ನಿವೃತ್ತಿಯ ಅಂಚಿನಲ್ಲಿರುವ ನನ್ನ ಪರಿಚಿತರೊಬ್ಬರು ಪ್ರತಿನಿತ್ಯ ಕಾಲ್ನಡಿಗೆಯ ಮೂಲಕವೇ ತಮ್ಮ ಕಚೇರಿಗೆ ಹೋಗುತ್ತಾರೆ. ಸಾಯಂಕಾಲ ಕಚೇರಿಯಿಂದ ಮನೆಗೆ ಮರಳುವಾಗ ಕೂಡ ನಡೆದುಕೊಂಡೇ ಬರುತ್ತಾರೆ. ಏಕೆ ಹೀಗೆಂದು ಪ್ರಶ್ನಿಸಿದರೆ ಅವರು ಹೇಳುವುದು ಹೀಗೆ- ‘ದಿನನಿತ್ಯದ ನಡಿಗೆ ನನ್ನನ್ನು ಆರೋಗ್ಯವಂತ ನನ್ನಾಗಿ ಇಟ್ಟಿದೆ. ಜೊತೆಗೆ ನನ್ನದೆಂಬ ಸ್ವಂತದ ಖಾಸಗಿ ವಾಹನ ಇಲ್ಲದಿರುವುದರಿಂದ ಪರಿಸರವನ್ನು ಸ್ವಚ್ಛವಾಗಿ ಇಡಲು ಒಂದಿಷ್ಟಾದರೂ ಕೊಡುಗೆ ನೀಡುತ್ತಿದ್ದೇನೆಂಬ ತೃಪ್ತಿ ನನಗಿದೆ’. ಅವರಾಡಿದ ಈ ಮಾತು ಕೇಳಿ ಅಚ್ಚರಿಯಾದರೂ ಅವರ ಬಗ್ಗೆ ಮನದಲ್ಲಿ ಅಭಿಮಾನ ಮೂಡದೇ ಇರಲಿಲ್ಲ.
ಕಾಲೇಜು ವಿದ್ಯಾರ್ಥಿಯಾಗಿದ್ದಾಗ ನಾನು ವಾಸವಾಗಿದ್ದ ಬಡಾವಣೆಯಲ್ಲಿ ಹಿರಿಯರೊಬ್ಬರು ಪ್ರತಿನಿತ್ಯ ಬಡಾವಣೆಯ ರಸ್ತೆಗಳನ್ನು ಸ್ವಚ್ಛಗೊಳಿಸುತ್ತಿದ್ದರು. ತಾವು ಮಾಡುತ್ತಿದ್ದ ಸೇವೆಗೆ ಬದಲಾಗಿ ಅವರು ಯಾರಿಂದಲೂ ಏನನ್ನೂ ನಿರೀಕ್ಷಿಸುತ್ತಿರಲಿಲ್ಲ. ದೇವಸ್ಥಾನದ ಹತ್ತಿರದ ಸಣ್ಣ ಕೋಣೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಅವರು ಬಹಳ ಸ್ವಾಭಿಮಾನಿಯಾಗಿದ್ದರು. ಬಡಾವಣೆಯವರ ಸಹಾಯವನ್ನು ವಿನಮ್ರರಾಗಿ ನಿರಾಕರಿಸುತ್ತಿದ್ದರು. ಸರ್ಕಾರವಾಗಲಿ, ಸಂಘ-ಸಂಸ್ಥೆಗಳಾಗಲಿ ಅವರನ್ನು ಗುರುತಿಸಿ ಗೌರವಿಸಲಿಲ್ಲ. ಕೆಲವರು ಆ ಹಿರಿಯರು ಮಾಡುತ್ತಿರುವುದು ನಿರುಪಯುಕ್ತ ಕೆಲಸವೆಂದು ನಗೆಯಾಡುತ್ತಿದ್ದರು. ಹಾಗೆಂದು ಅವರು ತಾವು ಮಾಡುತ್ತಿದ್ದ ಆ ಜನೋಪಯೋಗಿ ಕೆಲಸದಿಂದ ಹಿಂದೆ ಸರಿಯಲಿಲ್ಲ. ತಮ್ಮ ಆ ಕ್ರಿಯೆಯ ಮೂಲಕ ಜನರಿಗೆ ಸ್ವಚ್ಛತೆಯ ಅಗತ್ಯವನ್ನು ಮನಗಾಣಿಸುತ್ತಿದ್ದರು.
ಈ ಇಬ್ಬರು ಮಹನೀಯರ ನಡೆ ಶಿವರಾಮ ಕಾರಂತ ಅವರ ಮಾತನ್ನು ನೆನಪಿಸುತ್ತದೆ. ಕಾರಂತರು ‘ನಾವು ಜಗತ್ತನ್ನು ಬಿಟ್ಟು ಹೋಗುವಾಗ ಅದನ್ನು ಈಗಿರುವುದಕ್ಕಿಂತ ಒಂದಿಷ್ಟು ಚೆಂದ ಕಾಣುವಂತೆ ಮಾಡಿ ಹೋಗಬೇಕು’ ಎನ್ನುತ್ತಿದ್ದರು. ‘ನಾವು ಈ ಜಗತ್ತಿಗೆ ಮರಳಿ ಬರದಿದ್ದರೆ ಏನಾಯಿತು? ನಮ್ಮ ಮುಂದಿನ ಪೀಳಿಗೆಗೆ ಒಂದು ಸುಂದರ ಜಗತ್ತು ಬೇಡವೇ?’ ಎಂದು ಪ್ರಶ್ನಿಸಿದ್ದರು. ಸಾಲುಮರದ ತಿಮ್ಮಕ್ಕ, ತುಳಸಿಗೌಡ, ರಾಜಕಾರಣದಲ್ಲಿ ಶಾಂತವೇರಿ ಗೋಪಾಲಗೌಡ, ಸಿನಿಮಾದಲ್ಲಿ ರಾಜ್‌ಕುಮಾರ್ ಇವರೆಲ್ಲ ತಮ್ಮ ವಿಭಿನ್ನ ಆಲೋಚನೆಗಳಿಂದ ಪ್ರಾತಃಸ್ಮರಣೀಯರಾಗಿದ್ದಾರೆ. ಯೋಚಿಸಿದ್ದನ್ನು ಕಾರ್ಯರೂಪಕ್ಕೆ ತಂದ ಮಹನೀಯರಿವರು. ರಾಜ್‌ಕುಮಾರ್ ಈ ನೆಲದ, ಭಾಷೆಯ ಹೆಮ್ಮೆ ಹಾಗೂ ಅಭಿಮಾನವಾಗಿ ರೂಪುಗೊಳ್ಳಲು, ನಾಡಿನ ಸಾಂಸ್ಕೃತಿಕ ನಾಯಕನಾಗಿ ಬೆಳೆಯಲು ಅವರು ತುಳಿದ ವಿಭಿನ್ನ ದಾರಿಯೇ ಕಾರಣವಾಗಿತ್ತು. ಸಿನಿಮಾರಂಗದ ಥಳುಕು ಬಳುಕಿನ ನಡುವೆ ಗಿರೀಶ್ ಕಾಸರವಳ್ಳಿ ಅವರಂಥ ನಿರ್ದೇಶಕರು ವಿಭಿನ್ನವಾಗಿ ಆಲೋಚಿಸಿದ್ದರಿಂದಲೇ ಸಿನಿಮಾರಂಗಕ್ಕೆ ಅತ್ಯುತ್ತಮ ಸಿನಿಮಾಗಳ ಕಾಣ್ಕೆ ಸಾಧ್ಯವಾಯಿತು.
ಶಾಲೆಯನ್ನು ನಂದನವನವಾಗಿಸಿದ ಶಿಕ್ಷಕರು, ಹಳ್ಳಿಗಳಲ್ಲಿ ನೆಲೆನಿಂತ ವೈದ್ಯರು, ರೋಗಿಗಳ ಆರೈಕೆಯಲ್ಲಿ ದೇವರನ್ನು ಕಾಣುವ ದಾದಿಯರು, ಬೀದಿನಾಯಿಗಳಿಗೆ ಉಣಬಡಿಸುವ ಕರುಣಾಳುಗಳು, ಪಕ್ಷಿಗಳಿಗೆ ನೀರುಣಿಸುವ ದಯಾಪರರು...ಇಂಥ ನೂರಾರು ಜನ ಪ್ರತಿ ಕ್ಷೇತ್ರದಲ್ಲಿ ಕಾಣಸಿಗುತ್ತಾರೆ. ಕೊರೊನಾ ಕಾಲ ಘಟ್ಟದಲ್ಲಿ ಮನೆ ಮನೆಗೂ ಪಡಿತರ ಹಂಚಿ ಸೇವಾ ಮನೋಭಾವ ತೋರಿದವರ ಸಂಖ್ಯೆ ಅಗಣಿತವಾಗಿದೆ. ಅದೆಷ್ಟೋ ವಾಹನ ಚಾಲಕರು ಉಚಿತವಾಗಿ ಶವಗಳನ್ನು ಸಾಗಿಸಿ ಹಿರಿಮೆ ಮೆರೆದರು. ಮದುವೆಮನೆಗಳಲ್ಲಿ ವ್ಯರ್ಥವಾಗುವ ಆಹಾರವನ್ನು ಸಂಗ್ರಹಿಸಿ ಅನಾಥಾಶ್ರಮಗಳಿಗೆ ತಲುಪಿಸುವ ಯುವಕರ ಪಡೆಯೇ ಇದೆ. ಸಮಾಜಕ್ಕೆ ಉಪಯೋಗವಾಗುವ ಇಂಥ ಕಾರ್ಯಗಳು ಸಾಧ್ಯವಾದದ್ದು ವಿಭಿನ್ನ ಆಲೋಚನೆ, ಸಮಾಜಕ್ಕೆ ಏನನ್ನಾದರೂ ನೀಡಬೇಕೆಂಬ ತುಡಿತದಿಂದ.
ಎಸ್.ಎಲ್.ಭೈರಪ್ಪ ಅವರ ‘ತಂತು’ ಕಾದಂಬರಿಯಲ್ಲಿ ಪಾತ್ರವೊಂದರ ಮಾತು ಹೀಗಿದೆ- ‘ಎಷ್ಟೇ ಸಂಪಾದನೆ ಮಾಡಿರಲಿ ಎರಡು ಚಪಾತಿ, ಎರಡು ಹಿಡಿ ಅನ್ನಕ್ಕಿಂತ ಒಂದು ಸಲಕ್ಕೆ ಹೆಚ್ಚು ತಿನ್ನಕ್ಕೆ ಆಗೊಲ್ಲ, ಒಟ್ಟಿಗೆ ಎರಡು ಶರಟು ಹಾಕುಕ್ಕೆ ಆಗೊಲ್ಲ, ಒಂದೇ ಸಲ ಎರಡು ಕಾರಿನಲ್ಲಿ ಕೂಡುಕ್ಕೆ ಆಗೊಲ್ಲ ಅಂತ ಅರ್ಥ ಮಾಡಿಕೊಂಡರೆ ದುರಾಶೆ ತನಗೆ ತಾನೆ ಇಳಿದು ಹೋಗುತ್ತೆ’. ಕೊಳ್ಳುಬಾಕ ಸಂಸ್ಕೃತಿಯ ನಡುವೆ ಕಳೆದು ಹೋದವರಿಗೆ ಈ ಮಾತು ನೀತಿಪಾಠದಂತಿದೆ.
ನಾನೊಬ್ಬ ವಿಭಿನ್ನವಾಗಿ ಆಲೋಚಿಸಿದರೆ ಜಗತ್ತು ಸುಧಾರಿಸುವುದೇ ಎಂದು ವಾದಿಸುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಗಿರಿಶಿಖರವನ್ನು ಹತ್ತುವುದು ಮೊದಲ ಮೆಟ್ಟಿಲಿನಿಂದಲೇ ಶುರುವಾಗಬೇಕು. ಕ್ರಮಿಸುವ ದಾರಿ ದೂರವೆಂದು ಕೈಚೆಲ್ಲಿದವರು ಬೆಟ್ಟ ಹತ್ತಲಾರರು. ಬಸವಣ್ಣ, ಬುದ್ಧ, ಗಾಂಧಿ ಅವರಂತಹ ದಾರ್ಶನಿಕರು ತಮ್ಮ ವಿಭಿನ್ನ ಆಲೋಚನೆ ಮತ್ತು ಆ ಆಲೋಚನೆಯನ್ನು ಕೃತಿಯಾಗಿಸುವುದರ ಮೂಲಕ ಮಾನವ ಜಗತ್ತಿಗೆ ದಾರಿದೀಪವಾದರು. ಸಮಾನತೆಗಾಗಿ ಶ್ರಮಿಸಿದ ಬಸವಣ್ಣ, ಆಸೆಯೇ ದುಃಖಕ್ಕೆ ಮೂಲ ಎಂದ ಬುದ್ಧಗುರು, ಬದುಕಿನ ಸರಳತೆಯ ಪಾಠ ಬೋಧಿಸಿದ ಮಹಾತ್ಮ ಗಾಂಧಿ ಇವರೆಲ್ಲ ನಡೆದ ಮಾರ್ಗದಲ್ಲಿ ಹೆಜ್ಜೆಹಾಕುವ ಸಂಕಲ್ಪ ನಮ್ಮದಾಗಬೇಕಿದೆ.
ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹೊಸ ಸಂಕಲ್ಪಗಳನ್ನು ಮಾಡುತ್ತೇವೆ. ವರ್ಷದೊಳಗೆ ಮನೆ ಕಟ್ಟುವ, ಕಾರು ಖರೀದಿಸುವ, ಕೆಲಸದ ಬಡ್ತಿ, ಮಕ್ಕಳ ಮದುವೆ ಹೀಗೆ ತರಹೇವಾರಿ ಸಂಕಲ್ಪಗಳನ್ನು ಮಾಡಿ ಅವುಗಳನ್ನು ಕಾರ್ಯಗತಗೊಳಿಸಲು ಕಂಕಣಬದ್ಧರಾಗುತ್ತೇವೆ. ವೈಯಕ್ತಿಕ ಬದುಕಿನ ಈ ಎಲ್ಲ ಸಂಕಲ್ಪಗಳ ನಡುವೆ ನಾವು ಕೂಡ ವಿಭಿನ್ನ ಆಲೋಚನೆಯ ಹಾದಿ ತುಳಿಯುವ ಸಂಕಲ್ಪವನ್ನೇಕೆ ಮಾಡಬಾರದು? ಸಮಾಜದ ಸ್ವಾಸ್ಥ್ಯಕ್ಕಾಗಿ ಇಂತಹದ್ದೊಂದು ಸಂಕಲ್ಪ ಇಂದಿನ ತುರ್ತು ಅಗತ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.