
ಹೊಸಗನ್ನಡ ಕಾವ್ಯ ಪರಂಪರೆಗೆ ‘ಕವಿರಾಜ ಮಾರ್ಗ’ ರೂಪಿಸಿದವರು ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ (ಬಿಎಂಶ್ರೀ). ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅವರ ನೆನಪನ್ನು ಚಿರಸ್ಥಾಯಿಯಾಗಿಸಿದ ಕೃತಿಗಳಲ್ಲೊಂದಾದ ‘ಇಂಗ್ಲಿಷ್ ಗೀತೆಗಳು’ ಕೃತಿ ನೂರರ ಹೊಸ್ತಿಲಲ್ಲಿದೆ.
ಆ ಸಂಕಲನದ ಮೊದಲ ಕವನ ‘ಕಾಣಿಕೆ’, ಶ್ರೀ ಅವರ ಸ್ವತಂತ್ರ ರಚನೆ. ‘ಮೊದಲು ತಾಯ ಹಾಲ ಕುಡಿದು/ ಲಲ್ಲೆಯಿಂದ ತೊದಲಿ ನುಡಿದು/ ಕೆಳೆಯರೊಡನೆ ಬೆಳೆದು ಬಂದ/ ಮಾತದಾವುದು/ ನಲ್ಲೆಯೊಲವ ತೆರೆದು ತಂದ/ ಮಾತದಾವುದು...’ ತಾಯಿಯ ಎದೆಹಾಲಿನೊಂದಿಗೆ ಎದೆನುಡಿಯೂ ಮಗುವಿಗೆ ಮೈಗೂಡುವುದನ್ನು ಚಿತ್ರಿಸಿರುವ ‘ಕಾಣಿಕೆ’ ನುಡಿ–ನಂಟಿನ ಬೆರಗನ್ನು ಕಾಣಿಸುವ ಕವಿತೆ.
‘ಇಂಗ್ಲಿಷ್ ಗೀತೆಗಳು’ ಕನ್ನಡಕ್ಕೆ ಪರಿಚಯಗೊಂಡ ನಂತರ ಕನ್ನಡ ಕಾವ್ಯ ಮತ್ತು ನುಡಿ ಹೊಸ ಆಯಾಮಕ್ಕೆ ತೆರೆದುಕೊಂಡವು. ಹೊಸಗನ್ನಡದ ಅರುಣೋದಯಕ್ಕೆ ಪ್ರೇರಕ ಶಕ್ತಿಗಳಲ್ಲಿ ಈ ಸಂಕಲನವೂ ಒಂದಾಯಿತು. ಕನ್ನಡಿಗರಿಗೆ ದಕ್ಕಿದ ಅಂದಿನ ಶಿಕ್ಷಣ ಮತ್ತು ಸಾಮಾಜಿಕ ಸಂದರ್ಭ ವಿಪುಲ ಸಾಹಿತ್ಯಸೃಷ್ಟಿಗೂ ಕಾರಣವಾಯಿತು.
ಸುಮಾರು ಹತ್ತು ವರ್ಷಗಳ ಕಾಲ ಬಿಡಿ ಬಿಡಿಯಾಗಿ ಅನುವಾದಿಸಿದ ಕವಿತೆಗಳನ್ನು 1926ರಲ್ಲಿ ‘ಇಂಗ್ಲಿಷ್ ಗೀತೆಗಳು’ ಹೆಸರಿನಲ್ಲಿ ಬಿಎಂಶ್ರೀ ಪ್ರಕಟಿಸಿದರು. ಆ ಸಂಕಲನದಲ್ಲಿ ಒಟ್ಟು 60 ಅನುವಾದಿತ ಹಾಗೂ ಮೂರು ಸ್ವಂತ ರಚನೆಗಳು ಸೇರಿವೆ.
‘ಇಂಗ್ಲಿಷ್ ಗೀತೆಗಳು’ ಸಂಕಲನದ ಬಹು ಪ್ರಸಿದ್ಧ ಕವಿತೆ: ‘ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ/ ಕೈಹಿಡಿದು ನಡೆಸೆನ್ನನು’. ಜಾನ್ ಹೆನ್ರಿ ನ್ಯೂಮನ್ ಅವರ ‘ಲೀಡ್ ಕೈಂಡ್ಲಿ ಲೈಟ್’ ಕವಿತೆ, ಬಿಎಂಶ್ರೀ ಅವರ ರೂಪಾಂತರದಲ್ಲಿ,
ಇದು ಕನ್ನಡ ಮನಸ್ಸಿನ ಅಭಿವ್ಯಕ್ತಿಯಲ್ಲದೆ ಬೇರೆಯಲ್ಲ ಎನ್ನುವಷ್ಟು ಸೊಗಸಾಗಿ ಮೂಡಿಬಂದಿದೆ. ಪ್ರಾರ್ಥನೆ, ವೇದನೆ, ಪಕ್ವ ಮನಸ್ಸಿನ ಅಧ್ಯಾತ್ಮ ಚಿಂತನೆ ಕವಿತೆಯಲ್ಲಿದೆ. ತೆನೆ ತುಂಬಿ ಬೆಳೆದು ನಿಂತ ಭತ್ತದ ಪೈರು ತಾನು ನಿಂತ ನೆಲಕ್ಕೋ ಬೇರಿಗೋ ತಲೆಬಾಗಿ ನಮಿಸುವಂತೆ ಈ ರಚನೆ ಸಹೃದಯರ ಮನಸ್ಸಿಗೆ ನಾಟುತ್ತದೆ.
‘ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ’ ಎನ್ನುವ ಪ್ರಾರ್ಥನೆಯೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಇಂದಿನ ಸ್ಥಿತಿಯನ್ನು ನೆನಪಿಸಿಕೊಳ್ಳಬಹುದು.
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎನ್ನುವುದು ‘ಕಸಾಪ’ ಹೆಗ್ಗಳಿಕೆ. ‘ಇಂಗ್ಲಿಷ್ ಗೀತೆಗಳು’ ಪ್ರಕಟಗೊಳ್ಳುವ ವೇಳೆಗಾಗಲೇ ಕನ್ನಡ ನಾಡನ್ನು ಕಟ್ಟುವ ಕೆಲಸದಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು’ ತೊಡಗಿಕೊಂಡಿತ್ತು. ಅದರ ಫಲಶ್ರುತಿ ಎನ್ನುವಂತೆ ಕನ್ನಡ ನಾಡಿನ ಏಕೀಕರಣವನ್ನು ಗಮನಿಸಬಹುದು; ಗೋಕಾಕ್ ಚಳವಳಿಗೆ ಸಂದ ಜನಸಮೂಹದ ಅಭೂತಪೂರ್ವ ಪ್ರತಿಕ್ರಿಯೆಯಲ್ಲಿ ಪರಿಷತ್ತಿನ ಪಾತ್ರವೂ ಇತ್ತು.
ಕನ್ನಡ ಹಾಗೂ ಕನ್ನಡಿಗರ ಅಸ್ಮಿತೆಗಾಗಿ ರೂಪುಗೊಂಡ ಸಾಹಿತ್ಯ ಪರಿಷತ್ತಿನ ಇಂದಿನ ಸ್ಥಿತಿ ಕರುಣಾಜನಕ. ಪ್ರಜಾಸತ್ತಾತ್ಮಕ ನೆಲೆಯಲ್ಲಿ ಚುನಾಯಿತಗೊಂಡ ವ್ಯವಸ್ಥೆಯನ್ನು ಚುನಾಯಿತ ಸರ್ಕಾರವೇ ಅಮಾನತ್ತಿನಲ್ಲಿರಿಸಿದೆ. ಇಂತಹ ವಿಷಮ ಬೆಳವಣಿಗೆಯನ್ನು ಕನ್ನಡಿಗರು ಸ್ವಾಗತಿಸುವ ಸ್ಥಿತಿಯನ್ನು ಪರಿಷತ್ತಿನ ಚುಕ್ಕಾಣಿ ಹಿಡಿದವರೇ ತಂದಿದ್ದಾರೆ.
ತನಿಖೆಯಿಂದ ಸತ್ಯ ಹೊರಬಂದು, ತಪ್ಪು ಮಾಡಿದವರು ಉಪ್ಪು ತಿನ್ನುವುದು ಸಹಜ. ಆದರೆ, ಈ ಪ್ರಕ್ರಿಯೆ ಪರಿಷತ್ತಿನ ಆಜೀವ ಸದಸ್ಯರು ಹಾಗೂ ಹಿತಚಿಂತಕರ ಕಳವಳಕ್ಕೆ ಕಾರಣ ಆಗಬೇಕಲ್ಲವೆ? ಆ ಕಳವಳ ಚಿಂತನ ಮಂಥನವಾಗಿ ರೂಪುಗೊಳ್ಳಬೇಕಲ್ಲವೆ? ಆದರೆ, ಅಂಥ ಯಾವ ಪ್ರಯತ್ನಗಳೂ ನಡೆದಂತಿಲ್ಲ.
ಕಸಾಪ ಮತ್ತು ಕನ್ನಡ ಚಳವಳಿಗಳ ಆಗ್ರಹ ಅನೇಕ ಹೊಸತುಗಳ ಹುಟ್ಟಿಗೆ ನಾಂದಿ ಆಯಿತು. ಅದರ ಭಾಗ ಎನ್ನುವಂತೆ ಕನ್ನಡ ಸಂಸ್ಕೃತಿ ಸಚಿವಾಲಯ, ಕನ್ನಡ ಅಭಿವೃದ್ಧಿಗೊಂದು ಇಲಾಖೆ ರೂಪುಗೊಂಡವು. ಗಡಿರಕ್ಷಣೆ, ಸಂಸ್ಕೃತಿ ಪೋಷಣೆ, ಪುಸ್ತಕ ಸಂಸ್ಕೃತಿ ಲಾಲನೆ, ಸಾಹಿತ್ಯ ಸಂವರ್ಧನೆ– ಹೀಗೆ ಹಲವು ಹೆಸರಿನಲ್ಲಿ ಅಕಾಡೆಮಿ, ಪ್ರಾಧಿಕಾರಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಇವೆಲ್ಲಕ್ಕೂ ಬೇರಿನ ರೂಪದಲ್ಲಿ ಕಾಣಬಹುದಾದ ಕನ್ನಡ ಶಾಲೆಗಳ ಸ್ಥಿತಿಗತಿ ಹೇಗಿದೆ?
ಒಂದೆಡೆ, ಕನ್ನಡ ಶಾಲೆಗಳು ವೇಗವಾಗಿ ಮುಚ್ಚುತ್ತಿವೆ. ಇನ್ನೊಂದೆಡೆ, ಅಕಾಡೆಮಿ– ಪ್ರಾಧಿಕಾರಗಳು ಕನ್ನಡ ಕಟ್ಟುವ ಕೆಲಸ ಮಾಡುತ್ತಿವೆ. ಇದು ವ್ಯಂಗ್ಯವೋ, ವಿರೋಧಾಭಾಸವೋ? ತಿಳಿದವರು ಹೇಳಬೇಕು.
ಎರಡು ಮೂರು ದಶಕಗಳಿಂದ ಸಾಹಿತ್ಯ ಪರಿಷತ್ತಿನ ಸಾಧನೆ– ಸಮ್ಮೇಳನಗಳ ಆಯೋಜನೆಗೆ ಹಾಗೂ ದತ್ತಿ ಪ್ರಶಸ್ತಿಗಳ ವಿತರಣೆಗೆ ಸೀಮಿತವಾಗಿದೆ. ಸಮ್ಮೇಳನದ ಹೆಸರಿನಲ್ಲಿ ಇಪ್ಪತ್ತು ಮೂವತ್ತು ಕೋಟಿ ರೂಪಾಯಿ ಸಾರ್ವಜನಿಕರ ಹಣ ವ್ಯಯವಾಗುತ್ತಿದೆ. ಇದು ಸರಿಯೆ?
ಕನ್ನಡ ಶಾಲೆಗಳು ಸಬಲಗೊಳ್ಳುವವರೆಗೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಒಲ್ಲೆ ಎಂದಿದ್ದರು ದೇವನೂರ ಮಹಾದೇವ. ಈ ನಿಲುವು ಸರ್ಕಾರಿ ಪೋಷಿತ ಸಂಸ್ಥೆಗಳ ಭಾಗವಾಗಿರುವವರಿಗೂ ಮಾದರಿ ಆಗಬೇಕಲ್ಲವೆ?
ನೂರು ವರ್ಷಗಳ ಹಿಂದಿನ ‘ಕರುಣಾಳು ಬಾ ಬೆಳಕೆ’ ರಚನೆ, ಕಸಾಪ ಮತ್ತು ಕನ್ನಡ ಶಾಲೆಗಳ ಬಗ್ಗೆ ಕಾಳಜಿಯುಳ್ಳವರ ಅಂತರಂಗದ ಈ ಹೊತ್ತಿನ ಆರ್ದ್ರ ಮೊರೆಯಂತೆ ಕಾಣಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.