ADVERTISEMENT

ಸಂಗತ: ವರ್ಷಕ್ಕೊಮ್ಮೆ ವಕ್ಕರಿಸುವ ಒಲ್ಲದ ಅತಿಥಿ

ಪದೇಪದೇ ಬಡಜನರ ಜೀವಹಿಂಡುತ್ತಿರುವ ಮಂಗನ ಕಾಯಿಲೆಯನ್ನು ಮೀರುವ ಶಾಶ್ವತ ಪರಿಹಾರದ ನಿರೀಕ್ಷೆಯಲ್ಲಿದೆ ಮಲೆನಾಡು

ಸತೀಶ್ ಜಿ.ಕೆ. ತೀರ್ಥಹಳ್ಳಿ
Published 24 ಮಾರ್ಚ್ 2022, 19:32 IST
Last Updated 24 ಮಾರ್ಚ್ 2022, 19:32 IST
   

ಮಲೆನಾಡೆಂದರೆ ಹಾಗೇ, ಅದು ಕಾಡಿನೊಟ್ಟಿಗೆ ಗಾಢವಾಗಿ ಕೂಡಿಬಾಳುವ ವಿಶಿಷ್ಟ ಬಗೆ. ಆ ಸಾಂಗತ್ಯದಲ್ಲಿ ಖುಷಿ-ನೆಮ್ಮದಿ, ಬೆರಗಿನೊಟ್ಟಿಗೆ ಕಿರಿಕಿರಿ-ತಾಪತ್ರಯಗಳೂ ಉಂಟು. ಮಳೆಗಾಲ ಮುಗಿದು ಮಾಗಿಚಳಿ ಮೈಕೊರೆವ ಹೊತ್ತಿಗೆ ಕಾಡಂಚಿನ ನಿವಾಸಿಗಳಿಗೆ ಉಣುಗುಗಳು ಕಚ್ಚಿದ ಉರಿ-ತುರಿಕೆ, ಮತ್ತೆಮತ್ತೆ ಮರುಕಳಿಸುವ ವಿಲಕ್ಷಣ ಕಾಯಿಲೆಯೊಂದರ ಭೀತಿ-ಕನವರಿಕೆ.

ಅದು, 1956ನೇ ಇಸವಿ ಮಾರ್ಚ್‌ ತಿಂಗಳು, ಶಿವಮೊಗ್ಗದ ಸೊರಬ ತಾಲ್ಲೂಕು ಕ್ಯಾಸನೂರಿನ ಕಾಡಲ್ಲಿ ಸತ್ತುಬಿದ್ದ ಮಂಗಗಳ ಬಗ್ಗೆ ಅಧ್ಯಯನ ಶುರುವಾಯಿತು. ನೋಡನೋಡುತ್ತಲೇ ಕಾಡಂಚಿನ ಜನರಲ್ಲಿ ಚಳಿಜ್ವರ, ಮೈಕೈಬೇನೆ, ನರಳಿಕೆ... ಅಷ್ಟರಲ್ಲಾಗಲೇ ರೋಗಿಗಳಿಂದ ಆಸ್ಪತ್ರೆಗಳು ಭರ್ತಿಯಾಗತೊಡಗಿದ್ದವು. ಕಾಡಿನ ಸಂಪರ್ಕದಲ್ಲಿದ್ದ ಹಳ್ಳಿಗಳ ಬಡ ರೈತರು, ಕೂಲಿಕಾರರ ಮೈಕೈಗಳಿಗೆ ಅಂಟಿಕೊಂಡಿದ್ದ ಪರಾವಲಂಬಿ ಉಣುಗುಗಳು ತಣ್ಣಗೆ ರಕ್ತಹೀರುತ್ತಲೇ ಇದ್ದವು. ಪ್ರಯೋಗಾಲಯದ ಮಾದರಿ ಪರೀಕ್ಷಾ ವರದಿಯಲ್ಲಿ ಕಾಣದ ಕಾಯಿಲೆಯೊಂದು ಪತ್ತೆಯಾಯಿತು. ಅಲ್ಲಿಯ ಹಳ್ಳಿಗರ ರೋಗಕ್ಕೂ ಮಂಗಗಳ ಸಾವಿಗೂ ಉಣುಗುಗಳ ಬದುಕಿಗೂ ಸಂಬಂಧವಿತ್ತು!

ಮಂಗಗಳ ಸಾವಿಗೆ ಕಾರಣವಾಗುವ ವೈರಾಣುಗಳು ಉಣುಗುಗಳೆಂಬ ವಾಹಕಗಳ ಮೂಲಕ ಮನುಷ್ಯರಿಗೆ ರೋಗ ಹರಡುತ್ತಿದ್ದವು. ಆಗಲೇ ಆ ವ್ಯಾಧಿಯನ್ನು ‘ಕ್ಯಾಸನೂರು ಕಾಡಿನ ಕಾಯಿಲೆ’ (ಕೆಎಫ್‌ಡಿ) ಅಥವಾ ‘ಮಂಗನಕಾಯಿಲೆ’ ಅಂತಲೂ, ವೈರಸ್‍ ಅನ್ನು ‘ಕೆಎಫ್‌ಡಿ ವೈರಸ್’ ಅಂತಲೂ ನಾಮಕರಣ ಮಾಡಲಾಯಿತು. ಮಂಗನ ಕಾಯಿಲೆ ಸಾಮಾನ್ಯವಾಗಿ ಉಲ್ಬಣಿಸುವುದು ಡಿಸೆಂಬರ್‌ನಿಂದ ಮೇ ತಿಂಗಳವರೆಗೆ. ಸೈಬೀರಿಯಾದಿಂದ ಬಂದ ವಲಸೆ ಹಕ್ಕಿಗಳು ರೋಗಾಣುಗಳನ್ನು ಇಲ್ಲಿಗೆ ತಂದಿರಬಹುದೆಂಬ ಸಂಶಯವಿದೆ. ರೋಗವಾಹಕಗಳಾದ ಸೋಂಕಿತ ಉಣ್ಣೆಗಳು ಮನುಷ್ಯರಿಗೆ ರೋಗ ಹರಡುತ್ತವೆ. ಹಾಗೆಂದು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಕಾಡಿನಲ್ಲಿ ಮಂಗಗಳು ಸಾಯುವುದೇ ಈ ಕಾಯಿಲೆಯ ಮೊದಲ ಮುನ್ಸೂಚನೆ.

ADVERTISEMENT

ಆರಂಭದಲ್ಲಿ 100 ಚದರ ಕಿ.ಮೀ ವ್ಯಾಪ್ತಿಯೊಳಗಿದ್ದ ಮಂಗನ ಕಾಯಿಲೆಯು ಕಾಳ್ಗಿಚ್ಚಿನಂತೆ ಪಕ್ಕದ ಸಾಗರ, ಹೊಸನಗರ, ತೀರ್ಥಹಳ್ಳಿ ಭಾಗಗಳ ಸುಮಾರು 800 ಚದರ ಕಿ.ಮೀ ವ್ಯಾಪ್ತಿಯಲ್ಲಿ ಬಹುಬೇಗ ವ್ಯಾಪಿಸಿಬಿಟ್ಟಿತ್ತು. ನಂತರದಲ್ಲಿ ನೆರೆಯ ಜಿಲ್ಲೆಗಳಾದ ಉತ್ತರ ಕನ್ನಡ, ಚಿಕ್ಕಮಗಳೂರು ಜೊತೆಗೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ತನ್ನ ಇರವನ್ನು ತೋರ್ಪಡಿಸಿತ್ತು. ಕ್ರಮೇಣ ಮಲೆನಾಡಿನಲ್ಲಿ ಕಾಡು ಕಡಿದಂತೆಲ್ಲಾ ಮಂಗಗಳು ವಲಸೆ ಹೊರಟ ಕಾರಣಕ್ಕೆ ಕಾಯಿಲೆಯು ಪಶ್ಚಿಮಘಟ್ಟದುದ್ದಕ್ಕೂ ವಿಸ್ತಾರಗೊಳ್ಳುತ್ತಾ ಹೋಯಿತು. 2014ರಲ್ಲಿ ಚಾಮರಾಜನಗರ ಜಿಲ್ಲೆ ಮಾತ್ರವಲ್ಲದೆ ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳ ಕೆಲ ಪ್ರದೇಶಗಳಲ್ಲೂ ಕಾಲುಚಾಚಿದೆ. ಶೇ 3-10ರಷ್ಟು ಮಾರಣಾಂತಿಕ ಎಂಬುದು ದೃಢಪಟ್ಟಿದೆ. ಇಲಾಖೆಯ ಮಾಹಿತಿಯಂತೆ ಪ್ರತಿವರ್ಷವೂ ಮಲೆನಾಡಿನ ಸಾವಿರಾರು ಜನರು ರೋಗಪೀಡಿತರಾಗುತ್ತಿದ್ದಾರೆ.

ಮಲೆನಾಡಿನಲ್ಲಿ ಈಗಲೂ ಮಂಗನಕಾಯಿಲೆ ಹೆಸರೆತ್ತಿದರೆ ಹಳ್ಳಿಜನ ಬೆಚ್ಚಿಬೀಳುತ್ತಾರೆ. ಕಳೆದ ಬೇಸಿಗೆಯಲ್ಲಿ ಅದು ಇಡಿಯ ಊರಿಗೂರನ್ನೇ ಕೊಡವಿಹಾಕಿದೆ. ನೂರಾರು ಬಡಕುಟುಂಬಗಳನ್ನು ದೈಹಿಕವಾಗಿ, ಆರ್ಥಿಕವಾಗಿ ಹಿಂಡಿಬಿಟ್ಟಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಕಳೆದೆರಡು ವರ್ಷಗಳಿಂದ ಇಪ್ಪತ್ತಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಮನೆಮಂದಿಯೆಲ್ಲ ತಿಂಗಳಿಡೀ ಹಾಸಿಗೆಯಲ್ಲಿ ನರಳಿದ್ದಾರೆ. ಮತ್ತೀಗ ಬಿಸಿಲಝಳ ಹೆಚ್ಚುತ್ತಿದ್ದಂತೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ರೋಗಲಕ್ಷಣಗಳು ಜನರನ್ನು ಜೀವಭಯದಲ್ಲಿ ನಿದ್ದೆಗೆಡಿಸುತ್ತಿವೆ.

ಈಗಲೂ ಮಂಗನ ಕಾಯಿಲೆಗೆ ಮುಂಜಾಗ್ರತಾ ಲಸಿಕೆಯ ಹೊರತು ನಿರ್ದಿಷ್ಟ ಔಷಧಗಳಿಲ್ಲ. ಈ ರೋಗದ ತೀವ್ರತೆಯು ರೋಗಿಯ ಪ್ರತಿರೋಧಶಕ್ತಿಯ ಮೇಲೆ ಅವಲಂಬಿತ. ಕಾಯಿಲೆಯು ಸಾಂಕ್ರಾಮಿಕವಾದ್ದರಿಂದ ಸೋಂಕು ಹರಡುವಿಕೆಯನ್ನು ಊಹಿಸುವುದೂ ಅಸಾಧ್ಯ. ರೋಗ ಬಂದ ಮೇಲೆ ಪಡೆವ ಲಸಿಕೆಗಳು ಪರಿಣಾಮಕಾರಿಯಾಗದ ಮತ್ತು ಮೊದಲೇ ಲಸಿಕೆ ಪಡೆದ ಹಲವರಲ್ಲಿ ರೋಗಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ವೈರಾಣು ಹಿನ್ನೆಲೆ, ರೋಗಪ್ರಸರಣದ ಬಗೆಗೆ ಹೆಚ್ಚಿನ ಅಧ್ಯಯನ, ಸಂಶೋಧನೆಗಳ ಅಗತ್ಯವಿದೆ. ದೇಶವಿದೇಶಗಳ ಸಂಶೋಧನಾಲಯಗಳು ಈ ಬಗ್ಗೆ ತೊಡಗಿಸಿಕೊಂಡಿದ್ದು ಹಿಂದೆ ವರದಿಯಾಗಿತ್ತಾದರೂ ಫಲಿತಾಂಶ ಹೊರಬರಲಿಲ್ಲ. ಒಟ್ಟಾರೆ ಅರ್ಧಶತಮಾನ ಕಳೆದರೂ ವರ್ಷಕ್ಕೊಮ್ಮೆ ವಕ್ಕರಿಸುವ ಗಂಭೀರ ಕಾಯಿಲೆಗೊಂದು ಮದ್ದು ಅರೆಯಲು ಈವರೆಗೂ ಸಾಧ್ಯವಾಗಿಲ್ಲ ಅನ್ನುವುದೇ ವಿಪರ್ಯಾಸ!

ಕಾಯಿಲೆ ಉಲ್ಬಣಿಸುವ ಸಮಯಕ್ಕೆ ಹೆಲಿಕಾಪ್ಟರ್ ಮೂಲಕ ಔಷಧವನ್ನು ಇಡೀ ಕಾಡಿಗೆ ಸಿಂಪಡಿಸಬೇಕು ಅನ್ನುವುದು ಸ್ಥಳೀಯರ ಒತ್ತಾಯ. ಹಾಗಿದ್ದೂ ಸತ್ತುಬೀಳುವ ಮಂಗಗಳನ್ನು ಪತ್ತೆ ಮಾಡುವುದು, ಆರೋಗ್ಯ ಇಲಾಖೆಯಿಂದ ಹಳ್ಳಿಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸುವ ಹಾಗೂ ಲಭ್ಯವಿರುವ ರೋಗನಿರೋಧಕ ಲಸಿಕೆ, ಬೂಸ್ಟರ್‌ಡೋಸ್ ನೀಡುವ ಕಾರ್ಯಗಳು ಎಂದಿನಂತೆ ನಡೆಯುತ್ತಿವೆ. ಚಿಕಿತ್ಸೆಗಿಂತ ತಡೆಗಟ್ಟುವುದೇ ಮೇಲು ಎಂಬ ಮಾತಿನಂತೆ, ನಿರಂತರವಾಗಿ ಮುಂಜಾಗ್ರತಾ ಲಸಿಕೆ ಪಡೆದುಕೊಳ್ಳಬೇಕಾದ ಅನಿವಾರ್ಯ, ಹೊಣೆಗಾರಿಕೆಯನ್ನು ಮಲೆನಾಡಿಗರು ಅರಿಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.