ADVERTISEMENT

ಸಂಗತ| ದತ್ತಾಂಶ ಗೋಪ್ಯತೆಗೆ ನಮ್ಮದೇ ಕೀಲಿಕೈ

ನಾವೆಲ್ಲ ನಮ್ಮ ದತ್ತಾಂಶವನ್ನು ಯಾರೊಂದಿಗೆ, ಯಾವಾಗ ಮತ್ತು ಎಲ್ಲಿ ಹಂಚಿಕೊಳ್ಳುತ್ತಿದ್ದೇವೆ ಎಂಬುದರ ಬಗ್ಗೆ ಜಾಗರೂಕರಾಗಿರಬೇಕು

ಶ್ರೀಗುರು
Published 27 ಜನವರಿ 2023, 23:59 IST
Last Updated 27 ಜನವರಿ 2023, 23:59 IST
   

‘ನನ್ನ ಫೇಸ್‍ಬುಕ್ ಅಕೌಂಟ್ ಹ್ಯಾಕ್ ಆಗಿದೆ’, ‘ಇನ್‌ಸ್ಟಾಗ್ರಾಮ್ ಅಕೌಂಟನ್ನು ಮಿಸ್‌ಯೂಸ್ ಮಾಡುತ್ತಿದ್ದಾರೆ’, ‘ನನಗೆ ಆರೋಗ್ಯ ಸರಿಯಿಲ್ಲ ಎಂಬ ಹೇಳಿಕೆ ನೀಡಿ ನನ್ನ ಹೆಸರಿನಲ್ಲಿ ಹಣ ಕೇಳುವ ಮೆಸೇಜ್ ನಿಮಗೂ ಬಂದಿರಬಹುದು. ಅದಕ್ಕೆ ಮಹತ್ವ ಕೊಡಬೇಡಿ’, ‘ನಾನು ತುಂಬಾ ಕಾಳಜಿಯಿಂದ ರಚಿಸಿ ಸ್ಟೋರ್ ಮಾಡಿಟ್ಟುಕೊಂಡಿದ್ದ ನೋಟ್ಸ್‌ನ ಕಾಪಿ ಇಂಟರ್‌ನೆಟ್‍ನಲ್ಲಿ ಲೀಕ್ ಆಗಿದೆ. ಅದನ್ನು ನಾನು ಪೋಸ್ಟ್ ಮಾಡಿಲ್ಲ, ಬೇರೆ ಯಾರೋ ಕಿಡಿಗೇಡಿಗಳು ನನ್ನ ಕ್ಲೌಡ್ ಅಕೌಂಟ್‍ಗೆ ನುಗ್ಗಿ ಅಪಹರಿಸಿದ್ದಾರೆ’ ಎಂಬಂಥ ಸಂದೇಶಗಳು ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ.

ನಾವು ನಮ್ಮ ವ್ಯಾಪಾರ, ಬ್ಯಾಂಕಿಂಗ್, ಅರ್ಜಿ ಸಲ್ಲಿಕೆ, ಡಾಕ್ಯುಮೆಂಟ್ ಟ್ರಾನ್ಸ್‌ಫರ್, ತೆರಿಗೆ ಪಾವತಿ, ಸಾಲ ಮರುಪಾವತಿ ಮಾಡುವಾಗ ನಮಗೆ ಗೊತ್ತೇ ಇರದ ಅನೇಕರಿಗೆ ನಮ್ಮ ಬಗೆಗಿನ ಮಾಹಿತಿ ನೀಡುತ್ತಿರುತ್ತೇವೆ. ಮೊಬೈಲ್‍ಗಳಲ್ಲಿ ಅಡಕಗೊಂಡಿರುವ ಇಲ್ಲವೇ ಡೌನ್‍ಲೋಡ್ ಮಾಡಿಕೊಂಡಿರುವ ‘ಥರ್ಡ್‌ಪಾರ್ಟಿ ಆ್ಯಪ್’ಗಳ ಮುಖಾಂತರ ನೂರಾರು ಸಲ ಹಣ ವರ್ಗಾಯಿಸುವುದು, ಪಡೆಯುವುದು ಮಾಡುತ್ತಿರುತ್ತೇವೆ. ಕೆಲಸ ಬೇಗ ಆಗಲಿ ಎಂಬ ಕಾರಣಕ್ಕಾಗಿ, ತೆರೆಯ ಮೇಲೆ ಬರುವ ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಸಂಖ್ಯೆ, ಸಂಕೇತಗಳನ್ನು ತುಂಬುತ್ತಾ ಕೆಲಸ ಮುಗಿಸಿ ನಿರುಮ್ಮಳರಾಗುತ್ತೇವೆ. ಆ ಸುಖ ಕ್ಷಣಿಕ ಅಷ್ಟೇ. ಮರುಕ್ಷಣವೇ ನಮ್ಮ ಮೇಲ್ ಬಾಕ್ಸ್‌ಗೆ ಇಲ್ಲವೇ ಮೆಸೇಜ್ ಬಾಕ್ಸ್‌ಗೆ ‘ನಿಮ್ಮ ಖಾತೆ ಹ್ಯಾಕ್ ಆಗಿದೆ’ ಅಂತಲೋ, ‘ನಿಮ್ಮ ಟ್ರಾನ್ಸಾಕ್ಷನ್ ಫೇಲ್ ಆಗಿದೆ’ ಎಂದೋ ಸಂದೇಶ ಬರುತ್ತದೆ. ಗಾಬರಿಗೊಂಡು ತುರ್ತಾಗಿ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಲು ಯತ್ನಿಸುತ್ತೇವೆ. ಅಲ್ಲಿ ನಮ್ಮ ಪ್ರವೇಶ ಬ್ಲಾಕ್ ಆಗಿರುತ್ತದೆ. ಲಾಗಿನ್ ಫೇಲ್ಡ್ ಎಂಬ ಪುನರಾವರ್ತಿತ ಸಂದೇಶ ಕಣ್ಣಿಗೆ ರಾಚತೊಡಗುತ್ತದೆ. ಹಲವು ಬಾರಿ ಮಿಂಚಿನ ವೇಗದಲ್ಲಿ ನೆರವು ನೀಡಿದ್ದ ತಂತ್ರಜ್ಞಾನ ನಮ್ಮ ನಿಯಂತ್ರಣ ತಪ್ಪಿ ಬೇರೆಯವರ ಕೈಗೊಂಬೆ ಆಗಿಬಿಟ್ಟಿರುತ್ತದೆ.

ಹೊಸ ಶತಮಾನದ ಚಿಂತಕರ ಪ್ರಕಾರ, ಇತ್ತೀಚಿನ ದಿನಗಳ ಅತಿ ದೊಡ್ಡ ಆಸ್ತಿ ಎಂದರೆ ಮಾಹಿತಿ ಮತ್ತು ಅದರಿಂದ ಹೆಕ್ಕಿ ತೆಗೆದ ದತ್ತಾಂಶ. ಜಗತ್ತಿನ 466 ಕೋಟಿ ಜನ, ಕ್ರಿಯಾತ್ಮಕವಾಗಿ ಇಂಟರ್‌ನೆಟ್ ಬಳಸುತ್ತಾರೆ. ಜಗತ್ತಿನ ಪ್ರತಿಯೊಬ್ಬ ಮನುಷ್ಯ, ವಸ್ತು, ಜೀವಿ, ಕ್ರಿಯೆ- ಪ್ರಕ್ರಿಯೆಗಳ ಬಗ್ಗೆ ಎಂದೆಂದೂ ಮುಗಿಯದಷ್ಟು ಅಗಾಧವಾದ ದತ್ತಾಂಶ ನಮ್ಮ ನಡುವೆ ಇದೆ. ಜನರ ವೈಯಕ್ತಿಕ ವಿವರಗಳು ಬ್ಯಾಂಕ್, ಉತ್ಪನ್ನ ಮಾರಾಟಗಾರರು, ರಾಜಕೀಯ ಪಕ್ಷ, ಕಿರಾಣಿ ಅಂಗಡಿ, ಮಾಲ್, ಸಾಲ ನೀಡುವ ಏಜೆನ್ಸಿ, ರಿಯಲ್ ಎಸ್ಟೇಟ್, ಜಾಹೀರಾತು ಉದ್ಯಮ, ಸರ್ಕಾರ- ಸರ್ಕಾರೇತರ ಸಂಸ್ಥೆಗಳ ಬಳಿ ವ್ಯವಸ್ಥಿತವಾಗಿ ಶೇಖರಗೊಂಡಿರುತ್ತವೆ. ಅದೇನೂ ನಿಂತ ನೀರಲ್ಲ, ನಿರಂತರವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುತ್ತ, ಸಂಸ್ಕರಣಗೊಳ್ಳುತ್ತ, ಬಲಗೊಳ್ಳುತ್ತ ಬಳಕೆಗೊಳ್ಳುತ್ತದೆ. ನಾವು ಬಳಸುವ ಮೊಬೈಲು, ಲ್ಯಾಪ್‍ಟಾಪ್, ಕ್ಯಾಮೆರಾ, ಥಿಂಕ್‌ಪ್ಯಾಡ್‍ಗಳೆಲ್ಲ ಒಂದಲ್ಲ ಒಂದು ನೆಟ್‍ವರ್ಕ್‌ನಲ್ಲಿ ಇದ್ದುಕೊಂಡು ಕೆಲಸ ಮಾಡುವಾಗ ನಮ್ಮ ದತ್ತಾಂಶವೆಲ್ಲ ಒಂದರಿಂದ ಇನ್ನೊಂದಕ್ಕೆ ವರ್ಗಾವಣೆಗೊಳ್ಳುತ್ತಲೇ ಇರುತ್ತವೆ.

ADVERTISEMENT

ಅವನ್ನು ಗೋಪ್ಯವಾಗಿ ಇಡುವುದು ಹೇಗೆ ಎಂಬುದನ್ನು ಅರಿಯಲು ‘ಡೇಟಾ ಪ್ರೈವೆಸಿ ಡೇ’ (ಜ. 28) ಆಚರಿಸುತ್ತೇವೆ. ದತ್ತಾಂಶ ರಕ್ಷಣೆ ಮತ್ತು ಗೋಪ್ಯತೆ ಎರಡೂ ಅತ್ಯಂತ ಮುಖ್ಯ. ಮನೆಯ ಕಿಟಕಿಗೆ ಕಬ್ಬಿಣದ ಸರಳು ಅಳವಡಿಸಿದರೆ ಅದು ರಕ್ಷಣೆಗೆ. ಅದೇ ಕಿಟಕಿಗೆ ಕರ್ಟನ್ ಹಾಕಿ ಒಳಗಿನ ವ್ಯವಸ್ಥೆ ಕಾಣದಂತೆ ಮಾಡುವುದು ಗೋಪ್ಯತೆ ಎನ್ನಿಸುತ್ತದೆ. ದತ್ತಾಂಶದ ವಿಷಯದಲ್ಲೂ ನಾವು ಇದೇ ಕ್ರಮ ಅನುಸರಿಸಬೇಕು. ನಮ್ಮ ಯೂಸರ್ ಐಡಿ, ಪಾಸ್‍ವರ್ಡ್, ಅಕೌಂಟ್ ನಂಬರ್, ಲಾಗಿನ್ ಐಡಿ, ಪ್ರೊಫೈಲ್ ಪಾಸ್‍ವರ್ಡ್, ಎಟಿಎಂ ಪಿನ್, ಪ್ಯಾನ್ ನಂಬರ್ ಇವನ್ನೆಲ್ಲ ಒಂದು ಕಡೆ ಸ್ಟೋರ್ ಮಾಡಿರುತ್ತೇವೆ ಇಲ್ಲವೆ ಬರೆದಿಟ್ಟುಕೊಂಡಿರುತ್ತೇವೆ. ಇವು ಬೇರೆಯವರ ಪಾಲಾಗದಂತೆ ತೀವ್ರ ನಿಗಾ ವಹಿಸಬೇಕು.

ಡಿಜಿಟಲ್ ತಂತ್ರಜ್ಞಾನವನ್ನು ಹೆಚ್ಚು ಅವಲಂಬಿಸುತ್ತಿರುವ ನಾವೆಲ್ಲ ನಮ್ಮ ದತ್ತಾಂಶವನ್ನು ಯಾರೊಂದಿಗೆ, ಯಾವಾಗ ಮತ್ತು ಎಲ್ಲಿ ಹಂಚಿಕೊಳ್ಳುತ್ತಿದ್ದೇವೆ ಎಂಬುದರ ಬಗ್ಗೆ ಜಾಗರೂಕರಾಗಿರಬೇಕು. ಸಂದೇಶಗಳನ್ನು ಗೂಢ ಲಿಪಿಯಲ್ಲಿ (ಎನ್‍ಕ್ರಿಪ್ಟ್) ಇಡಬೇಕು. ನಾವು ಕಳಿಸುವ ಪ್ರತೀ ಸಂದೇಶವೂ ಸಂಭಾಷಣೆಯೂ ಕೋಡ್ ರೂಪದಲ್ಲಿರುತ್ತದೆ. ಎನ್‍ಕ್ರಿಪ್ಟ್ ಆಗಿಯೇ ಮುಂದೆ ಸಾಗುತ್ತದೆ.

ಬಳಸುವ ಲ್ಯಾಪ್‍ಟಾಪ್, ಕಂಪ್ಯೂಟರ್‌ಗಳಿಗೆ ಆ್ಯಂಟಿವೈರಸ್ ಹಾಕಿಸುವುದು, ಸಾರ್ವಜನಿಕ ನೆಟ್‌ವರ್ಕ್‌ಗಳಲ್ಲಿ ಆದಷ್ಟು ಕಡಿಮೆ ವ್ಯವಹರಿಸುವುದು, ಅನುಮಾನಾಸ್ಪದ ಮೇಲ್‍ಗಳಿಗೆ ಉತ್ತರಿಸದಿರುವುದು, ವೈ- ಫೈ ರೌಟರ್‌ಗಳಿಗೆ ಸಂಕೀರ್ಣ ಪಾಸ್‍ವರ್ಡ್ ಇಡುವುದರಿಂದ ದತ್ತಾಂಶ ಕಳ್ಳತನವನ್ನು ತಕ್ಕಮಟ್ಟಿಗೆ ತಡೆಯಬಹುದು. ಎನ್‍ಕ್ರಿಪ್ಟೆಡ್ ಸಂದೇಶಗಳನ್ನು ಕದಿಯಬಹುದು, ಆದರೆ ಬಳಸುವುದು ಸುಲಭವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.