ADVERTISEMENT

ಸಂಗತ: ಪ್ರತ್ಯೇಕ ವಿ.ವಿ.ಯಿಂದ ಪ್ರತ್ಯೇಕತೆ

ಅಂಗವಿಕಲ ಮಕ್ಕಳಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವುದರಿಂದ ಸಮಾಜದಲ್ಲಿ ಸಾಮಾನ್ಯ ಮತ್ತು ಅಂಗವಿಕಲ ಮಕ್ಕಳ ನಡುವಿನ ಅಂತರ ಹೆಚ್ಚಾಗುತ್ತದೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 19:30 IST
Last Updated 2 ಮಾರ್ಚ್ 2021, 19:30 IST
Sangatha 03-03-2021
Sangatha 03-03-2021   

ರಾಷ್ಟ್ರೀಯ ಶಿಕ್ಷಣ ನೀತಿ- 2020 ಪ್ರಕಾರ, ಎಲ್ಲ ಅಂಗವಿಕಲ ಮಕ್ಕಳಿಗೂ ತಂತ್ರಜ್ಞಾನ ಆಧಾರಿತ ಪರಿಕರಗಳು, ಭಾಷೆಗೆ ಸೂಕ್ತವಾದ ಬೋಧನಾ ಕಲಿಕಾ ಸಾಮಗ್ರಿಗಳೊಂದಿಗೆ ಅಂತರ್ಗತ ಶಿಕ್ಷಣದ (ಇನ್‌ಕ್ಲೂಸಿವ್‌ ಎಜುಕೇಷನ್‌) ಮೂಲಕ ಸಮಗ್ರ ಶಿಕ್ಷಣ ದೊರೆಯಬೇಕು. ಇಂತಹ ಮಕ್ಕಳಿಗೆ ಹೇಗೆ ಕಲಿಸಬೇಕು ಎಂಬ ಜ್ಞಾನವು ಎಲ್ಲಾ ಶಿಕ್ಷಕರ ಶಿಕ್ಷಣ ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಬೇಕು.

ಸಾಮಾನ್ಯ ಮಕ್ಕಳೊಂದಿಗೆ ಈ ವಿಶೇಷ ಮಕ್ಕಳು ಒಟ್ಟಿಗೆ ಶಿಕ್ಷಣ ಪಡೆಯುವುದರಿಂದ ಅವರು ಬೌದ್ಧಿಕ ವಿಕಾಸ, ಭಾಷಾ ವಿಕಾಸ, ಸಾಮಾಜಿಕ ವಿಕಾಸ ಹೊಂದಲು, ವ್ಯಾವಹಾರಿಕ ಜ್ಞಾನ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ನ್ಯೂನತೆಗಳ ಬಗ್ಗೆ ಜಾಗೃತಿ ಉಂಟಾಗಿ, ಅಂಗವಿಕಲ ಮಕ್ಕಳ ಜನನ ಪ್ರಮಾಣ ಕಡಿಮೆಯಾಗಲು ಸಹಾಯಕವಾಗುತ್ತದೆ.

ಆದರೆ ಕೆಲವರು ಇದ್ಯಾವುದರ ಅರಿವೇ ಇಲ್ಲದೆ ಸ್ವಹಿತಾಸಕ್ತಿ ಸಾಧನೆಗಾಗಿ, ಅಂಗವಿಕಲರಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ವಿಪರ್ಯಾಸ. ಇದರಿಂದ ಆಗಬಹುದಾದ ಸಾಧಕ– ಬಾಧಕಗಳ ಅಧ್ಯಯನ ನಡೆಸದೆ, ಇಂತಹದ್ದೊಂದು ವಿಶ್ವವಿದ್ಯಾ ಲಯದ ಅಗತ್ಯದ ಬಗ್ಗೆಅಂಗವಿಕಲರೊಂದಿಗಾಗಲೀಅಂಗವಿಕಲರಸಂಘಸಂಸ್ಥೆಗಳೊಂದಿಗಾಗಲೀಚರ್ಚಿಸದೆಏಕಪಕ್ಷೀಯವಾಗಿ ಮುಂದಡಿ ಇಡುವುದರ ಔಚಿತ್ಯವಾದರೂ ಏನು ಎಂಬ ಪ್ರಶ್ನೆ ಮೂಡುತ್ತದೆ. ಅಂಗವಿಕಲ ಮಕ್ಕಳಿಗೆ ಪ್ರತ್ಯೇಕ ಶಿಕ್ಷಣದ ವ್ಯವಸ್ಥೆಯಿಂದ, ಸಮಾಜದಲ್ಲಿ ಸಾಮಾನ್ಯ ಮತ್ತು ಅಂಗವಿಕಲ ಮಕ್ಕಳ ನಡುವಿನ ಅಂತರ ಹೆಚ್ಚಾಗುತ್ತದೆ.

ADVERTISEMENT

ಇನ್ನು ವಿಶ್ವವಿದ್ಯಾಲಯದ ಅಗತ್ಯ ಬರುವುದು ಪಿಯು ವಿದ್ಯಾಭ್ಯಾಸದ ನಂತರ. ಅಂಗವಿಕಲರಿಗೆ
ಶೇ 5ರಷ್ಟು ಮೀಸಲಾತಿಯಂತೆ ಈಗಿರುವ ವಿಶ್ವವಿದ್ಯಾಲಯಗಳಲ್ಲಿಯೇ ಉನ್ನತ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದು, ಈ ಸೀಟುಗಳು ಭರ್ತಿಯಾಗದೇ ಉಳಿಯುತ್ತಿವೆ. ಇಂತಹ ಸ್ಥಿತಿ ಇರುವಾಗ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವುದು ಒಂದು ರೀತಿಯಲ್ಲಿ ಮೀಸಲಾತಿ ವಂಚಿಸಿ ಅಂಗವಿಕಲರನ್ನು ಪ್ರತಿಷ್ಠಿತ ಕಾಲೇಜುಗಳಿಂದ ದೂರವಿಡುವ ಹುನ್ನಾರ. ಅದರ ಬದಲು ಅಂಗವಿಕಲ ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ನಂತರ ವಿದ್ಯಾಭ್ಯಾಸ ಮುಂದುವರಿಸಲು ಅನುವಾಗುವಂತೆ ಅವರಿಗೆ ಆರ್ಥಿಕ ನೆರವು ಒದಗಿಸಿ, ಉನ್ನತ ಶಿಕ್ಷಣಕ್ಕೆ ಸಹಕಾರಿಯಾಗುವಂತಹ ಯೋಜನೆಗಳನ್ನು ರೂಪಿಸಬೇಕು.

ಒಂದು ವೇಳೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಿದಲ್ಲಿ ಏನಾಗಬಹುದೆಂದು ಗಮನಿಸೋಣ. ರಾಜಧಾನಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತದೆ, ಅದಕ್ಕೊಬ್ಬ ಕುಲಪತಿ, ರಿಜಿಸ್ಟ್ರಾರ್, ಗಜಗಾತ್ರದ ಸಿಬ್ಬಂದಿ ವರ್ಗ, ಹತ್ತಾರು ಎಕರೆ ಸ್ಥಳ, ಸುಸಜ್ಜಿತ ಕಟ್ಟಡ, ಕೋಟ್ಯಂತರ ರೂಪಾಯಿ ಯೋಜನೆ... ಇವಿಷ್ಟು ಬಲಿಷ್ಠರ, ಪ್ರಭಾವಿಗಳ ಹಾಗೂ ಅಂಗವಿಕಲ ರಲ್ಲದ ಸಾಮಾನ್ಯರ ಪಾಲಾಗುವುದಂತೂ ನಿಶ್ಚಿತ. ಅಂಗವಿಕಲರ ಕಲ್ಯಾಣ ಇಲಾಖೆಯಲ್ಲಿಯೇ ಅಂಗವಿಕಲ ನೌಕರರನ್ನು ಕಾಣದಂತಹ ಸ್ಥಿತಿ ಇರುವಾಗ ಇನ್ನು ವಿಶ್ವವಿದ್ಯಾಲಯದಲ್ಲಿ ಅಂಗವಿಕಲರು ನೌಕರಿ ಗಿಟ್ಟಿಸಿಕೊಳ್ಳುವುದು ಗಗನಕುಸುಮವೇ ಸರಿ.

ರಾಜ್ಯದ ಯಾವುದೋ ಜಿಲ್ಲೆಯ ಅಂಗವಿಕಲ ರೊಬ್ಬರು ರಾಜಧಾನಿಯಲ್ಲಿರುವ ವಿಶ್ವವಿದ್ಯಾ
ಲಯಕ್ಕೆ ಕಲಿಯಲು ಬರುವುದು ಕಷ್ಟಸಾಧ್ಯ. ಆದ್ದರಿಂದ ತಾಲ್ಲೂಕಿಗೊಂದು ವಿಶೇಷ ಕಾಲೇಜು ಸ್ಥಾಪನೆ
ಅನಿವಾರ್ಯವಾಗುತ್ತದೆ. ಕಾನೂನು ವಿಶ್ವವಿದ್ಯಾಲಯ, ತಾಂತ್ರಿಕ ವಿಶ್ವವಿದ್ಯಾಲಯ, ವೈದ್ಯಕೀಯ ವಿಶ್ವವಿದ್ಯಾಲಯ ಹೀಗೆ ವಿವಿಧ ವಿಷಯವಾರು ಕ್ಷೇತ್ರಗಳಿಗೂ ಅಂಗವಿಕಲ ವಿಶ್ವವಿದ್ಯಾಲಯ ಸ್ಥಾಪಿಸಬೇಕಾಗುತ್ತದೆ. ಇದು ಅಂಗವಿಕಲರಲ್ಲದ ಸಾಮಾನ್ಯರಿಗೆ ಉದ್ಯೋಗ ಸೃಜಿಸಬಹುದು ಅಷ್ಟೇ. ಪ್ರವೇಶಕ್ಕೆ ಅಷ್ಟೊಂದು ಅಂಗವಿಕಲ ವಿದ್ಯಾರ್ಥಿಗಳನ್ನು ತರುವುದಾದರೂ ಎಲ್ಲಿಂದ ಎಂದು ಯೋಚಿಸಬೇಕಾಗಿದೆ. ‌

ಉನ್ನತ ವ್ಯಾಸಂಗಕ್ಕೆ ಅರ್ಹರಿರುವ ಅಂಗವಿಕಲ ವಿದ್ಯಾರ್ಥಿಗಳ ಅಂಕಿಅಂಶದ ಸಮೀಕ್ಷೆ ಈವರೆಗೂ ನಡೆದಿಲ್ಲ. ಅಂದಾಜಿನ ಪ್ರಕಾರ, ಒಂದು ಜಿಲ್ಲೆಯಲ್ಲಿ ಸುಮಾರು 8- 10 ಅಂಗವಿಕಲ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದರೆ ಹೆಚ್ಚು. ಅದರಂತೆಯೇ ಲೆಕ್ಕ ಮಾಡಿದರೂ ರಾಜ್ಯದಲ್ಲಿ ಒಟ್ಟಾರೆ ಸುಮಾರು 250ರಿಂದ 300 ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಲಭ್ಯರಾಗಬಹುದು. ಅವರಲ್ಲಿ ಒಬ್ಬೊಬ್ಬರ ಅಭಿರುಚಿ, ಆಸಕ್ತಿಯ ವಿಷಯ ಬೇರೆಬೇರೆ ಇರುತ್ತದೆ. ವೈದ್ಯ ವಿಜ್ಞಾನದ ಆವಿಷ್ಕಾರದ ಫಲವಾಗಿ ಅಂಗವಿಕಲರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ. ಉದಾಹರಣೆಗೆ, ಕುರುಡುತನ, ಪೋಲಿಯೊ ಪೀಡಿತರ ಸಂಖ್ಯೆ ಇಲ್ಲವಾಗುತ್ತಿರುವುದು ಸಂತಸದ ವಿಷಯ. ರಕ್ತಸಂಬಂಧಿ ಕಾಯಿಲೆ, ಅಪಘಾತದಿಂದಾಗುವ ಅಂಗವೈಕಲ್ಯ ಮತ್ತು ಬುದ್ಧಿಮಾಂದ್ಯತೆ ಮಾತ್ರ ಉಳಿಯುತ್ತಿವೆ. ಕೆಲವು ವಿಶೇಷ ಶಾಲೆಗಳು ತಮ್ಮಲ್ಲಿರುವ ಮಕ್ಕಳ ಸಂಖ್ಯೆಗಿಂತ ಅತಿ ಹೆಚ್ಚು ಮಕ್ಕಳ ಲೆಕ್ಕ ತೋರಿಸಿ ಅನುದಾನಪಡೆಯುತ್ತಿವೆ. ಅಂಗವಿಕಲ ಮಕ್ಕಳ ಹೆಸರಿನಲ್ಲಿ ತಿಂದು ತೇಗುವ ಕೆಲವು ಭ್ರಷ್ಟ ಸ್ವಯಂಸೇವಾ ಸಂಸ್ಥೆಗಳಂತೆ ವಿಶ್ವ ವಿದ್ಯಾಲಯದಲ್ಲಿ ಮಾಡಲಾಗುವುದಿಲ್ಲ. ಆದ್ದರಿಂದ ಇದೊಂದು ರೀತಿ ಬಿಳಿ ಆನೆಯನ್ನು ಸಾಕಿದಂತೆ ಆಗುತ್ತದೆ.

ಅಂಗವಿಕಲರಿಗೆ ಪ್ರಯೋಜನವಾಗದ, ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುವ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ ಬದಲು, ರಾಜ್ಯದಲ್ಲಿ ಅಂಗವಿಕಲರ ಅಧ್ಯಯನಕ್ಕೆ ಸಂಬಂಧಿಸಿದಂತೆ ಸಂಶೋಧನಾ ಕೇಂದ್ರ ತೆರೆದು, ಶಿಕ್ಷಕರಿಗೆ, ಅಂಗವಿಕಲರ ಪ್ರಗತಿಗಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಕೌಶಲ ತರಬೇತಿ ವ್ಯವಸ್ಥೆ ಮಾಡಲಿ. ಈ ಮೂಲಕ, ಅಂಗವಿಕಲರ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಲಿ.

ಲೇಖಕ: ಕಾರ್ಯಾಧ್ಯಕ್ಷ,ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.