ತಬಲಾ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್ ಅವರು ಜಾಹೀರಾತೊಂದರಲ್ಲಿ ‘ವಾಹ್! ತಾಜ್ ಬೋಲಿಯೇ!’ ಎಂದು ಹೇಳುತ್ತಿದ್ದುದು ನಾವೆಲ್ಲ ಸೇವಿಸುವ ಚಹಾದ ಘಮ, ರುಚಿ ಮತ್ತು ಹಳೆಯ ನೆನಪುಗಳನ್ನು ತಾಜಾ ಆಗಿಸುತ್ತಿತ್ತು. ದೇಶದ ಉದ್ದಗಲಕ್ಕೂ ಎಲ್ಲ ಸ್ತರಗಳ ಜನರ ಪ್ರೀತಿಪಾತ್ರ ಹಾಗೂ ಸರಳ ಪೇಯವೆನಿಸಿರುವ ಚಹಾವನ್ನು ನೆನಪಿಸಿಕೊಳ್ಳುವ ಅಂತರರಾಷ್ಟ್ರೀಯ ಚಹಾ ದಿನ (ಮೇ 21) ಮತ್ತೆ ಬಂದಿದೆ. ವಿಶ್ವಸಂಸ್ಥೆಯಿಂದ ಅಧಿಕೃತವಾಗಿ ಗುರುತಿಸಿಕೊಂಡಿರುವ ಈ ದಿನ ಚಹಾ ಬೆಳೆ, ಅದರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರಾಮುಖ್ಯವನ್ನು ತಿಳಿಸುತ್ತದೆ.
ನಮ್ಮಲ್ಲಿ ನೀಲಗಿರಿ ಟೀ, ಡಾರ್ಜಿಲಿಂಗ್ ಟೀ, ಹರ್ಬಲ್ ಟೀ, ಲೆಮನ್ ಗ್ರಾಸ್ ಟೀ, ಅಸ್ಸಾಂ ಟೀ, ಬ್ಲಾಕ್ ಟೀ, ವೈಟ್ ಟೀ, ಜಿಂಜರ್ ಟೀ, ಮಿಂಟ್ ಟೀ, ಲೆಮನ್ ಟೀ, ಗ್ರೀನ್ ಟೀ... ಹೀಗೆ ಹಲವು ರುಚಿ, ಹೆಸರುಗಳೊಂದಿಗೆ ಹಲವು ಬಗೆಯ ಚಹಾ ಸಿಗುತ್ತದೆ. ಕಾಶ್ಮೀರಿ ಖವಾ, ಹಿಮಾಚಲದ ಕಾಂಗ್ರ ಟೀ, ಹೈದರಾಬಾದಿನ ಇರಾನಿಚಾಯ್, ಪುಣೆಯ ತಂದೂರಿ ಚಾಯ್, ಅರಬ್ ಮೂಲದ ಸುಲೇಮಾನಿ ಚಾಯ್, ಚೀನಾದ ಊಲಾಂಗ್ ಟೀ ಸೇವಿಸುವವರಿಗೆ ವಿಚಿತ್ರ ಕಿಕ್ ಕೊಡುತ್ತವೆ. ಇಂಗ್ಲೆಂಡಿನ ರಾಜ ಚಾರ್ಲ್ಸ್ ಗ್ರೇ (1830) ನೆನಪಿನ ‘ಅರ್ಲ್ ಗ್ರೇ ಟೀ’ ಪ್ರಪಂಚದ ಅತ್ಯಂತ ಜನಪ್ರಿಯ ಚಹಾಗಳಲ್ಲೊಂದು.
ಲಡಾಖ್, ಟಿಬೆಟ್ ಮತ್ತು ಭೂತಾನ್‌ನ ಜನರಿಗೆ ಯಾಕ್ ಪ್ರಾಣಿಯ ಬೆಣ್ಣೆ ಬೆರೆಸಿದ ಬಟರ್ ಚಹಾ ದಿನಕ್ಕೆ ಮೂರು ಬಾರಿ ಬೇಕೇ ಬೇಕು. ಮೈಸೂರು ಸೀಮೆಯವರಿಗೆ ಮಧ್ಯಾಹ್ನದ ಊಟದ ನಂತರ ಕಾಫಿ ಕುಡಿಯುವ ಹವ್ಯಾಸವಿದ್ದರೆ, ಉಳಿದ ಭಾಗದವರು ಚಹಾ ಕುಡಿದು ಸಂತೃಪ್ತರಾಗುತ್ತಾರೆ. ಉತ್ತರ ಕರ್ನಾಟಕದ ಎಲ್ಲ ಕಡೆ ಚಹಾದ ಘಮ ಮೂಗಿಗೆ ಬಡಿಯುತ್ತದೆ. ಮುಂಬೈನಲ್ಲಿ ದಿನದ 24 ಗಂಟೆಗಳಲ್ಲೂ ಹಬೆಯಾಡುವ ಚಹಾ ಸಿಗುತ್ತದೆ. ಹೈದರಾಬಾದಿಗೆ ಭೇಟಿ ನೀಡುವವರೆಲ್ಲ ಅಲ್ಲಿ ಸಿಗುವ ಪರಿಮಳಯುಕ್ತ ಇರಾನಿ ಚಹಾದೊಂದಿಗೆ ಉಸ್ಮಾನಿಯಾ ಬಿಸ್ಕತ್‌ಗಳನ್ನು ಸವಿಯದೆ ಬರುವುದಿಲ್ಲ. ನಾಲ್ಕು ಜನ ಗೆಳೆಯರು ಒಟ್ಟಿಗೆ ಸೇರಿ ಹರಟುವಾಗ ಮಾತಿಗೆ ರಂಗು ತರುವುದು ಬಿಸಿ ಬಿಸಿ ಚಹಾ. ಅದರಲ್ಲೂ ಮಸಾಲಾ ಚಾಯ್ ಯುವಕರ ಪಾಲಿಗೆ ಬಹಳ ಇಷ್ಟದ್ದು.
ಭಾರತ, ಶ್ರೀಲಂಕಾ, ನೇಪಾಳ ಮತ್ತು ಕೆನ್ಯಾ ಹೆಚ್ಚು ಚಹಾ ಬೆಳೆಯುವ ದೇಶಗಳು. ಜಪಾನ್ ಮತ್ತು ಚೀನಾದಲ್ಲಿ ಚಹಾ ಸೇವನೆಯು ಸಂಸ್ಕೃತಿಯ ಭಾಗ. ಜಪಾನ್ ಟೀ ಪಾರ್ಟಿಗಳು ವಿಶ್ವವಿಖ್ಯಾತ. ಚಹಾ ಸೇವನೆ ಇಲ್ಲದೆ ಬ್ರಿಟನ್ನಿನ ಜನರ ಮಧ್ಯಾಹ್ನದ ಹೊತ್ತು ಸರಿಯುವುದೇ ಇಲ್ಲ. ಜಪಾನ್ ಮತ್ತು ಚೀನಾದ ಜನರ ಸಂಸ್ಕೃತಿಯ ಭಾಗವಾಗಿರುವ ಚಹಾ, ಭಾರತದಲ್ಲಿ ಜನರ ನಡುವಿನ ಸಂಪರ್ಕ ಕೊಂಡಿ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಉದ್ಯೋಗ ನೀಡಿರುವ ಚಹಾ ಉದ್ಯಮವು ಬಡದೇಶಗಳ ರಫ್ತು ವರಮಾನದ ಮೂಲ. ಆದರೆ, ಬದಲಾಗುತ್ತಿರುವ ವಾಯುಗುಣ ಚಹಾ ಬೆಳೆಯ ಮೇಲೆಯೂ ಅಡ್ಡ ಪರಿಣಾಮಗಳನ್ನು ಬೀರುತ್ತಿದೆ.
ನಮ್ಮ ಈಶಾನ್ಯ ರಾಜ್ಯಗಳ ಪ್ರಮುಖ ವಾಣಿಜ್ಯ ಬೆಳೆ ಚಹಾ. ಅಸ್ಸಾಂ ರಾಜ್ಯವನ್ನು ಭಾರತದ ಚಹಾ ರಾಜಧಾನಿ ಎಂದು ಕರೆಯುತ್ತಾರೆ. ಇಲ್ಲಿನ ಚಹಾ ಬೆಳೆಯು ದೇಶಕ್ಕೆ ಆರ್ಥಿಕ ವರಮಾನ ತಂದುಕೊಡುವುದಲ್ಲದೆ ವಿಶಿಷ್ಟ ಬೆಳೆ ಎಂಬ ಕಾರಣಕ್ಕೆ ಜಾಗತಿಕ ಭೂಪಟದಲ್ಲಿ ಭಾರತಕ್ಕೆ ವಿಶೇಷವಾದ ಸ್ಥಾನ ಕೂಡ ಕಲ್ಪಿಸಿದೆ. ಇಲ್ಲಿ ಬೆಳೆವ ಚಹಾ ಸೊಪ್ಪು ವಿಶ್ವದ ಮೂಲೆ ಮೂಲೆಗೂ ತಲುಪುತ್ತದೆ.
ಪುರಾತನ ಈಜಿಪ್ಟ್, ಗ್ರೀಸ್ ಮತ್ತು ರೋಮ್‌ನಲ್ಲಿ ಬಳಕೆಯಲ್ಲಿದ್ದ ಚಮ್ಮೋ ಮೈಲ್ ಚಹಾ ಹಲವು ಔಷಧಿಗಳ ಕಣಜ ಎಂದೇ ಖ್ಯಾತ. ಋತುಚಕ್ರದ ನೋವು, ಸಂಧಿವಾತ, ಉರಿಊತ ಶಮನ ಮಾಡುವಲ್ಲಿ ಈ ಚಹಾ ನೆರವಾಗುತ್ತದೆ ಎನ್ನಲಾಗಿದೆ. ನಿದ್ರಾಹೀನತೆಯಿಂದ ಬಳಲುವವರು, ಮಧುಮೇಹಿಗಳು ಇದರ ಸೇವನೆ ರೂಢಿಸಿಕೊಂಡರೆ ಆರೋಗ್ಯ ಸುಧಾರಿಸುತ್ತದೆ ಎಂಬ ಮಾತು ಇದೆ. ಆದರೆ, ರಕ್ತ ತೆಳುವಾಗುವ ಮಾತ್ರೆ ತೆಗೆದುಕೊಳ್ಳುವವರು ಇದರ ಸೇವನೆಗೆ ಮುನ್ನ ವೈದ್ಯರ ಸಲಹೆ ಪಡೆಯಬೇಕು. ಗರ್ಭಿಣಿಯರಲ್ಲಿ ಗರ್ಭಪಾತವಾಗುವ ಮತ್ತು ಅಕಾಲದಲ್ಲಿ ಹೆರಿಗೆಯಾಗುವ ಅಪಾಯ ಉಂಟು ಮಾಡುತ್ತದೆ ಎಂಬುದು ವೈದ್ಯರ ಅಂಬೋಣ. ಆದರೆ, ಸಾಮಾನ್ಯವಾದ ಶೀತಕ್ಕೆ ಇದು ರಾಮಬಾಣ ಇದ್ದಂತೆ ಎಂಬ ಮಾತು ಕೂಡ ಇದೆ.
ಚೀನಾದ ‘ಔಷಧ ಚಹಾ’ ಎಂದೇ ಖ್ಯಾತವಾಗಿರುವ ಯೆಲ್ಲೊ ಟೀ (ಹಳದಿ ಚಹಾ) ಜಗತ್ತಿನಲ್ಲೇ ಅತ್ಯಂತ ವಿರಳ ಮಾದರಿಯದ್ದಾಗಿದೆ. ಚಹಾದ ಎಲೆಗಳು ಸಂಪೂರ್ಣವಾಗಿ ಒಣಗುವುದಕ್ಕಿಂತ ಮುಂಚೆ ಅಲ್ಪ ಪ್ರಮಾಣದಲ್ಲಿ ಹುದುಗು ಬರುವಂತೆ ಮಾಡಿ ಅದರಲ್ಲಿನ ಕಿಣ್ವಗಳನ್ನು ಕೊಂದು ಅದರ ‘ಹಸಿರುತನ’ವನ್ನು ತೆಗೆಯಲಾಗುತ್ತದೆ. ಚೀನಾದ ಔಷಧ ಪದ್ಧತಿಯಲ್ಲಿ ಪ್ರಮುಖ ಸ್ಥಾನ ಗಳಿಸಿರುವ ಈ ಚಹಾಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇದೆ.
ಅಮೆರಿಕದ ಕ್ರಾಂತಿಗೂ ಚಹಾಕ್ಕೂ ನೇರ ನಂಟಿದೆ. 1773ರಲ್ಲಿ ಅಮೆರಿಕವನ್ನು ರಾಜಕೀಯ ಹಿಡಿತದಲ್ಲಿ ಇಟ್ಟುಕೊಂಡಿದ್ದ ಈಸ್ಟ್ ಇಂಡಿಯಾ ಕಂಪನಿ ಚಹಾದ ಮೇಲೆ ತೆರಿಗೆ ಹಾಕಿದಾಗ ಅಮೆರಿಕನ್ನರು ರೊಚ್ಚಿಗೆದ್ದು ಬಾಸ್ಟನ್ ಬಂದರಿನಲ್ಲಿ ನಿಂತಿದ್ದ ಬ್ರಿಟಿಷ್ ಹಡಗುಗಳನ್ನೇರಿ ಅದರಲ್ಲಿ 342 ಡಬ್ಬಿಗಳಲ್ಲಿ ತುಂಬಿ ಇಟ್ಟಿದ್ದ ಚಹಾ ಸೊಪ್ಪನ್ನು ಸಮುದ್ರಕ್ಕೆ ಸುರಿದು ಪ್ರತಿಭಟನೆ ನಡೆಸಿದರು. ಅಮೆರಿಕ ಕ್ರಾಂತಿಯ ಮೊದಲ ಹೋರಾಟ ಇದಾಗಿತ್ತು. ಇದನ್ನು ‘ಬಾಸ್ಟನ್ ಟೀ ಪಾರ್ಟಿ’ ಎಂದು ಕರೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.