ದೇಶ ಸೇವೆಗಾಗಿ ಜೀವನವನ್ನೇ ಮೀಸಲಿಟ್ಟ ಮಹಾತ್ಮ ಗಾಂಧೀಜಿ ಇಂದು ಬದುಕಿದ್ದಿದ್ದರೆ ಅವರಿಗೆ ಆಧುನಿಕ ಭಾರತ ಹೇಗೆ ಕಾಣಿಸಬಹುದು?
ಮೊದಲನೆಯದಾಗಿ, ಅನಗತ್ಯ ಮಾತಿಗಿಂತ ಮೌನದಲ್ಲಿ ಅಪಾರ ನಂಬಿಕೆ ಇಟ್ಟಿದ್ದ ಗಾಂಧಿ ಮೌನವಾಗಿಯೇ ಆಧುನಿಕ ಭಾರತವನ್ನು ಒಂದು ಸುತ್ತು ಹಾಕಿ, ಸೂಕ್ಷ್ಮವಾಗಿ ಬದಲಾವಣೆಗಳನ್ನು ಗಮನಿಸಿ ಪ್ರತಿಕ್ರಿಯಿಸುತ್ತಿದ್ದರು. ನನ್ನವರೆಂದು ಒಳಗೊಂಡಿದ್ದ ಸಮಾಜದ ಎಲ್ಲಾ ವರ್ಗ, ಜಾತಿ ಮತ್ತು ಧರ್ಮಗಳ ತಳಸ್ತರದವರು ಇನ್ನೂ ಹಾಗೆಯೇ ಉಳಿದಿದ್ದಾರೆ. ಎಂದು ಕಸಿವಿಸಿಗೊಳ್ಳುತ್ತಿದ್ದರು. ಪಕ್ಷಾತೀತವಾಗಿ ಅಧಿಕಾರದಲ್ಲಿರುವ ಎಲ್ಲಾ ಜನಪ್ರತಿನಿಧಿಗಳು, ಸಾಮುದಾಯಿಕ ಜನಪರ ಹೋರಾಟಗಳನ್ನು ದಮನಿಸಿ ಹೇಗೆ ಹೋರಾಟಗಾರರನ್ನೇ ಖಳನಾಯಕರನ್ನಾಗಿ ಮಾಧ್ಯಮಗಳಲ್ಲಿ ಬಿಂಬಿಸುತ್ತಿದ್ದಾರೆ, ಇವರು ದಬ್ಬಾಳಿಕೆಯಲ್ಲಿ ಬ್ರಿಟಿಷರನ್ನೇ ಮೀರಿಸುತ್ತಿದ್ದಾರಲ್ಲ, ಎಂದು ಕಳವಳಗೊಳ್ಳುತ್ತಿದ್ದರು.
ಮಧ್ಯರಾತ್ರಿಯಲ್ಲಿ, ಮಹಿಳೆ ನಿರ್ಭೀತಿಯಿಂದ ಓಡಾಡುವಂತಾದರೆ, ಅಂದೇ ನನ್ನ ದೇಶಕ್ಕೆ ನಿಜವಾದ ಸ್ವಾತಂತ್ರ್ಯವೆಂದುಕೊಂಡಿದ್ದೆ. ಆ ಸ್ವಾತಂತ್ರ್ಯ ಈಗಲೂ ನಮ್ಮ ಮಹಿಳೆಯರಿಗೆ ಸಿಕ್ಕಿಲ್ಲವಲ್ಲ ಎಂದು ನಿರಾಶೆ ವ್ಯಕ್ತಪಡಿಸುತ್ತಿದ್ದರು. ನಾನು ಉದ್ಯಮಿಗಳನ್ನು ರಾಷ್ಟ್ರಸೇವೆಗಾಗಿ ತೊಡಗಿಸಿಕೊಳ್ಳುತ್ತಿದ್ದೆ. ಆದರೆ, ಇಂದಿನ ನಾಯಕರು ತಮ್ಮ ಸ್ವಹಿತಾಸಕ್ತಿಗಾಗಿ ದೇಶದ ಸಂಪನ್ಮೂಲವನ್ನೇ ಅವರಿಗೆ ಮಾರುತ್ತಿದ್ದಾರೆಂದು ಖಿನ್ನರಾಗುತ್ತಿದ್ದರು. ಸಮೃದ್ಧವಾಗಿದ್ದ ಭಾರತದ ಪರಿಸರ ಮತ್ತು ಜೀವವೈವಿಧ್ಯ ಕಣ್ಮರೆಯಾಗಿ, ಮನುಷ್ಯನೊಬ್ಬನೇ ಎಲ್ಲಾ ಕಡೆ ಆಕ್ರಮಿಸಿ ಕೊಂಡಿದ್ದಾನಲ್ಲ ಎಂದು ನಿಟ್ಟುಸಿರು ಬಿಡುತ್ತಿದ್ದರು. ಸತ್ಯ–ಅಹಿಂಸೆ ಇರಬೇಕಾಗಿದ್ದ ಜಾಗದಲ್ಲಿ, ಸುಳ್ಳು–ಹಿಂಸೆ ರಾರಾಜಿಸುತ್ತಿದೆ ಎಂದು ಆತಂಕಪಡುತ್ತಿದ್ದರು.
ಗ್ರಾಮಗಳು ಸ್ವಾವಲಂಬಿಯಾಗಬೇಕೆಂದು ಕನಸುಕಂಡಿದ್ದೆ, ಆದರೆ. ಇಂದು ಗ್ರಾಮಗಳು ಒಂದೋ ಖಾಲಿಯಾಗಿವೆ, ಎರಡನೆಯ ದರ್ಜೆಯ ಪಟ್ಟಣಗಳಾಗಿ ಬದಲಾಗಿವೆ, ಅಥವಾ ನಗರವಾಸಿಗಳ ಮನೋರಂಜನೆಯ ತಾಣವಾಗಿವೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು. ನನ್ನ ಆಶಯದ ಸರ್ವಧರ್ಮ ಸಮನ್ವಯ ಸಾಧಿಸಬೇಕಾಗಿದ್ದ ಭಾರತೀಯರು, ಜಾತಿ–ಧರ್ಮದ ಹೆಸರಲ್ಲಿ ದ್ವೇಷ ಸಾಧಿಸುತ್ತಿದ್ದಾರೆಂದು ಹತಾಶರಾಗುತ್ತಿದ್ದರು.
ಎರಡನೆಯದಾಗಿ, ಗಾಂಧಿಗೆ ಸ್ವರಾಜ್ಯವೆಂದರೆ ಬರೀ ಸಾಂಕೇತಿಕವಾದ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮಾತ್ರವಲ್ಲ. ಅದೊಂದು ಜೀವನವಿಧಾನ. ಸಹಿಷ್ಣುತೆ, ಸಮನ್ವಯ ಮತ್ತು ಸಹಬಾಳ್ವೆಯಿಂದ ಬದುಕುವ ದಾರಿ; ಜನರ ನೈತಿಕತೆಯ ಸತ್ವಪರೀಕ್ಷೆ. ತದ್ವಿರುದ್ಧವಾಗಿ, ಇಂದಿನ ಪ್ರಜಾತಂತ್ರದಲ್ಲಿ ನಾವು ಚುನಾವಣಾ ಯಶಸ್ಸನ್ನು ಕಾಣಬಹುದೇ ಹೊರತು, ನೈತಿಕತೆಯ ಸ್ವರಾಜ್ಯವನ್ನಲ್ಲ. ಬಹುಶಃ, ಗಾಂಧಿ ಹೀಗೆ ಹೇಳಬಹುದು, ‘ನಾನಿಂದು ಮುಕ್ತ ಪ್ರಜೆಗಳನ್ನು ನೋಡುತ್ತಿದ್ದೇನೆ, ಮುಕ್ತ ಆತ್ಮಗಳನ್ನಲ್ಲ. ನಿಜವಾದ ಸ್ವರಾಜ್ಯ ಕಾನೂನುಗಳಲ್ಲಿ ಮಾತ್ರವಲ್ಲ, ಆತ್ಮಶಾಸನ, ಕರುಣೆ, ಸೇವೆಯಲ್ಲಿದೆ.’
ಭಾರತದಲ್ಲಿ ವಿಜೃಂಭಿಸುತ್ತಿರುವ ಹಿಂಸೆ–ಅಸತ್ಯದ ವಿಜಯದ ಕುರಿತು ಗಾಂಧಿ ವಿಷಾದದಿಂದ ಪ್ರತಿಕ್ರಿಯಿಸಬಹುದು. ಯಾರನ್ನೂ ದ್ವೇಷಿಸದೆ, ಹಿಂಸಿಸದೆ ಬದುಕುವುದಕ್ಕೆ ಆತ್ಮಬಲ ಬೇಕು. ಹಿಂಸೆ ತಾತ್ಕಾಲಿಕ ಜಯ ತರಬಹುದು, ಆದರೆ ಮಾಸದ ಗಾಯವನ್ನು ಮಾಡುತ್ತದೆ. ಅಹಿಂಸೆಯ ಫಲಶ್ರುತಿ ನಿಧಾನವಾದರೂ, ಮನುಷ್ಯತ್ವ ಉದ್ದೀಪನಗೊಳಿಸಿ ಒಟ್ಟುಗೂಡಿಸುತ್ತದೆ.
ಗಾಂಧಿಗೆ ಯುವಜನತೆಯ ಮೇಲೆ ಅಪರಿಮಿತ ಆಶಾವಾದವಿತ್ತು. ಆದರೆ, ನೈತಿಕ ಶಿಕ್ಷಣದ ಪರಿಚಯವಿಲ್ಲದ ಇಂದಿನ ಯುವಕರು, ಬೃಹತ್ ಉದ್ಯಮಿಗಳು ರೂಪಿಸುತ್ತಿರುವ ವೈಭವೀಕೃತ ಭೌತಿಕ ಜೀವನಕ್ರಮದ ಕುರುಡು ಅನುಯಾಯಿಗಳಾಗಿ, ಸ್ವಚಿಂತನೆಗಳಿಂದ ದೂರವಾಗಿದ್ದಾರೆ. ಅವರು ಹೊಸ ಕನಸು ಕಾಣುವುದನ್ನು ಮರೆತಿದ್ದಾರೆ. ಆ ಯುವಕರಿಗೆ ಗಾಂಧಿ ಹೀಗೆ ಹಿತವಚನ ನೀಡಬಹುದು: ‘ನೀವು ನನ್ನ ಜೀವನಶೈಲಿ ಅನುಸರಿಸಬೇಕಾಗಿಲ್ಲ. ಆದರೆ, ನನ್ನ ಜೀವನ ಸತ್ವವನ್ನು ಪಾಲಿಸಬಹುದೇನೋ ಎಂದೊಮ್ಮೆ ಯೋಚಿಸಿ. ಯಾವುದೇ ದ್ವೇಷವಿಲ್ಲದೆ ಅನ್ಯಾಯದ ವಿರುದ್ಧ ನಿಲ್ಲಿ, ಅಹಂಕಾರವಿಲ್ಲದೆ ಸಮಾಜ ಸುಧಾರಿಸಿ, ಸತ್ಯದಿಂದ ಮತ್ತು ಭಯವಿಲ್ಲದೆ ಬಾಳಿ.’
ಇಂದು ಗಾಂಧಿ ಇದ್ದಿದ್ದರೆ ಬೌದ್ಧಿಕ ಸ್ವಾತಂತ್ರ್ಯಕ್ಕಾಗಿ ಬೀದಿಗಿಳಿಯುತ್ತಿದ್ದರು. ನಾವಿಂದು ವಿವಿಧ ಜನಪರ ಹೋರಾಟಗಳ ಮುಂಚೂಣಿಯಲ್ಲಿ ನೋಡಬಹುದಿತ್ತು. ಬಹುಶಃ, ಅವರು ಹೇಳುತ್ತಿದ್ದರು- ‘ನನ್ನನ್ನು ಪ್ರತಿಮೆಗಳಲ್ಲಿ ಹುಡುಕಬೇಡಿ, ನನ್ನ ಜೀವನ ತತ್ತ್ವಗಳನ್ನು ಜೀವಂತವಾಗಿಡಿ. ನನ್ನ ಜನರು ಸತ್ಯ, ಅಹಿಂಸೆಯನ್ನು ಮರೆತರೆ ನನ್ನ ಪ್ರಾಯೋಗಿಕ ಜೀವನಕ್ಕೆ ಏನೂ ಅರ್ಥವಿರುವುದಿಲ್ಲ.’
ಕೊನೆಯದಾಗಿ, ಗಾಂಧಿ ಏನನ್ನು ಹೇಳಬಹುದು ಎನ್ನುವುದಕ್ಕಿಂತ, ನಾವು ಅದನ್ನು ಕೇಳಲು ಸಿದ್ಧರಿದ್ದೇವೆಯೇ ಎನ್ನುವುದು ಬಹಳ ಮುಖ್ಯ. ಗಾಂಧಿ ಕನಸಿನ ಭಾರತ ಕಟ್ಟಲು ನಮಗೆ ಸಾಧ್ಯವಾಗಿಲ್ಲ. ಗಾಂಧಿಯಂತೆ ಇಂದು ಬದುಕಲು ಸಾಧ್ಯವೇ ಎನ್ನುವ ಪ್ರಪಂಚದಲ್ಲಿ ನಾವಿದ್ದೇವೆ. ಆದರೂ, ಬತ್ತದ ಭರವಸೆಯೊಂದೇ ನಮ್ಮ ವೈಯಕ್ತಿಕ ಬದುಕನ್ನು, ಒಂದು ರಾಷ್ಟ್ರವನ್ನು ಸಂಕಷ್ಟದ ದಿನಗಳಲ್ಲಿ ಮುನ್ನೆಡೆಯಲು ಪ್ರೇರಣೆ ನೀಡುತ್ತದೆ. ಹೀಗಾಗಿ, ಗಾಂಧಿಯ ಕನಸಿನ ಭಾರತ ಇನ್ನೂ ಸಾಧ್ಯವಿದೆ ಎಂದುಕೊಳ್ಳೋಣ. ಅದು ನಮ್ಮೊಳಗೆ ಹುಟ್ಟಬೇಕಾದ ಧೈರ್ಯ, ಸತ್ಯ, ಸರಳತೆ, ಅಹಿಂಸೆ, ಸೌಹಾರ್ದ ಮತ್ತು ಕರುಣೆಯಿಂದ ಮಾತ್ರ ಜೀವ ಪಡೆಯುತ್ತದೆ. ಗಾಂಧಿ ಹೇಳಿದಂತೆ, ನಾವು ಬಯಸುವ ಬದಲಾವಣೆಯನ್ನು ನಮ್ಮಿಂದಲೇ ಆರಂಭಿಸಬೇಕು. ಭಾರತಕ್ಕೆ, ಈ ಸವಾಲು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.