ADVERTISEMENT

ಇಲ್ಲೀಗ ಬೆರಗಿಲ್ಲ... ಬಯಲಷ್ಟೇ

ಮೂಕಪ್ರಾಣಿಗಳ ಜೀವಕಾರುಣ್ಯದ ಪಾಠ ಕೇಳುವ ಪುರಸತ್ತು ಯಾರಿಗಿದೆ?

ಸತೀಶ್ ಜಿ.ಕೆ. ತೀರ್ಥಹಳ್ಳಿ
Published 12 ಮಾರ್ಚ್ 2020, 19:40 IST
Last Updated 12 ಮಾರ್ಚ್ 2020, 19:40 IST
   

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗೆಯಿಂದ ತೀರ್ಥಹಳ್ಳಿ ಕಡೆಗೆ ಆಗೆಲ್ಲಾ ಹಗಲಿನಲ್ಲಿ ಬೆಳೆಸುವ ಪ್ರಯಾಣವು ನಿಸರ್ಗಪ್ರಿಯರಿಗೆ ಹಿತಾನುಭವ ತರುತ್ತಿತ್ತು. ತುಂಗಾ ಅಣೆಕಟ್ಟೆ ಇರುವ ಗಾಜನೂರಿನಿಂದ ಬೆಳ್ಳಕ್ಕಿಗಳ ಮಮತೆಯ ಮಡಿಲು ಮಂಡಗದ್ದೆವರೆಗಿನ ಪ್ರಯಾಣವಂತೂ ರುದ್ರರಮಣೀಯ ಯಾನ.

ಹಾದಿಗುಂಟ ತುಂಗಾ ನದಿಯ ಜುಳುಜುಳು, ದಾರಿಯ ಇಕ್ಕೆಲಗಳಲ್ಲೂ ಹಸಿರುಕ್ಕುವ ಕಾನು, ಮುಗಿಲುಮುಟ್ಟುವ ಮರಗಳು, ಬಹಳೆಡೆ ಸೂರ್ಯಕಿರಣಗಳು ನೆಲತಾಕದಂತೆ ಹಸಿರು ಹಾಸಿನ ಚಪ್ಪರ, ಸಿಹಿಗಾಳಿಯ ಸೋಕಿಗೆ ದಾರಿಹೋಕನ ಮೈಮನಸುಗಳಲ್ಲಿ ಹಸಿಹಸಿ ಭಾವ...

ಮಾರ್ಗ ಮುಂದುವರಿದಂತೆ ಬಿದಿರುಮೆಳೆಗಳು ಬಾಗಿ ತೋರಣವಾಗಿ ಒಳಕರೆದುಕೊಳ್ಳುತ್ತಿದ್ದವು. ಆಚೆ ತುದಿಯಿಂದ ಹೊರಬರುವಾಗ ಹಸಿರು ಗುಹೆಯಿಂದ ಹೊರಬಂದಂತಹ ಬೆರಗು. ಮುಂಗಾರಿನ ದಾರಿಯ ಸೊಬಗಂತೂ ವರ್ಣನೆಗೆ ನಿಲುಕದ ಚಂದ. ದಾರಿ ಸರಿಯುವುದೇ ಬೇಸರ.

ADVERTISEMENT

ಸಕ್ರೆಬೈಲಿನ ಆನೆ ಬಿಡಾರದ ಗಾಂಭೀರ್ಯದ ನೋಟವನ್ನು ದಾಟಿ ಹೊರಟರೆ ಕಾಣುವ ಮಂಡಗದ್ದೆಯ ಹೊಳೆದಂಡೆಯ ಬೆಳ್ಳಕ್ಕಿ ಹಿಂಡಿನಲ್ಲಿ ಎಂಥದ್ದೋ ಸಡಗರ. ಹಕ್ಕಿಬಳಗ ಮರಿಗಳಿಗೆ ಗುಕ್ಕು ನೀಡುವ ಪರಿಗೆ, ನೋಡುವ ಮನಸಿನಲ್ಲಿ ತರತರದ ಕಲರವ. ಆದರೆ ಈಗ ಅಂಥದ್ದೊಂದು ಪುಳಕವನ್ನು ದಾರಿಹೋಕ ಕಳೆದುಕೊಂಡಿದ್ದಾನೆ. ಏಳೆಂಟು ವರ್ಷಗಳ ಹಿಂದೆ ಜೀವಕಳೆಯನ್ನು ಒಸರುತ್ತಿದ್ದ ಹಸಿರು ಹಾದಿಯಲ್ಲೀಗ ಬಿಕ್ಕಳಿಕೆ ಕೇಳುತ್ತದೆ... ಅಲ್ಲೀಗ ಸೂತಕದ ಛಾಯೆ ಗಾಢವಾಗಿದೆ... ಪ್ರಕೃತಿ ಚಿತ್ತಾರದ ಬಣ್ಣ ಮಾಸಿದೆ... ಕಾಡಿನ ಹಸಿರು ಕೆಂಪಾಗಿದೆ... ತಿಳಿನೀರು ರಾಡಿ ಎದ್ದಿದೆ...

ಏನಾಯ್ತು ಹಾದಿಗೆ? ಹಸಿರು ಹೊದಿಕೆಯನ್ನು ಸರಿಸಿ ಬಿರುಬಿಸಿಲಿಗೆ ಕಣ್ಬಿಡುವ ಆತುರವಾದರೂ ಏನಿತ್ತು ಅದಕ್ಕೆ? ಹೊಳೆಯಂಚಿನ ಕಪ್ಪನೆ ಕಾಡೆಲ್ಲಾ ಕರಗಿದ್ದು ಹೇಗೆ? ಸಮೃದ್ಧ ಸಸ್ಯಗಳು ಬೋಳು ಬೊಡ್ಡೆಗಳಾಗಿ ನಡುಗಡ್ಡೆಯಲ್ಲಿ ನಿಂತದ್ಯಾಕೆ? ಉತ್ತರ ಸ್ಪಷ್ಟ, ಅವೆಲ್ಲಾ ನಾಗರಿಕತೆಯ ಕುರುಹುಗಳು! ಅಭಿವೃದ್ಧಿಯ ಮಾನದಂಡಗಳು!

ಹೌದು, ಇದು ಹೆದ್ದಾರಿ ಯುಗ. ಏರುತ್ತಿರುವ ಜನಸಂಖ್ಯೆಯ, ವಾಹನ ಭರಾಟೆಯ ಒತ್ತಡ ನೀಗಲು ರಸ್ತೆ ವಿಸ್ತರಣೆ ಅನಿವಾರ್ಯ ಎಂಬಂತಹ ಸ್ಥಿತಿ. ಕಾಲದ ವೇಗಕ್ಕೆ, ಓಘಕ್ಕೆ ಎಲ್ಲವನ್ನೂ ಸಹಿಸಿಕೊಳ್ಳಬೇಕಾದ ಜರೂರತ್ತಿದೆ ಎಂದು ನಂಬಲಾಗಿದೆ. ಹಾಗೆ ಇಲ್ಲಿಯೂ ರಸ್ತೆ ವಿಸ್ತರಣೆಯ ಹಿಗ್ಗಿನಲ್ಲಿ ಗುಡ್ಡಗಳೆಲ್ಲ ನೆಲಕಚ್ಚಿವೆ, ಸಾವಿರಾರು ಮರಗಳ ಮಾರಣಹೋಮವನ್ನು ಯುದ್ಧೋಪಾದಿಯಲ್ಲಿ ಮಾಡಿ ಮುಗಿಸಲಾಗಿದೆ.

2009ರಲ್ಲಿ ‘ತುಂಗಾ ಮೇಲ್ದಂಡೆ’ ಎಂಬ ಭಗೀರಥ ಯೋಜನೆಯನ್ನು ಇಲ್ಲಿ ಜಾರಿಗೊಳಿಸಿ, ತುಂಗೆಗೆ ಮತ್ತೊಂದು ಎತ್ತರದ ಅಣೆಕಟ್ಟು ಕಟ್ಟಿ, ನದಿಯನ್ನು ಕಟ್ಟಿಹಾಕಲಾಯಿತು. ಹರಿವಿನ ಸ್ವಾತಂತ್ರ್ಯವನ್ನು ಕಸಿದುಕೊಂಡ ಮೇಲೆ ನದಿಯು ನರಳಿದ, ಹೊರಳಾಡಿದ ಕುರುಹುಗಳೇ ಅಲ್ಲೀಗ ನದಿಪಾತ್ರದಲ್ಲೆಲ್ಲಾ ಕಾಣುತ್ತಿರುವುದು. ಪರಿಣಾಮ, ಸಾವಿರಾರು ಹೆಕ್ಟೇರ್ ಅಮೂಲ್ಯ ವನ್ಯಸಂಪತ್ತು ನಾಶಗೊಂಡಿದೆ. ಅಂದಿನ ಹರುಷದ ಹಸಿರು ಹಾದಿಯೀಗ ಹೊಳೆಯ ಕಣ್ಣೀರಿಗೆ ಮೂಕಸಾಕ್ಷಿಯಾಗಿದೆ. ಆನೆ, ಹುಲಿ, ಜಿಂಕೆ, ಕಾಡುಕೋಣ, ಸೀಳುನಾಯಿ, ಕಾಳಿಂಗ ಸರ್ಪ, ಮುಂಗಟ್ಟೆ ಹಕ್ಕಿಗಳಿಗೂ ಅಲ್ಲೀಗ ಮುಳುಗುನೀರು.

ಶರಾವತಿ, ವಾರಾಹಿ- ಚಕ್ರ, ತುಂಗಾ, ಭದ್ರಾ ನೀರಾವರಿ ಮತ್ತು ವಿದ್ಯುತ್ ಯೋಜನೆಗಳಿಂದ ಮಲೆನಾಡು ಬಹುತೇಕ ಮುಳುಗಿದೆ. ಶರಾವತಿ ಯೋಜನೆಯಲ್ಲಿ ಸರ್ವಸ್ವವನ್ನೂ ಕಳೆದುಕೊಂಡು ಕಂಗೆಟ್ಟವರನ್ನು ಸಂತೈಸಲು ಈವರೆಗೂ ಸಾಧ್ಯವಾಗಿಲ್ಲ. ಅದರೊಟ್ಟಿಗೆ ಶರಾವತಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಅವೈಜ್ಞಾನಿಕವಾದ ಯೋಜನೆಯನ್ನು ಮಲೆನಾಡು ಮಾತ್ರವಲ್ಲದೆ ಇಡಿಯ ಕರುನಾಡೇ ತೀವ್ರವಾಗಿ ಖಂಡಿಸಿದೆ. ಜೀವವೈವಿಧ್ಯದ ತೊಟ್ಟಿಲಂತಿರುವ ಶರಾವತಿ ಕಣಿವೆಯ ಪರಿಸರ ಸೂಕ್ಷ್ಮ ಪ್ರದೇಶದ ಭೂಗರ್ಭಕ್ಕೇ ಸುರಂಗ ಕೊರೆದು, ಜಲ ವಿದ್ಯುತ್ ಘಟಕಗಳನ್ನು ಸ್ಥಾಪಿಸುವ ವಿವಾದಿತ ಯೋಜನೆಯನ್ನು ಜಾರಿಗೊಳಿಸುವ ಸರ್ಕಾರದ ತೀರ್ಮಾನಕ್ಕೆ ಮಲೆನಾಡು ಮತ್ತೊಮ್ಮೆ ಬೆಚ್ಚಿಬಿದ್ದಿದೆ. ಸೌರಶಕ್ತಿಯಂತಹ ಬದಲಿ ಇಂಧನ ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಯೋಜನೆಗಳು ನಮಗಿನ್ನೂ ತೋರದಿರುವುದು ವಿಪರ್ಯಾಸವೇ ಸರಿ.

ಯುದ್ಧ, ನೈಸರ್ಗಿಕ ವಿಕೋಪಗಳಿಂದ ಅಳಿದ ರಾಜ್ಯ- ಸಾಮ್ರಾಜ್ಯಗಳ ಕುರಿತು ಚರಿತ್ರೆಯ ತುಂಬಾ ವಿವರಗಳಿರುತ್ತವೆ. ಆದರೆ ನೀರಾವರಿ ಯೋಜನೆಯೊಂದು ನೋಡನೋಡುತ್ತಾ, ಪರಿಸರಸೂಕ್ಷ್ಮ ಅರಣ್ಯ ಪ್ರದೇಶವನ್ನು, ಸಾವಿರಾರು ಪ್ರಭೇದದ ಜೀವರಾಶಿಯನ್ನು ಸದ್ದಿಲ್ಲದೇ ನುಂಗಿ ನೀರು ಕುಡಿದ ವಿವರ ಮಾತ್ರ ಎಲ್ಲಿಯೂ ಲಭ್ಯವಿರದು. ಸ್ಥಳೀಯರ ವಿರೋಧದ ನಡುವೆಯೇ ಅಗಲಗೊಂಡ ಅಭಿವೃದ್ಧಿಪಥ ಮಾತ್ರ ಲಕಲಕ ಹೊಳೆಯುತ್ತಿದೆ. ಆಧುನಿಕ ನಾಗರಿಕತೆಯ ಹೆಗ್ಗುರುತಾಗಿರುವ ಇಂಥ ವಿಭ್ರಾಂತಿಗಳಿಗೆಲ್ಲಾ ‘ಅಭಿವೃದ್ಧಿ’ ಎಂದು ಹೆಸರಿಡಲಾಗಿದೆ. ಜಗತ್ತು ಕಾಲುದಾರಿಯ, ಕಾಲ್ನಡಿಗೆಯ ಸುಖ ಮರೆತು ಯಾವುದೋ ಕಾಲವಾಯಿತು. ಬದುಕು, ಭ್ರಾಂತಿಯನ್ನು ಭರ್ಜರಿಯಾಗಿ ಆಚರಿಸುತ್ತಿರುವ ಹೊತ್ತಿದು. ಬುದ್ಧಿವಂತ ಮನುಷ್ಯನಿಗೆ ಮೂಕಪ್ರಾಣಿಗಳು ನಿತ್ಯ ನಿರಂತರವೂ ಜೀವಕಾರುಣ್ಯದ ಪಾಠ ಹೇಳುತ್ತಲೇ ಇವೆ. ಆದರೆ ಜನಕ್ಕೆ ಕೇಳುವ ಪುರಸತ್ತೆಲ್ಲಿದೆ?

ಅರಣ್ಯದ ರೋದನ, ಭೂಮಿಯ ಬಿರುಕು, ಛಿದ್ರಗೊಳ್ಳುತ್ತಿರುವ ಮುಗಿಲು, ಸಮುದ್ರದ ಕೊತಕೊತ... ಇವನ್ನೆಲ್ಲಾ ಗ್ರಹಿಸುವಷ್ಟು ಸೂಕ್ಷ್ಮಮತಿಯಾಗಿರದ ಮನುಷ್ಯನಿಗೆ ಭವಿಷ್ಯದಲ್ಲಿ ಕಾಲ ಮಾತ್ರವೇ ಪಾಠ ಕಲಿಸಬಹುದೇನೊ. ಆಗ ಕಲಿಯಲು ಭೂಮಿ ಮೇಲೆ ಯಾರಿರುತ್ತಾರೆ ಎಂಬುದು ಸದ್ಯದ ಭಯಮಿಶ್ರಿತ ಕುತೂಹಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.