
ನಮಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದು ಸಾಕಷ್ಟು ಜನ ವಿದ್ಯಾವಂತರು, ಸಭ್ಯರು ಮತ್ತು ಸುಸಂಸ್ಕೃತರು ಹೇಳುತ್ತಿದ್ದಾರೆ. ಇವರು ಹೇಳುವ ಮಾತುಗಳಲ್ಲಿ ಕೂಡ ಒಂದು ಸಂದೇಶವಿದೆ. ‘ರಾಜಕೀಯ ಲಫಂಗರ ಕೊನೆಯ ತಾಣ’ ಎಂದು ಅಮೆರಿಕದ ಬರಹಗಾರ ಮತ್ತು ಹೋರಾಟಗಾರ ಬ್ಲೇಸ್ ಬಾನ್‌ಪೇನ್ ಬಹಳ ಹಿಂದೆಯೇ ಹೇಳಿದ್ದ. ಇವತ್ತು ಲಫಂಗರ ಜೊತೆ ಭ್ರಷ್ಟರು, ಕ್ರಿಮಿನಲ್‌ಗಳು ಸೇರಿದಂತೆ ಎಲ್ಲಾ ರೀತಿಯ ಸಮಾಜಘಾತುಕ ವ್ಯಕ್ತಿಗಳು ರಾಜಕೀಯದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಬಳಸುವ ಭಾಷೆಯಂತೂ ದಿನದಿನಕ್ಕೆ ಕ್ರೂರವಾಗುತ್ತಿದೆ ಮತ್ತು ಅಸಭ್ಯವಾಗುತ್ತಿದೆ. ಹಾಗಾಗಿ, ಆತ್ಮಗೌರವವಿರುವ ಯಾರೂ ಕಾಲಿಡಲು ಹಿಂಜರಿಯುವಷ್ಟು ರಾಜಕೀಯ ಹೊಲಸೆದ್ದಿದೆ.
ರಾಜಕೀಯದ ಕುರಿತು ನಾವು ಎಷ್ಟೇ ಅನಾದರ ತೋರಿಸಿದರೂ ರಾಜಕೀಯದವರಿಗೆ ನಮ್ಮೆಲ್ಲರ ಬಗೆಗೆ (ಅಂದರೆ ನಮ್ಮ ಓಟಿನ ಬಗೆಗೆ) ಆಸಕ್ತಿಯಿರುತ್ತದೆ! ಪ್ರಜಾಪ್ರಭುತ್ವದ ಹಣೆಪಟ್ಟಿಯಲ್ಲಿಯೇ ಆಧುನಿಕ ಸರ್ಕಾರಗಳು ದಿನೇ ದಿನೇ ಕಾನೂನುಬದ್ಧವಾಗಿ ಹೆಚ್ಚು ಹೆಚ್ಚು ಅಧಿಕಾರವನ್ನು ಪಡೆದುಕೊಳ್ಳುತ್ತಿವೆ. ಜೊತೆಗೆ, ತಮ್ಮ ಜವಾಬ್ದಾರಿಗಳೆನ್ನೆಲ್ಲ ಕಳಚಿಕೊಂಡು ಖಾಸಗಿಯವರಿಗೆ ವಹಿಸಿಕೊಡುತ್ತಿವೆ. ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ನಿತ್ಯಜೀವನದ ಮೇಲೆ ಪ್ರಭಾವ ಬೀರದೆ ಇರಲು ಸಾಧ್ಯವೇ ಇಲ್ಲ. ರಾಜಕೀಯದಿಂದ ನಾವು ದೂರವಿದ್ದರೂ ಅದು ನಮ್ಮನ್ನು ಆವರಿಸಿಕೊಳ್ಳುತ್ತದೆ. ನಮ್ಮ ನಿರಾಸಕ್ತಿ ಕೂಡ ಆಳುವ ವರ್ಗಕ್ಕೆ ಮೌನಸಮ್ಮತಿಯೇ ಆಗಿರುತ್ತದೆ.
ರಾಜಕೀಯದಲ್ಲಿ ಭಾಗವಹಿಸುವುದು ಎಂದರೆ, ಪಕ್ಷ ರಾಜಕೀಯದ ಭಾಗವಾಗಿ ಯಾವುದಾದರೂ ಒಂದು ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವುದೆನ್ನುವುದು ಸಾಮಾನ್ಯ ತಿಳಿವಳಿಕೆ. ಇದನ್ನು ಸಾಕಷ್ಟು ವಿದ್ಯಾವಂತರೂ ನಂಬುತ್ತಾರೆ. ಈ ರೀತಿಯಲ್ಲಿ ರಾಜಕೀಯವನ್ನು ಅರ್ಥೈಸುವುದು ನಮ್ಮನ್ನು ದಿಕ್ಕುತಪ್ಪಿಸಬಹುದು. ಉದಾಹರಣೆಗೆ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೋಮುದ್ವೇಷವನ್ನೇ ಉಸಿರಾಡುತ್ತಿದ್ದ ಬಿಜೆಪಿಯನ್ನು ವಿರೋಧಿಸುವ ಸದುದ್ದೇಶದಿಂದ ನಾಡಿನ ಹೆಚ್ಚಿನ ಸಾಹಿತಿಗಳು, ಚಿಂತಕರು ಪ್ರತ್ಯಕ್ಷವಾಗಿಯೋ ಅಥವಾ ಅಪ್ರತ್ಯಕ್ಷವಾಗಿಯೋ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಆದರೆ, ಕಳೆದ ಎರಡೂವರೆ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದ ಅವಾಂತರಗಳನ್ನು ನೋಡಿದರೆ ಇವರು ಬಿಜೆಪಿಗಿಂತ ಗುಣಾತ್ಮಕವಾಗಿ ಹೇಗೆ ಭಿನ್ನವಾಗಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಸಾಹಿತಿಗಳು ವಿರೋಧಪಕ್ಷದಂತೆ ಕೆಲಸ ಮಾಡಬೇಕು ಎಂದು ಕನ್ನಡದ ಒಬ್ಬ ಸುಪ್ರಸಿದ್ಧ ವಿಮರ್ಶಕರು ಹೇಳಿದ್ದರು. ಆದರೆ, ವಿರೋಧಪಕ್ಷದಂತೆ ಕೆಲಸ ಮಾಡಬೇಕಾಗಿರುವುದು ಸದ್ಯದ ಕೇಂದ್ರ ಸರ್ಕಾರಕ್ಕೋ ಅಥವಾ ರಾಜ್ಯ ಸರ್ಕಾರಕ್ಕೋ ಎಂದು ಅವರು ಹೇಳಲಿಲ್ಲ!
ಇದ್ದವರಲ್ಲಿಯೇ ಒಳ್ಳೆಯವರು ಅಥವಾ ಕಡಿಮೆ ಅಪಾಯಕಾರಿ ಎಂದು ಕಾಂಗ್ರೆಸ್‌ಗೆ ನೀಡಿದ ಬೆಂಬಲವನ್ನು ಇನ್ನೂ ಕೆಲವರು ಸಮರ್ಥಿಸಿಕೊಂಡರು. ಇದು ಮೇಲ್ನೋಟಕ್ಕೆ ಒಪ್ಪುವಂತಹ ವಾದ. ಆದರೆ, ನಾವು ಎಚ್ಚರ ತಪ್ಪಿದರೆ ಕಡಿಮೆ ಅಪಾಯಕಾರಿ ಕೂಡ ಹೆಚ್ಚು ಅಪಾಯಕಾರಿಯಾಗಲು ಬಹಳ ಸಮಯ ಬೇಕಾಗುವುದಿಲ್ಲ. ಇದರ ಅರ್ಥವೇನೆಂದರೆ, ರಾಜಕೀಯ ಪ್ರಜ್ಞೆ ಎಂದರೆ ಕೇವಲ ಪಕ್ಷಗಳ ಪರ–ವಿರೋಧದ ಕುರಿತಾದ ಅರಿವಲ್ಲ. ಬದಲಾಗಿ, ರಾಜಕೀಯ ಪ್ರಜ್ಞೆ ಎನ್ನುವುದು ನಮ್ಮೊಳಗೆ ನಿರಂತರವಾದ ರಾಜಕೀಯ ಎಚ್ಚರವನ್ನು ಉಳಿಸಿಕೊಳ್ಳುವುದು ಎಂದಾಗಬೇಕಲ್ಲವೇ? ಹೀಗೆ ನಾವು ಎಚ್ಚರವಾಗಿದ್ದೇವೆ ಎನ್ನುವ ಸಂದೇಶವನ್ನು ಜನಸಾಮಾನ್ಯರು ರಾಜಕಾರಣಿಗಳಿಗೆ ನಿರಂತರವಾಗಿ ತಲುಪಿಸಬೇಕಾಗುತ್ತದೆ.
ಸೂಕ್ತವಾದ ಪ್ರಶ್ನೆಗಳ ಮೂಲಕ ಮಾತ್ರ ನಮ್ಮೊಳಗಿನ ಎಚ್ಚರವನ್ನು ಪ್ರಭುತ್ವಗಳ ಮತ್ತು ವಿರೋಧ ಪಕ್ಷಗಳ ಗಮನಕ್ಕೆ ತರುವುದು ಸಾಧ್ಯ. ಪ್ರಶ್ನೆಗಳನ್ನು ಎತ್ತಿದ ಕೂಡಲೇ ಎಲ್ಲಾ ರಾಜಕೀಯ ಪಕ್ಷಗಳು ಇತರ ಪಕ್ಷಗಳ ಕಡೆ ಬೆರಳು ತೋರಿಸುತ್ತವೆ. ಇದಕ್ಕೆ ಅವಕಾಶ ಕೊಡಬಾರದು. ಎಲ್ಲರನ್ನೂ ನಾವು ಪ್ರಶ್ನಿಸುತ್ತೇವೆ, ಈಗ ನಿಮಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ ಎನ್ನುವ ಸ್ಪಷ್ಟ ಸಂದೇಶ ತಲುಪಬೇಕು. ರಾಜಕೀಯ ಪ್ರಜ್ಞೆ ಎಂದರೆ, ಚುನಾವಣೆಯ ಸಮಯದಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕು ಎನ್ನುವ ತಿಳಿವಳಿಕೆಯಲ್ಲ. ಚುನಾವಣೆಯ ಸಂದರ್ಭದಲ್ಲಿ ಯಾವುದೇ ಪಕ್ಷವನ್ನು ಬೆಂಬಲಿಸಿದರೂ ಪ್ರಶ್ನೆಗಳನ್ನು ಎಲ್ಲಾ ಪಕ್ಷಗಳಿಗೂ ಕೇಳಲೇಬೇಕು. ಹಾಗೆ ನೋಡಿದರೆ ನಾವು ಚುನಾವಣೆಯಲ್ಲಿ ಬೆಂಬಲಿಸಿದ ಪಕ್ಷವನ್ನು ಹೆಚ್ಚು ತೀವ್ರವಾದ ಪ್ರಶ್ನೆಗಳಿಂದ ಎಚ್ಚರಿಸದಿದ್ದರೆ ಅದು ನಾವು ವಿರೋಧಿಸಿದ ಪಕ್ಷಕ್ಕಿಂತ ಹೆಚ್ಚು ಅಪಾಯಕಾರಿಯಾಗುತ್ತದೆ.
ಎಲ್ಲರನ್ನೂ ಪ್ರಶ್ನಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ಪ್ರಶ್ನೆಗಳನ್ನು ಹತ್ತಿಕ್ಕುವುದು ಸರ್ವಾಧಿಕಾರದತ್ತ ಹೋಗುವುದರ ಸೂಚನೆ ಮಾತ್ರ. ಈ ದೃಷ್ಟಿಯಿಂದ ನೋಡಿದರೆ, ಪ್ರಪಂಚದ ಹೆಚ್ಚಿನ ಸರ್ಕಾರಗಳು ಚುನಾಯಿತ ಸರ್ವಾಧಿಕಾರದಂತೆ ಇವತ್ತು ವರ್ತಿಸುತ್ತಿವೆ. ಪ್ರಶ್ನಿಸುವುದು ಎಂದರೆ ಟೀಕಿಸುವುದು ಎಂದಲ್ಲ. ಘನತೆ, ಗೌರವದಿಂದ ಸಭ್ಯಭಾಷೆಯಲ್ಲಿಯೇ ಸೂಕ್ತ ಪ್ರಶ್ನೆಗಳನ್ನು ಎತ್ತುವುದು ಕೂಡ ಅಷ್ಟೇ ಪ್ರಭಾವಕಾರಿ. ಬಾಬಾಸಾಹೇಬ್ ಅಂಬೇಡ್ಕರ್ ಇದನ್ನೇ ಮಾಡಿದ್ದರು ಎನ್ನುವುದನ್ನು ನೆನಪಿಸಿಕೊಂಡರೆ ಪ್ರಶ್ನೆಗಳ ಮಹತ್ವ ಅರ್ಥವಾಗುತ್ತದೆ. ಅಂಬೇಡ್ಕರ್ ಕೇಳುತ್ತಿದ್ದ ಪ್ರಶ್ನೆಗಳಿಗೆ ಇವತ್ತಿಗೂ ಯಾವ ರಾಜಕೀಯ ಪಕ್ಷಕ್ಕೂ ಉತ್ತರಿಸಲಾಗುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.