾಲ್‌ಗೆ ದಾಳಿಕೋರ ಆಟ ಎಲ್ಲ ಸಂದರ್ಭದಲ್ಲೂ ಕೈಹಿಡಿಯುವುದಿಲ್ಲ. ಕೆ.ಎಲ್. ರಾಹುಲ್ ಆಡದೇಹೋದರೆ ಭಾರತಕ್ಕೆ ಉಳಿಗಾಲವಿಲ್ಲ. ರಿಷಭ್ ಪಂತ್ ಕೆಲವು ವರ್ಷಗಳ ಹಿಂದೆ ಆಸ್ಟ್ರೇಲಿಯಾ ನೆಲದಲ್ಲಿ ತೋರಿದ್ದ ಆಕ್ರಮಣಶೀಲ ಮನೋಭಾವ ಸ್ಪಿನ್ನರ್‌ಗಳ ಎದುರು ಇಲ್ಲಿ ನಡೆಯುವುದಿಲ್ಲ. ವಾಷಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ ಇಬ್ಬರನ್ನೂ ತಂಡ ಹೆಚ್ಚು ನೆಚ್ಚಿಕೊಳ್ಳುತ್ತಿರುವುದು ಬ್ಯಾಟರ್‌ಗಳ ರೂಪದಲ್ಲೋ? ಬೌಲರ್‌ಗಳ ರೂಪದಲ್ಲೋ? ಮೊಹಮ್ಮದ್ ಸಿರಾಜ್ ಆತ್ಮವಿಶ್ವಾಸಕ್ಕೆ ಪದೇ ಪದೇ ಪೆಟ್ಟು ಬೀಳುತ್ತಿರುವುದು ಯಾಕೆ? ಹೀಗೆ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ಮೊದಲ ಟೆಸ್ಟ್‌ನಲ್ಲಿ ಸೋತಿರುವುದು ಹಲವು ಸಮಸ್ಯೆಗಳಿಗೆ ಕನ್ನಡಿ ಹಿಡಿದಿದೆ; ಕೆಲವು ಪ್ರಶ್ನೆಗಳನ್ನೂ ಮುಂದಿಟ್ಟಿದೆ.
ಭಾರತವು ಕಳೆದ ವರ್ಷ ನ್ಯೂಜಿಲೆಂಡ್ ಎದುರು ತವರು ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ವೈಟ್ ವಾಷ್ ಆದಾಗಲೇ ಇಂತಹ ಪ್ರಶ್ನೆಗಳು ಮೂಡಿದ್ದವು. ಆ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ ಎನ್ನುವುದು ಈಗ ಸ್ಪಷ್ಟವಾಗಿದೆ.
ಕಳೆದ ವರ್ಷ ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸುಂದರ್ ಎರಡೂ ಇನಿಂಗ್ಸ್‌ಗಳಿಂದ ಒಟ್ಟು 11 ವಿಕೆಟ್ ಪಡೆದಿದ್ದರು. ಆದರೆ, ನ್ಯೂಜಿಲೆಂಡ್ ಕೊನೆಯ ಕ್ಷಣದಲ್ಲಿ ಆರಿಸಿಕೊಂಡಿದ್ದ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಅದೇ ಪಂದ್ಯದಲ್ಲಿ ಒಟ್ಟು 13 ವಿಕೆಟ್ ಕಿತ್ತರು. ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಕೂಡ ಸ್ಪಿನ್ ದಾಳಿಯಲ್ಲಿ ಸೇರಿದ್ದ ಸಂದರ್ಭ ಅದು. ಆ ಪಂದ್ಯದಲ್ಲಿ ಭಾರತ 113 ರನ್‌ಗಳ ಸೋಲುಂಡಿತ್ತು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಅಜಾಜ್ ಪಟೇಲ್ ಅವರು ನ್ಯೂಜಿಲೆಂಡ್‌ಗೆ ಒಂದು ಇನಿಂಗ್ಸ್‌ನಲ್ಲಿ 6 ವಿಕೆಟ್ ಗೊಂಚಲು ಕಿತ್ತುಕೊಟ್ಟಿದ್ದರು. ಗ್ಲೆನ್ ಫಿಲಿಪ್ಸ್ ಕೂಡ ತಮ್ಮ ಆಫ್ ಬ್ರೇಕ್‌ಗಳಿಂದ ಕಾಡಿದ್ದರು. ಈಡನ್ ಗಾರ್ಡನ್ಸ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆಫ್ ಸ್ಪಿನ್ನರ್ ಸಿಮೋನ್ ಹಾರ್ಮರ್ ತಮ್ಮ 36ನೇ ವಯಸ್ಸಿನಲ್ಲಿ ಆತಿಥೇಯರ ಬುಡ ಅಲ್ಲಾಡಿಸಿದ್ದಾರೆ.
ಇತಿಹಾಸ ಗಮನಿಸಿದರೆ– ಭಾರತ ವಿಶ್ವದರ್ಜೆಯ ಲೆಗ್ ಸ್ಪಿನ್ನರ್, ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರಿಗೆ ತಲೆಬಾಗಿದೆ. ಶ್ರೀಲಂಕಾದ ಆಫ್ ಸ್ಪಿನ್ ಸರದಾರ ಮುತ್ತಯ್ಯ ಮುರಳೀಧರನ್ ಅವರಿಗೆ ಅಂಜಿರುವ ಉದಾಹರಣೆಗಳಿವೆ. ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್ ಆಫ್ ಸ್ಪಿನ್ ಮೋಡಿಗೆ ಮರ್ಯಾದೆ ನೀಡಿರುವ ಪಂದ್ಯಗಳೂ ಸಿಗುತ್ತವೆ. ಆದರೆ, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ಗಳು ಮೇಲೆ ಉಲ್ಲೇಖಿಸಿದ ದಿಗ್ಗಜರಷ್ಟು ಪರಿಣತರೇನೂ ಅಲ್ಲ. ಅಂಥವರ ಎದುರು ಭಾರತ ತನ್ನ ನೆಲದಲ್ಲೇ ತಡಬಡಾಯಿಸುತ್ತಿರುವುದು ಗಂಭೀರ ಸಮಸ್ಯೆ.
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಮೂರನೇ ಆಟಗಾರನಾಗಿ ವಾಷಿಂಗ್ಟನ್ ಸುಂದರ್ ಅವರಿಗೆ ಬಡ್ತಿ ಕೊಟ್ಟಿದ್ದು, 8 ವಿಕೆಟ್ ಬೀಳುವವರೆಗೆ ಮೊಹಮ್ಮದ್ ಸಿರಾಜ್ ಕೈಗೆ ಎರಡನೇ ಇನಿಂಗ್ಸ್‌ನಲ್ಲಿ ಬೌಲ್ ಮಾಡಲು ಚೆಂಡನ್ನೇ ಕೊಡದೇ ಇದ್ದುದು ಯಾವ ರೀತಿಯ ನಾಯಕತ್ವ ಎಂಬ ಪ್ರಶ್ನೆಯನ್ನೂ ದೊಡ್ಡದಾಗಿಸಿದೆ.
ವಹಿವಾಟಿನ ಸ್ಪರ್ಶದಲ್ಲಿ ಶಕ್ತಿ ಪ್ರದರ್ಶನದ ಆಟವಾಗಿ, ಜನರಂಜನೆಯ ಸರಕಾಗಿ ಕ್ರಿಕೆಟ್ ಬಳಕೆಯಾಗುತ್ತಿದೆ. ಈ ಭರಾಟೆಯಲ್ಲಿ ಆಟದ ಕಲಾತ್ಮಕ ಆಯಾಮ ಹಿನ್ನೆಲೆಗೆ ಸರಿದಿರುವುದರ ಪರಿಣಾಮವನ್ನು ಈಗ ಕಾಣುತ್ತಿದ್ದೇವೆ. ಈ ಬದಲಾವಣೆ ಕ್ರಿಕೆಟ್‌ನ ಸೌಂದರ್ಯಕ್ಕೆ ಮಾರಕವಾದುದು.
ಚುಟುಕು ಕ್ರಿಕೆಟ್ ಹಚ್ಚಿರುವ ಆರ್ಭಟದಾಟದ ಕಿಚ್ಚು ಪರಮ ಸಂಯಮ ಬೇಡುವ ಟೆಸ್ಟ್ ಕ್ರಿಕೆಟ್ ಮನಃಸ್ಥಿತಿಯನ್ನು ಕೊಂದುಹಾಕಿದೆಯೇ ಎನ್ನುವ ತಾತ್ತ್ವಿಕ ಜಿಜ್ಞಾಸೆಯೂ ಇದೆ. ದೇಸಿ ಕ್ರಿಕೆಟ್‌ನಲ್ಲೂ ಎಷ್ಟು ಹೊತ್ತು ಲಂಗರು ಹಾಕಿ ಆಡುತ್ತಾರೆ ಎನ್ನುವುದಕ್ಕಿಂತ ಎಷ್ಟು ಬೇಗ ರನ್ ಕದಿಯುತ್ತಾರೆ ಎನ್ನುವುದೇ ಮುಖ್ಯವಾಗಿ ಪರಿಗಣಿತವಾಗುತ್ತಿದೆ. ಇವೆಲ್ಲ ಈಗ ಮುನ್ನೆಲೆಗೆ ಬಂದಿದ್ದು, ಭಾರತ ಕ್ರಿಕೆಟ್ ತಂಡದ ಚಿಂತಕರ ಚಾವಡಿ ಪರಿಹಾರ ಕಂಡುಕೊಳ್ಳಲೇಬೇಕಿದೆ. ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್, ಚೇತೇಶ್ವರ ಪೂಜಾರ, ಆಟದ ಧಾಟಿಯ ಪಾಠ ಇವರಿಗೆಲ್ಲ ನಾಟಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.