ADVERTISEMENT

ಸಂಗತ | ಗುರು ಬೆಳಗಲಿ ಜ್ಞಾನದ ಬೆಳಕಲಿ

ವಿದ್ಯಾರ್ಥಿಗಳು ಹಾಗೂ ತನ್ನ ಸುತ್ತಲಿನ ಸಮಾಜಕ್ಕೆ ವೈಜ್ಞಾನಿಕ ಮನೋಭಾವ ಬಿತ್ತಲು ನೆರವಾಗಬೇಕಿದ್ದ ಶಿಕ್ಷಕ ಸಮುದಾಯ ತನ್ನ ಈ ಹೊಣೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆಯೇ?

ಡಾ.ಸರ್ಫ್ರಾಜ್ ಚಂದ್ರಗುತ್ತಿ
Published 24 ಏಪ್ರಿಲ್ 2025, 22:30 IST
Last Updated 24 ಏಪ್ರಿಲ್ 2025, 22:30 IST
   

ವಿದ್ಯಾರ್ಥಿ ಸಮುದಾಯದಲ್ಲಿನ ಮೂಢನಂಬಿಕೆಯ ಕುರಿತಾಗಿ ಮಲ್ಲಿಕಾರ್ಜುನ ಹೆಗ್ಗಳಗಿ ಪ್ರಸ್ತಾಪಿಸಿದ್ದಾರೆ (ಸಂಗತ, ಏ. 18). ವಿದ್ಯಾರ್ಥಿಗಳಲ್ಲಿ ವೈಚಾರಿಕತೆಯನ್ನು ಬಿತ್ತಲು ಶಿಕ್ಷಕರು ಮುಂದಾಗಬೇಕೆನ್ನುವ ಅವರ ಕಾಳಜಿಯೂ ಸರಿ. ನಿಜ, ಇದೊಂದು ಸಕಾಲಿಕವಾದ ಚರ್ಚೆಯ ವಿಷಯ. ಇಂದು ವಿದ್ಯಾರ್ಥಿಗಳು ಹೆಚ್ಚು ಸಮಯ ಶಾಲಾ ಕಾಲೇಜು ಅಥವಾ ಅಧ್ಯಾಪಕರ ಜತೆ ಇರುತ್ತಾರೆ. ಉಳಿದಂತೆ ಮನೆ ಹಾಗೂ ಸಮಾಜದ ನಡುವೆ. ಸಮಾಜ ಇಲ್ಲವೇ ಪೋಷಕರ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವಧಾನ ಬಹುತೇಕ ವಿದ್ಯಾರ್ಥಿಗಳಲ್ಲಿ ಇಲ್ಲ. ಕೊನೆಯಪಕ್ಷ ತಮ್ಮ ಮಕ್ಕಳು ಅಧ್ಯಾಪಕರ ಮಾತನ್ನು ಕೇಳುತ್ತಾರೆ ಎಂಬ ನಂಬಿಕೆ ಸಮಾಜದಲ್ಲಿದೆ. ಇದು ನಿಜ ಕೂಡ.

‘ಮಕ್ಕಳು ನೀವು ಹೇಳಿದ್ದನ್ನು ಕೇಳುವುದಿಲ್ಲ, ನೀವು ಮಾಡುವುದನ್ನು ನೋಡಿ ಕಲಿಯುತ್ತಾರೆ’ ಎನ್ನುತ್ತಾನೆ ಖಲೀಲ್ ಗಿಬ್ರಾನ್. ಆದರೆ ಶಿಕ್ಷಕರೇ ಮೂಢನಂಬಿಕೆಗಳ ಬೆನ್ನುಹತ್ತಿದ್ದರೆ ಯಾರನ್ನು ದೂರುವುದು? ಹೆಸರಿಗೆ ನಾವು ವಿಜ್ಞಾನ ಯುಗದಲ್ಲಿದ್ದೇವೆ. ಪ್ರತಿಕ್ಷಣವೂ ವಿಜ್ಞಾನದ ಸವಲತ್ತುಗಳನ್ನೇ ಬಳಸಿಕೊಳ್ಳುತ್ತಿದ್ದೇವೆ. ಆದರೆ ಆಂತರಿಕವಾಗಿ ನಾವು ಅಜ್ಞಾನದ ಬೆನ್ನು ಹತ್ತಿದ್ದೇವೆ. ವಿದ್ಯಾರ್ಥಿಗಳು ಹಾಗೂ ತನ್ನ ಸುತ್ತಲಿನ ಸಮಾಜಕ್ಕೆ ವೈಜ್ಞಾನಿಕ ಮನೋಭಾವ ಬಿತ್ತಲು ನೆರವಾಗಬೇಕಿದ್ದ ಶಿಕ್ಷಕ ಸಮುದಾಯ ತನ್ನ ಈ ಹೊಣೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆಯೇ?

ಇಲ್ಲೊಂದು ಉದಾಹರಣೆ ಇದೆ. ಕಾಲೇಜಿನ ಉಪನ್ಯಾಸಕರೆಲ್ಲ ಸೇರಿ ಪ್ರವಾಸ ಹೋಗಿ ಬಂದರು. ಇಬ್ಬರು ಶಿಕ್ಷಕರು ಮಾತ್ರ ಅವರೊಂದಿಗೆ ಹೋಗದೆ ತಪ್ಪಿಸಿಕೊಂಡರು. ಇದಕ್ಕೆ ಕಾರಣ, ಪ್ರವಾಸ ಹೋದ ದಿನ ಅಮಾವಾಸ್ಯೆ ಆಗಿತ್ತು ಎಂಬುದು. ಇನ್ನೊಂದು ಉದಾಹರಣೆ. ಅಂದು ಮಧ್ಯಾಹ್ನ ಭಾಗಶಃ ಸೂರ್ಯಗ್ರಹಣ. ರಾಜ್ಯದ ಕೆಲವು ಶಾಲೆಗಳಲ್ಲಿ ಗ್ರಹಣ ಶುರುವಾದಾಗ ಸಾಮೂಹಿಕ ಭೋಜನ ಮಾಡಿ, ಪ್ರಕೃತಿಯ ಸಹಜ ವಿದ್ಯಮಾನವಾದ ಗ್ರಹಣ ಹಿಡಿದಾಗ ಊಟ ಮಾಡುವುದರಿಂದ ಏನೂ ಆಗುವುದಿಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಲಾಯಿತು. ಆದರೆ ನಗರವೊಂದರ ಪ್ರಸಿದ್ಧ ಕಾಲೇಜಿನಲ್ಲಿ ಆ ದಿನ ವಿಜ್ಞಾನದ ವಿದ್ಯಾರ್ಥಿಗಳೂ ಇರಲಿಲ್ಲ, ವಿಜ್ಞಾನ ಕಲಿಸುವ ಮೇಷ್ಟ್ರುಗಳು ಮೊದಲೇ ಇರಲಿಲ್ಲ. ಹಾಗಾದರೆ ವಿಜ್ಞಾನಕ್ಕೂ ವೈಜ್ಞಾನಿಕ ಮನೋಭಾವಕ್ಕೂ ಸಂಬಂಧವೇ ಇಲ್ಲವೆ? ಪ್ರಜ್ವಲಿತೋ ಜ್ಞಾನಮಯಂ ಗುರು ಎಂದಿದ್ದಾರೆ ವೇದವ್ಯಾಸರು. ಗುರುವಾದವನು ಜ್ಞಾನದ ಬೆಳಕಲ್ಲಿ ಬೆಳಗಬೇಕು. ಈ ಕಾಲದ ಗುರು ಬರೀ ವಿಷಯ ಜ್ಞಾನವಲ್ಲದೆ ವೈಚಾರಿಕ ವಿದ್ವತ್ತಿನಿಂದ ಸಮೃದ್ಧನಾಗಿರಬೇಕು. ಅವೈಜ್ಞಾನಿಕವಾದುದನ್ನು ಪ್ರಶ್ನಿಸಿ ಅದನ್ನು ತಿರಸ್ಕರಿಸುವ ಮನೋಭಾವವನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು.

ADVERTISEMENT

ಸರ್ಕಾರದ ಆದೇಶದಂತೆ ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನದ ಪ್ರತಿಜ್ಞಾವಿಧಿಯನ್ನು ಓದಿಸಲಾಗುತ್ತಿದೆ. ವೈಚಾರಿಕತೆ, ಸಮಾನತೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಿ ಎಂದು ಇಷ್ಟೊಂದು ಗಟ್ಟಿ ದನಿಯಲ್ಲಿ ಘೋಷಿಸುವ ಇನ್ನೊಂದು ಸಂವಿಧಾನ ಬೇರೆಡೆ ಇರಲಿಕ್ಕಿಲ್ಲ. ಆದರೂ ಪರಿಸ್ಥಿತಿ ಬದಲಾಗುತ್ತಿಲ್ಲ ಏಕೆ?
ವಿಜ್ಞಾನ ಅಥವಾ ವಿಜ್ಞಾನಿಗಳ ಸಮೂಹವು ಶಿಕ್ಷಣ ವ್ಯವಸ್ಥೆಯನ್ನು ವರ್ತಮಾನದ ಬೆಳಕಲ್ಲಿ ಮುನ್ನಡೆಸಲು ಮಾರ್ಗದರ್ಶನ ಮಾಡಬೇಕು. ತಮ್ಮ ಹುಟ್ಟಿನ ಪರಿಸರದ ಪ್ರಭಾವದಿಂದಾಗಿ ಶಿಕ್ಷಕರು ನೂರಾರು ಪೂರ್ವಗ್ರಹಗಳನ್ನು ಹೊತ್ತು ಬಂದಿರುತ್ತಾರೆ. ಆ ನಂಬಿಕೆಗಳೇ ಅಂತಿಮ ಸತ್ಯ ಎಂಬಂತೆ ಬೋಧಿಸುತ್ತಾರೆ ಕೂಡ! ಮೊದಲು ಇಂತಹ ಪೂರ್ವಗ್ರಹಗಳಿಂದ ಶಿಕ್ಷಕರು ಹೊರಬರಬೇಕಾಗುತ್ತದೆ.

ಜ್ಞಾನ ಎಂಬುದು ಬರೀ ಹೊರಗಿನಿಂದ ತುಂಬಿಕೊಳ್ಳುವ ವಸ್ತುಪ್ರಪಂಚ ಎಂಬ ನಂಬಿಕೆ ನಮ್ಮಲ್ಲಿದೆ. ಆದರೆ ಒಳಗಿನ ಪೂರ್ವಗ್ರಹಗಳನ್ನು ವಿಸರ್ಜಿಸದೆ ನಿಜವಾದ ಅರಿವಿನ ಲೋಕ ತೆರೆದುಕೊಳ್ಳುವುದಿಲ್ಲ ಎಂಬುದನ್ನು ಬುದ್ಧಗುರು ಬಹಳ ಹಿಂದೆಯೇ ಹೇಳಿದ್ದಾನೆ. ಪತ್ನಿ ಯಶೋಧರೆ ಸನ್ಯಾಸತ್ವವನ್ನು ಸ್ವೀಕರಿಸಿದ ತರುವಾಯ ಬುದ್ಧನಿಗೆ ಕೇಳಿದ ಪ್ರಶ್ನೆ, ‘ಜ್ಞಾನಾನ್ವೇಷಣೆ ಎಂದರೇನು? ಹೊರಗಿರುವುದನ್ನು ಒಳಗೆ ತುಂಬಿಕೊಳ್ಳುವುದೋ?’ ಇದಕ್ಕೆ ಬುದ್ಧನ ಉತ್ತರ ತುಂಬಾ ವಿಭಿನ್ನವಾದುದು. ‘ಜ್ಞಾನಾನ್ವೇಷಣೆ ಎಂಬುದು ಹೊರಗಿನ ವಸ್ತುವಿಚಾರಗಳನ್ನು ಒಳಗೆ ತುಂಬಿಕೊಳ್ಳುವುದಲ್ಲ, ಬದಲಿಗೆ ಈಗಾಗಲೇ ತುಂಬಿಕೊಂಡಿರುವುದನ್ನು ಹೊರಗೆ ಹಾಕುವುದು’ ಎನ್ನುತ್ತಾನೆ. ಜಾತಿ- ಮತ, ವಾದ- ಸಿದ್ಧಾಂತದಂತಹ ಅಪಥ್ಯಗಳನ್ನು ವಿಸರ್ಜಿಸದೆಯೇ ಲೋಕಸತ್ಯಗಳನ್ನು ಕಾಣಲಾರೆವು ಎಂಬುದು ಬುದ್ಧನ ವಿವರಣೆಯಾಗಿತ್ತು. ಸ್ಥಾವರ ನಂಬಿಕೆಗಳಲ್ಲಿ ಬಂದಿಯಾಗಿರುವ ಭಾರತೀಯ ಸಮಾಜ ಸೃಷ್ಟಿಸಿದ ಈ ನೆಲದ ಶಿಕ್ಷಕ, ತಾನು ಮೊದಲು ವಿಜ್ಞಾನದ ಬೆಳಕಲ್ಲಿ ಬದಲಾಗಬೇಕು. ತರುವಾಯವೇ ಆ ಬೆಳಕಲ್ಲಿ ವಿದ್ಯಾರ್ಥಿಗಳನ್ನು ಮುನ್ನಡೆಸಲು ಸಾಧ್ಯ.

ಕುವೆಂಪು ಅವರು ಶಿವಮೊಗ್ಗದ ತಮ್ಮ ಸಂಬಂಧಿಯೊಬ್ಬರ ಮನೆಯಲ್ಲಿದ್ದಾಗ ಅವರನ್ನು ಕಾಣಲು ಒಬ್ಬ ಕೃಷಿ ವಿಜ್ಞಾನಿ ಬಂದರು. ಅವರ ನಡುವೆ ದೀರ್ಘ ಮಾತುಕತೆ ನಡೆದು ಊಟದ ಹೊತ್ತಾಯಿತು. ವಿಜ್ಞಾನಿ ಮನೆಗೆ ಹೊರಟು ನಿಂತಾಗ ‘ಈಗ ಊಟದ ಸಮಯವಾಗಿದೆ, ನಮ್ಮೊಂದಿಗೆ ಊಟ ಮಾಡಿಯೇ ಹೊರಡಿ’ ಎಂದರು ಕುವೆಂಪು. ಅದಕ್ಕೆ ಅವರು ಒಪ್ಪದೇ ಹೊರಟು ನಿಂತಾಗ ಕುವೆಂಪು ಅವಸರಕ್ಕೆ ಕಾರಣ ಕೇಳಿದರು. ಆ ಕೃಷಿ ವಿಜ್ಞಾನಿ ‘ಈಗ ಸ್ವಲ್ಪ ಹೊತ್ತಿನಲ್ಲಿ ಗ್ರಹಣ ಶುರುವಾಗುತ್ತದೆ. ನಾನು ಬೇಗ ಮನೆ ಸೇರಿಕೊಳ್ಳಬೇಕು’ ಎಂದದ್ದೇ ತಡ ಕುವೆಂಪು ಕೆರಳಿ ‘ನೀವು ವಿಜ್ಞಾನಿಗಳಲ್ಲ, ಅಜ್ಞಾನವನ್ನು ಹೊತ್ತ ಕತ್ತೆಗಳು’ ಎಂದದ್ದನ್ನು ಸಾಹಿತಿ ಪ್ರಭುಶಂಕರ ಪುಸ್ತಕವೊಂದರಲ್ಲಿ ದಾಖಲಿಸಿದ್ದಾರೆ. ಈ ಪ್ರಕರಣ ವಿಜ್ಞಾನಿಗಳಿಗೆ ಮಾತ್ರವಲ್ಲ ವೈಜ್ಞಾನಿಕ ಮನೋಧರ್ಮವನ್ನು ಬಿತ್ತಲು ಹೊರಡುವ ಎಲ್ಲರಿಗೂ ಮಾರ್ಗದರ್ಶಿಯಾಗಬೇಕು.

ಭಯದ ಮನಃಸ್ಥಿತಿಯೇ ಮೂಢನಂಬಿಕೆಗಳಿಗೆ ಮುಖ್ಯ ಕಾರಣ ಎನ್ನುತ್ತದೆ ಮನಃಶಾಸ್ತ್ರ. ಇಂತಹ ಭಯವನ್ನು ಹೋಗಲಾಡಿಸಿ ಆತ್ಮವಿಶ್ವಾಸವನ್ನು ಬೆಳೆಸುವ ಶಿಕ್ಷಣ ಇಂದಿನ ಅವಶ್ಯಕತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.