ಅನ್ನನಾಳದ ಕ್ಯಾನ್ಸರ್‌ಗಾಗಿ ಕೀಮೊ ಚಿಕಿತ್ಸೆಯಲ್ಲಿದ್ದ ಯುವಕನೊಬ್ಬ ಮಾತಿಗೆ ಸಿಕ್ಕಿದ್ದನು. ಇಷ್ಟು ಸಣ್ಣ ವಯಸ್ಸಿಗೇ ಕ್ಯಾನ್ಸರ್ ಯಾಕೆ ಬಂತು? ಅವನಿಗೆ ಬೀಡಿ, ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳನ್ನು ತಿನ್ನುವ ಚಟವಿರಲಿಲ್ಲ. ಕೆದಕುತ್ತಾ ಹೋದಾಗ ಹೊರಬಿದ್ದ ಮಾಹಿತಿ ಆಘಾತಕಾರಿಯಾಗಿತ್ತು!
ಆತ ಬಾಳೆ ಬೆಳೆಗಾರ. ‘ಬಾಳೆ ಹೂ ಬಿಟ್ಟ ನಂತರ ಮೂರು ಸಲ ಔಷಧ ಹೊಡೀತೀನಿ. ಇಲ್ಲದಿದ್ದರೆ ಕಾಯಿಗಳು ಮುರುಟಿಕೊಂಡು ಹೋಗ್ತವೆ, ಬೆಳವಣಿಗೆಯೇ ಇರಲ್ಲ. ಔಷಧದ್ದು ಕೆಟ್ಟ ವಾಸನೆ. ಹೊಟ್ಟೆಯೆಲ್ಲಾ ತೊಳ್ಸಿ ವಾಂತಿ ಬಂದ್ಹಾಗೆ ಆಗುತ್ತೆ. ಚರ್ಮಕ್ಕೆ ಹಾರಿದ್ರಂತೂ ವಿಪರೀತ ಉರಿ. ಅದಕ್ಕೇ ಮೂಗು, ಬಾಯಿಗೆಲ್ಲಾ ಬಟ್ಟೆ ಸುತ್ಕಂಡು, ಮೈಕೈ ಸರಿಯಾಗಿ ಮುಚ್ಗಂಡೇ ಔಷಧ ಸಿಂಪಡಿಸೋದು. ಆಮೇಲೆ ಮೂರು ದಿನ ತೋಟದ ಕಡೆ ಹೋಗಲ್ಲ, ಅಷ್ಟು ಘಾಟು ಇರುತ್ತೆ. ಆದರೆ, ಈ ಔಷಧಗಳ ರೇಟು ಕಡಿಮೆ’ ಎನ್ನುತ್ತಾ ತನ್ನ ಕಾರ್ಯವನ್ನು ಉತ್ಸಾಹದಿಂದ ವಿವರಿಸತೊಡಗಿದ್ದ. ‘ಅದು ಯಾವ ಔಷಧ, ಹೆಸರೇನು?’ ಎಂಬ ಪ್ರಶ್ನೆಗೆ ಗೊತ್ತಿಲ್ಲವೆಂಬಂತೆ ತಲೆಯಾಡಿಸಿದ್ದ. ‘ಕೃಷಿ ಅಂಗ್ಡೀಲಿ ಬಾಳೆಗೆ ಹೊಡ್ಯೋದು ಅಂದ್ರೆ ಕೊಡ್ತಾರೆ’ ಎಂದ. ‘ಹೋಗಲಿ, ಯಾವ ಪ್ರಮಾಣದಲ್ಲಿ ಉಪಯೋಗಿಸಬೇಕು ಗೊತ್ತಿದ್ಯಾ?’ ಅಂತ ಕೇಳಿದ್ದಕ್ಕೆ, ‘ಒಂದು ಬಕೆಟ್ ನೀರಿಗೆ ಎಷ್ಟು ಬಾಟ್ಲು ಹಾಕ್ಬೇಕು ಅಂತ ಅಂಗಡಿಯವನೇ ಕರೆಕ್ಟಾಗಿ ಹೇಳ್ತಾನೆ’ ಎಂದಿದ್ದ.
ರೈತನ ಮಾತುಗಳನ್ನು ಕೇಳುತ್ತಿದ್ದಂತೆ ನನ್ನ ಆತಂಕ ಏರತೊಡಗಿತ್ತು! ಬಳಸುವವನಿಗೆ ಪೀಡೆನಾಶಕದ ಹೆಸರಾಗಲಿ, ಹೊಡೆಯಬೇಕಾದ ಸರಿಯಾದ ಪ್ರಮಾಣವಾಗಲಿ ಗೊತ್ತಿಲ್ಲ. ಅಂಗಡಿಯೋನು ಕೊಟ್ಟಿದ್ದೇ ಔಷಧ, ಅವನು ಹೇಳಿದ್ದೇ ವೇದವಾಕ್ಯ! ಈ ವಿಷಕ್ಕೆ ಪದೇ ಪದೇ ತೆರೆದುಕೊಂಡಿದ್ದೇ ಈತನ ಕಾಯಿಲೆಗೆ ಕಾರಣವಿರಬಹುದಾ? ಸಾಧ್ಯತೆಯಂತೂ ಇದ್ದೇ ಇದೆ. ಇನ್ನು ಕೀಟನಾಶಕದ ಮಟ್ಟ ಹೆಚ್ಚಿರುವ ಈ ಬಾಳೆಹಣ್ಣನ್ನು ನಾವು ತಿನ್ನುವುದು ಸುರಕ್ಷಿತವಾ? ಖಂಡಿತವಾಗಿಯೂ ಇಲ್ಲ.
ಇದು ಬಾಳೆಹಣ್ಣಿನ ಕಥೆಯಷ್ಟೇ ಅಲ್ಲ. ನಾವು ಪ್ರತಿನಿತ್ಯ ಉಪಯೋಗಿಸುವ ಬಹುತೇಕ ಹಣ್ಣು, ತರಕಾರಿ, ದವಸ–ಧಾನ್ಯಗಳ ಹಣೆಬರಹವೂ ಇದೇನೆ. ಮಣ್ಣಿನ ಸಾವಯವ ಅಂಶ, ಸತ್ವ ಕಡಿಮೆಯಾದಂತೆ ಬೆಳೆಯ ರೋಗನಿರೋಧಕ ಸಾಮರ್ಥ್ಯ ಕುಸಿಯುತ್ತದೆ. ಪ್ರಕೃತಿ ವೈಪರೀತ್ಯಗಳು, ಹವಾಮಾನ ಬದಲಾವಣೆಯಿಂದಲೂ ಫಸಲಿಗೆ ರೋಗ, ಕೀಟಬಾಧೆಗಳು ಹೆಚ್ಚು. ಉತ್ತಮ ಇಳುವರಿ ಪಡೆಯಬೇಕಿದ್ದರೆ ರಸಗೊಬ್ಬರ, ಕಳೆನಾಶಕ, ಕೀಟನಾಶಕ ಬಳಸುವುದು ಕೃಷಿಕರಿಗೆ ಅನಿವಾರ್ಯ. ಪ್ರಶ್ನೆಯಿರುವುದು, ತಾವು ಬಳಸುತ್ತಿರುವ ಕೀಟನಾಶಕಗಳು, ಅವುಗಳ ವಿಷದ ಘೋರತೆ, ಪರಿಣಾಮಗಳು, ಹಾನಿಯ ಬಗ್ಗೆ ರೈತರಿಗೆ ಅರಿವಿದೆಯೇ ಎನ್ನುವುದು. ನಿಗದಿಪಡಿಸಿದ ಪ್ರಮಾಣವನ್ನು ಮೀರಿದ ಬಳಕೆ ಬೆಳೆಯನ್ನಷ್ಟೇ ಅಲ್ಲ, ಮಣ್ಣನ್ನೂ ವಿಷಮಯಗೊಳಿಸುತ್ತದೆ. ಮಣ್ಣಿನ ಸ್ವಾಸ್ಥ್ಯ ಕಾಪಾಡುವ ಸೂಕ್ಷ್ಮಾಣುಜೀವಿಗಳು, ಎರೆಹುಳುಗಳಿಗೆ ಮಾರಕವಾಗುತ್ತದೆ. ಇವುಗಳ ನಿರಂತರ ಬಳಕೆಯಿಂದ ಕೀಟಗಳು ಆ ವಿಷಕ್ಕೆ ಪ್ರತಿರೋಧ ಬೆಳೆಸಿಕೊಳ್ಳುತ್ತವೆ. ವಿಷ ಮತ್ತೆ ಮತ್ತೆ ಪರಿಸರಕ್ಕೆ ಸೇರುವುದರಿಂದ ಜನ, ಜಾನುವಾರು, ಜಲಚರಗಳ ಮೇಲೂ ಗಂಭೀರ ಪರಿಣಾಮವಾಗುತ್ತದೆ.
ಬಹುತೇಕ ವಿಷದ ರೂಪದಲ್ಲಿರುವ ಪೀಡೆನಾಶಕ ರಾಸಾಯನಿಕಗಳ ಪ್ರಮಾಣ, ಪರಿಣಾಮಗಳ ಬಗ್ಗೆ ಬೆಳೆಗಾರರಿಗೆ ಸರಿಯಾದ ಮಾಹಿತಿ ನೀಡುವ, ಮಾರ್ಗದರ್ಶನ ಮಾಡುವ ಅರ್ಹತೆ, ಪರಿಣತಿ ಮಾರಾಟಗಾರರಿಗೆ ಇದೆಯಾ? ಮಾರಾಟದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯಾ ಎಂದು ನೋಡಿದರೆ ಗಾಬರಿಯಾಗುತ್ತದೆ! ಒಂದು ಬಕೆಟ್, ಒಂದು ಡ್ರಮ್ ನೀರಿಗೆ ಕಾಲು ಬಾಟಲ್ ಹಾಕಿ, ಒಂದು ಬಾಟಲ್ ಸುರಿಯಿರಿ ಎಂದು ರೈತರಿಗೆ ಬೇಕಾಬಿಟ್ಟಿ ಸಲಹೆ ನೀಡಲಾಗುತ್ತಿದೆ. ಇಂತಿಷ್ಟೇ ಪ್ರಮಾಣದಲ್ಲಿ ಬಳಸಬೇಕು, ಜಾಸ್ತಿಯಾದರೆ ಅಪಾಯ ಎಂಬ ಎಚ್ಚರಿಕೆ ನೀಡುವುದಿಲ್ಲ. ಹೆಚ್ಚು ಮಾರಾಟವಾಗಲಿ ಎಂದು ಹಾಕಬೇಕಾದ ಪ್ರಮಾಣವನ್ನು ಹಿಗ್ಗಿಸಿ ಹೇಳುವುದೂ ಉಂಟು. ಎರಡು ಮೂರು ಬಳಸಿದರೆ ಇಳುವರಿ ಉತ್ತಮವಾಗಿರುತ್ತದೆ ಎಂದು ತಪ್ಪು ಮಾಹಿತಿ ನೀಡಿ ವ್ಯವಹಾರ ಹೆಚ್ಚಿಸಿಕೊಳ್ಳುವುದೂ ಉಂಟು. ಇದೆಲ್ಲದರ ಪರಿಣಾಮದಿಂದಲೇ ಇವತ್ತು ತಿನ್ನುವ ಆಹಾರ ವಿಷಮಯವಾಗಿ ನರ ಸಂಬಂಧಿತ ಸಮಸ್ಯೆಗಳು, ಚಯಾಪಚಯ ದೋಷಗಳು, ಹಾರ್ಮೋನ್‌ಗಳ ಅಸಮತೋಲನ, ಬಂಜೆತನ, ಕ್ಯಾನ್ಸರ್‌ನಂತಹ ಪ್ರಕರಣಗಳ ಸಂಖ್ಯೆ ಏರುತ್ತಿರುವುದು.
ಕೃಷಿ, ತೋಟಗಾರಿಕೆ ಇಲಾಖೆಗಳು, ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಶಿಫಾರಸು ಮಾಡಿದ ಕಳೆ, ಕೀಟನಾಶಕಗಳನ್ನು ನಿಗದಿಪಡಿಸಿದ ಪ್ರಮಾಣದಲ್ಲಿ ಮಾತ್ರ ಉಪಯೋಗಿಸುವಂತೆ ಕೃಷಿಕರಲ್ಲಷ್ಟೇ ಅಲ್ಲ, ಮಾರಾಟಗಾರರಲ್ಲೂ ನಿರಂತರವಾಗಿ ಅರಿವು ಮೂಡಿಸಬೇಕು. ರಾಸಾಯನಿಕಗಳ ದಾಸ್ತಾನು ಮತ್ತು ಮಾರಾಟದ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನಿಗಾ ವ್ಯವಸ್ಥೆಯಾಗಬೇಕು. ಕೀಟಗಳ ನೈಸರ್ಗಿಕ ನಿಯಂತ್ರಣ ಮತ್ತು ಜೈವಿಕ ಪೀಡೆನಾಶಕಗಳನ್ನು ಹೆಚ್ಚು ಹೆಚ್ಚು ಬಳಕೆಗೆ ತರುವ ನಿಟ್ಟಿನಲ್ಲಿ ಸಂಶೋಧನೆಗೆ ಉತ್ತೇಜನ ನೀಡಿ, ಕಡಿಮೆ ವೆಚ್ಚದ, ಪರಿಣಾಮಕಾರಿ ಪರಿಹಾರಗಳನ್ನು ಲಭ್ಯವಾಗಿಸುವುದು ಸರ್ಕಾರ ಮತ್ತು ಕೃಷಿ ವಿಶ್ವವಿದ್ಯಾಲಯಗಳ ಜವಾಬ್ದಾರಿ. ಸಾವಯವ ಕೃಷಿಗೆ ಒತ್ತು ನೀಡುವುದರ ಜೊತೆಗೆ ರಾಸಾಯನಿಕಗಳ ಬಳಕೆಗೆ ಕಡಿವಾಣ ಹಾಕಬೇಕಿದೆ. ನಿಸರ್ಗಸ್ನೇಹಿ ಉಪಕ್ರಮಗಳು ಜಾರಿಯಾಗದಿದ್ದರೆ ಸಾಮಾಜಿಕ ಸ್ವಾಸ್ಥ್ಯ ಮರೀಚಿಕೆಯಾದೀತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.