ADVERTISEMENT

ಸಂಗತ | ಅಧಿಕಾರ ಕೇಂದ್ರಗಳ ಸ್ವೇಚ್ಛೆ; ಜನ ಕಂಗಾಲು

ನಡಹಳ್ಳಿ ವಂಸತ್‌
Published 27 ಜನವರಿ 2026, 0:24 IST
Last Updated 27 ಜನವರಿ 2026, 0:24 IST
   

ಮಾನವರು ಈ ಭೂಮಿಯ ಮೇಲೆ ಸುಮಾರು 18–20 ಲಕ್ಷ ವರ್ಷಗಳಿಂದ ಬದುಕುತ್ತಿದ್ದಾರೆ. ಆದರೆ, ಕೃಷಿಯನ್ನು ಅನ್ವೇಷಿಸಿ ಸ್ಥಿರವಾದ ಬದುಕನ್ನು ಕಂಡುಕೊಂಡಿದ್ದು ಸುಮಾರು 10–12 ಸಾವಿರ ವರ್ಷಗಳಿಂದೀಚೆಗೆ. ಅಲ್ಲಿಯವರೆಗೂ ಮಾನವ ಕುಲ ಹೆಚ್ಚೆಂದರೆ 100–150 ಜನರ ಸಣ್ಣ ಗುಂಪುಗಳಲ್ಲಿ, ಬೆಟ್ಟ ಕಾಡುಗಳಲ್ಲಿ ಅಲೆಮಾರಿ ಬದುಕನ್ನು ನಡೆಸುತ್ತಾ ಬಂದಿತ್ತು. ಅಂತಹ ಚಿಕ್ಕ ಗುಂಪಿಗೆ ಒಬ್ಬ ನಾಯಕನಿರುತ್ತಿದ್ದ ಮತ್ತು ಗುಂಪಿನ ಸದಸ್ಯರೆಲ್ಲರೂ ಅವನ ಅಣತಿಯಂತೆ ನಡೆದುಕೊಳ್ಳುವುದು ಅಸ್ತಿತ್ವದ ಅನಿವಾರ್ಯತೆಯಾಗಿತ್ತು. ಆದರೆ, ಸಮಾಜ ದೊಡ್ಡ ದೊಡ್ಡ ಘಟಕಗಳಾಗತೊಡಗಿದಂತೆ ಎರಡು ಮೂರು ಹಂತದ ಅಧಿಕಾರ ಕೇಂದ್ರಗಳು ಅನಿವಾರ್ಯವಾದವು. ದೂರದಲ್ಲಿರುತ್ತಿದ್ದ ರಾಜರುಗಳು ತಮ್ಮ ಮಂತ್ರಿಗಳು, ಸೇನಾ ನಾಯಕರು, ಸಾಮಂತರು, ಪಾಳೆಯಗಾರರ ಮೂಲಕ ಆಡಳಿತ ನಡೆಸುತ್ತಿದ್ದರು. ಹೀಗೆ ಅಧಿಕಾರ ಕೇಂದ್ರಗಳು ಹೆಚ್ಚುತ್ತಲೇ ಹೋದವು.

ವಸ್ತುಗಳು ಮತ್ತು ಸೇವೆಗಳನ್ನು ಸೀಮಿತವಾಗಿ ಶೇಖರಿಸಲು ಸಾಧ್ಯವಾಗುವ ಕಾಲದಲ್ಲಿ ಉಳ್ಳವರ ಮತ್ತು ಇಲ್ಲದವರ ನಡುವಿನ ಅಂತರ ಕಡಿಮೆಯಾಗಿರುತ್ತಿತ್ತು. ಆದರೆ, ಹಣದ ಆವಿಷ್ಕಾರವಾದ ಮೇಲೆ ದೊಡ್ಡ ಮಟ್ಟದಲ್ಲಿ ಅದನ್ನು ಸಂಗ್ರಹಿಸಲು ಸಾಧ್ಯವಾಯಿತಲ್ಲದೆ, ಹೊಸ ಅಧಿಕಾರ ಕೇಂದ್ರದ ಸೃಷ್ಟಿಯಾಯಿತು. ಕೈಗಾರಿಕಾ ಕ್ರಾಂತಿಯ ನಂತರ ಕಾರ್ಪೊರೇಟ್‌ ಆಡಳಿತ ವ್ಯವಸ್ಥೆಯು ಪ್ರಾರಂಭವಾಗಿ ಬಂಡವಾಳಶಾಹಿಗಳ ಉಗಮವಾಯಿತು.

ಮಾನವರ ಅಂತರಂಗದ ಸಮಾಧಾನ– ತೃಪ್ತಿಗಳ ಹುಡುಕಾಟಕ್ಕಾಗಿ ಹುಟ್ಟಿಕೊಂಡ ಧರ್ಮಗಳು ಜನರ ಮೇಲೆ ಮಾನಸಿಕ ಹಿಡಿತ ಸಾಧಿಸುತ್ತಾ ಹೊಸದೊಂದು ಅಧಿಕಾರ ಕೇಂದ್ರ ಹುಟ್ಟಿಕೊಂಡಿತು. ಪ್ರಜಾಪ್ರಭುತ್ವದ ರಾಷ್ಟ್ರಗಳು ಉದಯವಾದ ಮೇಲೆ ರಾಜಕೀಯ ಆಡಳಿತಕ್ಕೆ ಸಹಾಯಕವಾಗಿ ಅಧಿಕಾರಿ ವರ್ಗವೊಂದು ಸೃಷ್ಟಿಯಾಯಿತು. ನ್ಯಾಯಪಾಲನೆಗೆ ಅನುಕೂಲ ಆಗುವಂತೆ ಪೊಲೀಸ್‌ ವ್ಯವಸ್ಥೆ ಮತ್ತು ನ್ಯಾಯಾಲಯಗಳನ್ನು ರೂಪಿಸಲಾಯಿತು. ಹೀಗೆ ಜನಸಾಮಾನ್ಯರ ಮೇಲೆ ಅಧಿಕಾರ ಕೇಂದ್ರಗಳು ಹೆಚ್ಚುತ್ತಲೇ ಹೋದವು.

ADVERTISEMENT

ಹೀಗೆ ಹಲವಾರು ಅಧಿಕಾರ ಕೇಂದ್ರಗಳು ಸೃಷ್ಟಿ ಆಗಿದ್ದು ಜನಸಾಮಾನ್ಯರ ಹಿತ ಕಾಪಾಡುವ ಉದ್ದೇಶದಿಂದ ಎನ್ನುವುದರಲ್ಲಿ ಅನುಮಾನವಿಲ್ಲ. ಎಲ್ಲಾ ದೇಶ–ಕಾಲಗಳಲ್ಲಿಯೂ ಸಂಪೂರ್ಣ ಜನಸಮುದಾಯ ಪ್ರಬುದ್ಧವಾಗಿರಬೇಕೆಂದು ನಿರೀಕ್ಷಿಸುವುದು ಅವಾಸ್ತವಿಕ. ಹಾಗಾಗಿ, ಈ ಎಲ್ಲಾ ಅಧಿಕಾರ ಕೇಂದ್ರಗಳನ್ನು ಒಂದು ವ್ಯವಸ್ಥೆಗೆ ಒಳಪಡಿಸಲು ರಾಷ್ಟ್ರಗಳು ಸಂವಿಧಾನವನ್ನು ರೂಪಿಸಿಕೊಂಡವು. ಅಧಿಕಾರ ಕೇಂದ್ರಗಳು ಸಂವಿಧಾನದ ಮೂಲ ಆಶಯಗಳನ್ನು ಮೀರಿಹೋಗುವುದಿಲ್ಲ ಎನ್ನುವುದು ಇದರ ಆಶಯವಾಗಿತ್ತು.

ಜವಾಬ್ದಾರಿಯುತ ಆಳುವ ವರ್ಗ ಮತ್ತು ಸಮಾಜದ ಮುಂಚೂಣಿಯಲ್ಲಿರುವ ಇತರರು ಸೇರಿ ಜನಸಾಮಾನ್ಯರು ದಾರಿತಪ್ಪದಂತಹ ಸೂಕ್ತವಾದ ಸಾಮಾಜಿಕ ವಾತಾವರಣವನ್ನು ನಿರ್ಮಿಸಬೇಕು. ಈ ವ್ಯವಸ್ಥೆಗೆ ಧರ್ಮಗಳು ನೈತಿಕ ತಳಹದಿಯನ್ನು ಒದಗಿಸಬೇಕು. ಉದ್ಯಮಿಗಳು ಜನಸಮುದಾಯಕ್ಕೆ ಉದ್ಯೋಗಾವಕಾಶಗಳನ್ನು ನೀಡುವ ಮಾರ್ಗದಲ್ಲಿ ನೈತಿಕ ಮತ್ತು ಕಾನೂನಿನ ಮಿತಿಗಳನ್ನು ಮೀರದಂತೆ ನೋಡಿಕೊಳ್ಳುವುದು ಸರ್ಕಾರಗಳ ಜವಾಬ್ದಾರಿಯಾಗಬೇಕು. ಸರ್ಕಾರಗಳ ಈ ಕೆಲಸಕ್ಕೆ ಪೊಲೀಸ್‌ ಮತ್ತು ನ್ಯಾಯದಾನದ ವ್ಯವಸ್ಥೆ ಕೈಗೂಡಿಸಬೇಕು. ಹೀಗೆ ಎಲ್ಲಾ ಅಧಿಕಾರ ಕೇಂದ್ರಗಳು ಪರಸ್ಪರರನ್ನು ನಿಯಂತ್ರಿಸುವ ಸಹಜ ವ್ಯವಸ್ಥೆ ರೂಪುಗೊಳ್ಳಬೇಕು. ಹಾಗಿದ್ದಾಗ ಮಾತ್ರ ಸಂವಿಧಾನದ ಆಶಯಗಳು ಜಾರಿಯಾಗುತ್ತವೆ.

ಆದರೆ ಇವತ್ತು, ಈ ಎಲ್ಲಾ ಅಧಿಕಾರ ಕೇಂದ್ರಗಳು ಒಟ್ಟಾಗಿ ಜನಸಾಮಾನ್ಯರನ್ನು ಶೋಷಿಸುತ್ತಿವೆ. ರಾಜಕೀಯ ಕ್ಷೇತ್ರಕ್ಕೆ ಕಾರ್ಪೊರೇಟ್‌ಗಳ ಕಳ್ಳಹಣ ಮತ್ತು ಧಾರ್ಮಿಕ ನಂಬಿಕೆಗಳಿಂದ ಸಿಗುವ ಓಟುಗಳು ಬೆಂಬಲವಾಗಿ ನಿಂತುಕೊಂಡಿವೆ. ಧರ್ಮಗಳು ಕಾರ್ಪೊರೇಟ್‌ಗಳಿಂದ ಹಣ ಪಡೆದು ಅವುಗಳಂತೆಯೇ ವ್ಯಾಪಾರೀ ಕೇಂದ್ರಗಳಾಗಿವೆ. ಕಾರ್ಪೊರೇಟ್‌ಗಳ ಹಣ ಮತ್ತು ಸರ್ಕಾರಗಳ ರಾಜಕೀಯ ಅಧಿಕಾರದ ಬೆಂಬಲದಿಂದ ಧರ್ಮದ ಹೆಸರಿನ ಅನಾಗರಿಕ, ಅನೈತಿಕ ಮತ್ತು ಕಾನೂನುಬಾಹಿರ ಕೃತ್ಯಗಳು ಮುಚ್ಚಿಹೋಗುತ್ತಿವೆ. ಕಾರ್ಪೊರೇಟ್‌ಗಳ ಹಣಬಲಕ್ಕೆ ತಲೆಬಾಗಿ ಅವುಗಳ ಕಳ್ಳದಂಧೆಗಳಿಗೆ ಸರ್ಕಾರಗಳು ಕಾನೂನು ಮಾನ್ಯತೆ ಮತ್ತು ಧರ್ಮಗಳು ನೈತಿಕತೆಯ ಮುಖವಾಡ ಒದಗಿಸುತ್ತಿವೆ. ಹೆಚ್ಚಿನ ವಿದ್ಯಾವಂತರು ಒಂದಲ್ಲಾ ಒಂದು ರೀತಿಯಲ್ಲಿ ಕಾರ್ಪೊರೇಟ್‌ಗಳ ಋಣ ತೀರಿಸಬೇಕಾಗಿದೆ. ಇಂತಹ ಗದ್ದಲದ ವಾತಾವರಣದಲ್ಲಿ ಅಲ್ಲಲ್ಲಿ ಕೇಳಿಬರುವ ವಿವೇಕದ ಧ್ವನಿಗಳು ಹೆಚ್ಚು ಪ್ರಭಾವಕಾರಿಯಾಗಿ ಉಳಿದಿಲ್ಲ.

ಎಲ್ಲಾ ಬಗೆಯ ಅಧಿಕಾರ ಕೇಂದ್ರಗಳಿಂದ ಕೆಲಮಟ್ಟಿನ ಅಂತರ ಉಳಿಸಿಕೊಂಡಿದ್ದ ನ್ಯಾಯಾಂಗ ವ್ಯವಸ್ಥೆ ಕೂಡ ಈಗ ಜನರ ದೃಷ್ಟಿಯಲ್ಲಿ ಎಂದಿನಂತೆ ಉಳಿದಿಲ್ಲ. ಆಪಾದನೆಗಳ ಸತ್ಯಾಸತ್ಯತೆ ಏನೇ ಇದ್ದರೂ, ಇದು ನ್ಯಾಯದಾನದ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತಿದೆ. ಜನಸಾಮಾನ್ಯರ ಕೊನೆಯ ಆಶಾಕಿರಣ ಆಗಬೇಕಾಗಿದ್ದ ನ್ಯಾಯದಾನದ ವ್ಯವಸ್ಥೆ ಅಪಾರದರ್ಶಕವಾಗಿ ಗೋಚರಿಸತೊಡಗಿದಾಗ ಸಿನಿಕತನ ಆವರಿಸಿಕೊಳ್ಳುತ್ತದೆ. ಬದುಕು ದುಸ್ತರವಾದಂತೆ ಇಂತಹ ಸಿನಿಕತನ ಹತಾಶೆ ಮತ್ತು ಕೋಪವಾಗಿ ಬದಲಾಗುತ್ತದೆ. ಅಧಿಕಾರ ಕೇಂದ್ರಗಳು ಜನಸಾಮಾನ್ಯರಿಂದ ದೂರ ಹೋದಷ್ಟೂ ಜನರ ಸಿಟ್ಟು ಹೆಚ್ಚುತ್ತಲೇ ಹೋಗುತ್ತದೆ.

ಅಧಿಕಾರದಲ್ಲಿ ಇರುವವರು ಜನಮಾನಸದಲ್ಲಿ ಹೆಪ್ಪುಗಟ್ಟುತ್ತಿರುವ ಹತಾಶೆ ಮತ್ತು ಕೋಪಗಳನ್ನು ಆದಷ್ಟು ಬೇಗ ಗುರುತಿಸಬೇಕು. ಭಿನ್ನ ಭಿನ್ನ ಅಧಿಕಾರ ಕೇಂದ್ರಗಳು ಸ್ವಯಂನಿಯಂತ್ರಣದ ಜೊತೆಗೆ, ಪರಸ್ಪರರನ್ನು ನಿಯಂತ್ರಿಸುವ ಸ್ವಾಯತ್ತ ವ್ಯವಸ್ಥೆ ಜಾರಿಯಾಗಬೇಕು. ನ್ಯಾಯದಾನದ ವ್ಯವಸ್ಥೆಯಲ್ಲಿ ಜನ ಭರವಸೆ ಉಳಿಸಿಕೊಳ್ಳುವಂತಾಗಬೇಕು. ಇದು ಸಾಧ್ಯವಾಗದೆ ಹೋದಲ್ಲಿ ಅಪಾಯ ತಪ್ಪಿದ್ದಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.